ಆತ ಸಂಜೆ 6 ಗಂಟೆ ಸುಮಾರಿಗೆ ಹೊರಗೆ ಹೋಗಿದ್ದಾನೆ. ರಾತ್ರಿ 11 ಗಂಟೆಹೊತ್ತಿಗೆ ವಾಪಸಾಗಲಿದ್ದಾನೆ ಎಂದು ರಿಸೆಷ್ಯನ್ ಹೇಳಿದ. ನಾವೆಲ್ಲ ಸೇರಿ ಆತನನ್ನು ಖೆಡ್ಡಾಗೆ ಬೀಳಿಸುವ ತಂತ್ರ ಹೆಣೆದೆವು. ರಿಸೆಪ್ಯನ್ ಕೌಂಟರ್ ಬಳಿಯ ರೂಮ್‌ನಲ್ಲಿ ಸಂಗ್ರಾಮ್‌ಸಿಂಗ್ ಮತ್ತು ನಾಗೇಂದ್ರಕುಮಾರ್ ಉಳಿದುಕೊಂಡರು. ಕೊತ್ವಾಲ ಇದ್ದಾನೆನ್ನಲಾದ ರೂಮ್‌ನ ಪಕ್ಕದ ಕೋಣೆಯಲ್ಲಿ ನಾನು ಮತ್ತು ಬಿ.ಕೆ. ಶಿವರಾಮ್ ಕಾಯುತ್ತ ಕುಳಿತೆವು. ಕೆಳಗಿದ್ದ ಸಂಗ್ರಾಮ್ ಸಿಂಗ್ ಟೀಮ್ ಜತೆ ನಾವು ವೈರ್‌ಲೆಸ್ ಸಂಪರ್ಕದಲ್ಲಿದ್ದೆವು.
ಕೊತ್ವಾಲನ ಪಕ್ಕದ ರೂಮ್‌ನಿಂದ ಏನೋ ವಿಚಿತ್ರ ಸದ್ದು ಬರಲಾರಂಭಿಸಿತು. ಆ ಕಡೆ ಗಮನ ಹರಿಸಿದೆವು. ಒಂದಿಷ್ಟು ಹುಡುಗರು ಭಾರೀ ಉನ್ಮಾದದಿಂದ ಆಕಡೆ ಈಕಡೆ ಓಡಾಡುತ್ತಿರುವುದು ಕಂಡು ಬಂತು. ಅವರು ರೌಡಿ ಸಹಚರರೇ ಇರಬಹುದೆಂಬ ಗುಮಾನಿಯಿಂದ ನಾವು ಆ ರೂಮ್‌ನೊಳಗೆ ಹೊಕ್ಕೆವು. ನೋಡಿದರೆ ಆ ಹುಡುಗರೆಲ್ಲ ಬ್ಲೂಫಿಲಂ ವೀಕ್ಷಣೆಯಲ್ಲಿ ಮೈಮರೆತಿದ್ದರು. ಬ್ಲೂಫಿಲಂ ವಿಡಿಯೊ ಕ್ಯಾಸೆಟ್ ಆಗಷ್ಟೆ ನಗರಕ್ಕೆ ಪರಿಚಯವಾಗಿತ್ತು. ಅದೇನೆಂಬುದರ ಬಗ್ಗೆ ನಮಗೂ ಗೊತ್ತಿರಲಿಲ್ಲ. ನಾವು ಪೊಲೀಸರೆನ್ನುವುದು ಗೊತ್ತಾಗುತ್ತಲೇ ಆ ಹುಡುಗರ ಉಮೇದು ಇಳಿದು ಹೋಯಿತು. ಆದರೆ, ಬ್ಲೂಫಿಲಂ ಹೇಗಿರುತ್ತದೆ ನೋಡಿಯೇ ಬಿಡೋಣ ಎಂಬ ನಮ್ಮ ಕುತೂಹಲ ಏರತೊಡಗಿತು. ನಾವು ಸೆಕ್‌ಸ್ ದೃಶ್ಯವನ್ನು ಬೆರಗಿನಿಂದ ನೋಡುತ್ತಿರುವಾಗಲೇ ಸಂಗ್ರಾಮ್ ಸಿಂಗ್‌ರ ವೈರ್‌ಲೆಸ್ ಮೆಸೇಜ್ ನಮ್ಮನ್ನು ಎಚ್ಚರಿಸಿತು.
