ದಿನ ಬೆಳಗಾದರೆ ಒಂದು ವರ್ಗ ಗೋವನ್ನು ವಧೆ ಮಾಡುವುದು, ಇನ್ನೊಂದು ವರ್ಗ ಪ್ರತಿಭಟಿಸುವುದು. ಇದು ನಿರಂತರ ನಿಲ್ಲದ ಹೋರಾಟ. ಗೋ ವಧೆಯನ್ನು ತಡೆಯುವುದಕ್ಕಾಗಿ ಅನೇಕ ಕೇಸರಿ ಸಂಘಟನೆಗಳು ನಿರಂತರ ಹೋರಾಟ ನಡೆಸುತ್ತಾ ಬಂದಿದೆ. ಅದರಲ್ಲಿ ಗೋವಿಗಾಗಿ ಹುತಾತ್ಮರಾದವರೂ ಅನೇಕರಿದ್ದಾರೆ. ಇದರಿಂದೇನಾದರೂ ಪರಿಣಾಮವಾಯಿತೇ?
ರೈತನು ಗೋವಿನ ಸಾಕಾಣಿಕೆಯಲ್ಲಿ, ಅನಾರೋಗ್ಯ ಪೀಡಿತ ಗೋವಿನ ಬಗ್ಗೆ ತನ್ನ ಅಳಲನ್ನು ಹೇಳುತ್ತನೇ ಇರುತ್ತಾನೆ. ಗರ್ಭಧಾರಣೆ ನಿಂತಂತಹ ಹಸುವಿನ ಪಾಲನೆ ಮಾಡಲು ಹಣಕಾಸು, ದೇಹಶ್ರಮ ಎಲ್ಲವೂ ಅಡ್ಡಿಯಾಗುತ್ತದೆ. ಹಾಲು ಬೇಕು ಆದರೆ ಹಾಲು ನೀಡಲು ನಿಲ್ಲಿಸಿದ ಗೋವು ಬೇಡ ಎಂಬಂತಾಗಿದೆ. ಅದಕ್ಕೆ ಕಾರಣವೂ ಇದೆ. ಆದರೆ ಮಾತೃ ಪ್ರೇಮ ಗೋವಿನಲ್ಲಿಟ್ಟವನಿಗೆ ನೋವಿನ ಅನುಭವವಿಲ್ಲ. ವ್ಯವಹಾರಿಕ ಪ್ರೇಮಿಗೆ ಗೊಡ್ಡು ಹಸು, ಹೋರಿಗಳು ಹಿಂಸೆಯೇ ಆಗುತ್ತದೆ.
ಅಲ್ಲಿ ಭಾವನಾತ್ಮಕತೆ ಇದೆ
ಇನ್ನೊಂದು ಗೋಭಕ್ಷಕ ವರ್ಗ ಗೋ ವಧೆಗೆ ಸಮರ್ಥನೆ ನೀಡುವುದನ್ನು ನೋಡಿದರೆ ನಗು ಬರುತ್ತದೆ. ನಮ್ಮ ಆಹಾರವೇ ಗೋವು ಎಂದು ಮಾಧ್ಯಮಗಳ ಮುಂದೆ ಕಿರುಚಾಡುವುದನ್ನು ನೋಡುತ್ತೇವೆ. ಅಂದರೆ ಗೋವು ಹಾಲು ನೀಡದಿದ್ದರೆ ಜೀವಿಸುವ ಹಕ್ಕನ್ನು ಕಳೆದುಕೊಳ್ಳುತ್ತದೆ ಎಂಬ ಅಭಿಪ್ರಾಯವಿದು. ನಾನು ಹೇಳುತ್ತೇನೆ, ‘ರಾಷ್ಟ್ರ ಪ್ರಾಣಿ ಹುಲಿಗೆ ಕಾಡಿನಲ್ಲಿ ಆಹಾರ ಕೊರತೆ ಇದೆ. ಅದಕ್ಕೆ ಮನುಷ್ಯನ ಆಹಾರವೂ ಆಗುತ್ತದೆ. ಕೆಲಸಕ್ಕೆ ಬಾರದ ಮನುಷ್ಯರನ್ನು, ಮನೆಯಲ್ಲಿ ಏಳಲಾಗದ(bed ridden) ಮನುಷ್ಯರನ್ನು ಅದಕ್ಕೆ ಆಹಾರವಾಗಿ ಕೊಡಿ. ಒಂದೆರಡು ದಿನ ದುಃಖ ತಡ್ಕೊಳ್ಳಿ. ಒಂದು ಸಂಕಟ ಹೋಗುತ್ತಲ್ವ. ಜತೆಗೆ Relaxation ಕೂಡಾ ಸಿಕ್ಕಂತಾಗುತ್ತದೆ.’
