ಅದು ಸಿಂಹ ಮಾಸದ ಬಹುಳ ಅಷ್ಟಮಿ. ಮಧ್ಯರಾತ್ರೆಯ ಸಮಯವದು. ಯದುವಂಶದ ವಸುದೇವನು ತನ್ನೆರಡು ಕೈಗಳನ್ನು ತಲೆಯ ಮೇಲಿಟ್ಟು ಸೆರೆಮನೆಯ ಒಂದು ಮೂಲೆಯಲ್ಲಿ ಚಿಂತಾಕ್ರಾಂತನಾಗಿ ಕುಳಿತಿದ್ದ. ಪ್ರಸವ ವೇದನೆಯಲ್ಲಿದ್ದ ಪತ್ನಿ ದೇವಕಿಯನ್ನು ಸಾಂತ್ವನ ಮಾಡುವುದೋ, ಮುಂಬರುವ ದುರಂತಗಳನ್ನು ನೋಡುವುದೋ ಎಂಬ ಚಿಂತೆ. ಸೂಲಗಿತ್ತಿಯು ದೇವಕಿಯ ಸುಖ ಪ್ರಸವಕ್ಕೆ ಶುಶ್ರೂಶೆ ನೀಡುತ್ತಿದ್ದಳು.
ಚಂದ್ರೋದಯವಾಗುತ್ತಲೇ ನಗುತ್ತಾ ಭಗವಂತನು ಧರೆಗಿಳಿದ. ದೇವತೆಗಳು ಪುಷ್ಪ ವೃಷ್ಟಿ ಮಾಡಿದರು. ವಸುದೇವನು ಭಗವಂತನ ಮುಖ ನೋಡಲೂ ಇಚ್ಚಿಸಲಿಲ್ಲ. ಇದಕ್ಕೆ ಕಾರಣವೂ ಇದೆ. ದೇವಕಿಯ ಅಷ್ಟಮ ಗರ್ಭದಲ್ಲಿ ಜನಿಸುವ ಸುತನಿಂದ ಅವಳ ಸಹೋದರ ಕಂಸನಿಗೆ ಮರಣ ಎಂದು ವಸುದೇವ ದೇವಕಿಯರ ವಿವಾಹದಂದೇ ಅಶರೀರವಾಣಿಯಾಗಿತ್ತು. ಹಸೆಮಣೆಯಿಂದ ಮಧುಚಂದ್ರಕ್ಕೆ ಹೋಗಬೇಕಾದ ಈ ದಂಪತಿಗಳು ಸೇರಿದ್ದು ಸೆರೆಮನೆಗೆ.
ಮೊದಲ ಏಳು ಮಕ್ಕಳು ಕಂಸನ ಖಡ್ಗಕ್ಕೆ ಬಲಿಯಾಗಿದ್ದುದನ್ನು ಕಣ್ಣಾರೆ ಕಂಡ ವಸುದೇವನಿಗೆ ಈ ಸಲದ ಮಗುವಿನ ಮುಖ ನೋಡಲೂ ಮನಸ್ಸಿರಲಿಲ್ಲ. ಸೂಲಗಿತ್ತಿ ಕೂಗಿ ಹೇಳುತ್ತಿದ್ದಳು. ‘ಪ್ರಭೂ ನೀಲವರ್ಣದ ಮಗು ಭಗವಂತನ ಅವತಾರವೇ ಆಗಿದೆ. ಜಗದ ಕಕ್ಷೆಗೆ ಪ್ರವೇಶಿಸುತ್ತಿದ್ದಂತೆ ಅಳುತ್ತಿರುವ ಕಂದಮ್ಮಗಳನ್ನು ಈ ವರೆಗೆ ನೋಡಿದ್ದೇನೆಯೇ ಹೊರತು, ಈ ತರಹ ಕಿಲಕಿಲ ನಗುವ ಕಂದನನು ನಾ ನೋಡಿಲ್ಲ ಪ್ರಭೂ’ ಎಂದು ಸೂಲಗಿತ್ತಿ ಹೇಳುತ್ತಿದ್ದುದು ವಸುದೇವನನ್ನು ಶೂಲದಿಂದ ತಿವಿದ ಹಾಗುತ್ತಿತ್ತು. ಎಷ್ಟಾದರೇನು? ಕಂಸನ ಖಡ್ಗಕ್ಕೆ ಆಹುತಿಯಾಗುವವನಲ್ಲವೇ ಎಂದು ಮನದೊಳಗೆ ಮರುಗುತ್ತಿದ್ದ ವಸುದೇವ. ಆದರೆ ದೈವಪ್ರೇರಣೆಯೇ ಬೇರೆ.
