ನವದೆಹಲಿ: ಸಶಸ್ತ್ರ ಪಡೆಗಳ ವಿಶೇಷ ಅಧಿಕಾರಗಳ ಕಾಯಿದೆಯ(ಅಊಖಅ) ಅಡಿಯ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದ ಹಿನ್ನೆಲೆಯಲ್ಲಿ ದೇಶದ ಭದ್ರತಾ ಪಡೆಯ 300 ಯೋಧರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ಇದರ ವಿರುದ್ಧ ನ್ಯಾಯಕ್ಕಾಗಿ ಸುಪ್ರೀಂ ಕದ ತಟ್ಟಲಾಗಿದೆ.
ಈ ಕುರಿತಂತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಬಂಡಾಯ ಪೀಡಿತ ಪ್ರದೇಶ ಹಾಗೂ ಗಲಭೆ ಪೀಡಿತ ಪ್ರದೇಶಗಳಲ್ಲಿ ಜೀವ ಪಣಕ್ಕಿಟ್ಟು ಸೇವೆ ಸಲ್ಲಿಸುತ್ತಿರುವವರ ವಿರುದ್ಧವಾಗಿ ನಾಗರಿಕ ಪೊಲೀಸ್ ಹಾಗೂ ಸಿಬಿಐನಿಂದ ಪ್ರಕರಣ ದಾಖಲಿಸಿ, ಎಫ್‌ಐಆರ್ ದಾಖಲಿಸಿರುವುದು ಯೋಧರ ಆತ್ಮಸ್ಥೈರ್ಯ ಕುಸಿಯುವಂತೆ ಮಾಡಿದೆ. ಇದು ಸಶಸ್ತ್ರ ಪಡೆಗಳ ಯೋಧರಿಗೆ ಹಿನ್ನಡೆಯಾಗಿದೆ ಎಂದು ತಿಳಿಸಿದೆ.
ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ಹಾಗೂ ನ್ಯಾ. ಎ.ಎಂ. ಖಾನ್ವಿಲ್ಕರ್ ಅವರಿದ್ದ ಪೀಠದ ಮುಂದೆ ಯೋಧರ ಪಡೆಗಳ ಪರವಾಗಿ ಅರ್ಜಿ ಸಲ್ಲಿಸಿದ ವಕೀಲೆ ಐಶ್ವರ್ಯ ಭಾಟಿ, ತಮ್ಮ ಕರ್ತವ್ಯ ನಿರ್ವಹಿಸುವ ವೇಳೆ ಎಎಫ್‌ಎಸ್‌ಪಿಎ ಪ್ರದೇಶದಲ್ಲಿ ಅವರು ಕಾರ್ಯಾಚರಣೆ ನಡೆಸಿದ್ದಾರೆಯಷ್ಟೆ. ಇದಕ್ಕಾಗಿ ಯೋಧರ ವಿರುದ್ಧ ಎಫ್‌ಐಆರ್ ದಾಖಲಿಸಿ, ವಿಚಾರಣೆ ನಡೆಸುವುದು ಎಷ್ಟರಮಟ್ಟಿಗೆ ಸರಿ? ಇಂತಹ ಕಾನೂನು ಹಾಗೂ ಕ್ರಮಗಳು ಮಿಲಿಟರಿ ಮತ್ತು ಪ್ಯಾರಾ ಮಿಲಿಟರಿ ಪಡೆಗಳ ನೈತಿಕತೆಯನ್ನು ಕಡಿಮೆಗೊಳಿಸುತ್ತವೆ ಮತ್ತು ದೇಶದ ಆಂತರಿಕ ಭದ್ರತೆಗೆ ಭಾರೀ ಅಪಾಯವನ್ನುಂಟುಮಾಡುತ್ತವೆ ಎಂದು ಹೇಳಿದೆ.
ಅರ್ಜಿ ಸ್ವೀಕರಿಸಿರುವ ನ್ಯಾಯಾಲಯ, ಅರ್ಜಿಯ ವಿಚಾರಣೆ ನಡೆಸಲು ಸಮ್ಮತಿಸಿದ್ದು, ಆ.20ರಂದು ವಿಚಾರಣೆಯನ್ನು ನಿಗದಿಪಡಿಸಿದೆ. ಈ ಪ್ರಕರಣವನ್ನು ಸಿಜೆಐ ದೀಪಕ್ ಮಿಶ್ರಾ ಅವರ ಪೀಠ ಸ್ವತಃ ವಿಚಾರಣೆ ನಡೆಸಲಿದೆ.
Discussion about this post