ಅಲ್ಲಿ ಭಾವನಾತ್ಮಕತೆ ಇದೆಯಂತೆ. ಆದರೆ ಕ್ಷೀರ ನೀಡಿ ಪೋಷಿಸುವ ಗೋಮಾತೆಯ ಮೇಲೆ ಕೇವಲ ಕ್ಷೀರ ವ್ಯಾಮೋಹ ಮಾತ್ರ. ಇದೆಂತಹ ನ್ಯಾಯ. ಈ ಭೂಮಿ ಯಾರ ಅಪ್ಪಂದೂ ಅಲ್ಲ. ಇದರಲ್ಲಿ ಕ್ರಿಮಿಯಿಂದ ಹಿಡಿದು ಪ್ರಾಣಿ ಪಕ್ಷಿ, ಸಸ್ಯಾದಿಗಳಿಗೆ, ಮನುಷ್ಯರಿಗೆ ಹಕ್ಕಿದೆ. ಆದರೆ ಸ್ವಾರ್ಥಿ ಮಾನವ ಮಾತ್ರ ನನಗೊಬ್ಬನಿಗೇ ಹಕ್ಕು ಎಂದು ಹೇಳುವಂತಹ ಪರಿಸ್ಥಿತಿ ಈಗ ಇದೆ.
ಗೋಗ್ರಾಸ ನೀಡದೆ ಊಟ ಇಲ್ಲ ಎಂದು ಮಹಾಭಾರತದ ಯುಧಿಷ್ಟಿರನ ತತ್ವ, ಗೋ ಪೂಜೆ ಸಲ್ಲಿಸದೆ ನಿತ್ಯ ಕರ್ಮವಿಲ್ಲ ಎಂಬ ರಘುವಂಶದ ರಾಮಾದಿ ಚಕ್ರವರ್ತಿಗಳು ಹೇಳಿದ್ದು ಮಾತ್ರ ಕಟ್ಟುಕಥೆ ಎಂದು ಹೇಳುವವರಿಗೇನೂ ಕಡಿಮೆ ಇಲ್ಲ. ಸನಾತನ ಪುರಾಣಗಳಲ್ಲಿ ಸಕಲ ಪ್ರಾಣಿ ಪಕ್ಷಿ ವೃಕ್ಷಗಳಿಗೆ ದೇವರ ಜತೆ ಸ್ಥಾನಮಾನ ನೀಡಿದ್ದು ಮೂರ್ಖತನ ಎಂದು ನಗುವವರೂ ಇದ್ದಾರೆ ಬಿಡಿ. ಅವರೇನು ಬೇಕಾದರೂ ಒದರಲಿ ಬಿಡಿ. ಈಗ ಗೋ ವಧೆಯನ್ನು ಶಾಶ್ವತವಾಗಿ ನಿಲ್ಲಿಸಲು ಮಾಡಬೇಕಾದದ್ದು ಏನು?
ಯಾವುದೋ ರಾಜ್ಯಗಳು ಅವರವರ ಸರಕಾರ ಇರುವಲ್ಲಿಯವರೆಗೆ ನಿಷೇಧಿಸಬಹುದು. ಅದೇ ರೀತಿ ಕೇಂದ್ರ ಸರಕಾರವೂ ಮಾಡಬಹುದು. ಆದರೆ ಸರಕಾರ ಬದಲಾಗಿ ಮತ್ತೆ ಇನ್ನೊಂದು ಪಕ್ಷವು ಆಡಳಿತಕ್ಕೆ ಬಂದರೆ ನಿಷೇಧ ತೆಗೆದು ಹಾಕಲೂಬಹುದು. ಹಾಗಾಗಿ ಇದೆಲ್ಲ ಕ್ಷಣಿಕ ನಿಷೇಧಗಳಾಗುತ್ತದೆಯೇ ಹೊರತು, ಶಾಶ್ವತ ಪರಿಹಾರವಲ್ಲ.
