ಸಮಸ್ತ ಭಾರತೀಯದ ಎಲ್ಲಾ ರಾಜಕೀಯ ಪಕ್ಷಗಳಿಂದಲೂ ಮುಕ್ತವಾಗಿ ಕೊಂಡಾಡಲ್ಪಡುವ ಏಕಮಾತ್ರ ಭಾರತೀಯ ಪ್ರಧಾನಿ ಎಂದರೆ ಅದು ಅಟಲ್ ಬಿಹಾರಿ ವಾಜಪೇಯಿಯವರು ಮಾತ್ರ. ಪ್ರಸಕ್ತ ರಾಜಕಾರಣದಲ್ಲಿ ಬಹಳಷ್ಟು ನಾಯಕರು ಮಹಾನ್ ಸಾಧಕರೆಂಬಂತೆ ಗುರುತಿಸಿಕೊಳ್ಳುತ್ತಾರೆ. ಆದರೆ ಅಟಲ್ ಅವರನ್ನು ಅಭಿವೃದ್ದಿಯಲ್ಲಿ ಮಹತ್ವದ ಪಾತ್ರ ವಹಿಸಿ ಕಾಂಗ್ರೆಸ್ಸೇತರ ಪ್ರಧಾನಿಯೊಬ್ಬರು ದೇಶವನ್ನು ಅಭಿವೃದ್ದಿ ಪಥದಲ್ಲಿ ಕೊಂಡೊಯ್ದು ಸಮರ್ಥ ಜನನಾಯಕ ಎಂದರೆ ನಿಜಕ್ಕೂ ಅತಿಶಯೋಕ್ತಿಯಲ್ಲ.
ಪ್ರಧಾನಮಂತ್ರಿಯಾಗಿ ಅಟಲ್ ಜೀ ಮಾಡಿದ ಸಾಧನೆಗಳನ್ನು ಬರೆಯುತ್ತಾ ಹೋದರೆ ಅಕ್ಷರಗಳು ಸಾಕಾಗುವುದಿಲ್ಲ. ಅಟಲ್ ಜೀಯವರ ಸಾಧನೆಯಲ್ಲಿ ಪ್ರಮುಖವಾದುದು ಪ್ರೋಖ್ರಾನ್ ನಲ್ಲಿ ಕೈಗೊಂಡ ಪರಮಾಣು ಪರೀಕ್ಷೆ. 1998ರಲ್ಲಿ ಪ್ರಧಾನಿ ಅಟಲ್ ಜೀ ಪರಮಾಣು ಪರೀಕ್ಷೆ ಮುಂದಾಗಿದ್ದರು. ಆದರೆ ಅದು ಅಷ್ಟು ಸುಲಭದ ಕಾರ್ಯವಾಗಿರಲಿಲ್ಲಿ. ಒಂದೆಡೆ ಶತ್ರು ರಾಷ್ಟ್ರ ಪಾಕಿಸ್ಥಾನದ ಕಣ್ಣು ತಪ್ಪಿಸಬೇಕಿತ್ತು. ಮತ್ತೊಂದೆಡೆ ಅಮೆರಿಕಾದ ಗೂಡಾಚಾರ ಉಪಗ್ರಹಗಳ ವೀಕ್ಷಣೆಯಿಂದ ಮರೆ ಮಾಚಿ ಈ ಕಾರ್ಯ ಮಾಡಬೇಕಿತ್ತು.
ಈ ಅಣ್ವಸ್ತ್ರ ಪರೀಕ್ಷೆಯ ಚಟುವಟಿಕೆಯನ್ನು ಮರೆಮಾಡಲು ಹಾಗೂ ಗೌಪ್ಯವಾಗಿ ಪರೀಕ್ಷೆಯನ್ನು ನಡೆಸಲು ಸಿದ್ದತೆಗಳ ಮೇಲ್ವಿಚಾರಣೆಯನ್ನು ಮಾಡಲು ಕಮಾಂಡರ್ ಕರ್ನಲ್ ಗೋಪಾಲ್ ಕೌಶಿಕ್ ಅವರನ್ನು ನೇಮಿಸಲಾಯಿತು. ಈ ಬೃಹತ್ ಯೋಜನೆಯನ್ನು ರಹಸ್ಯವಾಗಿಡಲು ಹಿರಿಯ ಮಿಲಿಟರಿ ಅಧಿಕಾರಿ ಹಾಗೂ ಪ್ರಮುಖ ರಾಜಕಾರಣಿಗಳನ್ನು ಪ್ರತ್ಯೇಕವಾಗಿ ಸಣ್ಣ ಸಣ್ಣ ಗುಂಪುಗಳನ್ನಾಗಿ ಮಾಡಲಾಗಿತ್ತು.
