ಭದ್ರಾವತಿ: ರಾಜ್ಯದಲ್ಲಿ ಮೈತ್ರಿ ಸರಕಾರ ರಚನೆಯು ದೇವರ ಆಟವಾಗಿದೆ. 5 ತಿಂಗಳ ಅವಧಿಯಲ್ಲಿ ರೈತರ ಕಷ್ಟ ನೋಡಿ 45 ಸಾವಿರ ಕೋಟಿ ರೂ. ಸಾಲಮನ್ನಾ ಆದೇಶ ಹೊರಡಿಸಿದ್ದೇನೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಅವರು ಮಂಗಳವಾರ ಸಂಜೆ ಹಳೇನಗರ ಕನಕಮಂಟಪ ಮೈದಾನದಲ್ಲಿ ಬೃಹತ್ ಜೆಡಿಎಸ್ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಆರೋಗ್ಯವನ್ನು ಲೆಕ್ಕಿಸದೆ ಮಂಡ್ಯ, ಶಿವಮೊಗ್ಗ, ಬಳ್ಳಾರಿಗಳಲ್ಲಿ ಮತಯಾಚಿಸಿ ಮನವಿ ಮಾಡಲು ಸಭೆಗಳಲ್ಲಿ ಭಾಗವಹಿಸುತ್ತಿದ್ದೇನೆ. ಎಲ್ಲೆಡೆ ಅಭೂತ ಪೂರ್ವ ಬೆಂಬಲ ದೊರೆಯುತ್ತಿದೆ. ಈ ಕ್ಷೇತ್ರದಲ್ಲಿ ಅಪ್ಪಾಜಿ ರವರನ್ನು ಗೆಲ್ಲಿಸಿದ್ದರೆ ಸಚಿವರಾಗುತ್ತಿದ್ದರು. ಅವರ ಸೋಲು ಪ್ರಶ್ನಾತೀತವಾಗಿದೆ. ದೇವೇಗೌಡರು ಪ್ರಧಾನಿಗಳಾಗಿದ್ದಾಗ ನಾವು ಸಂಸದರಾಗಿ ಅಪ್ಪಾಜಿ ರವರ ಮನವಿ ಮೇರೆಗೆ ವಿಐಎಸ್ಎಲ್ ಕಾರ್ಖಾನೆಯನ್ನು ಕೇಂದ್ರ ಸರಕಾರಕ್ಕೆ ವಹಿಸಿ ಉಳಿಸಿದ್ದೇನೆ ಎಂದರು.
5 ತಿಂಗಳ ಅವಧಿಯಲ್ಲಿ ರೈತರ ಕಷ್ಟ ನೋಡಿ 45 ಸಾವಿರ ಕೋಟಿ ರೂ. ಸಾಲಮನ್ನಾ ಆದೇಶ ಹೊರಡಿಸಿದ್ದೇನೆ. ನ. 20 ರೊಳಗೆ ರಾಜ್ಯದ 44 ಲಕ್ಷ ರೈತ ಕುಟುಂಬಗಳಿಗೆ ತಲುಪುವಂತೆ ಮಾಡಿದ್ದೇನೆ. ಪ್ರತಿ ಕುಟುಂಬಕ್ಕೆ 2.20 ಲಕ್ಷ ರೂ ಮನ್ನಾ ಆಗಲಿದೆ. ನಗರ ಪ್ರದೇಶದಲ್ಲಿ ಬಡವರ ಕುಟುಂಬ ನಿರ್ವಹಣೆಗಾಗಿ ಬೀದಿ ವ್ಯಾಪಾರಿಗಳಿಗೆ ಮೀಟರ್ ಬಡ್ಡಿ ಸಾಲ ದೂರ ಮಾಡಿ ಮೊಬೈಲ್ ಬ್ಯಾಂಕಿಂಗ್ ಬಡ್ಡಿ ರಹಿತ ಸಾಲ ಯೋಜನೆ ರೂಪಿಸುತ್ತಿದ್ದೇನೆ. ಮೀಟರ್ ಬಡ್ಡಿಯಿಂದ ಅನೇಕ ಬಡ ಕುಟುಂಬಗಳು ಬೀದಿ ಪಾಲಾಗುವುದನ್ನು ತಪ್ಪಿಸಲು ಹಾಗು ಅಮಾಯಕರಿಗೆ ರಕ್ಷಿಸಲು ಕಾಯ್ದೆ ರೂಪಿಸುವ ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಲಾಗಿದೆ ಎಂದರು.
ನೀಡಿದ ಭರವಸೆಯಂತೆ ಹಿರಿಯ ನಾಗರಿಕರಿಗೆ ನ.1 ರಿಂದ 1 ಸಾವಿರ ರೂ ನಂತರ ಮಾ. 2 ರಿಂದ 2 ಸಾವಿರ ರೂ ನಂತೆ 5 ವರ್ಷಗಳ ಅಧಿಕಾರದ ಅವಧಿಯಲ್ಲಿ 5 ಸಾವಿರ ರೂಗಳನ್ನು ನೀಡಲಾಗುವುದು. ಗರ್ಭಿಣಿಯರಿಗೆ 12 ಸಾವಿರ ನೀಡಲಾಗುವುದು. ವಿಐಎಸ್ಎಲ್ ಮತ್ತು ಎಂಪಿಎಂ ಕಾರ್ಖಾನೆಗಳ ಉಳಿವಿಗಾಗಿ ಯೋಜನೆ ರೂಪಿಸಲು ಚರ್ಚಿಸಲು ಪುನಃ ಬರುವುದಾಗಿ ತಿಳಿಸಿದ ಅವರು ಬಿಜೆಪಿಯು ಸಮಿಶ್ರ ಸರಕಾರ ಬೀಳುತ್ತದೆ, ಅತಂತ್ರ ಸರಕಾರ ಎಂಬಿತ್ಯಾದಿ ಉದ್ದಟತನದ ಹೇಳಿಕೆಗಳಿಗೆ ಉಪ ಚುನಾವಣೆಯಲ್ಲಿ ಮಧು ಬಂಗಾರಪ್ಪ ರವರಿಗೆ ಹೆಚ್ಚು ಮತಗಳನ್ನು ನೀಡುವ ಮೂಲಕ ಗೆಲ್ಲಿಸಿ ಪಾಠ ಕಲಿಸಬೇಕಿದೆ ಎಂದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post