ತುಮಕೂರು: ಹೌದು… ಸಿದ್ದಗಂಗಾ ಶ್ರೀಗಳದ್ದು ಇಡಿಯ ವಿಶ್ವವೇ ಅಳವಡಿಸಿಕೊಳ್ಳುವಂತಹ ಆದರ್ಶಪ್ರಾಯ ವ್ಯಕ್ತಿತ್ವ ಹಾಗೂ ಸನ್ಯಾಸ ಜೀವನ. ಇಂತಹ ಶ್ರೀಗಳನ್ನು ಕಳೆದುಕೊಂಡ ನಾಡು ಹಾಗೂ ದೇಶ ಇಂದು ನಿಜಕ್ಕೂ ಬಡವಾಗಿದೆ.
ಮಕ್ಕಳಿಗಾಗಿಯೇ ಜೀವನ ಸವೆಸಿದ ಶ್ರೀಗಳ ಲಿಂಗೈಕ್ಯದ ಈ ದುಃಖದ ನಡುವೆಯೂ ಅವರ ಕೊನೆಯ ಆಸೆ ಏನಾಗಿತ್ತು ಎಂಬುದನ್ನು ಒಮ್ಮೆ ಓದಿದರೆ ಇಂತಹ ಸನ್ಯಾಸಿಯನ್ನು ಪಡೆದ ನಾವೆಲ್ಲಾ ಸಾರ್ಥಕ ಎನಿಸುತ್ತದೆ.
ನಾನು ಯಾವಾಗ ಸಾಯತ್ತೇನೋ ಗೊತ್ತಿಲ್ಲ. ಆದರೆ, ನಾನು ಯಾವ ಸಮಯದಲ್ಲಿ ಕೊನೆಯುಸಿರೆಳೆದರೂ ಸರಿ. ಮಠದ ಮಕ್ಕಳು ಮಧ್ಯಾಹ್ನದ ಊಟ ಸೇವಿಸಿದ ನಂತರವಷ್ಟೇ ನನ್ನ ಸಾವಿನ ಸುದ್ದಿಯನ್ನು ಬಹಿರಂಗಪಡಿಸಬೇಕು. ಮಕ್ಕಳು ಹಸಿವಿನಿಂದ ಇರಬಾರದು ಎಂದು ಮಠದ ಶಿಷ್ಯರಿಗೆ ಶ್ರೀಗಳು ಸೂಚನೆ ನೀಡಿದ್ದರಂತೆ.
ಈ ಹಿನ್ನೆಲೆಯಲ್ಲಿಯೇ, ಇಂದು ಮುಂಜಾನೆ ಶ್ರೀಗಳು ನಿಧನರಾದರೂ ಸಹ ಮಕ್ಕಳೆಲ್ಲಾ ಊಟ ಮಾಡುವವರೆಗೂ ಕಾದಿದ್ದು, ಆನಂತರವಷ್ಟೇ ವಿಚಾರವನ್ನು ಬಹಿರಂಗಪಡಿಸಲಾಗಿದೆ. ಈ ಮೂಲಕ ಮಠದ ಆಡಳಿತ ಮಂಡಳಿ ಶ್ರೀಗಳ ಕೊನೆಯ ಆಸೆಯನ್ನು ಈಡೇರಿಸಿದೆ.
ತಮ್ಮ ಜೀವಿತಾವಧಿಯನ್ನು ವಿದ್ಯಾದಾನ ಹಾಗೂ ಅನ್ನದಾನಗಳಲ್ಲೇ ಕಳೆದ ಶ್ರೀಗಳು ತಮ್ಮ ಕೊನೆಯ ಆಸೆಯಲ್ಲೂ ಸಹ ಮಕ್ಕಳ ಅನ್ನದಾನ ನಿಲ್ಲದಂತೆ ಸೂಚನೆ ನೀಡಿದ್ದ ಮೂಲಕ ದಾಸೋಹ ನಿಲ್ಲದಂತೆ ಆರ್ಶೀವದಿಸಿದ್ದಾರೆ.
Discussion about this post