ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ (Shivamogga) ಜಿಲ್ಲೆಯ ಇ.ಎಸ್.ಐ. ವಿಮಾದಾರ ಕಾರ್ಮಿಕರು ಕಳೆದ ನಾಲ್ಕು ತಿಂಗಳುಗಳಿಂದ ಎದುರಿಸುತ್ತಿರುವ ಹೊರರೋಗಿ (OPD) ಚಿಕಿತ್ಸಾ ಸಮಸ್ಯೆಯನ್ನು ಸರ್ಕಾರ ತಕ್ಷಣ ಪರಿಹರಿಸಬೇಕು ಎಂದು ಶಿವಮೊಗ್ಗ ನಗರ ಶಾಸಕ ಎಸ್.ಎನ್. ಚನ್ನಬಸಪ್ಪ (Chenni) ಅವರು ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್ ಅವರನ್ನು ಆಗ್ರಹಿಸಿದ್ದಾರೆ.
ಈ ಸಂಬಂಧ ರಾಜ್ಯದ ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್ ಅವರನ್ನು ಭೇಟಿ ಮಾಡಿದ ಶಾಸಕ ಚನ್ನಬಸಪ್ಪ ಅವರು, ಶಿವಮೊಗ್ಗ ಜಿಲ್ಲೆಯ ಇ.ಎಸ್.ಐ. ವಿಮಾದಾರ ಕಾರ್ಮಿಕರು ಎದುರಿಸುತ್ತಿರುವ ವೈದ್ಯಕೀಯ ಸೇವೆಗಳ ಸಮಸ್ಯೆಯನ್ನು ಸಚಿವರ ಗಮನಕ್ಕೆ ತಂದು ಕೂಡಲೇ ಪರಿಹಾರ ಕಲ್ಪಿಸುವಂತೆ ಮನವಿ ಮಾಡಿದ್ದಾರೆ.
ನಾಲ್ಕು ತಿಂಗಳಿಂದ ಒಪಿಡಿ ಸೇವೆ ಸ್ಥಗಿತ
ಶಿವಮೊಗ್ಗ ಜಿಲ್ಲಾ ಇ.ಎಸ್.ಐ. ವಿಮಾದಾರರ ಹಾಗೂ ಇತರೆ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘವು ನೀಡಿರುವ ದೂರಿನ ಪ್ರಕಾರ, ಇ.ಎಸ್.ಐ. ಜೊತೆ ಒಪ್ಪಂದ ಮಾಡಿಕೊಂಡಿರುವ ಕೆಲವು ಖಾಸಗಿ ಆಸ್ಪತ್ರೆಗಳು ಹಣದ ಆಸೆಗೆ ರೋಗಿಗಳಿಗೆ ಅಗತ್ಯವಿಲ್ಲದಿದ್ದರೂ ಎಕ್ಸ್-ರೇ, ಸ್ಕ್ಯಾನಿಂಗ್, ರಕ್ತ ಪರೀಕ್ಷೆ ಸೇರಿದಂತೆ ವಿವಿಧ ವೈದ್ಯಕೀಯ ತಪಾಸಣೆಗಳನ್ನು ನಡೆಸಿ ದುಬಾರಿ ಹಣ ವಸೂಲಿ ಮಾಡುತ್ತಿವೆ ಎಂಬ ಆರೋಪ ಕೇಳಿಬಂದಿದೆ.
ಈ ಹಿನ್ನೆಲೆಯಲ್ಲಿ ಕಳೆದ ನಾಲ್ಕು ತಿಂಗಳುಗಳಿಂದ ಒಪಿಡಿ ಚಿಕಿತ್ಸಾ ಸೌಲಭ್ಯವನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದ ಇ.ಎಸ್.ಐ. ವಿಮಾದಾರರಾಗಿರುವ ನೂರಾರು ಕಾರ್ಮಿಕರು ಸಾಮಾನ್ಯ ಆರೋಗ್ಯ ಸಮಸ್ಯೆಗಳಿಗೂ ಚಿಕಿತ್ಸೆ ಪಡೆಯಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಶಾಸಕರು ಆತಂಕ ವ್ಯಕ್ತಪಡಿಸಿದ್ದಾರೆ.
