ನವದೆಹಲಿ: ಅನಾರೋಗ್ಯ ಹಾಗೂ ವಯೋ ಸಹಜ ಅಸ್ವಸ್ಥತೆಯಿಂದ ಇಂದು ದೇಶವಾಸಿಗಳನ್ನು ತೊರೆದು ಬಾರದ ಲೋಕಕ್ಕೆ ತೆರಳಿರುವ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಗೌರವಾರ್ಥ ದೇಶದಾದ್ಯಂತ ಏಳು ದಿನಗಳ ಕಾಲ ಶೋಕಾಚರಣೆ ಘೋಷಿಸಲಾಗಿದೆ.
ಈ ಕುರಿತಂತೆ ಇಂದು ಸಂಜೆ ತುರ್ತು ಕೇಂದ್ರ ಸಚಿವ ಸಂಪುಟ ಸಭೆ ನಡೆಸಿ, ನಿರ್ಣಯ ಕೈಗೊಳ್ಳಲಾಗಿದ್ದು, ಅಟಲ್ ಜೀ ಅವರ ಗೌರವಾರ್ಥ ಏಳು ದಿನ ಶೋಕಾಚರಣೆ ಘೋಷಿಸಲಾಗಿದ್ದು, ದೇಶದಲ್ಲೆಡೆ ರಾಷ್ಟ್ರಧ್ವಜವನ್ನು ಅರ್ಧ ಮಟ್ಟಕ್ಕೆ ಹಾರಿಸಬೇಕಿದೆ. ಹಾಗೂ ಸರ್ಕಾರದ ಯಾವುದೇ ಅಧಿಕೃತ ವೇದಿಕೆ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ.
ಇನ್ನು ಅಟಲ್ ಜೀ ನಿಧನದ ಹಿನ್ನೆಲೆಯಲ್ಲಿ ನಾಳೆ ದೆಹಲಿಯಾದ್ಯಂತ ಸರ್ಕಾರಿ ರಜೆ ಘೋಷಣೆ ಮಾಡಲಾಗಿದ್ದು, ಎಲ್ಲ ಸರ್ಕಾರಿ ಕಚೇರಿಗಳು ಹಾಗೂ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಅಟಲ್ ಜೀ ಗೌರವಾರ್ಥ ಮಧ್ಯಪ್ರದೇಶ, ಪಂಜಾಬ್, ಉತ್ತರ ಪ್ರದೇಶ, ಜಾರ್ಖಂಡ್, ಬಿಹಾರ ಸೇರಿದಂತೆ ಹಲವು ರಾಜ್ಯಗಳಲ್ಲಿ ಮೂರು ದಿನ ಶೋಕಾಚರಣೆ ಘೋಷಿಸಿದ್ದು, ನಾಳೆ ಆಯಾ ರಾಜ್ಯಗಳಲ್ಲಿ ಸರ್ಕಾರಿ ರಜೆ ಘೋಷಣೆ ಮಾಡಲಾಗಿದೆ.
Discussion about this post