ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹಲವು ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬರುತ್ತಿರುವ ಜಮೀನಿಗೆ ಮರು ಮಂಜೂರಾತಿ ನೀಡಿ, ಪಹಣಿ ಹಾಗೂ ಖಾತೆ ಮಾಡಿಕೊಡುವಂತೆ ಆಗ್ರಹಿಸಿ ರಾಮಿನಕೊಪ್ಪ ಗ್ರಾಮದ ಪ್ರಗತಿಪರ ರೈತ ನಾಗರಾಜ್ ಅವರು ಶಿವಮೊಗ್ಗ(Shivamogga) ಉಪವಿಭಾಗಾಧಿಕಾರಿ ಕಚೇರಿ ಆವರಣದಲ್ಲಿ ಮರ ಏರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಜಮೀನಿನ ಹಕ್ಕು ಪಡೆಯಲು ಹಲವು ವರ್ಷಗಳಿಂದ ಸರ್ಕಾರಿ ಕಚೇರಿಗಳಿಗೆ ಅಲೆದಾಡುತ್ತಿದ್ದರೂ ನ್ಯಾಯ ಸಿಗದ ಹಿನ್ನೆಲೆಯಲ್ಲಿ ಬೇಸತ್ತ ರೈತ ನಾಗರಾಜ್ ಅವರು ಮರ ಏರಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳು ಮೊದಲು ತಮ್ಮ ಸಮಸ್ಯೆ ಬಗೆಹರಿಸಬೇಕು. ಇಲ್ಲವಾದರೆ ಆತ್ಮಹತ್ಯೆ (Suscide) ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
25 ವರ್ಷಗಳಿಂದ 28 ಕುಟುಂಬಗಳಿಂದ ಜಮೀನು ಸಾಗುವಳಿ
ರೈತ ನಾಗರಾಜ್ ಹಾಗೂ ಅವರ ಸಹವರ್ತಿಗಳು ನೀಡಿರುವ ಮಾಹಿತಿಯ ಪ್ರಕಾರ, ರಾಮಿನಕೊಪ್ಪ ಗ್ರಾಮದ ಸರ್ವೆ ನಂ. 57ರಲ್ಲಿರುವ ಜಮೀನಿನಲ್ಲಿ 25 ವರ್ಷಗಳಿಗೂ ಹಿಂದಿನಿಂದ ಸುಮಾರು 28 ಕುಟುಂಬಗಳು ತಲಾ ನಾಲ್ಕು ಎಕರೆ ಜಮೀನಿನಂತೆ ಸಾಗುವಳಿ ಮಾಡಿಕೊಂಡು ಬರುತ್ತಿವೆ. ಈ ಹಿಂದೆ ಸದರಿ ಜಮೀನಿಗೆ ಸರ್ಕಾರದಿಂದ ಮಂಜೂರಾತಿ ಕೂಡ ದೊರೆತಿತ್ತು. ಆದರೆ, ಸುಮಾರು 11 ಜನರಿಗೆ ಮಾತ್ರ ಗ್ರಾಂಟ್ ಆಗಿದ್ದು, ಉಳಿದ ಫಲಾನುಭವಿಗಳ ಮಂಜೂರಾತಿ ರದ್ದಾಗಿತ್ತು ಎಂದು ರೈತರು ತಿಳಿಸಿದ್ದಾರೆ.
ನಂತರ ಈ 11 ಜನರ ಜಮೀನು ಮಂಜೂರಾತಿಯನ್ನೂ ಉಪವಿಭಾಗಾಧಿಕಾರಿಗಳು ರದ್ದುಗೊಳಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ರೈತರು ಜಿಲ್ಲಾಧಿಕಾರಿಗಳ ನ್ಯಾಯಾಲಯದ ಮೊರೆ ಹೋಗಿದ್ದರು.
Shivamogga: ಜಿಲ್ಲಾಧಿಕಾರಿಗಳಿಂದ ಮರು ಪರಿಶೀಲನೆಗೆ ಸೂಚನೆ
ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು, ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳನ್ನು ಪುರಸ್ಕರಿಸಿ ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿದ್ದ ಎಲ್.ಎನ್.ಡಿ.ಸಿ.ಆರ್. 173/2024, ದಿನಾಂಕ 16-12-2024ರ ಆದೇಶವನ್ನು ತಿರಸ್ಕರಿಸಿದ್ದಾರೆ ಎಂದು ರೈತರು ತಿಳಿಸಿದ್ದಾರೆ.
ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದ ಹಿತಾಸಕ್ತರಿಂದ ಅಗತ್ಯ ದಾಖಲೆಗಳನ್ನು ಪಡೆದು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಶಿವಮೊಗ್ಗ ತಹಶೀಲ್ದಾರ್ ಅವರಿಗೆ ನಿರ್ದೇಶನ ನೀಡಿ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ. ಆದರೆ, ಆದೇಶವಾಗಿ ಹಲವು ದಿನಗಳು ಕಳೆದರೂ ಮರು ಮಂಜೂರಾತಿ ಹಾಗೂ ಖಾತೆ ಪ್ರಕ್ರಿಯೆ ಪೂರ್ಣಗೊಂಡಿಲ್ಲ ಎಂಬುದು ರೈತರ ಅಳಲಾಗಿದೆ.
₹25 ಲಕ್ಷ ಬೇಡಿಕೆ ಇಟ್ಟಿದ್ದಾರೆಂದು ತಹಶೀಲ್ದಾರ್ ವಿರುದ್ಧ ಆರೋಪ
ಈ ಪ್ರಕರಣದಲ್ಲಿ ಶಿವಮೊಗ್ಗ ತಹಶೀಲ್ದಾರ್ ಕಚೇರಿಯ ವಿರುದ್ಧ ರೈತರು ಗಂಭೀರ ಆರೋಪ ಮಾಡಿದ್ದಾರೆ. ಹಲವು ವರ್ಷಗಳಿಂದ ಫಲಾನುಭವಿಗಳಿಂದ ಲಕ್ಷಾಂತರ ರೂಪಾಯಿ ಪಡೆದುಕೊಂಡಿದ್ದರೂ ಪಹಣಿ ಹಾಗೂ ಖಾತೆ ಮಾಡಿಕೊಡದೆ ಸತಾಯಿಸಲಾಗುತ್ತಿದೆ ಎಂದು ದೂರಿದ್ದಾರೆ.
ನಾವು 11 ಜನರು ಕೂಡ ಖಾತೆ ಮಾಡಿಸಿಕೊಳ್ಳಲು ಹಣ ನೀಡಿದ್ದೇವೆ. ಒಟ್ಟು ₹25 ಲಕ್ಷ ಹಣವನ್ನು ಖಾತೆ ಏರಿಸಲು ಬೇಡಿಕೆ ಇಟ್ಟಿದ್ದು, ಅವರ ಸೂಚನೆಯಂತೆ ಹಂತ ಹಂತವಾಗಿ ಹಣ ನೀಡಿದ್ದೇವೆ. ಆದರೂ ಪ್ರತಿಬಾರಿ ಕಚೇರಿಗೆ ಹೋದಾಗ ಒಂದಲ್ಲೊಂದು ಕಾರಣ ಹೇಳಿ ಕೆಲಸವನ್ನು ಮುಂದೂಡುತ್ತಿದ್ದರು ಎಂದು ರೈತರು ಆರೋಪಿಸಿದ್ದಾರೆ.
ಇಂದು ಕೆಲಸ ಮಾಡಿಕೊಡುವುದಾಗಿ ತಿಳಿಸಿದ್ದರಿಂದ ಕಚೇರಿಗೆ ಬಂದಿದ್ದೆವು. ಆದರೆ, ನಿನ್ನೆ ರಾತ್ರಿ ದೂರವಾಣಿ ಮೂಲಕ ಸಂಪರ್ಕಿಸಿದಾಗ ತಮಗೆ ವರ್ಗಾವಣೆಯಾಗಿದ್ದು, ಇನ್ನು ಮುಂದೆ ಈ ಕೆಲಸ ಮಾಡಲು ಸಾಧ್ಯವಿಲ್ಲ. ಹೊಸ ಅಧಿಕಾರಿಗಳು ಬಂದ ಬಳಿಕ ಅವರ ಬಳಿ ಹೋಗಿ ಕೆಲಸ ಮಾಡಿಸಿಕೊಳ್ಳುವಂತೆ ತಿಳಿಸಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
ನ್ಯಾಯಯುತವಾಗಿ ನಮ್ಮ ಸಮಸ್ಯೆ ಬಗೆಹರಿಸಿಕೊಡುವಂತೆ ಕೇಳಿದರೂ ಬೆದರಿಕೆ ಹಾಕಲಾಗುತ್ತಿದೆ. ದಯವಿಟ್ಟು ನಮಗೆ ಖಾತೆ ಮಾಡಿಕೊಡಿ. ಇಲ್ಲವಾದರೆ ನಮಗೆ ಸಾಮೂಹಿಕವಾಗಿ ವಿಷ ಕೊಡಿ ಎಂದು ಸಂತ್ರಸ್ತ ರೈತರು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.
