ಅಟಲ್ ಬಿಹಾರಿ ವಾಜಪೇಯಿ ಅವರ ಸಾಧನೆಯ ಹಾದಿಯಲ್ಲಿ ದೊಡ್ಡ ಮೈಲಿಗಲ್ಲಾಗಿ ನಿಂತಿರುವುದು ಕಾರ್ಗಿಲ್ ಯುದ್ಧ ಎಂಬ ಮಹಾನ್ ಸಾಧನೆ.
ಜಮ್ಮು ಕಾಶ್ಮೀರ ರಾಜ್ಯದ ಕಾರ್ಗಿಲ್ ಪ್ರದೇಶದಲ್ಲಿ ಪಾಕಿಸ್ಥಾನಿ ಸೈನಿಕರು ಅಂತರಾಷ್ಟ್ರೀಯ ಗಡಿಯನ್ನು ಮೀರಿ ಕಾಶ್ಮೀರ ಕಣಿವೆಗಳ ಮುಖಾಂತರ ಒಳನುಸುಳುತ್ತಿರುವುದು 1999ರಲ್ಲಿ ಆರಂಭದಲ್ಲಿ ಜನಸಾಮಾನ್ಯರಿಗೆ ಹಾಗೂ ಗಡಿ ಭದ್ರತಾ ಪಡೆಯ ಸಿಬ್ಬಂದಿಗಳಿಗೆ ಖಾತ್ರಿಯಾಗಿ ಅದೇ ಸುದ್ದಿ ಭಾರತೀಯರ ಕಣ್ಣು ಕೆಂಪಗಾಗಿಸಲು ಒಂದು ಕಾರಣವಾಯಿತು.
ಬರಿಯ ಕಾರ್ಗಿಲ್ ಪ್ರದೇಶ ಮಾತ್ರವಲ್ಲದೆ ಮಾನವ ರಹಿತ ಚೆಕ್ ಪೋಸ್‌ಟ್ಗಳ ಮುಖಾಂತರ ಸಿಯಾಚಿನ್ ಗಡಿವರೆವಿಗೂ ಒಳನುಸುಳುವಿಕೆ ಅವ್ಯಾಹತವಾಗಿ ನಡೆಯುತ್ತಿದ್ದುದು ಭಾರತಕ್ಕೆ ಸಹಿಸಲಸಾಧ್ಯವಾಯಿತು. ಅದೇ ಸಮಯಕ್ಕೆ ಪಾಕಿಸ್ತಾನಿ ನಾಯಕರ ಹೇಳಿಕೆಗಳು ಪಾಕಿಸ್ಥಾನ ಯುದ್ಧಕ್ಕೆ ತಯಾರಾಗಿದೆ ಎಂಬ ಸ್ಪಷ್ಟ ಸಂದೇಶವನ್ನು ಅದಾಗಲೇ ರವಾನಿಸಿಯಾಗಿತ್ತು.

ಭಾರತ ಹಾಗೂ ಪಾಕೀಸ್ತಾನದ ನಡುವೆ ಸೌಹಾರ್ದವನ್ನೇರ್ಪಡಿಸಲು, 1998 ಹಾಗೂ 1999ರಲ್ಲಿ ಭಾರತ ಪಾಕೀಸ್ತಾನಗಳ ನಡುವೆ ಲಾಹೋರ್ ಒಪ್ಪಂದಕ್ಕೆ ವಾಜಪೇಯಿ ಮುಂದಾಗಿದ್ದರು. ಆದರೆ ಮುಂದಿನಿಂದ ಒಪ್ಪಂದ ಮಾಡಿಕೊಂಡು ಹಿಂದಿನಿಂದ ಬಂದು ಬಾಂಬ್ ಹಾಕುವ ನೀಚ ಬುದ್ದಿಯನ್ನು ಪಾಕ್ ಬಿಡಲೇ ಇಲ್ಲ.
