ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ (Midday Meal Scheme) ತಯಾರಿಕೆ ಕಾರ್ಯವನ್ನು ಖಾಸಗಿ ಸಂಸ್ಥೆಗಳು ಹಾಗೂ ಎನ್‌ಜಿಒಗಳಿಗೆ ವಹಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿ, ಬಿಸಿಯೂಟ ತಯಾರಕರ ಫೆಡರೇಶನ್ ನವೆಂಬರ್ 13ರ ಶುಕ್ರವಾರ ರಾಜ್ಯಾದ್ಯಂತ ಒಂದು ದಿನದ ಅಡುಗೆ ಬಂದ್ ಪ್ರತಿಭಟನೆಗೆ (Strike) ಕರೆ ನೀಡಿದೆ.
ಎಐಟಿಯುಸಿ ಸಂಯೋಜಿತ ಬಿಸಿಯೂಟ ತಯಾರಕರ ಫೆಡರೇಶನ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಜೆ.ಜೆ. ಅಕ್ಕಮ್ಮ ಅವರು ಈ ವಿಷಯ ತಿಳಿಸಿದ್ದು, ಅಂದು ರಾಜ್ಯದ ಎಲ್ಲಾ ಬಿಸಿಯೂಟ ತಯಾರಕರು ಶಾಲೆಗಳಿಗೆ ತೆರಳದೆ ಅಡುಗೆ ಕಾರ್ಯ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.
ಖಾಸಗಿ ಸಂಸ್ಥೆಗಳಿಗೆ ಅಡುಗೆ ಹೊಣೆ ನೀಡಲು ವಿರೋಧ
ರಾಜ್ಯದ ಶಿಕ್ಷಕರ ಸಂಘವೊಂದು ಮಧ್ಯಾಹ್ನ ಉಪಹಾರ ಯೋಜನೆಯ ರಾಜ್ಯ ನಿರ್ದೇಶಕರಿಗೆ ಮನವಿ ಸಲ್ಲಿಸಿ, ಶಿಕ್ಷಕರು ಬೋಧನಾ ಕಾರ್ಯದ ಕಡೆ ಹೆಚ್ಚಿನ ಗಮನ ಹರಿಸಲು ಅನುಕೂಲವಾಗುವಂತೆ ರಾಜ್ಯಾದ್ಯಂತ ಬಿಸಿಯೂಟ ತಯಾರಿಕೆಯನ್ನು ಕ್ಲಸ್ಟರ್ ಕಿಚನ್ ಸೆಂಟರ್‌ಗಳ ಮೂಲಕ ನಿರ್ವಹಿಸಬೇಕು. ಈ ಜವಾಬ್ದಾರಿಯನ್ನು ಎನ್‌ಜಿಒಗಳು ಹಾಗೂ ಖಾಸಗಿ ಸಂಘ-ಸಂಸ್ಥೆಗಳಿಗೆ ವಹಿಸಬೇಕು ಎಂದು ಕೋರಿದೆ ಎನ್ನಲಾಗಿದೆ.
ಈ ಮನವಿಯನ್ನೇ ಆಧಾರವಾಗಿಟ್ಟುಕೊಂಡು, ಕಳೆದ 25 ವರ್ಷಗಳಿಂದ ಕಡಿಮೆ ವೇತನದಲ್ಲಿ ಕೆಲಸ ಮಾಡುತ್ತಿರುವ ಬಿಸಿಯೂಟ ತಯಾರಕ ಮಹಿಳೆಯರನ್ನು ಕೆಲಸದಿಂದ ಕೈಬಿಟ್ಟು ಖಾಸಗಿ ಸಂಸ್ಥೆಗಳಿಗೆ ಅಡುಗೆ ತಯಾರಿಕೆಯ ಜವಾಬ್ದಾರಿ ವಹಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆವರಗೆರೆ ಚಂದ್ರು ಆರೋಪಿಸಿದ್ದಾರೆ.
Midday Meal Scheme: 25 ವರ್ಷಗಳಿಂದ ದುಡಿಯುತ್ತಿರುವ ಮಹಿಳೆಯರಿಗೆ ಆತಂಕ
ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಬಿಸಿಯೂಟ ಸಿದ್ಧಪಡಿಸುವ ಕಾರ್ಯದಲ್ಲಿ ಸಾವಿರಾರು ಮಹಿಳೆಯರು ಹಲವು ವರ್ಷಗಳಿಂದ ತೊಡಗಿಸಿಕೊಂಡಿದ್ದಾರೆ. ಕಡಿಮೆ ವೇತನದಲ್ಲಿಯೇ ಸೇವೆ ಸಲ್ಲಿಸುತ್ತಿರುವ ಈ ಮಹಿಳೆಯರ ಉದ್ಯೋಗದ ಭದ್ರತೆಯ ಬಗ್ಗೆ ಸರ್ಕಾರ ಗಮನಹರಿಸಬೇಕು ಎಂಬುದು ಸಂಘಟನೆಯ ಒತ್ತಾಯವಾಗಿದೆ.