ಸೆರೆಮನೆಯ ಬಾಗಿಲ ಬೀಗ ಕಳಚಿಕೊಂಡಿತು. ದ್ವಾರ ತೆರೆದುಕೊಂಡಿತು. ದೂತನೋರ್ವ ಬಂದು ವಸುದೇವರನ್ನು ಕುಲುಕುತ್ತಾ,’ ಬೇಗನೆ ಹೊರಡಿ ಪ್ರಭೂ. ಮಗುವನ್ನು ತೊಟ್ಟಿಲೊಳಗಿಟ್ಟು ಮಗುವಿನೊಂದಿಗೆ ಬೇಗನೆ ಇಲ್ಲಿಂದ ಹೊರಡಿ. ದಾರಿಯುದ್ದಕ್ಕೂ ಮುಂದಿನ ಪಯಣದ ಮಾರ್ಗದರ್ಶನ ಲಭಿಸಲಿದೆ. ಹೂಂ ಬೇಗನೆ ಹೊರಡಿ ಎಂದು ದೂತನು ಅಲ್ಲಿಂದ ಮಾಯವಾದ.
ವಸುದೇವನು ದೂತವಾಕ್ಯವನ್ನು ವಿಮರ್ಷೆ ಮಾಡದೆ ದೇವಕಿಗೂ ಹೇಳದೆ ಮಗುವಿನೊಡನೆ ಹೊರಟೇ ಬಿಟ್ಟ. ಯಮುನೆಯು ಸೀಳಾಗಿ ಪರಮಾತ್ಮನಿಗೆ ದಾರಿಮಾಡಿಕೊಟ್ಟಳು. ಕೆಲವು ಜಾವದೊಳಗೆ ನಂದಗೋಕುಲವನ್ನು ಸೇರಿದ. ಅಲ್ಲಿಯೂ ವ್ಯವಸ್ಥಿತ ಕಾರ್ಯಕ್ಕೆ ದೂತರಿದ್ದರು. ಆಗತಾನೇ ಪ್ರಸವಿಸಿದ್ದ ಯಶೋಧೆಯ ಪಕ್ಕದಲ್ಲಿದ್ದ ಹೆಣ್ಣು ಶಿಶುವನ್ನು ಎತ್ತಿ, ವಸುದೇವ ತಂದಿದ್ದ ಭಗವಂತನನ್ನು ಅಲ್ಲಿಟ್ಟರು. ಮತ್ತೆ ಕೆಲ ಸಮಯದ ಬಳಿಕ ವಸುದೇವನು ಸೆರೆಮನೆಗೆ ತಲುಪಿದ ಮುದ್ದು ಮೊಗದ ಹೆಣ್ಣು ಮಗುವಿನೊಡನೆ. ಇದು ಒಂದು ರಾತ್ರಿಯ ಅನಿರೀಕ್ಷಿತ ಕೆಲ ವಸುದೇವನದ್ದಾಯಿತು. ಯಾಕೆ ಏನು ಎತ್ತ ಎಂದು ಪ್ರಶ್ನಿಸುವ ಗೋಜಿಗೆ ಹೋಗದೆ, ಸಂದೇಶದಿಂದ ಸಂದೇಶದ ಮೂಲಕ ಭಗವಂತನ ಸ್ಥಾನ ಪಲ್ಲಟವಾಯಿತು.
ಇದು ರಾಜಕೀಯ ತಂತ್ರಗಾರಿಕೆ. ಭಗವಾನ್ ವೇದವ್ಯಾಸರು ಕಂಸನ ಮಂತ್ರಿ ಹರಿಭಕ್ತ ಅಕ್ರೂರನಿಗೆ,’ ಭಕ್ತಾ, ನಿನಗೊಂದು ದೇವ ಕಾರ್ಯ ಒಪ್ಪಿಸುತ್ತೇನೆ. ಧರ್ಮಸಂಸ್ಥಾಪನೆಗಾಗಿ ಮತ್ತೆ ಭಗವಂತನು ಶ್ರಾವಣ ಶುಕ್ಲದ ಅಷ್ಟಮಿಯ ದಿನ ರೋಹಿಣೀ ನಕ್ಷತ್ರದಲ್ಲಿ ಮಧ್ಯರಾತ್ರಿಯಲ್ಲಿ ದೇವಕಿಯ ಗರ್ಭದಿಂದ ಅವತರಿಸಲಿದ್ದಾನೆ. ಅವನನ್ನು ನೀನು ರಕ್ಷಿಸಿಕೊಂಡರೆ ಧರ್ಮೋ ರಕ್ಷತಿ ರಕ್ಷಿತಃ ಆಗುತ್ತದೆ’ ಎಂದರು.
