ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ದಿನಪತ್ರಿಕೆಗಳು (News Paper) ಕೇವಲ ಸುದ್ದಿಗಳ ಸಂಗ್ರಹವಲ್ಲ, ಅವು ಜ್ಞಾನವನ್ನು ವಿಸ್ತರಿಸಿ, ಚಿಂತನೆಗೆ ಹೊಸ ಆಯಾಮ ನೀಡಿ, ಅಭಿವ್ಯಕ್ತಿ ಕೌಶಲವನ್ನು ಬೆಳೆಸುವ ಅಕ್ಷಯ ನಿಧಿ ಎಂದು (Shivamogga) ಶಿವಮೊಗ್ಗದ ರಾಷ್ಟ್ರೀಯ ಶಿಕ್ಷಣ ಸಮಿತಿ ಸಹ ಕಾರ್ಯದರ್ಶಿ ಡಾ.ಪಿ. ನಾರಾಯಣ್ ಹೇಳಿದರು.
ನಗರದ ರಾಷ್ಟ್ರೀಯ ಪ್ರೌಢಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಮಕ್ಕಳ ದಿನಾಚರಣೆ ಹಾಗೂ ‘ದಿನಪತ್ರಿಕೆ ಓದು – ಮಹತ್ವ’ ಕುರಿತ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಶೈಕ್ಷಣಿಕ ಅಂಕಗಳೊಂದೇ ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಅಳೆಯುವ ಮಾನದಂಡವಲ್ಲ. ಉತ್ತಮ ಅಭಿವ್ಯಕ್ತಿ, ಆತ್ಮವಿಶ್ವಾಸ, ಶಬ್ದಸಂಪತ್ತು ಹಾಗೂ ವಿಚಾರವಂತಿಕೆಯೂ ವ್ಯಕ್ತಿತ್ವ ವಿಕಸನಕ್ಕೆ ಅಗತ್ಯ.
ಮೊಬೈಲ್ ಬಳಕೆ ವ್ಯಸನವಾಗದಂತೆ ಎಚ್ಚರ ವಹಿಸಬೇಕು. ಎಳೆಯ ಮನಸ್ಸುಗಳು ತಂತ್ರಜ್ಞಾನದ ಬೆಳವಣಿಗೆಗಳ ಬಗ್ಗೆ ಕುತೂಹಲ ಬೆಳೆಸಿಕೊಂಡು ಅಧ್ಯಯನ ನಡೆಸಬೇಕು. ಆದರೆ ಮೊಬೈಲ್ನಲ್ಲಿ ಅನಗತ್ಯವಾಗಿ ಮುಳುಗಿ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಬಾರದು. ಇಂದಿನ ಮಕ್ಕಳಲ್ಲಿ ಜವಾಹರಲಾಲ್ ನೆಹರು ಅವರ ಮಕ್ಕಳ ಮೇಲಿನ ಪ್ರೀತಿಯ ಮೌಲ್ಯಗಳು ಅರಿಯಿರಿ ಎಂದರು.
Shivamogga : ಬಹುಭಾಷೆಗಳನ್ನು ಕಲಿಯುವ ಆಸಕ್ತಿ ಬೆಳೆಸಿಕೊಳ್ಳಿ
ಎನ್ಇಎಸ್ ಶೈಕ್ಷಣಿಕ ಆಡಳಿತಾಧಿಕಾರಿ ಎ.ಎನ್.ರಾಮಚಂದ್ರ ಮಾತನಾಡಿ, ವಿದ್ಯಾರ್ಥಿಗಳು ಬಹುಭಾಷೆಗಳನ್ನು ಕಲಿಯುವ ಆಸಕ್ತಿ ಬೆಳೆಸಿಕೊಳ್ಳಬೇಕು. ಓದು ಜ್ಞಾನವನ್ನಷ್ಟೇ ಅಲ್ಲ, ಆತ್ಮವಿಶ್ವಾಸವನ್ನೂ ಹೆಚ್ಚಿಸುತ್ತದೆ. ಪಠ್ಯಪುಸ್ತಕಗಳ ಜತೆಗೆ ಉತ್ತಮ ಸಾಹಿತ್ಯ ಕೃತಿಗಳನ್ನೂ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.
ಎನ್ಇಎಸ್ ಸಾರ್ವಜನಿಕ ಸಂಪರ್ಕಾಧಿಕಾರಿ ಸಿ.ಎಂ.ನೃಪತುಂಗ ಮಾತನಾಡಿ, ಓದು ವ್ಯಕ್ತಿಯ ಮನಸ್ಸನ್ನು ಅರಳಿಸುವುದರ ಜೊತೆಗೆ ಹೊಸ ಆಲೋಚನೆಗಳಿಗೆ ದಾರಿ ಮಾಡಿಕೊಡುತ್ತದೆ. ರಾಷ್ಟ್ರೀಯ ಪ್ರೌಢಶಾಲೆಯಲ್ಲಿ ಪ್ರತಿದಿನ ಒಂದು ಗಂಟೆಯನ್ನು ದಿನಪತ್ರಿಕೆಗಳ ಅಧ್ಯಯನಕ್ಕೆ ಮೀಸಲಿಡಲಾಗಿದೆ.
Also Read>> ನಿಮ್ಮಲ್ಲಿದೆಯೇ ಡ್ಯಾನ್ಸ್ ಟ್ಯಾಲೆಂಟ್? ಜೀ ತೆಲುಗಿನ ‘ಆಟ’ ಶೋಗೆ ಬೆಂಗಳೂರಿನಲ್ಲಿ ಆಡಿಷನ್
ವಿದ್ಯಾರ್ಥಿಗಳು ಓದಿದ ವಿಚಾರಗಳನ್ನು ಕೇವಲ ತಿಳಿದುಕೊಳ್ಳುವುದಕ್ಕೆ ಸೀಮಿತಗೊಳಿಸದೆ, ಅವುಗಳನ್ನು ಮನನ ಮಾಡಿಕೊಂಡು ತಮ್ಮದೇ ಆದ ಭಾಷೆಯಲ್ಲಿ ಅಭಿವ್ಯಕ್ತಪಡಿಸುವಂತೆ ಪ್ರೇರೇಪಿಸುವ ಉದ್ದೇಶದಿಂದ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಲೆಯ ಉಪಪ್ರಾಂಶುಪಾಲರಾದ ಎಚ್.ಶಿವಾನಂದಪ್ಪ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಕೆ.ಪಿ.ಸುಜಾತ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