ಆಸ್ಪತ್ರೆಗಳ ತಪ್ಪಿಗೆ ಕಾರ್ಮಿಕರಿಗೆ ಶಿಕ್ಷೆ ಏಕೆ?
ಖಾಸಗಿ ಆಸ್ಪತ್ರೆಗಳು ನಿಯಮಬಾಹಿರವಾಗಿ ನಡೆದುಕೊಂಡಿದ್ದರೆ ಅಂತಹ ಆಸ್ಪತ್ರೆಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಆದರೆ ಆಸ್ಪತ್ರೆಗಳ ತಪ್ಪಿಗೆ ಬಡ ಕಾರ್ಮಿಕರ ವೈದ್ಯಕೀಯ ಸೌಲಭ್ಯವನ್ನೇ ಸ್ಥಗಿತಗೊಳಿಸುವುದು ಎಷ್ಟು ಸರಿ ಎಂದು ಶಾಸಕ ಚನ್ನಬಸಪ್ಪ ಪ್ರಶ್ನಿಸಿದ್ದಾರೆ.
ಇ.ಎಸ್.ಐ. ಯೋಜನೆಯು ಕಾರ್ಮಿಕರು ಹಾಗೂ ಮಾಲೀಕರು ಸಲ್ಲಿಸುವ ವಂತಿಗೆಯ ಆಧಾರದ ಮೇಲೆ ಕಾರ್ಯನಿರ್ವಹಿಸುವ ವೈದ್ಯಕೀಯ ಸೇವಾ ವ್ಯವಸ್ಥೆಯಾಗಿದೆ. ಇಂತಹ ಯೋಜನೆಯಲ್ಲಿ ಕಾರ್ಮಿಕರಿಗೆ ಸಿಗಬೇಕಾದ ಮೂಲಭೂತ ಆರೋಗ್ಯ ಸೇವೆಗಳನ್ನು ಸ್ಥಗಿತಗೊಳಿಸಿರುವುದರಿಂದ ಕಾರ್ಮಿಕ ಕುಟುಂಬಗಳು ತೊಂದರೆ ಅನುಭವಿಸುವಂತಾಗಿದೆ ಎಂದು ಅವರು ತಿಳಿಸಿದ್ದಾರೆ.
Also Read>> ಕಾರ್ಕಳದ ಕ್ರಿಯೇಟಿವ್ ಕಾಲೇಜಿನಲ್ಲಿ ಕನ್ನಡ ನಾಡು-ನುಡಿಯ ಅಸ್ಮಿತೆ ಕುರಿತು ಜಾಗೃತಿ ಕಾರ್ಯಕ್ರಮ
Shivamogga: ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗೆ ಆಗ್ರಹ
ಕಾರ್ಮಿಕ ಇಲಾಖೆಯು ಈ ವಿಚಾರದಲ್ಲಿ ತಕ್ಷಣ ಮಧ್ಯಪ್ರವೇಶಿಸಬೇಕು. ತಪ್ಪಿತಸ್ಥ ಆಸ್ಪತ್ರೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು, ಇ.ಎಸ್.ಐ. ವಿಮಾದಾರ ಕಾರ್ಮಿಕರಿಗೆ ಒಪಿಡಿ ಚಿಕಿತ್ಸಾ ಸೌಲಭ್ಯವನ್ನು ಪುನರಾರಂಭಿಸಬೇಕು.
ಅಲ್ಲದೆ, ಕಾರ್ಮಿಕರಿಗೆ ಯಾವುದೇ ತೊಂದರೆಯಾಗದಂತೆ ಗುಣಮಟ್ಟದ ವೈದ್ಯಕೀಯ ಸೇವೆ ನಿರಂತರವಾಗಿ ದೊರೆಯುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕು ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ಕಾರ್ಮಿಕ ಸಚಿವರನ್ನು ಒತ್ತಾಯಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









