ಮಾನವ ಸಂಕುಲ ಮಾತ್ರವಲ್ಲ ಸಕಲ ಜೀವರಾಶಿಗಳಿಗೆ ಆಧಾರಭೂತವಾಗಿ, ಜೀವಜಲವಾಗಿ ಕಾಪಿಡುತ್ತಿರುವ ನದಿಗಳು ನಮ್ಮನ್ನು ಹೆತ್ತ ತಾಯಿಯಷ್ಟೇ ಗೌರವಕ್ಕೆ ಪಾತ್ರವಾಗಿರುವವು.. ಹೀಗಾಗಿಯೇ, ನಮ್ಮ ಸಂಸ್ಕೃತಿಯಲ್ಲಿ ನದಿಗಳಿಗೆ ದೈವೀ ಸ್ಥಾನವನ್ನು ನೀಡಿ, ಪೂಜಿಸಿ, ಪ್ರೀತಿಸಿಕೊಂಡು ಬರಲಾಗುತ್ತಿದೆ.
ನದಿ ಎನ್ನುವುದು ಕೇವಲ ಹರಿಯುವ ನೀರಾಗಿರದೇ ಜೀವನಾಡಿಯಾಗಿ, ಜೀವ ಸಂಕುಲದ ವಿಕಾಸದ ಬುನಾದಿಯಾಗಿ, ಅದಕ್ಕೂ ಮಿಗಿಲಾಗಿ ಜನರ ಭಾವನಾತ್ಮಕ ಸಂಬಂಧಿಯಾಗಿದೆ ಎನ್ನುವುದು ಸರ್ವವಿಧಿತ… ಹೀಗಾಗಿ, ಉತ್ತರ ಭಾರತದಲ್ಲಿ ತಾಯಿ ಗಂಗೆಗೆ ಪ್ರತಿವರ್ಷವೂ ಸಹ ಆರತಿ ಅಂದರೆ ಗಂಗಾರತಿಯನ್ನು ನಡೆಸಿಕೊಂಡು ಬರಲಾಗುತ್ತಿದೆ. ಇಂತಹ ಒಂದು ಪವಿತ್ರ ಕಾರ್ಯವನ್ನು ನಮ್ಮ ಜೀವನಾಡಿಯಾಗಿರುವ ತುಂಗೆಗೆ ಮಾಡಬೇಕು ಎಂಬ ಕನಸನ್ನು ಸಾಕಾರಗೊಳಿಸಿದ್ದು ಶಿವಮೊಗ್ಗದ ಹೆಮ್ಮೆಯ ಸಾಮಗಾನ ಸಂಸ್ಥೆ.
ಪಶ್ಚಿಮ ಘಟ್ಟದಲ್ಲಿ ಜನಿಸಿ, ಶಿವಮೊಗ್ಗದಲ್ಲಿ ಹರಿದು, ಭದ್ರೆಯೊಂದಿಗೆ ಮಿಲನಗೊಳ್ಳುವ ತುಂಗೆಯೊಂದಿಗೆ ಮಲೆನಾಡಿಗರಿಗೆ ಅದರಲ್ಲೂ ಶಿವಮೊಗ್ಗದ ಮಂದಿಗೆ ಒಂದು ರೀತಿಯ ಭಾವನಾತ್ಮಕ ಸಂಬಂಧ. ಹೀಗಾಗಿಯೇ, ಕಳೆದ ಜುಲೈ 27ರಂದು ಸಾಮಗಾನ ತಂಡದ ವತಿಯಿಂದ ಸಕ್ಕರೆಯ ತುಂಗೆಗೆ ಅಕ್ಕರೆಯ ಆರತಿ ಅಂದರೆ ತುಂಗಾರತಿಯನ್ನು ನೆರವೇರಿಸಲಾಯಿತು.
ಸಾಮಾನ್ಯವಾಗಿ ಈ ಮೊದಲೇ ಹೇಳಿದಂತೆ ಗಂಗಾರತಿಯನ್ನು ದೇಶವಾಸಿಗಳು ನೋಡಿದ್ದರು. ಆದರೆ, ರಾಜ್ಯದ ಇತಿಹಾಸದಲ್ಲಿ ಅದೇ ಮೊದಲ ಬಾರಿಗೆ ತುಂಗಾರತಿ ನೆರವೇರಿಸುವ ಮೂಲಕ ಮಲೆನಾಡು ಹಾಗೂ ಕರ್ನಾಟಕದ ಸಾಂಸ್ಕೃತಿಕ, ಧಾರ್ಮಿಕ ಹಾಗೂ ಪ್ರಾಕೃತಿಕ ಕ್ಷೇತ್ರದಲ್ಲಿ ಹೊಸ ಭಾಷ್ಯವನ್ನೇ ಬರೆಯಲಾಯಿತು.
ಇಂತಹ ಒಂದು ಐತಿಹಾಸಿಕ ಆಚರಣೆಯ ಭಾಗವಾಗಿ ಸಾಮಗಾನ ತಂಡದ ವತಿಯಿಂದ ತಾಯಿ ತುಂಗೆಗೆ ಅರ್ಪಣೆ ಮಾಡಲು ವಿಶೇಷ ಗೀತೆಯೊಂದನ್ನು ರಚಿಸಲಾಗಿತ್ತು.
ರಾಜ್ಯಮಟ್ಟದಲ್ಲಿ ಕಲೆ, ಸಂಸ್ಕೃತಿ, ಧಾರ್ಮಿಕ, ಅಧ್ಯಾತ್ಮ ಹಾಗೂ ಸಾಮಾಜಿಕ ತಮ್ಮದೇ ಆದ ಛಾಪು ಮೂಡಿಸಿರುವ ವಿನಯ್ ಶಿವಮೊಗ್ಗ ಅವರ ಪದಪುಂಜದಲ್ಲಿ ಜಯ ತುಂಗೇ, ಜಯ ತುಂಗೇ ಎಂಬ ಅದ್ಬುತ ಗಾಯಕ ಸಮರ್ಪಣೆಯಾಗಿದೆ.
ಈ ಗೀತೆಗೆ ಅದ್ಬುತವಾಗಿ ಸಂಗೀತ ಸಂಯೋಜನೆ ಮಾಡಿರುವ ಜೊತೆಯಲ್ಲಿ ಮಲೆನಾಡಿನಲ್ಲಿ ತುಂಗೆ ಹರಿಯುವ ಭಾಗದಲ್ಲಿ ಚಿತ್ರೀಕರಣ ಮಾಡಿ, ಅರ್ಥಗರ್ಭಿತವಾದ ರೂಪಿತಗೊಂಡಿರುವ ಗೀತಚಿತ್ರವನ್ನು ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಲಾಗಿದೆ.
ಪ್ರತಿಯೊಬ್ಬರೂ ಒಮ್ಮೆಯಾದರೂ ನೋಡಲೇ ಬೇಕಾದ ಈ ಗೀತಚಿತ್ರವನ್ನು ನೀವೂ ಒಮ್ಮೆ ನೋಡಿ, ನಿಮ್ಮ ಸ್ನೇಹಿತರೊಂದಿಗೂ ಶೇರ್ ಮಾಡಿ…
ಗೀತಚಿತ್ರ ನೋಡಿ:

