ಇದಕ್ಕೇನು ಮಾಡಬೇಕು?
ಮುಂದಿನ ಸರಕಾರವು ಗೋವಿನ ಮೇಲೆ ಕರುಣೆಯಿರುವ, ಭಕ್ತಿ ಇರುವ ಸರಕಾರವಾಗಬೇಕು. ಲೋಕಸಭೆ, ರಾಜ್ಯಸಭೆಯಲ್ಲಿ ಸಾಕಷ್ಟು ಸಂಖ್ಯಾಬಲ ಇರಬೇಕು. ಹೀಗೆ ಆದಾಗ ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಣೆ ಮಾಡಿದರಾಯ್ತು. ವ್ಯವಹಾರಿಕ ವಿನಿಮಯದ ನೋಟುಗಳಲ್ಲಿ ಗೋವಿನ ಚಿತ್ರ ಇರಬೇಕು. Stamp paperನಲ್ಲೂ ಗೋವಿನ ಚಿತ್ರದ ಲಾಂಛನ ಇರಲೇಬೇಕು.
ಹೀಗೆ ಯಾವತ್ತು ಆಗುತ್ತದೋ ಆಗ ಅನಧಿಕೃತ, ಅಕ್ರಮ ಗೋ ಹತ್ಯೆ ತಡೆಯಲು ಒಬ್ಬ ಸಾಮಾನ್ಯ ಓದು ಬರಹ ಜ್ಞಾನವಿಲ್ಲದ ಸಾಮಾನ್ಯ ಕೂಲಿ ವೃತ್ತಿ ಮಾಡುವ ಪ್ರಜೆಗೂ ಶಕ್ತಿ ಬರುತ್ತದೆ. ಹೇಗೆ ಹುಲಿ, ನವಿಲುಗಳನ್ನು ಕೊಂದರೆ ಶಿಕ್ಷೆಯಾಗುತ್ತೋ ಹಾಗೆಯೇ ಆಗಬೇಕು. ಈಗ ಇದರ ತದ್ವಿರುದ್ಧ. ನರಭಕ್ಷಕ ಹುಲಿಯ ಲಾಂಛನ ನೀಡಿ, ಕ್ಷೀರ ನೀಡುವ ಗೋ ಮಾತೆಯನ್ನು ವಧಿಸುವ ಕಾರ್ಯ ನಡೆಯುತ್ತದೆ. ಸರಕಾರವೇ ಜಿಲ್ಲೆಗೊಂದರಂತೆ ಅನಾಥ ಪಶುಗಳನ್ನು ಸಾಕುವ ಗೋಶಾಲೆಗಳನ್ನು ಮಾಡಲಿ. ಅದಕ್ಕಾಗಿ ಒಂದು ಸಣ್ಣ ಮೊತ್ತದ ತೆರಿಗೆಯನ್ನೂ ನಮ್ಮ ನಿತ್ಯ ದೈನಂದಿನ ವ್ಯವಹಾರದೊಳಗೆ ಅಳವಡಿಸಲಿ.
ಯಾವಾಗ ಗೋವಿನ ರಕ್ಷಣೆಯಾಗುತ್ತೋ ಆಗ ಭಾರತವೇ ಪ್ರಕಾಶಿಸುತ್ತದೆ. ಇದು ಇಹ ಪರಗಳ ಸುಖಕ್ಕೂ ಕಾರಣವಾಗುತ್ತದೆ.
-ಜೈ ಗೋ ಮಾತಾ
ಲೇಖನ: ಪ್ರಕಾಶ್ ಅಮ್ಮಣ್ಣಾಯ
ಜ್ಯೋರ್ತಿವಿಜ್ಞಾನಂ
Discussion about this post