ಕೆರಿಬಿಯನ್ ದ್ವೀಪಗಳ ಜೊತೆಗೆ ದಕ್ಷಿಣ ಅಮೆರಿಕಾದ ಗಯಾನಾ ಕೂಡ ತನ್ನನ್ನು ವೆಸ್‌ಟ್ ಇಂಡಿಸ್ ಜೊತೆಗೆ ಗುರುತಿಸಿಕೊಳ್ಳುತ್ತದೆ. 1838ರಿಂದ 1917ರವರೆಗೆ ಸುಮಾರು 500 ಹಡಗುಗಳಲ್ಲಿ 2,38,909 ಗುತ್ತಿಗೆ ನೌಕರರು ಗಯಾನಾಕ್ಕೆ ಬಂದರು. ಇವರಲ್ಲಿ ನೌಕರರು ಅಥವಾ ಅವರ ಮುಂದಿನ ಪೀಳಿಗೆಯವರಲ್ಲಿ 75,898 ಜನರು ತಾಯ್ನಾಡಿಗೆ ಹಿಂದಿರುಗಿದರು.
ಗಯಾನಾಕ್ಕೆ ಬಂದ ಭಾರತೀಯರು ಪ್ರಮುಖವಾಗಿ ಉತ್ತರ ಭಾರತಕ್ಕೆ ಸೇರಿದವರು. ಧಾರ್ಮಿಕ ಹಿನ್ನೆಲೆ ನೋಡುವುದಾದರೆ ಒಟ್ಟು ಭಾರತೀಯರಲ್ಲಿ ಶೇ. 85 ಹಿಂದೂಗಳಲ್ಲಿ ಮತ್ತು ಶೇ. 15 ಮುಸ್ಲಿಮರು. ಜಾತ್ಯಾಧಾರಿತವಾಗಿ ಪರಿಗಣಿಸಿದಾಗ ಒಟ್ಟಾರೆ ಭಾರತೀಯರಲ್ಲಿ ಶೇ. 11 ಹೆಚ್ಚು ಬ್ರಾಹ್ಮಣ, ಭೂಮಿಹಾರ್, ಖಾತ್ರಿ, ರಜಪೂತ್ ಮತ್ತು ಠಾಕೂರ್ ಜನಾಂಗದವರು, ಶೇ. 1 ವೈಶ್ಯರು, ಶೇ. 30 ಒಕ್ಕಲಿಗರು, ಶೇ. 2 ಸಣ್ಣ ವ್ಯಾಪಾರಸ್ಥರು, ಶೇ. 2 ಬೆಸ್ತರು, ಶೇ. 25 ದಲಿತರು, ಶೇ. 3 ಮದರಾಸಿನ ಹಿಂದುಳಿದ ಜನಾಂಗ, ಶೇ. 2 ಬುಡಕಟ್ಟು ಜನಾಂಗ ಮತ್ತು ಶೇ. 15 ಮುಸ್ಲಿಮರು ಗಯಾನಾದಲ್ಲಿ ಗುತ್ತಿಗೆ ನೌಕರರಾಗಿ ಸೇರಿದರು.