ಕೇಂದ್ರ ಸರ್ಕಾರ ಜೂನ್ 1999 ರಲ್ಲಿ ಭಾರತೀಯ ಸೇನೆಗೆ ಒಳನುಸುಳುಕೋರರನ್ನು ಪ್ರತಿರೋಧಿಸಲು ಆಪರೇಷನ್ ವಿಜಯ್ ಹೆಸರಿನ ಯುದ್ಧ ಆರಂಭಿಸುವಂತೆ ಅಪ್ಪಣೆ ಕೊಟ್ಟಿತು. ಕಾಶ್ಮೀರ ಗಡಿಯಲ್ಲಿನ ತೀವ್ರ ಕಡಿಮೆ ತಾಪಮಾನ, ವಿರೋಧಿ ಬಣದಿಂದ ಮಳೆಯಂತೆ ಬಂದು ಸುರಿಯುತ್ತಿದ್ದ ಗ್ರೆನೇಡ್ ಗಳು, ಸಮುದ್ರ ಮಟ್ಟದಿಂದ ಅತೀ ಎತ್ತರದಲ್ಲಿದ್ದು ಆಗಾಗ ಉಸಿರಾಡಲೂ ಕಷ್ಟವಾಗುವಂತಹ ಕ್ಲಿಷ್ಟ ಪರಿಸ್ಥಿತಿಗಳಲ್ಲಿ ಭಾರತೀಯ ಯೋಧರು ಪಾಕಿಸ್ತಾನಕ್ಕೆ ಎದಿರೇಟು ಕೊಡುವಲ್ಲಿ ಸಫಲರಾಗುತ್ತಿದ್ದರು. ಮೂರು ತಿಂಗಳ ಪರ್ಯಂತ ನಡೆದ ಕಾರ್ಗಿಲ್ ಯುದ್ಧದಲ್ಲಿ ಸುಮಾರು 500 ಜನ ಭಾರತೀಯ ಯೋಧರು ಹುತಾತ್ಮರಾದರು ಹಾಗೂ ಪಾಕಿಸ್ತಾನ ಬಣದಲ್ಲಿ ಸುಮಾರು 600 – 4000 ಸೈನಿಕರು ಹತರಾಗಿರುವ ಬಗ್ಗೆ ಅಂದಾಜಿಸಲಾಗಿದೆ.

ಒಳನುಸುಳುಕೋರರನ್ನು ಹಿಮ್ಮೆಟ್ಟಿಸುವಲ್ಲಿ ಭಾರತ ಸಫಲವಾಗಿದ್ದರಿಂದ ಪಾಕಿಸ್ಥಾನಕ್ಕೆ ತೀವ್ರ ಮುಖಭಂಗವಾಯಿತು. ಇದರಿಂದ ತಪ್ಪಿಸಿಕೊಳ್ಳಲು ಪಾಕ್ ಆಗಷ್ಟೇ ತಾನೇ ಸಿದ್ಧಪದಿಸಿಕೊಂಡಿದ್ದ ಅಣು ಬಾಂಬ್ ಅನ್ನು ಭಾರತದ ಮೇಲೆ ಪ್ರಯೋಗಿಸುವ ಬಗ್ಗೆ ಮಾತುಗಳು ಕೇಳಿ ಬರಲಾರಂಭಿಸಿದವು. ವಿಷಯ ತಿಳಿದ ಆಗಿನ ಅಮೆರಿಕಾ ಅಧ್ಯಕ್ಷ ಬಿಲ್ ಕ್ಲಿಂಟನ್ ಅಣು ಬಾಂಬ್ ಬಳಸಿ ಜಾಗತೀಕವಾಗಿ ಕಠಿಣ ಪರಿಸ್ಥಿತಿ ನಿರ್ಮಾಣ ಮಾಡದಂತೆ ಪಾಕ್ ಗೆ ಎಚ್ಚರಿಕೆ ಸಂದೇಶ ರವಾನಿಸಿದರು.