‘ಕೊತ್ವಾಲ ತನ್ನ ಸಂಗಡಿಗನೊಬ್ಬನ ಜತೆ ರಿಸೆಪ್ಯನ್‌ನಿಂದ ರೂಮ್‌ನ ಕೀ ಪಡೆದು ಲಿಫ್‌ಟ್ ಮೂಲಕ ಮೇಲೆ ಬರುತ್ತಿದ್ದಾನೆ. ನಾವು ಮತ್ತೊಂದು ಲಿಫ್‌ಟ್ ಮೂಲಕ ಅಲ್ಲಿಗೆ ಬರುತ್ತಿದ್ದೇವೆ. ನೀವೆಲ್ಲ ಸಜ್ಜಾಗಿರಿ,’ ಎಂದು ಸಂಗ್ರಾಮ್ ಸಿಂಗ್ ಆತುರಾತುರದಲ್ಲಿ ಹೇಳಿ ಮುಗಿಸಿದರು. ನಾವು ತಕ್ಷಣ ನಮ್ಮ ರೂಮ್‌ಗೆ ಹೋಗಿ ಬಾಗಿಲು ಹಾಕಿಕೊಂಡೆವು. ಬಾಗಿಲ ಕಿಂಡಿಯಿಂದ ಕೊತ್ವಾಲನನ್ನು ವಾಚ್ ಮಾಡತೊಡಗಿದೆವು. ಆತ ಬಂದು ರೂಮ್‌ನ ಕೀತೆಗೆದು ಒಳಗೆ ಕಾಲಿಡುತ್ತಿದ್ದಂತೆ ನಾವು ಮುಗಿಬಿದ್ದು ಆತನ ಕೈಗೆ ಕೋಳ ಹಾಕಿದೆವು.
ನಾನು ಆತನನ್ನು ಹಿಂದೆ ಹತ್ತಿರದಿಂದ ನೋಡಿರಲಿಲ್ಲ. ಆದರೆ ಸಂಗ್ರಾಮ್ ಸಿಂಗ್ ಹಿಂದೊಮ್ಮೆ ಆತನನ್ನು ಧೈರ್ಯವಾಗಿ ಹಿಡಿದು ಜೈಲಿಗೆ ತಳ್ಳಿದ್ದರು. ಹಾಗಾಗಿ ಆತನ ಮುಖ ಪರಿಚಯ ಅವರಿಗೆ ಚೆನ್ನಾಗಿತ್ತು. ಆತನನ್ನು ನೋಡುತ್ತಲೇ ಸಂಗ್ರಾಮ್ ಸಿಂಗ್ ದೊಡ್ಡದಾಗಿ ‘ನೋಡೋ ಅಶೋಕಾ… ಬಡ್ಡೀಮಗ ಕೊತ್ವಾಲ ಮೈಗೆ, ಮುಖಕ್ಕೆಲ್ಲ ಕಪ್ಪು ಬಣ್ಣ ಬಳಿದುಕೊಂಡು ನಮ್ಮನ್ನು ಯಾಮಾರಿಸಲು ಪ್ಲ್ಯಾನ್ ಮಾಡಿದ್ದಾನೆ,’ ಎಂದು ಆವಾಜ್ ಹಾಕಿದರು. ಆತ ಕೆಂಪಗಿದ್ದುದು ಸಂಗ್ರಾಮ್‌ಗೆ ಸ್ಪಷ್ಟವಾಗಿ ಗೊತ್ತಿತ್ತು.
ಕೈಕೋಳ ಬಿದ್ದ ಕೂಡಲೇ ಆ ವ್ಯಕ್ತಿ ಗಡಗಡ ನಡುಗುತ್ತ ಮಲೆಯಾಳಂನಲ್ಲಿ ‘ಇದು ಎಂದಿನ… ಯಾರ್ ನೀ’ ಎಂದು ಕಿರುಚಾಡತೊಡಗಿದ. ‘ನೋಡ್ರೋ… ಬಡ್ಡೀಮಗ ಕೊತ್ವಾಲ ಮಲೆಯಾಳಂ ಬೇರೆ ಮಾತನಾಡುತ್ತಿದ್ದಾನೆ. ತಪ್ಪಿಸಿಕೊಳ್ಳಲು ಎಂಥೆಂಥ ನಾಟಕ ಮಾಡ್ತಾ ಇದ್ದಾನೆ ನೋಡಿಲ,’ ಎಂದು ಸಿಟ್ಟಿನಿಂದ ಅಬ್ಬರಿಸಿದರು. ಆತನನ್ನು ಮಂಚದ ಮೇಲೆ ಕೆಡವಿ, ಬಿಳಿ ಬೆಡ್‌ಶೀಟ್‌ನಿಂದ ಒಂದೇ ಸಮನೆ ಆತನ ಮುಖಕ್ಕೆ ತಿಕ್ಕತೊಡಗಿದರು. ಅವರು ಎಷ್ಟೇ ತಿಕ್ಕಿದರೂ ಆತನ ಮುಖದ ಕರಿ ಬಣ್ಣ ಬದಲಾಗಲಿಲ್ಲ! ಅದು ಆ ವ್ಯಕ್ತಿಯ ಒರಿಜಿನಲ್ ಕಲರ್ ಎಂಬುದು ನಮಗೆಲ್ಲ ಖಾತರಿಯಾಯಿತು. ಆತ ಕೊತ್ವಾಲ ಹೌದೋ ಅಲ್ಲವೋ ಎಂಬ ಅನುಮಾನ ಶುರುವಾಯಿತು. ಆತನ ಜೇಬನ್ನು ತಡಕಾಡಿದಾಗ, ಆತ ಕೊತ್ವಾಲ ರಾಮಚಂದ್ರ ಆಗಿರದೆ, ಊಟಿ ಮೂಲಕ ಎಸ್ಟೇಟ್ ಓನರ್ ಎಂಬ ಸತ್ಯ ಗೊತ್ತಾಯಿತು!
