ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಹೋರಿ ಬಿಡುವ ಹಬ್ಬ ಮುಗಿಸಿ ಮನೆಗೆ ಮರಳುತ್ತಿದ್ದ ವೇಳೆ ಕೆರೆಗೆ ಬಿದ್ದ ಹೋರಿಯನ್ನು ರಕ್ಷಿಸಲು ನೀರಿಗೆ ಇಳಿದ ಯುವಕನೊಬ್ಬ ಕೆರೆಯ ಕೆಸರಿನಲ್ಲಿ ಕಾಲು ಸಿಲುಕಿಕೊಂಡು ಮುಳುಗಿ ಮೃತಪಟ್ಟಿರುವ ದಾರುಣ ಘಟನೆ (Shivamogga) ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ (Shikaripura) ತಾಲ್ಲೂಕಿನ ಹುಣಸೇಕೊಪ್ಪ ಗ್ರಾಮದ ಸಮೀಪ ನಡೆದಿದೆ.
ಮೃತ ಯುವಕನನ್ನು ಅಶ್ರಫ್ (22) ಎಂದು ಗುರುತಿಸಲಾಗಿದೆ. ಇವರು ಕಾರ್ ಗ್ಯಾರೇಜ್ನಲ್ಲಿ ಕೆಲಸ ಮಾಡುತ್ತಿದ್ದರು. ಕುಟುಂಬಕ್ಕೆ ಆಧಾರವಾಗಿದ್ದ ಯುವಕನ ಅಕಾಲಿಕ ಸಾವು ಗ್ರಾಮದಲ್ಲಿ ಶೋಕದ ವಾತಾವರಣ ಮೂಡಿಸಿದೆ.
ಹೋರಿ ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡ ಯುವಕ
ಹಿತ್ತಲ ಗ್ರಾಮದಲ್ಲಿ ನಡೆದ ಹೋರಿ ಬಿಡುವ ಹಬ್ಬದಲ್ಲಿ ಪಾಲ್ಗೊಂಡಿದ್ದ ಅಶ್ರಫ್, ಕಾರ್ಯಕ್ರಮ ಮುಗಿದ ಬಳಿಕ ವಾಪಸ್ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಹುಣಸೇಕೊಪ್ಪ ಗ್ರಾಮದ ಸಮೀಪವಿದ್ದ ಕೆರೆಗೆ ಹೋರಿಯೊಂದು ಆಕಸ್ಮಿಕವಾಗಿ ಬಿದ್ದಿದೆ.
ಕೆರೆಗೆ ಬಿದ್ದ ಹೋರಿ ನೀರಿನಲ್ಲಿ ಒದ್ದಾಡುತ್ತಿರುವುದನ್ನು ಗಮನಿಸಿದ ಅಶ್ರಫ್, ಅದನ್ನು ರಕ್ಷಿಸಬೇಕೆಂಬ ಉದ್ದೇಶದಿಂದ ತಕ್ಷಣ ಕೆರೆಗೆ ಇಳಿದಿದ್ದಾರೆ. ಆದರೆ, ಹೋರಿಯನ್ನು ರಕ್ಷಿಸಲು ಮುಂದಾದ ಯುವಕನಿಗೇ ವಿಧಿ ಮುನಿದಿದೆ.
ಕೆರೆಯೊಳಗೆ ಇಳಿದ ಅಶ್ರಫ್ ಅವರ ಕಾಲು ಕೆಸರಿನಲ್ಲಿ ಸಿಲುಕಿಕೊಂಡಿದೆ. ಇದರಿಂದ ನೀರಿನಿಂದ ಮೇಲೆ ಬರಲು ಸಾಧ್ಯವಾಗದೆ ಅವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
Shikaripura : ರಕ್ಷಣೆಗೆ ಮುಂದಾದರೂ ಉಳಿಯದ ಜೀವ
ಅಶ್ರಫ್ ಕೆರೆಯಲ್ಲಿ ಮುಳುಗುತ್ತಿದ್ದುದನ್ನು ಗಮನಿಸಿದ ಜೊತೆಯಲ್ಲಿದ್ದ ಯುವಕರು ಅವರನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಆದರೆ, ಅವರ ಪ್ರಯತ್ನ ಫಲಕಾರಿಯಾಗದೆ ಅಶ್ರಫ್ ಮೃತಪಟ್ಟಿದ್ದಾರೆ. ಹೋರಿಯನ್ನು ರಕ್ಷಿಸಲು ಹೋದ ಯುವಕನೇ ಪ್ರಾಣ ಕಳೆದುಕೊಂಡಿರುವುದು ಸ್ಥಳೀಯರನ್ನು ತೀವ್ರ ದುಃಖಕ್ಕೀಡು ಮಾಡಿದೆ.
Also Read>> ಸೀಫರ್ಟ್ ಜೊತೆ ಗುರ್ನೂರ್ ಕಿರಿಕ್: ಕೊಹ್ಲಿ ಎಂಟ್ರಿಯಿಂದ ತಣ್ಣಗಾಯ್ತು ಮೈದಾನದ ಕಾವು!
ಕುಟುಂಬಕ್ಕೆ ಪರಿಹಾರ ನೀಡಲು ಒತ್ತಾಯ
ಕಾರು ಗ್ಯಾರೇಜ್ನಲ್ಲಿ ಕೆಲಸ ಮಾಡಿಕೊಂಡು ಕುಟುಂಬಕ್ಕೆ ಆಧಾರವಾಗಿದ್ದ 22 ವರ್ಷದ ಅಶ್ರಫ್ ಅವರ ಸಾವು ಕುಟುಂಬಸ್ಥರಿಗೆ ತುಂಬಲಾರದ ನಷ್ಟ ಉಂಟುಮಾಡಿದೆ. ಯುವಕನ ಕುಟುಂಬದ ದುಃಖದಲ್ಲಿ ಭಾಗಿಯಾಗಿರುವ ಗ್ರಾಮಸ್ಥರು, ಸರ್ಕಾರ ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