ಅತ್ಯಂತ ಗೌಪ್ಯ ರೀತಿಯಲ್ಲಿ ನಡೆಯುತ್ತಿದ್ದ ಈ ಸಿದ್ದತಾ ಕಾರ್ಯ, ಭಾರತ ಸರ್ಕಾರದ ಬಹಳಷ್ಟು ಹಿರಿಯ ನಾಯಕರಿಗೂ ಹಾಗೂ ಅಧಿಕಾರಿಗಳಿಗೂ ತಿಳಿದಿರಲಿಲ್ಲ. ಅಷ್ಟು ಗೌಪ್ಯತೆಯನ್ನು ಕಾಯ್ದುಕೊಳ್ಳಲು ಅಟಲ್ ಜೀ ನಿರ್ದೇಶನ ನೀಡಿದ್ದರು. ಈ ಪ್ರಮುಖ ಕಾರ್ಯದ ಸಿದ್ದತೆಯ ಉಸ್ತುವಾರಿಯಲ್ಲಿ ಭಾರತ ಸರ್ಕಾರದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ದಿ ಸಂಸ್ಥೆಯ ಮುಖ್ಯ ವೈಜ್ಞಾನಿಕ ಸಲಹೆಗಾರರಾದ ಡಾ. ಅಬ್ದುಲ್ ಕಲಾಂ, ಪರಮಾಣು ಶಕ್ತಿ ವಿಭಾಗದ ನಿರ್ದೇಶಕ ಡಾ. ಆರ್.ಚಿದಂಬರಂ ಈ ಪರೀಕ್ಷಾ ಯೋಜನೆಯ ಮುಖ್ಯ ಸಂಯೋಜಕರಾಗಿದ್ದರು.
ಅಮೆರಿಕಾದ ಗೂಡಾಚಾರ ಉಪಗ್ರಹದ ಕಣ್ತಪ್ಪಿಸಲು ರಾತ್ರಿವೇಳೆ ಸಿದ್ದತಾ ಕಾರ್ಯಾಚರಣೆ ಮಾಡಲು ನಿರ್ಧರಿಸಲಾಯಿತು. ಅಲ್ಲದೇ ಗೌಪ್ಯತೆಯನ್ನು ಕಾಪಾಡಲು ಈ ಸಿದ್ದತೆಯಲ್ಲಿ ತೊಡಗಿಕೊಳ್ಳುವ ಪ್ರತಿಯೊಬ್ಬರೂ ಸೇನೆಯ ಸಮವಸ್ತ್ರ ಧರಿಸಬೇಕು ಎಂದು ಅಟಲ್ ಜೀ ನಿರ್ದೇಶನ ನೀಡಿದ್ದರು. ಪರಮಾಣು ಬಾಂಬ್ ನ ಈಡಿಗಳನ್ನು ಮರೆಮಾಚುವ ದೃಷ್ಠಿಯಿಂದ ದೋಣಿಯಾಕಾರದ ಗುಂಡಿಗಳನ್ನು ತೋಡಿ, ಅದರಲ್ಲಿ ಹುದುಗಿಸಿಡಲಾಗಿತ್ತು. ಸಂವೇದಕ ಕೇಬಲ್ ಗಳು ಕಾಣದ ಹಾಗೆ ಮರಳು ಹಾಗೂ ಗಿಡಗಳಿಂದ ಮರೆಮಾಚಲಾಗುತ್ತಿತ್ತು. ಪರೀಕ್ಷಾ ಸ್ಪೋಟಕಕ್ಕೆ ಅಗತ್ಯವಿದ್ದ, ಹೈ ವೋಲ್ಟೇಜ್ ಸ್ಪೋಟಕ ಹಾಗೂ ಅಗತ್ಯ ಸಾಮಗ್ರಿಗಳನ್ನು ಕಪೂರ್ ನೇತೃತ್ವದಲ್ಲಿ ನಾಲ್ಕು ಸೇನಾ ಲಾರಿಗಳಲ್ಲಿ ಸಾಗಿಸಲಾಯಿತು.