ಅಕ್ರೂರನಿಗಾದ ಆನಂದ ಅಷ್ಟಿಷ್ಟಲ್ಲ. ನಮ್ಮನ್ನು ರಕ್ಷಿಸುವ ಭಗವಂತನನ್ನೇ ನಾನು ರಕ್ಷಣೆ ಮಾಡಬೇಕಾದರೆ ನನ್ನಂತಹ ಪುಣ್ಯ ಜೀವಿ ಇನ್ಯಾರಿದ್ದಾರೆ ಮಹರ್ಷಿಗಳೇ? ನಮೋನ್ನಮಃ’ ಎಂದು ದೇವರ ಕಾರ್ಯಕ್ಕೆ ಅಂದಿನಿಂದಲೇ ಸಂಕಲ್ಪ ಮಾಡಿದ. ಭಗವಂತನ ಅವತಾರವಾಗುತ್ತಲೇ ಸೆರೆಮನೆಯ ಸಕಲ ಸಿಬಂಧಿಗಳಿಗೂ ಮತ್ತು ಬರಿಸುವ ಪಾನೀಯ ವಿತರಿಸಿ, ಗಾಢ ನಿದ್ರೆಗೆ ಕಳುಹಿಸಿದ. ತನ್ನಾಪ್ತ ಸೇವಕರ ಮೂಲಕ ಭಗವಂತನನ್ನು ಮಧುರೆಯಿಂದ ನಂದಗೋಕುಲ ತಲುಪುವಂತೆಯೂ ಮಾಡಿದ. ಅಲ್ಲಿದ್ದ ದುರ್ಗಾಮಾತೆಯನ್ನು ಮಧುರೆಯ ಸೆರೆಮನೆಯಲ್ಲಿ ಇರಿಸುವಂತೆಯೂ ಮಾಡಿದ್ದ ಅಕ್ರೂರ.
ಕಂಸನ ಪ್ರವೇಶ ಸೆರೆಮನೆಯೊಳಗಾಯ್ತು. ಮಗುವನ್ನೆತ್ತಿ ನೋಡಿದ. ಅರೆ ಹೆಣ್ಣು? ಏನೇ ಇರಲಿ ಇದನ್ನು ಉಳಿಸುವುದು ಸರಿಯಲ್ಲ ಎಂದು ತನ್ನ ಖಡ್ಗ ಝಳಪಿಸಿ ತರಿದ. ಮೊದಲೇ ಅವಳು ದುರ್ಗೆ. ದುರ್ಗಾ ಎಂದರೆ ಕೋಟೆ, ಕೋಶ ಎಂಬ ಅರ್ಥಕ್ಕೆ ತಕ್ಕಂತೆ ನಡೆದಳು. ಕಂಸನ ಎದೆಗೆ ತುಳಿದು ಛಂಗನೆ ಅಲ್ಲಿಂದ ಹಾರಿ ಮಾಯವಾಗಿಬಿಟ್ಟಳು! ಭಗವಂತ ನಂದಗೋಕುಲದಲ್ಲಿ ಬೆಳೆದ. ಅಕ್ರೂರನ ನಿಷ್ಟೆಯು ಪರಮಾತ್ಮನಿಗೆ ಇಷ್ಟವಾಗಿ ಅಕ್ರೂರವರದೋ ಕೃಷ್ಣ ಎಂದು ಭಗವಂತನೊಳು ಐಕ್ಯವಾಯ್ತು.
ಭಕ್ತರ ಜಿಹ್ವೆಯಲ್ಲೂ ಇಂದಿಗೂ ಅಕ್ರೂರ ಸಹಿತ ಕೃಷ್ಣನ ಸ್ತೋತ್ರ ನುಲಿಯುತ್ತಿದೆ. ಅದರಂತೆ ಭಗವಂತನ ಈ ಕೃಷ್ಣಾವತಾರವು ಕೇವಲ ನಮ್ಮ ದೈನಂದಿನ ಜೀವನಕ್ಕೆ ದಾರಿತೋರುವ ಭಗವದ್ಗೀತೆಯ ಅಮೋಘ ಸಂದೇಶಕ್ಕಾಗಿಯೋ ಏನೋ ಇರಬಹುದು. ಒಂದು ಸತ್ಸಂದೇಶದ ಹಿಂದೆ ದೊಡ್ಡ ಪ್ರಮಾಣದ ಒಂದು ಕಥೆಯಡಗಿರುವುದನ್ನು ಮಹಾಭಾರತವು ತೋರಿಸಿದೆಯಲ್ಲವೇ?
॥ ಕೃಷ್ಣಾರ್ಪಣ ಮಸ್ತು ॥
-ಪ್ರಕಾಶ್ ಅಮ್ಮಣ್ಣಾಯ, ಜ್ಯೋರ್ತಿವಿಜ್ಞಾನಂ
Discussion about this post