ಸೂರ್ಯನೂ ಕೂಡ ಅಂಗಿಬಿಚ್ಚಿ ಕುಳಿತಿರುವನೇನೋ ಅನಿಸುವಂತ ಉರಿಬಿಸಿಲು, ಆ ಬಿಸಿಲಿಗೆ ಒಣಮೀನಿನಂತೆ(Dry fish) ಒಣಗಿ ಹೋಗಿರುವ ಮಕ್ಕಳು, ಎಲ್ಲರ ಕೈಯಲ್ಲೂ ಒಂದೊಂದು ಅಗರಬತ್ತಿ ಮತ್ತು ಪಟಾಕಿ ಪ್ಯಾಕೆಟ್ ಸುತ್ತಲೂ ಡಾಂ… ಢೂಂ… ಟುಸ್… ಬುಸ್ … ಎಂಬ ಅಬ್ಬರದ ಪಟಾಕಿ ಸದ್ದು…
ಇವೆಲ್ಲವೂ ದೀಪಾವಳಿಯಂದು ಕಂಡುಬರುವ ದೃಶ್ಯಗಳು.
ದೀಪಾವಳಿ ಹತ್ತಿರವಾಗುತ್ತಿದ್ದಂತೆ ಮನೆಮನೆಗಳಲ್ಲೂ ಈ ಥರ ಶಬ್ದಗಳು ಕೇಳಿಬರಲು ಶುರುವಾಗುತ್ತೆ. ದೀಪಾವಳಿ ಅಂದ ಕೂಡಲೇ ನಿಮಗೆ ಏನು ನೆನಪಾಗುತ್ತೋ ಇಲ್ವೋ ಪಟಾಕಿಯಂತೂ ನೆನಪಾಗದೆ ಇರಲು ಸಾಧ್ಯವಿಲ್ಲ…
ದೀಪಾವಳಿ ಮನೆಮನೆಗಳಲ್ಲೂ ಸಂಭ್ರಮ ತರುವ ಬೆಳಕಿನ ಹಬ್ಬ. ಪ್ರಸ್ತುತ ದೀಪಾವಳಿಯೆಂದರೆ ಸಾಮಾನ್ಯವಾಗಿ ಬೆಳಗೆದ್ದು ಎಣ್ಣೆ ಸ್ನಾನದ ಮೂಲಕ ಆರಂಭವಾಗುವ ಆಚರಣೆಯು ನಂತರ ಬಗೆಬಗೆಯ ತಿಂಡಿತಿನಿಸುಗಳನ್ನು ಮಾಡಿ, ಹಬ್ಬದ ಸಲುವಾಗಿ ಖರೀದಿಸಿರುವ ಹೊಸ ಉಡುಪುಗಳೊಂದಿಗೆ ಮಿರಿಮಿರಿ ಮಿಂಚುತ್ತಾ, ದಿನವೀಡಿ ಸಾವಿರಾರು ರೂಪಾಯಿಗಳಿಗೆ ಖರೀದಿಸಿರುವ ಪಟಾಕಿ ಸಿಡಿಸಿ, ದೀಪಾವಳಿ ಸಲುವಾಗಿ ರಿಲೀಸ್ ಆಗಿರುವ ಹೊಸ ಫಿಲಂಗಳನ್ನು ನೋಡಿ ಎಂಜಾಯ್ ಮಾಡುತ್ತಾ, ಲಾಂಗ್ ಟ್ರಿಪ್ ಹೋಗಿ ಬ್ಯುಸಿ ಲೈಫ್ ಅಲ್ಲಿ ಸ್ವಲ್ಪ ರಿಲ್ಯಾಕ್‌ಸ್ ಆಗುತ್ತಾ, ನೆಂಟರಿಷ್ಟರನ್ನು ಆಹ್ವಾನಿಸಿ ದೀಪಾವಳಿ ವಿಶೇಷ ಊಟೋಪಚಾರದ ಮೂಲಕ ಸತ್ಕರಿಸುವುದು ಉಳ್ಳವರ ಹಬ್ಬದ ಸಂಭ್ರಮವಾದರೆ ಇಲ್ಲದವರ ಸಂಭ್ರಮ ಇದಕ್ಕಿಂತ ಭಿನ್ನ…