ಕ್ಲಸ್ಟರ್ ಕಿಚನ್ ವ್ಯವಸ್ಥೆ ಜಾರಿಗೆ ಬಂದರೆ ಈಗಾಗಲೇ ಅಡುಗೆ ಕೆಲಸ ಮಾಡುತ್ತಿರುವ ಮಹಿಳೆಯರ ಉದ್ಯೋಗಕ್ಕೆ ತೊಂದರೆಯಾಗುವ ಆತಂಕವಿದೆ. ಆದ್ದರಿಂದ ಬಿಸಿಯೂಟ ತಯಾರಕರ ಹಿತಾಸಕ್ತಿಗೆ ಧಕ್ಕೆ ತರುವ ಯಾವುದೇ ನಿರ್ಧಾರ ಕೈಗೊಳ್ಳಬಾರದು ಎಂದು ಸಂಘಟನೆ ಆಗ್ರಹಿಸಿದೆ.
ಅಧಿಕಾರಿಗಳ ಕ್ರಮಕ್ಕೆ ಖಂಡನೆ
ಮಧ್ಯಾಹ್ನ ಉಪಹಾರ ಯೋಜನೆಯ ರಾಜ್ಯ ನಿರ್ದೇಶಕರು ಬಿಸಿಯೂಟ ತಯಾರಕ ಮಹಿಳೆಯರ ಉದ್ಯೋಗದ ಭವಿಷ್ಯವನ್ನು ಪರಿಗಣಿಸದೆ ಸ್ವಯಂ ನಿರ್ಧಾರ ಕೈಗೊಳ್ಳುತ್ತಿದ್ದಾರೆ ಎಂದು ಸಂಘಟನೆಯ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾ ಶಿಕ್ಷಣಾಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರು ಅವರಿಂದ ಅಭಿಪ್ರಾಯ ಕೇಳಿರುವ ಕ್ರಮವನ್ನೂ ಸಂಘಟನೆ ಖಂಡಿಸಿದೆ.
Also Read>> ಶಿವಮೊಗ್ಗ ಇ.ಎಸ್.ಐ. ಕಾರ್ಮಿಕರ ಒಪಿಡಿ ಸಮಸ್ಯೆ: ತಕ್ಷಣ ಪರಿಹಾರಕ್ಕೆ ಶಾಸಕ ಚನ್ನಬಸಪ್ಪ ಆಗ್ರಹ
ನ.13ರಂದು ಶಾಲೆಗಳಿಗೆ ತೆರಳದೆ ಪ್ರತಿಭಟನೆ
ಬಿಸಿಯೂಟ ತಯಾರಕರ ಉದ್ಯೋಗ ಉಳಿಸುವ ಉದ್ದೇಶದಿಂದ ನವೆಂಬರ್ 13ರಂದು ರಾಜ್ಯಾದ್ಯಂತ ಒಂದು ದಿನದ ಅಡುಗೆ ಬಂದ್ ನಡೆಸಲು ನಿರ್ಧರಿಸಲಾಗಿದೆ. ಅಂದು ಯಾವುದೇ ಬಿಸಿಯೂಟ ತಯಾರಕರು ಶಾಲೆಗಳಿಗೆ ತೆರಳದೆ ಮನೆಯಲ್ಲಿಯೇ ಉಳಿದು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಬೇಕು ಎಂದು ಫೆಡರೇಶನ್ ಕರೆ ನೀಡಿದೆ.
ಸರ್ಕಾರ ಹಾಗೂ ಮಧ್ಯಾಹ್ನ ಉಪಹಾರ ಯೋಜನೆಯ ಅಧಿಕಾರಿಗಳು ಬಿಸಿಯೂಟ ತಯಾರಕ ಮಹಿಳೆಯರ ಉದ್ಯೋಗದ ಭದ್ರತೆಗೆ ಆದ್ಯತೆ ನೀಡಬೇಕು ಮತ್ತು ಅವರ ಅಭಿಪ್ರಾಯ ಪರಿಗಣಿಸದೆ ಯಾವುದೇ ನಿರ್ಧಾರ ಕೈಗೊಳ್ಳಬಾರದು ಎಂದು ಮಂಜುಳಾ, ಶಾರದಮ್ಮ ಹಾಗೂ ಸರೋಜಮ್ಮ ಒತ್ತಾಯಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