ಗಮನಿಸಬೇಕಾದ ಅಂಶವೆಂದರೆ, ಭಾರತದಲ್ಲಿ ಜಾತಿ ಪದ್ಧತಿ ಹಿಂದೂ ಧರ್ಮದ ಅವಿಭಾಜ್ಯ ಅಂಗ. ಅಂದೊಂದು ಕ್ಯಾನ್ಸರ್ ಗಡ್ಡೆಯಂತೆ. ಆ ಕ್ಯಾನ್ಸರ್ ಗಡ್ಡೆಯನ್ನು ತೊಡೆದುಹಾಕಲು ಮೀಸಲಾತಿಯೇ ಅಸ್ತ್ರ ಎಂದು ಹಲವಾರು ಜನ ಹೇಳುತ್ತಾರೆ. ಅಂಬೇಡ್ಕರರ ಆಶಯದಂತೆ ಸೀಮಿತ ಅವಧಿಯಲ್ಲಿ ಜಾತಿ ಪದ್ಧತಿ ನಿರ್ಮೂಲನೆ ಆಗಲಿಲ್ಲ. ರಾಜಕಾರಣಿಗಳ ಕೃಪೆಯಿಂದ ತಿದ್ದುಪಡಿ ತಂದು 70 ವರ್ಷ ಕಳೆದರೂ ಜಾತಿ ಪದ್ಧತಿ ನಿರ್ಮೂಲನೆ ಆಗಿಲ್ಲ. ಆಗುವ ಲಕ್ಷಣಗಳೂ ಇಲ್ಲ. ಏಕೆಂದರೆ, ಎಲ್ಲಿಯವರೆಗೂ ಶಾಲೆಯ ಅರ್ಜಿಯಲ್ಲಿ ಜಾತಿ ಎಂಬ ವಿಭಾಗವಿರುತ್ತದೋ ಅಲ್ಲಿಯ ವರೆಗೂ ಜಾತಿ ಪದ್ಧತಿ ಜೀವಂತವಿರುತ್ತದೆ. ಆದರೆ ಇಂದು ಗಯಾನಾದಲ್ಲಿ ಜಾತಿ ಪದ್ಧತಿಯಿಲ್ಲ.
ಎಲ್ಲರೂ ಕೇವಲ ಹಿಂದೂಗಳಷ್ಟೆ. ತಮ್ಮ ಒಗ್ಗಟ್ಟು, ಸಂಸ್ಕೃತಿಯು ಆಫ್ರಿಕನ್ ನಾಗರಿಕರ ಜೊತೆ ಸಂಪೂರ್ಣವಾಗಿ ಬೆರೆತು ತಮ್ಮ ಮೂಲ ಸಂಸ್ಕೃತಿಯ ನೆಲೆ ಕಳೆದುಕೊಳ್ಳದಿರಲೆಂದು ಒಗ್ಗಟ್ಟಾಗಿ ಜಾತಿ ಪದ್ಧತಿ ದೂರ ಮಾಡಿ ತಮ್ಮನ್ನು ಕೇವಲ ಹಿಂದೂಗಳೆಂದು ಗುರುತಿಸಿಕೊಳ್ಳುತ್ತಿದ್ದಾರೆ. ಇದೆಲ್ಲಾ ಸಾಧ್ಯವಾಗಿದ್ದು ಇಚ್ಛಾಶಕ್ತಿಯಿಂದಲೇ ಹೊರತು ಮೀಸಲಾತಿ ಯಿಂದಲ್ಲ.
ಹಾಗಂತ ಮೀಸಲಾತಿಯ ಉದ್ದೇಶವನ್ನು ಪ್ರಶ್ನಿಸುವ ಅವಶ್ಯಕತೆ ಯಿಲ್ಲ. ಏಕೆಂದರೆ ಮೀಸಲಾತಿಯು ಅವಕಾಶ ವಂಚಿತರನ್ನು ಮುಖ್ಯವಾ ಹಿನಿಗೆ ತರುವಲ್ಲಿ ಮುಖ್ಯ ಪಾತ್ರವಹಿಸುತ್ತದೆ. ಆದರೆ ಸೈಡ್ ಎಫೆಕ್‌ಟ್, ಅಂದರೆ ಚಿಕ್ಕ ವಯಸ್ಸಿನಿಂದಲೇ ಮಕ್ಕಳಲ್ಲಿ ಜಾತಿ ಪ್ರಜ್ಞೆ ಜಾಗೃತಗೊಳಿಸುವುದನ್ನು ತೊಡೆದುಹಾಕಲು ಗಯಾನಾ ನಮಗೆ ಮಾದರಿಯಾಗಬೇಕಿದೆ.
(ಮುಂದುವರೆಯುವುದು)
Discussion about this post