ಯುದ್ಧ ಸಂಬಂಧಿ ಪರಿಕರಗಳನ್ನೆಲ್ಲ ಪರದೇಶದಿಂದ ಅಮದು ಮಾಡಿಕೊಂಡಿದ್ದ ಪಾಕಿಸ್ಥಾನಕ್ಕೆ ಯುದ್ಧದಲ್ಲಿ ಸೋತಿದ್ದು ಅಪಾರ ನಷ್ಟವಾಯಿತು. ಅಮೆರಿಕಾ ಹಾಗು ಚೀನಾ ತಾವು ಮಧ್ಯ ಪ್ರವೇಶಿಸುವುದಕ್ಕೆ ಹಿಂದೇಟು ಹಾಕಿದವು. ಇಷ್ಟೆಲ್ಲಾ ನಡೆಯುತ್ತಿದ್ದರೂ ಭಾರತದ ಕಡೆಯಿಂದ ಆಗುತ್ತಿದ್ದ ದಾಳಿ ಇನ್ನು ನಿಂತಿರಲಿಲ್ಲ, ಪಾಕಿಸ್ಥಾನಿ ಸೈನಿಕರು ಬಂದ ದಾರಿಗೆ ಸುಂಕವಿಲ್ಲದಂತೆ ಅಂತರಾಷ್ಟ್ರೀಯ ಗಡಿ ದಾಟಿ ಹಿಂದೆ ಸರಿಯುವ ವರೆವಿಗೂ ಯುದ್ಧ ನಿಲ್ಲುವ ಯಾವ ಲಕ್ಷಣಗಳೂ ಗೋಚರಿಸಲಿಲ್ಲ.
ಕೂಡಲೇ ಪಾಕಿಸ್ತಾನದ ಸೇನಾ ಅಧ್ಯಕ್ಷ ಜನರಲ್ ಮುಷರಫ್ ಪಾಕಿಸ್ಥಾನದ ಪ್ರಧಾನಿ ನವಾಜ್ ಶರೀಫ್ ರಲ್ಲಿ ಪಾಕಿಸ್ಥಾನಿ ಸೈನಿಕರನ್ನು ಹಿಂದಕ್ಕೆ ಕರೆಸಿ ಮೊದಲಿನಂತೆ ನಿಯಂತ್ರಣ ರೇಖೆಯಲ್ಲಿ ನಿಲ್ಲಿಸಲು ಮನವಿ ಮಾಡಿದರು. ಪಾಕಿಸ್ಥಾನದಲ್ಲಿ ಸರ್ಕಾರಕ್ಕೂ ಹಾಗೂ ಸೇನೆಗೂ ತಮ್ಮ ರಾಷ್ಟ್ರೀಯ ಕಾರ್ಯ ನಿರ್ವಹಣೆಯ ವಿಚಾರದಲ್ಲಿ ವಿಧಿತ ಕಟ್ಟುಪಾಡುಗಳು ಇಲ್ಲದ ಕಾರಣ ಎರಡೂ ಬೇರೆ ಬೇರೆ ಯಾಗಿ ಕಾರ್ಯ ನಿರ್ವಹಿಸುವುದೇ ಹೆಚ್ಚು.

ಇಲ್ಲೂ ಹಾಗೆ ನಡೆದು ನವಾಜ್ ಶರೀಫರು ಮಾಡಿದ ಆಜ್ಞೆಯನ್ನು ಒಪ್ಪಲು ಯಾರೂ ತಯಾರಿರಲಿಲ್ಲ. ಆದರೆ ಅಷ್ಟರಲ್ಲಾಗಲೇ ತಮ್ಮ ಶಕ್ತಿ ಸಾಮರ್ಥ್ಯಗಳನ್ನು ಅರಿತುಕೊಂಡಿದ್ದ ಪಾಕಿಸ್ತಾನದ ಒಂದು ಸೇನಾ ತುಕಡಿ(ಎನ್ ಎಲ್ ಐ) ತಾನು ಯುದ್ಧ ಭೂಮಿಯಿಂದ ಹಿಂದೆ ಸರಿಯಿತು. ಕೊನೆಗೆ ಸೇನೆ ಹಿಂದೆ ಸರಿಯುವ ವಿಚಾರದಲ್ಲಿ ಪಾಕ್ ಸೇನೆಯೊಳಗೆ ಭಿನ್ನಾಭಿಪ್ರಾಯ ಸ್ಫೋಟವಾಯಿತು.
