ನವದೆಹಲಿ: ಗೋಕರ್ಣದ ಮಹಾಬಲೇಶ್ವರ ದೇವಾಲಯದ ಆಡಳಿತವನ್ನು ತಕ್ಷಣ ಶ್ರೀರಾಮಚಂದ್ರಾಪುರಮಠಕ್ಕೆ ಹಸ್ತಾಂತರಿಸುವಂತೆ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ಆದೇಶಿಸಿದ್ದು, ಈ ಮೂಲಕ ರಾಜ್ಯ ಸರ್ಕಾರಕ್ಕೆ ಸತತವಾಗಿ ಮೂರನೆಯ ಬಾರಿ ಮುಖಭಂಗವಾಗಿದೆ.
ಶ್ರೀಮಠ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯನ್ನು ಇಂದು ಮಾನ್ಯ ಮಾಡಿದ ಸುಪ್ರೀಂ ಕೋರ್ಟ್, ಸರ್ಕಾರದ ಕ್ರಮದ ಕುರಿತಾಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿ, ದೇವಾಲಯವನ್ನು ಶ್ರೀಮಠಕ್ಕೆ ತಕ್ಷಣ ಹಸ್ತಾಂತರಿಸುವಂತೆ ಆದೇಶ ನೀಡಿದೆ.
ಸೆಪ್ಟೆಂಬರ್ 19 ರ ವರೆಗೂ ದೇವಾಲಯ ಶ್ರೀಮಠದ ಆಡಳಿತದಲ್ಲೇ ಇತ್ತು, ಅಲ್ಲಿಯವರೆಗೂ ಯಾವುದೇ ಆಡಳಿತಾಧಿಕಾರಿಯ ಪ್ರಭಾರ ಇರಲಿಲ್ಲ. ಸೆ. 7 ರ ಯಥಾಸ್ಥಿತಿಯನ್ನು ಮುಂದುವರಿಸುವಂತೆ ನ್ಯಾಯಾಲಯದ ಆದೇಶ ಇದ್ದರೂ ಸರ್ಕಾರ ದೇವಾಲಯವನ್ನು ವಶಪಡಿಸಿಕೊಂಡಿರುವುದು ಸರಿಯಲ್ಲ. ಇದು ಸ್ಪಷ್ಟ ನ್ಯಾಯಾಂಗ ನಿಂದನೆ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ಸೋಮವಾರದ ಒಳಗಾಗಿ ದೇವಾಲಯದ ಆಭರಣ ಸೇರಿದಂತೆ ಸಮಸ್ತ ಚರ ಹಾಗೂ ಸ್ಥಿರಾಸ್ಥಿಗಳನ್ನು ಒಳಗೊಂಡಂತೆ ಸಮಗ್ರ ಆಡಳಿತವನ್ನು ಶ್ರೀಮಠಕ್ಕೆ ಹಸ್ತಾಂತರಿಸುವಂತೆ ಕಟ್ಟುನಿಟ್ಟಾದ ಸೂಚನೆ ನೀಡಿದೆ.
ಸರ್ಕಾರಕ್ಕೆ 3 ನೇ ಬಾರಿ ಮುಖಭಂಗ
ಗೋಕರ್ಣ ಮಹಾಬಲೇಶ್ವರ ದೇವಾಲಯದ ಆಡಳಿತಕ್ಕೆ ಸಂಬಂಧಿಸಿ, ಮಾನ್ಯ ಸುಪ್ರೀಂ ಕೋರ್ಟ್ ಸಮ್ಮುಖದಲ್ಲಿ 3 ನೆಯ ಬಾರಿಗೆ ಸರ್ಕಾರಕ್ಕೆ ಮುಖಭಂಗವಾಗಿದ್ದು, ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚನೆ ನೀಡಿದ್ದರೂ, ಸರ್ಕಾರ ಕಾನೂನು ಬಾಹಿರವಾಗಿ ದೇವಾಲಯವನ್ನು ವಶಪಡಿಸಿಕೊಂಡಿತ್ತು ಹಾಗೂ ಪುನರ್ಹಸ್ತಾಂತರದ ನಾಟಕವಾಡಿತ್ತು.
ಇದೀಗ ಇಂದಿನ ಆದೇಶದಂತೆ ಸೋಮವಾರದ ಒಳಗಾಗಿ ಆಡಳಿತವನ್ನು ಹಸ್ತಾಂತರಿಸದೇ ಇದ್ದರೆ ತೀವ್ರ ಕ್ರಮ ಜರುಗಿಸಲಾಗುವುದು ಎಂಬ ಎಚ್ಚರಿಕೆಯನ್ನು ನ್ಯಾ. ಖಾನ್ವಿಲ್ಕರ್ ನೀಡಿದ ಪ್ರಸಂಗಕ್ಕೂ ನ್ಯಾಯಾಲಯ ಸಾಕ್ಷಿಯಾಯಿತು. ಸರ್ಕಾರದ ಮೇಲೆ ನಂಬಿಕೆ ಕಳೆದುಕೊಂಡ ನ್ಯಾಯಾಲಯ, ಮುಂಜಾಗರುತಾ ಕ್ರಮವಾಗಿ ನ್ಯಾಯಾಂಗ ನಿಂದನೆ ಅರ್ಜಿಯನ್ನು ಹಾಗೆಯೇ ಇರಿಸಿಕೊಂಡು, ಈ ಆದೇಶವನ್ನು ನೀಡಿರುವುದು ವಿಶೇಷವಾಗಿದೆ.
ಕೇಂದ್ರ ಸರ್ಕಾರದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಶ್ರೀಮಠದ ಪರವಾಗಿ ವಾದ ಮಂಡಿಸಿದರು.
ಗೋಕರ್ಣ ದೇವಾಲಯದ ಆಡಳಿತ ನಿರ್ವಹಣೆಯನ್ನು ಶ್ರೀಮಠಕ್ಕೆ ವಹಿಸುವಂತೆ ಮಾನ್ಯ ಸುಪ್ರೀಂ ಕೋರ್ಟ್ ಇದೀಗ 3ನೇ ಬಾರಿ ಸರ್ಕಾರಕ್ಕೆ ಸೂಚಿಸಿದೆ. ಸರ್ವೋಚ್ಛ ನ್ಯಾಯಾಲಯದ ಆದೇಶವನ್ನು ಶಿರಸಾವಹಿಸಿ ಪಾಲಿಸಬೇಕಾದ ಕರ್ತವ್ಯವಿರುವ ಸರ್ಕಾರ, ಈ ಬಾರಿಯಾದರೂ ಯಾವುದೇ ಒತ್ತಡಕ್ಕೆ ಮಣಿಯದೇ, ನ್ಯಾಯಾಲಯದ ಆದೇಶವನ್ನು ಯಥಾವತ್ತಾಗಿ ಪಾಲಿಸಲಿ ಎಂದು ಶ್ರೀಮಠ ಆಗ್ರಹಿಸಿದೆ.
Mysuru Job Alert : Project Assistant Vacancy, 22,000 Salary, Apply by Oct 10
Kalpa Media House | Mysuru | Applications have been invited for one Project Assistant post for the Optical Sensing Biotechnology...
Read moreDetails






