ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಾನವನ ಸೂಚನೆಗಳಿಗೆ ಪ್ರತಿಕ್ರಿಯಿಸುವ ಜನರೇಟಿವ್ ಎಐ ಆಚೆಗೆ, ಸ್ವತಃ ಆಲೋಚಿಸಿ, ಬಹುಹಂತದ ಕಾರ್ಯಗಳನ್ನು ಸ್ವಾಯತ್ತವಾಗಿ ನಿರ್ವಹಿಸುವ ‘ಏಜೆಂಟಿಕ್ ಎಐ’ (Agentic AI) ತಂತ್ರಜ್ಞಾನ ಭವಿಷ್ಯದ ಸಾಧ್ಯತೆಗಳ ಬಾಗಿಲು ತೆರೆಯುತ್ತಿದೆ ಎಂದು ಜೈನ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಜೆ. ಸೋಮಶೇಖರ್ ಅಭಿಪ್ರಾಯಪಟ್ಟರು.
ನಗರದ ಜೆಎನ್ಎನ್ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗ ಹಾಗೂ ಗುವಾಹಟಿಯ ಭಾರತೀಯ ತಂತ್ರಜ್ಞಾನ ಸಂಸ್ಥೆಯ (IIT), ಇಐಸಿಟಿ ಅಕಾಡೆಮಿ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ‘ಏಜೆಂಟಿಕ್ ಎಐ: ತತ್ವಗಳು, ವಿನ್ಯಾಸ ರಚನೆಗಳು ಮತ್ತು ನೈಜ ಜಗತ್ತಿನ ಅನ್ವಯಗಳು’ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಕೃತಕ ಬುದ್ಧಿಮತ್ತೆಯ ಬೆಳವಣಿಗೆ ಉದ್ಯೋಗ ಕ್ಷೇತ್ರದ ಸ್ವರೂಪವನ್ನೇ ಬದಲಾಯಿಸುತ್ತಿದೆ. ಭವಿಷ್ಯದ ತಾಂತ್ರಿಕ ಸವಾಲುಗಳನ್ನು ಎದುರಿಸಲು ವಿದ್ಯಾರ್ಥಿಗಳು ಹಾಗೂ ಬೋಧಕ ಸಿಬ್ಬಂದಿ ಹೊಸ ತಂತ್ರಜ್ಞಾನಗಳ ಜ್ಞಾನ ಮತ್ತು ಕೌಶಲಗಳನ್ನು ನಿರಂತರವಾಗಿ ವೃದ್ಧಿಸಿಕೊಳ್ಳಬೇಕು. ಶೈಕ್ಷಣಿಕ ಸಂಸ್ಥೆಗಳಲ್ಲಿ ಏಜೆಂಟಿಕ್ ಎಐ ಬಳಕೆಯ ಸಾಧ್ಯತೆಗಳನ್ನು ಅರಿತುಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ತಿಳಿಸಿದರು.
Agentic AI : ಐಐಟಿ ಗುವಾಹಟಿ ಮಹತ್ವದ ಪಾತ್ರ
ಐಐಟಿ ಗುವಾಹಟಿಯ ಇಐಸಿಟಿ ಅಕಾಡೆಮಿ ಸಹಾಯಕ ಯೋಜನಾ ವಿಜ್ಞಾನಿ ಸಾಹಿಲ್ ಶರ್ಮಾ ಮಾತನಾಡಿ, ಏಜೆಂಟಿಕ್ ಎಐ ಸೇರಿದಂತೆ, ಪ್ರಸ್ತುತ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ನವೀನ ತಾಂತ್ರಿಕ ಬೆಳವಣಿಗೆಗಳ ಜ್ಞಾನವನ್ನು ಶೈಕ್ಷಣಿಕ ಸಮುದಾಯಕ್ಕೆ ತಲುಪಿಸುವಲ್ಲಿ ಐಐಟಿ ಗುವಾಹಟಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದರು.
Also Read>> ಎನ್ಇಎಸ್ ಪ್ರೌಢಶಾಲೆ: ದಿನಪತ್ರಿಕೆ ಓದು – ಮಹತ್ವ ಪ್ರಬಂಧ ಸ್ಪರ್ಧೆ | ದಿನಪತ್ರಿಕೆಗಳು ಅರಿವಿನ ಅಕ್ಷಯ ನಿಧಿಗಳು
ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್. ನಾಗರಾಜ ಮಾತನಾಡಿ, ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರತಿದಿನ ಹೊಸ ಬದಲಾವಣೆಗಳು ಸಂಭವಿಸುತ್ತಿವೆ. ಶಿಕ್ಷಕರು ಜ್ಞಾನವಂತರಾದರೆ ಅದರ ನೇರ ಪ್ರಯೋಜನ ವಿದ್ಯಾರ್ಥಿಗಳಿಗೆ ದೊರೆಯುತ್ತದೆ. ಜನರೇಟಿವ್ ಎಐ ಮತ್ತು ಮಲ್ಟಿ ಏಜೆಂಟ್ ವ್ಯವಸ್ಥೆಗಳು ನಮ್ಮ ಕಾರ್ಯನಿರ್ವಹಣೆಯ ವಿಧಾನವನ್ನೇ ಬದಲಾಯಿಸುತ್ತಿದ್ದು, ಈ ಬೆಳವಣಿಗೆಗಳನ್ನು ಅರಿತು ಮುನ್ನಡೆಯುವುದು ಅತ್ಯವಶ್ಯಕ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ವೈ.ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ಜಲೇಶ್ ಕುಮಾರ್ ಉಪಸ್ಥಿತರಿದ್ದರು. ಕಾರ್ಯಾಗಾರ ಸಂಯೋಜಕರಾದ ಡಾ. ಗಾನವಿ ಎಂ. ಸ್ವಾಗತಿಸಿ, ಡಾ.ಬೆನಕಪ್ಪ.ಎಸ್.ಎಂ ವಂದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