ಎಸಿ ಭರವಸೆಗೂ ಮರದಿಂದ ಕೆಳಗಿಳಿಯದ ರೈತ
ಇನ್ನೊಂದೆಡೆ, ಮರ ಏರಿದ್ದ ರೈತ ನಾಗರಾಜ್ ಅವರು ಅಧಿಕಾರಿಗಳ ಭರವಸೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಸುಳ್ಳು ಭರವಸೆಗಳನ್ನು ಕೇಳಿ ಸಾಕಾಗಿದೆ. ಮೊದಲು ನಮ್ಮ ಕೆಲಸ ಮಾಡಿಕೊಡಿ. ಇಲ್ಲವಾದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಪಟ್ಟು ಹಿಡಿದರು.
ಜಿಲ್ಲಾಧಿಕಾರಿಗಳು ಸ್ಥಳದಲ್ಲಿ ಇಲ್ಲದ ಹಿನ್ನೆಲೆಯಲ್ಲಿ ಉಪವಿಭಾಗಾಧಿಕಾರಿ ಮೈತ್ರಿ ಅವರು ಸ್ಥಳಕ್ಕೆ ಆಗಮಿಸಿ ರೈತರೊಂದಿಗೆ ಮಾತನಾಡಿದರು. ಪ್ರಕರಣವನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಆದರೂ ರೈತ ನಾಗರಾಜ್ ಅವರು ಮರದಿಂದ ಕೆಳಗಿಳಿಯಲು ಒಪ್ಪಲಿಲ್ಲ.
ನಂತರ ಉಪವಿಭಾಗಾಧಿಕಾರಿಗಳು ಕೆಳಗಿದ್ದ ಸಂತ್ರಸ್ತ ರೈತರನ್ನು ತಮ್ಮ ಕಚೇರಿಗೆ ಕರೆಸಿಕೊಂಡು ಮಾತುಕತೆ ನಡೆಸಿದರು. ಸ್ಥಳದಲ್ಲಿ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸಾರ್ವಜನಿಕರು ಜಮಾಯಿಸಿ ರೈತ ನಾಗರಾಜ್ ಅವರನ್ನು ಮನವೊಲಿಸಲು ಪ್ರಯತ್ನಿಸಿದರು.
Also Read>> ಶಿವಮೊಗ್ಗ ಇ.ಎಸ್.ಐ. ಕಾರ್ಮಿಕರ ಒಪಿಡಿ ಸಮಸ್ಯೆ: ತಕ್ಷಣ ಪರಿಹಾರಕ್ಕೆ ಶಾಸಕ ಚನ್ನಬಸಪ್ಪ ಆಗ್ರಹ
ಜಿಲ್ಲಾಡಳಿತದ ವಿರುದ್ಧ ಸಂತ್ರಸ್ತರ ಆಕ್ರೋಶ
ಸರ್ವೆ ನಂಬರ್ 57ರಲ್ಲಿರುವ ಜಮೀನಿನ ಫಲಾನುಭವಿಗಳು ಹಾಗೂ ಅವರ ಸಂಬಂಧಿಕರು ಸ್ಥಳದಲ್ಲಿ ಸೇರಿ ಜಿಲ್ಲಾಡಳಿತ, ತಹಶೀಲ್ದಾರ್ ಮತ್ತು ಕಂದಾಯ ಇಲಾಖೆಯ ಸಿಬ್ಬಂದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರದ ವಿಳಂಬ ಧೋರಣೆಯಿಂದಾಗಿ ಅನೇಕ ಕುಟುಂಬಗಳು ವರ್ಷಗಳಿಂದ ಕಚೇರಿಗಳಿಗೆ ಅಲೆದಾಡುವಂತಾಗಿದೆ. ಈ ಪ್ರಕರಣದಲ್ಲಿ ನ್ಯಾಯಕ್ಕಾಗಿ ಹೋರಾಡುತ್ತಾ ಕೆಲವರು ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಆದರೂ ಅಧಿಕಾರಿಗಳು ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂಬುದು ಸಂತ್ರಸ್ತ ಕುಟುಂಬಗಳ ಅಳಲಾಗಿದೆ.
ಮಧ್ಯಾಹ್ನ 2 ಗಂಟೆಯವರೆಗೂ ಸ್ಥಳದಲ್ಲಿ ಬಿಗುವಿನ ವಾತಾವರಣ ಮುಂದುವರಿದಿದ್ದು, ರೈತನ ಮನವೊಲಿಸಲು ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಪ್ರಯತ್ನ ಮುಂದುವರಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