ಒಂದೆಡೆ ಬಡತನದ ಬೇಗುದಿಯ ಜೊತೆಗೆ ಬೆಲೆಯೇರಿಕೆಯ ಬಿಸಿ, ಮತ್ತೊಂದೆಡೆ ಊರಿಗೆ ಊರೇ ಹಬ್ಬದ ಸಂಭ್ರಮದಲ್ಲಿರುವ ಕ್ಷಣ ಅಮ್ಮ ಎಲ್ಲರೂ ಪಟಾಕಿ ಸಿಡಿಸ್ತಿದ್ದಾರೆ ನಮಗೆ ಯಾವಾಗ ಪಟಾಕಿ ಕೊಡುಸ್ತೀರಾ! ಎಂದು ಬಡತನದ ಅರಿವಿಲ್ಲದೆ ಪಟಾಕಿ ಸಿಡಿಸುವ ಆಸೆಯಿಂದ ಅಮ್ಮನಿಗೆ ದುಂಬಾಲು ಬಿದ್ದಿರುವ ಮುಗ್ಧ ಮಕ್ಕಳು! ಮಕ್ಕಳ ಪ್ರಶ್ನೆಗೆ ಉತ್ತರಿಸಲಾಗದೇ ಶೂನ್ಯಭಾವದಿಂದ ಗಂಡನ ಮುಖ ನೋಡುವ ಹೆಂಡತಿ!
ಇದು ಯಾವುದೋ ಸಿನಿಮಾದ ಸೆಂಟಿಮೆಂಟ್ ದೃಶ್ಯವಲ್ಲ ಬದಲಾಗಿ ನಮ್ಮ ಸುತ್ತ ಮುತ್ತ ನಡೆಯುತ್ತಿರುವಂತ ವಾಸ್ತವವಿದು!
ಪ್ರಸ್ತುತ ನಾವೆಲ್ಲ ಆಚರಿಸುವ ದೀಪಾವಳಿ ಸಾಮಾನ್ಯವಾಗಿ ಬಣ್ಣ ಬಣ್ಣದ ಪಟಾಕಿ ಹಾಗೂ ಬಗೆ ಬಗೆಯ ಹಬ್ಬದೂಟಗಳೇ ಪ್ರಧಾನವಾಗಿರುವಂತದ್ದು ಅತೀಯಾಗಿ ಪಟಾಕಿ ಸಿಡಿಸಿ ಪರಿಸರ ಮಾಲಿನ್ಯ ಮಾಡುವುದು ತಪ್ಪು ಹಾಗಂತ ಪಟಾಕಿಯೇ ಇಲ್ಲದೇ ಆಚರಿಸುವ ದೀಪಾವಳಿಯೂ ನೋಡಲು ಕಷ್ಟ…!
ಹಬ್ಬವೆಂದರೆ ಸಂಭ್ರಮ ಸಡಗರದ ಸಂಕೇತ ಆದರೆ ಈ ಸಂಭ್ರಮ ಸಡಗರಗಳು ಉಳ್ಳವರಿಗೆ ಮಾತ್ರ ಸೀಮಿತವಾಗಿರದೇ ಎಲ್ಲರೂ ಸಮಾನವಾಗಿ ಸಂಭ್ರಮಿಸುವಂತಾಗಬೇಕು ಹಣ ಇದ್ದರೆ ಮಾತ್ರ ಹಬ್ಬವೆಂದಾದರೆ ಹಣ ಇಲ್ಲದವರ ಗತಿ…!?
ಒಂದೆಡೆ ಉಳ್ಳವರ ಮನೆಗಳಲ್ಲಿ ದಿನವೀಡಿ ಸಿಡಿಸಿದರೂ ಮುಗಿಯದಷ್ಟು ಪಟಾಕಿಗಳನ್ನು ಸಿಡಿಸುತ್ತಾ ಸಂಭ್ರಮಿಸುವ ಆಚರಣೆಯಾದರೆ ಇಲ್ಲದವರ ಪಾಲಿಗೆ ಆ ಸಂಭ್ರಮವನ್ನು ಬರಿ(ಕಣ್ಣು)ಗೈಗಳಲ್ಲಿ ನೋಡುವುದೇ ಇವರ ಪಾಲಿನ ಸಮಾಧಾನ….!