ಈ ಪರೀಕ್ಷಾ ಸ್ಪೋಟಕವು ಸಂಪೂರ್ಣ ಭೂಗತವಾಗಿ ನಡೆಯಲು ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲಾಯಿತು. ಇದಕ್ಕಾಗಿ ಅಂತಿಮ ಹಂತದಲ್ಲಿ ಹಲವು ಪ್ರತ್ಯೇಕ ಗುಂಪುಗಳನ್ನು ಮಾಡಲಾಯಿತು. ಅಷ್ಟು ದಿನಗಳು ಗೌಪ್ಯವಾಗಿ ಸಿದ್ದತೆ ಮಾಡಿಕೊಂಡು ಕಾಯ್ದ ಆ ಸಮಯ ಬಂದೇ ಬಿಟ್ಟಿತು. ಅದು ರಾಜಾಸ್ತಾನ್ ನ ಮರುಭೂಮಿಯ ಪ್ರದೇಶ, 9998ರ ಮೇ ತಿಂಗಳ 11ನೇ ತಾರೀಕು. ಮದ್ಯಾಹ್ನ ಸರಿಯಾಗಿ 3 ಗಂಟೆ 45 ನಿಮಿಷ. ಇಡೀ ಪ್ರದೇಶವೇ ಆ ಸ್ಪೋಟಕ್ಕೆ ನಡುಗಿತು.
ಅಷ್ಟು ದಿನಗಳ ಕಾಲ ಗೌಪ್ಯವಾಗಿ ಕಾಯ್ದುಕೊಂಡು ಬಂದ ಶ್ರಮ ಯಶಸ್ವಿಯಾಗಿತ್ತು. ಇಡೀ ವಿಶ್ವವೇ ಭಾರತದ ರಕ್ಷಣಾ ಸಾಮರ್ಥ್ಯ ಕಂಡು ಬೆರಗಾಯಿತು. ಆ ಮೂಲಕ ಭಾರತ ಪರಮಾಣು ಬಾಂಬ್ ಪರೀಕ್ಷಿಸಿದ ಆರನೇ ರಾಷ್ಟ್ರವಾಯಿತು. ಹಾಗೂ ಭಾರತ ದೇಶ ಎಲೈಟ್ ಪರಮಾಣು ಕ್ಲಬ್ ಸೇರಿತು.
ಯಶಸ್ವಿ ಪರೀಕ್ಷೆಯ ನಂತರ ಪತ್ರಿಕಾಗೋಷ್ಠಿ ನಡೆಸಿದ ವಾಜಪೇಯಿ, ಪರಮಾಣು ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದ ಎಲ್ಲರನ್ನು ಹೃತ್ಪೂರ್ವಕವಾಗಿ ಅಭಿನಂದಿಸಿದರು. ಇಡೀ ದೇಶದ ಮಾದ್ಯಮಗಳು ಸರ್ಕಾರದ ಈ ಅನನ್ಯ ಸಾಧನೆಯನ್ನು ಹಾಡಿಹೊಗಳಿದವು. ಈ ಯಶಸ್ಸಿನ ಹಿಂದೆ ಇದ್ದ ದೃಢ ನಿರ್ಧಾರ ಹಾಗೂ ಮಾರ್ಗದರ್ಶನ ಅಟಲ್ ಬಿಹಾರಿ ವಾಜಪೇಯಿ ಅವರದೇ ಆಗಿದೆ….
Discussion about this post