ಭಿನ್ನಾಭಿಪ್ರಾಯ ಎಷ್ಟರ ಮಟ್ಟಿಗೆ ಮುಂದುವರಿಯಿತೆಂದರೆ ಪಾಕ್ ಸೇನೆ ಒಳಜಗಳಗಳಿಗೆ ಸಾಕ್ಷಿಯಾಯಿತು ಹಾಗೂ ಹಲವಾರು ಸಾವು ನೋವುಗಳನ್ನು ಕಂಡಿತು. ಎಲ್ಲದರ ಫಲವಾಗಿ ಪಾಕ್ ಸೈನಿಕರು ಯುದ್ಧದಲ್ಲಿ ಸಫಲರಾಗದೆ ಹಿಂದಿರುಗಿದರು, ಭಾರತ ವಿಜಯೋತ್ಸವ ಆಚರಿಸಿತು. ಈ ಯುದ್ಧ ಆಗಿನ ಪ್ರಧಾನ ಮಂತ್ರಿ ವಾಜಪೇಯಿ ಯವರ ವ್ಯಕ್ತಿತ್ವವನ್ನು ಎತ್ತರಕ್ಕೆ ಕೊಂಡೊಯ್ಯುವಲ್ಲಿ ಸಹಕಾರಿಯಾಯಿತು.

ಕಾರ್ಗಿಲ್ ಯುದ್ಧ ಅಷ್ಟೊಂದು ಪ್ರಚಾರ ಪಡೆಯಲು ಇದ್ದ ಒಂದೇ ಒಂದುಕಾರಣವೆಂದರೆ ಅದು ಎರಡು ಅಣ್ವಸ್ತ್ರ ರಾಷ್ಟ್ರಗಳು ಮುಖಾ ಮುಖಿಯಾಗಿ ಯುದ್ಧ ಮಾಡುತ್ತಿರುವುದು. ದಕ್ಷಿಣ ಏಷ್ಯಾದ ಈ ಎರಡೂ ಸಹೋದರ ರಾಷ್ಟ್ರಗಳೇ ಅಣ್ವಸ್ತ್ರಗಳಿಂದ ಬಡಿದಾಡಿ ಕೊಂಡರೆ ಜಗತ್ತಿಗೆ ಕೆಟ್ಟ ಅರ್ಥ ರವಾನೆಯಾಗುವುದಾಗಿ ಎಲ್ಲ ರಾಷ್ಟ್ರಗಳಿಗೂ ಆತಂಕ ಮನೆ ಮಾಡಿತ್ತು. ಆದರೆ ಅಂದಿನ ಭಾರತದ ಪ್ರಧಾನಿ ವಾಜಪೇಯಿ ಅಷ್ಟೇ ಸಮಾಧಾನದಿಂದ ಪರಿಸ್ಥಿತಿ ತಿಳಿಯಾಗಿಸಲು ಯತ್ನಿಸಿದರು.
ಶಾಂತಿಗೆ ಹೆಸರುವಾಸಿಯಾದ ಅಟಲ್ ಜೀ ಭಾರತ ಹಾಗೂ ಪಾಕ್ ಬಾಂದವ್ಯಕ್ಕೆ ಕೊಂಡಿಯಾಗಿ ಲಾಹೋರ್ ಬಸ್ ಪ್ರಯಾಣವನ್ನು ಆರಂಭಿಸಿದರು. ಹಾಗೆಂದ ಮಾತ್ರಕ್ಕೆ ಅಟಲ್ ಸೌಮ್ಯವಾದಿ ಎಂದರ್ಥವಲ್ಲ. 2001ರಲ್ಲಿ ಸಂಸತ್ ಮೇಲೆ ನಡೆದ ದಾಳಿಯ ನಂತರ ಒಂದು ವೇಳೆ ಭಾರತವೇನಾದರೂ ನಮ್ಮ ಮೇಲೆ ಆಕ್ರಮಣ ಮಾಡಿದರೆ ಸುಮ್ಮನೆ ಕುಳಿತುಕೊಳ್ಳಲು ನಾವೇನು ಕೈಗೆ ಬಳೆ ತೊಟ್ಟುಕೊಂಡಿಲ್ಲ ಎಂದು ಮುಷ್ರಫ್ ಹೇಳಿದಾಗ, ನಮ್ಮ ಪಂಜಾನ್ ನಲ್ಲಿ ಗಂಡಸರೂ ಬಳೆ ತೊಡುತ್ತಾರೆ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದರು.

