ಸಹಾಯ ಮಾಡೋದು ಅಂದರೆ ಬರೀ ಒಬ್ಬರಿಗೆ ಹಣದ ಮೂಲಕ ಮಾಡುವುದು ಮಾತ್ರ ಸಹಾಯವಲ್ಲ.. ಖುಷಿಯನ್ನು ಹಂಚುವುದು ಕೂಡ ಒಂಥರ ಮನಸಿನಿಂದ ಮನಸ್ಸಿಗೆ ಮಾಡುವ ಸಹಾಯವೇ ತಾನೇ, ಅಶಕ್ತರ ಪಾಲಿಗೆ ಸಂತಸ ತರುವ ಸಣ್ಣಪುಟ್ಟ ಕ್ಷಣಗಳು ಕೂಡ ಸಹಾಯವೇ ಅಲ್ವಾ….
ನೀವು ತರುವ ಪಟಾಕಿಯಲ್ಲಿ ಸ್ವಲ್ಪ ಪಾಲು ಪಟಾಕಿ ಖರೀದಿಸಲು ಅಶಕ್ತರಾಗಿರುವವರ ಜೊತೆ ಸೇರಿ ಸಿಡಿಸಿ ನೋಡಿ, ನೀವು ತಂದಿರುವ ಪಟಾಕಿಗಳನ್ನೆಲ್ಲ ಒಟ್ಟಾಗಿ ಸೇರಿಸಿ ಅಕ್ಕಪಕ್ಕದವರೆಲ್ಲ ಒಂದಾಗಿ ಸೇರಿ ಪಟಾಕಿ ಸಿಡಿಸಿ ನೋಡಿ ಆಗ ದೀಪಾವಳಿ ಸಂಭ್ರಮದ ನಿಜವಾದ ಅರ್ಥ ಸಿಗುತ್ತೆ. ಖುಷಿಯನ್ನು ಒಬ್ಬರೇ ಅನುಭವಿಸುವುದಕ್ಕಿಂತ ಖುಷಿಯನ್ನೇ ಕಾಣದವರೊಂದಿಗೆ ಸೇರಿ ಅನುಭವಿಸಿದರೆ ಸಂಭ್ರಮ ಸಾರ್ಥಕವಾಗುವುದು.
ದೀಪದಿಂದ ದೀಪವ ಹಚ್ಚಿ ಮನೆಬೆಳಗುವಂತೆ ನಮ್ಮ ಖುಷಿ, ನಮ್ಮ ಸಂಭ್ರಮಗಳು ಕೇವಲ ನಮಗೆ ಮಾತ್ರ ಸೀಮಿತವಾಗಿರದೆ ನೆರೆಹೊರೆಯವರೊಂದಿಗೆ, ಆರ್ಥಿಕವಾಗಿ ಅಶಕ್ತರೊಂದಿಗೆ ಸೇರಿ ಹಬ್ಬವನ್ನು ಆಚರಿಸೋಣ ಆ ಮೂಲಕ ಸಂಭ್ರಮವನ್ನು ಹಂಚೋಣ….
ಸರ್ವರಿಗೂ ಕತ್ತಲನ್ನು ಅಳಿಸಿ ಬೆಳಕು ಮೂಡಿಸುವ ಸಂಕೇತವಾಗಿರುವ ದೀಪಾವಳಿ ಹಬ್ಬದ ಶುಭಾಶಯಗಳು….
ಬರಹ: ಭರತ್ ಕುಮಾರ್
11-Year-Old Mysuru Girl Writes Children’s Ramayana in Just 15 Days
Kalpa Media House | Mysuru | In a remarkable literary achievement, an 11-year-old girl from Mysuru has written a 36-page...
Read moreDetails






