ಬೆಂಗಳೂರು: ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ ಎಂದು ಖ್ಯಾತರಾಗಿ, ಪ್ರಧಾನಿ ನರೇಂದ್ರ ಮೋದಿ ಅವರಿಂದ ಪ್ರಶಂಸೆ ಪಡೆದಿದ್ದ ರಾಜ್ಯದ ಮಾಜಿ ಮುಖ್ಯಕಾರ್ಯದರ್ಶಿ ಕೆ. ರತ್ನಪ್ರಭಾ ಬಿಜೆಪಿಗೆ ಸೇರುವುದು ಬಹುತೇಕ ನಿಶ್ಚಿತವಾಗಿದೆ ಎಂದು ಹೇಳಲಾಗಿದ್ದು, ಲೋಕಸಭಾ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ವಿರುದ್ದ ಸ್ಪರ್ಧಿಸಲಿದ್ದಾರೆ ಎನ್ನಲಾಗಿದೆ.
ಈ ಕುರಿತಂತೆ ಉನ್ನತ ಮೂಲಗಳಿಂದ ಮಾಹಿತಿ ತಿಳಿದುಬಂದಿದ್ದು, , ರತ್ನಪ್ರಭಾ ಬಿಜೆಪಿ ಸೇರುವುದು ಬಹುತೇಕ ನಿಶ್ಚಿತವಾಗಿದ್ದು, ಮುಂದಿನ ಶುಕ್ರವಾರ ಅಧಿಕೃತವಾಗಿ ಸೇರ್ಪಡೆಗೊಳ್ಳಲಿದ್ದಾರೆ ಎಂದು ವರದಿ ಹೇಳಿದೆ. ಅಲ್ಲದೇ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಕಲಬುರಗಿಯಿಂದ ಅಖಾಡಕ್ಕೆ ಇಳಿಯಲಿದ್ದಾರೆ ಎಂದು ಹೇಳಲಾಗಿದೆ.
1981ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿದ್ದ ರತ್ನಪ್ರಭಾ, ಇದೇ ಮಾರ್ಚ್ 31ರಂದು ನಿವೃತ್ತಿಯಾಗಿದ್ದರು. ಆದರೆ, ಇವರ ಅಧಿಕಾರವಧಿಯನ್ನು ಮೂರು ತಿಂಗಳ ಕಾಲ ವಿಸ್ತರಣೆ ಮಾಡುವುದಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆರಂಭದಲ್ಲಿ ಹೇಳಿದ್ದರು. ಆದರೆ, ಎಚ್.ಡಿ. ದೇವೇಗೌಡ ಸಮ್ಮತಿಸದ ಹಿನ್ನೆಲೆಯಲ್ಲಿ ಇವರ ಅಧಿಕಾರವಧಿ ವಿಸ್ತರಣೆಯಾಗಲಿಲ್ಲ.
ಹೈದರಾಬಾದ್ ಮೂಲದ ರತ್ನಪ್ರಭಾ, ಕರ್ನಾಟಕದಲ್ಲಿ ಸುಮಾರು 37 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಈಗ ನಿವೃತ್ತಿ ಜೀವನದಲ್ಲಿರುವ ಇವರು ಬಿಜೆಪಿ ಸೇರುವ ಮೂಲಕ ಅಧಿಕೃತವಾಗಿ ರಾಜಕೀಯಕ್ಕೆ ಕಾಲಿಡಲಿದ್ದಾರೆ ಎನ್ನಲಾಗಿದೆ.
ಟಾರ್ಗೆಟ್ ಖರ್ಗೆ
ಇನ್ನು, ರತ್ನಪ್ರಭಾ ಅವರನ್ನು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಕಣಕ್ಕಿಳಿಸಲು ಬಿಜೆಪಿ ಚಿಂತಿಸಿದೆ ಎನ್ನಲಾಗಿದೆ.
ಚುನಾವಣೆಯಲ್ಲಿ ಸುಮಾರು 11 ಬಾರಿ ವಿಜಯ ಸಾಧಿಸಿರುವ ಖರ್ಗೆ, 9 ಬಾರಿ ವಿಧಾನಸಭೆ ಹಾಗೂ 2 ಬಾರಿ ಲೋಕಸಭೆ ಪ್ರವೇಶಿಸಿ, ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದಾರೆ.
ಇಂತಹ ಕಾಂಗ್ರೆಸ್ ಮುಖಂಡನನ್ನು ಸೋಲಿಸಲು ರತ್ನಪ್ರಭಾ ಅವರನ್ನು ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿದೆ ಎನ್ನಲಾಗಿದ್ದು, ಖರ್ಗೆ ಅವರನ್ನು ಸೋಲಿಸುವ ಮೂಲಕ ಅವರಿಗೆ ಮಾತ್ರವಲ್ಲ ಇಡಿಯ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಆಘಾತ ನೀಡುವ ಯೋಜನೆಯನ್ನು ಬಿಜೆಪಿ ಹೊಂದಿದೆ ಎನ್ನಲಾಗಿದೆ.
Discussion about this post