ಆತನ ಮಗಳು ಬಿಷಪ್ ಕಾಟನ್ ಸ್ಕೂಲ್‌ನಲ್ಲಿ 8ನೇ ತರಗತಿ ಓದುತ್ತಿದ್ದಳು. ಪರೀಕ್ಷೆ ಮುಗಿಯುತ್ತ ಬಂದಿದ್ದರಿಂದ ಆತ ಮಗಳನ್ನು ಊಟಿಗೆ ಕರೆದೊಯ್ಯಲು ಬೆಂಗಳೂರಿಗೆ ಬಂದು ಹೋಟೆಲ್‌ನಲ್ಲಿ ರೂಮ್ ಮಾಡಿದ್ದ, ಅಚ್ಚರಿಯ ಸಂಗತಿ ಎಂದರೆ, ಆತನ ಮೈಕಟ್ಟು, ಮುಖ ಚಹರೆ, ಪೊದೆ ಕೂದಲು ಥೇಟ್ ಕೊತ್ವಾಲನನ್ನೇ ಹೋಲುತ್ತಿತ್ತು. ಬಣ್ಣ ಮಾತ್ರ ಕಪ್ಪು. ನಮಗೆ ಮನವರಿಕೆ ಆದ ತಕ್ಷಣ ಆತನ ಕೈಕೋಳ ತೆಗೆದೆವು. ಪ್ರಮಾದವಶಾತ್ ಹೀಗಾಯಿತು ಎಂದು ಆತನಿಗೆ ವಿವರಿಸಿದೆವು. ಕೊನೆಗೆ ನಮ್ಮಲ್ಲಿದ್ದ ಕೊತ್ವಾಲನ ಫೋಟೊವನ್ನು ಆತನಿಗೆ ತೋರಿಸಿದೆವು.
ಆ ಫೋಟೊ ನೋಡಿ ಊಟಿಯ ಆ ವ್ಯಕ್ತಿ ಕಕ್ಕಾಬಿಕ್ಕಿಯಾದ. ‘ಅರೆ! ಇದು ನನ್ನದೇ ಫೋಟೊ ಇದ್ದ ಹಾಗಿದೆಯಲ್ಲ,’ ಎಂದು ಉದ್ಗರಿಸಿದ! ನಮ್ಮ ಫಜೀತಿಗೆ ನಾವೇ ನಗುತ್ತ ಅಲ್ಲಿಂದ ಹಿಂತಿರುಗಿದೆವು. ಬೆಂಗಳೂರು ಭೂಗತ ಜಗತನ್ನು ಕೆಲ ಕಾಲ ಆಳಿದ್ದ, ಹಲವಾರು ಕೊಲೆ, ರಕ್ತಪಾತಕ್ಕೆ ಕಾರಣನಾಗಿದ್ದ ಕೊತ್ವಾಲ ರಾಮಚಂದ್ರ ಕೊನೆಗೂ ಜೀವಂತವಾಗಿ ಪೊಲೀಸರ ಕೈಗೆ ಸಿಗಲೇ ಇಲ್ಲ. ಆತನ ಹೆಣವೂ ನಮಗೆ ಸಿಗದೇ ಹೋಯಿತು. ತುಮಕೂರು ಬಳಿಯ ಅಲ್ಲಾಳಸಂದ್ರದ ಬಳಿತ ಆತನ ಬಲಗೈ ಬಂಟರೇ ಮತ್ತೊಂದು ಗುಂಪಿನ ಜತೆ ಶಾಮೀಲಾಗಿ, ಆತನನ್ನು ಕೊಲೆಗೈದು ಹೊಸೂರು ರಸ್ತೆ ಬಳಿಯ ಪಾಳು ಬಾವಿಯಲ್ಲಿ ಸುಟ್ಟು ಬೂದಿ ಮಾಡಿಹೋಗಿದ್ದರು.
Discussion about this post