ನವದೆಹಲಿ: ಇಡಿಯ ದೇಶವನ್ನೇ ಬೆಚ್ಚಿ ಬೀಳಿಸಿದ್ದು ಮಾತ್ರವಲ್ಲ ವಿಶ್ವದಾದ್ಯಂತ ಸುದ್ದಿಯಾಗಿದ್ದ ನವದೆಹಲಿ ನಿರ್ಭಯಾ ಅತ್ಯಾಚಾರ ಪ್ರಕರಣದ ತೀರ್ಪು ಇಂದು ಹೊರಬೀಳಲಿದ್ದು, ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಪ್ರಕರಣದ ಅಂತಿಮ ತೀರ್ಪನ್ನು ಸುಪ್ರೀಂ ಕೋರ್ಟ್ ಸಿಜೆಐ ದೀಪಕ್ ಮಿಶ್ರಾ, ನ್ಯಾ.ಆರ್. ಭಾನುಮತಿ ಹಾಗೂ ನ್ಯಾ.ಅಶೋಕ್ ಭೂಷಣ್ ಅವರಿರುವ ಪೀಠ ಇಂದು ಪ್ರಕಟಿಸಲಿದೆ.
ಪ್ರಕರಣದಲ್ಲಿ ಆರೋಪಿಗಳಾಗಿರುವ ಮುಖೇಶ್(29), ಪವನ್ ಗುಪ್ತಾ(22) ಹಾಗೂ ವಿನಯ್ ಶರ್ಮಾ(23) ಅವರುಗಳ ಮೇಲಿರುವ ಆರೋಪಗಳ ತೀರ್ಪು ಇಂದು ಹೊರಬೀಳಲಿದ್ದು, ಈ ಮೂವರಿಗೂ ಬಹುತೇಕ ಗಲ್ಲು ಶಿಕ್ಷೆ ಖಾಯಂ ಆಗಲಿದೆ ಎಂದು ಹೇಳಲಾಗಿದೆ.
2012ರ ಡಿಸೆಂಬರ್ 16ರಂದು ರಾಷ್ಟ್ರ ರಾಜಧಾನಿ ನವದೆಹಲಿಯ ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿಯನ್ನು ಚಲಿಸುವ ಬಸ್ ನಲ್ಲೇ ಭೀಕರವಾಗಿ ಸಾಮೂಹಿಕ ಅತ್ಯಾಚಾರ ಎಸಗಿ, ಅತ್ಯಂತ ಬರ್ಭರವಾಗಿ ಆಕೆಯನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣ ಇಡಿಯ ದೇಶದಲ್ಲಿ ಭಾರೀ ಆಕ್ರೋಶ ಹಾಗೂ ವ್ಯಾಪಕ ಪ್ರತಿಭಟನೆಗಳಿಗೆ ಕಾರಣವಾಗಿತ್ತು.
ಇನ್ನು, ಪ್ರಕರಣದ ಇನ್ನೊಬ್ಬ ಆರೋಪಿ ಅಕ್ಷಯ್ ಕುಮಾರ್ ಸಿಂಗ್‌ಗೆ ಈಗಾಗಲೇ ಗಲ್ಲು ಶಿಕ್ಷೆ ಘೋಷಣೆಯಾಗಿದ್ದು, ಆತ ಮರುಪರಿಶೀಲನಾ ಅರ್ಜಿ ಸಲ್ಲಿಸಿಲ್ಲ. ಆದರೆ, ಸದ್ಯದಲ್ಲೇ ಆತನ ವಕೀಲರು ಅರ್ಜಿ ಸಲ್ಲಿಸಲಿದ್ದಾರೆ ಎನ್ನಲಾಗಿದೆ. ಇದೇ ಪ್ರಕರಣದ ಮತ್ತೊಬ್ಬ ಆರೋಪಿ ರಾಮ್ ಸಿಂಗ್ ತಿಹಾರ್ ಜೈಲಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ. ಇನ್ನೊಬ್ಬ ಆರೋಪಿಯನ್ನು ಬಾಲಾಪರಾಧಿ ಎಂದು ಪರಿಗಣಿಸಲಾಗಿದ್ದು, ಆತನನ್ನು ಜ್ಯುವೆನಲ್ ಜಸ್ಟೀಸ್ ಬೋರ್ಡ್‌ಗೆ ಒಪ್ಪಿಸಲಾಗಿದೆ.
Discussion about this post