ಜಾನಪದ ಬುಡಕಟ್ಟು ಸಂಸ್ಕೃತಿಯ ತವರು ಚಿತ್ರದುರ್ಗ ಜಿಲ್ಲೆಯ ಮಧ್ಯ ಕರ್ನಾಟಕದ ದೊಡ್ಡ ಜಾತ್ರೆ ಎಂದೇ ಪ್ರಖ್ಯಾತಿ ಪಡೆದ ಪವಾಡ ಪುರುಷ ಕಾಯಕ ಯೋಗಿ ಕ್ಷೇತ್ರ ನಾಯಕನಹಟ್ಟಿ ಶ್ರೀಗುರು ತಿಪ್ಪೇರುದ್ರ ಸ್ವಾಮಿಯ ಜಾತ್ರೆ ಅಪಾರ ಭಕ್ತರ ನಡುವೆ ಅದ್ದೂರಿಯಾಗಿ ಇಂದು(ಮಾರ್ಚ್ 22) ನಡೆಯುತ್ತಿದೆ.
17 ನೆಯ ಶತಮಾನದಲ್ಲಿ ಬಾಳಿ ಬದುಕಿದ ಕರ್ಮ ಜೀವಿ ಕಾಯಕಯೋಗಿ ತಿಪ್ಪೇಸ್ವಾಮಿ ಸಮಾಜ ಸುಧಾರಕನಾಗಿ, ಜನಕಲ್ಯಾಣಕ್ಕೆ ತನ್ನನ್ನು ಅರ್ಪಿಸಿಕೊಂಡ ಅವಧೂತ.
ಆಧುನಿಕ ಜಗತ್ತಿಗೆ ಆಶ್ಚರ್ಯಮೂಡಿಸುವ ಹಾಗೆ ಸಾಧುವಾಗಿ ಸಿದ್ಧನಾಗಿ, ಸಂತನಾಗಿ, ಯೋಗಿಯಾಗಿ ತನ್ನನ್ನು ನಂಬಿದ ಶ್ರದ್ಧಾಭಕಿಯುಳ್ಳ ಭಕ್ತ ಜನತೆಗೆ ಕೃಪೆ ತೋರಿದ ಅವಧೂತ ಇಂದು ಅಪಾರ ಭಕ್ತ ಜನತೆಯನ್ನು ಹೊಂದಿರುವ ತಿಪ್ಪೇಸ್ವಾಮಿಯಿಂದ ನೆಲೆ ನಿಂತ ನಾಯಕನಹಟ್ಟಿ ಕ್ಷೇತ್ರ ನಿತ್ಯ ಯಾತ್ರಾ ಸ್ಥಳವಾಗಿದೆ.
ಮಠದಲ್ಲಿ ನಡೆಯುತ್ತಿರುವ ಪೂಜೆ ಆಚರಣೆ, ನಂಬಿಕೆ, ಜಾತ್ರೆ, ಉತ್ಸವಗಳು, ಮದುವೆ ಕಾರ್ಯಗಳು, ಇಂಥ ಕಾರ್ಯಗಳಿಗೆ ವರ್ಣ, ವರ್ಗ, ಜಾತಿ ಲಿಂಗ ಭೇದ ಮರೆತು ಕರ್ನಾಟಕವಲ್ಲದೆ, ನೆರೆಯ ಮಹಾರಾಷ್ಟ್ರ, ಮತ್ತು ಆಂಧ್ರ ಪ್ರದೇಶಗಳಿಂದಲೂ ಆಗಮಿಸುವ ಅಪಾರ ಭಕ್ತ ಜನತೆ, ಇದೆಲ್ಲವೂ ತಿಪ್ಪೇಸ್ವಾಮಿ ಮೇಲಿನ ಭಕ್ತಿಯ ಸಾರವನ್ನು ಹೆಚ್ಚಿಸುತ್ತಲ್ಲೇ ಆಧುನಿಕತೆಯ ಈ ಸಂದರ್ಭದಲ್ಲಿ ತನ್ನ ನೆಲೆಯನ್ನು ಗಟ್ಟಿಗೊಳಿಸಿಕೊಳ್ಳುತ್ತಿದ್ದಾನೆ. ಹಾಗಾಗಿ ತಿಪ್ಪೇಸ್ವಾಮಿ ನಿತ್ಯವೂ ಬೆಳೆಯುತ್ತಿರುವ ಅವಧೂತ.
ಸಾಧು ಸಂತರ ಅವಧೂತರ ಪೂರ್ವ ಚರಿತ್ರೆಗಳು ಅಸ್ಪಷ್ಟ, ಜೊತೆಗೆ ಆ ಬಗ್ಗೆ ಚರ್ಚೆಗಳು ಸಹ ಖಚಿತವಾಗಿ ನಡೆದಿಲ್ಲ, ನಡೆಯುತ್ತಲೂ ಇಲ್ಲ. ಈ ಹಿನ್ನೆಲೆಯಲ್ಲಿ ತಿಪ್ಪೇಸ್ವಾಮಿಯ ಪೂರ್ವ ಚರಿತ್ರಯೂ ಅಸ್ಪಷ್ಟ. ಹಟ್ಟಿಯ ಮಲ್ಲಪ್ಪ ನಾಯಕರು ಇಲ್ಲಿ ಪಾಳೆಯಗಾರರಾಗಿದ್ದಾಗ ಇಲ್ಲಿಗೆ ಬಂದನೆಂದೂ, ಈಗಿರುವ ತಿಪ್ಪೇಸ್ವಾಮಿಯ ಸಮಾಧಿ ಮಂಟಪವನ್ನು ಚಿತ್ರದುರ್ಗದ ದೊರೆ ಭರಮಣ್ಣ ನಾಯಕನ (1689-1721) ಬಳಿ ಅಧಿಕಾರಯಗಿದ್ದ ಗುಂಟನೂರು ಮಲ್ಲಪ್ಪ ಮತ್ತು ನರಸಪ್ಪಯ್ಯನವರು ಕಟ್ಟಿಸಿದರೆಂದೂ ಖಚಿತ ದಾಖಲೆಗಳಿರುವುದರಿಂದ, ಹದಿನಾರನೆಯ ಶತಮಾನದ ಕೊನೆ ಹಟ್ಟಿ ಪಾಳೆಯಗಾರರು ಅಧಿಕಾಕರಕ್ಕೆ ಬಂದಿರುವುದರಿಂದ 17 ನೆಯ ಶತಮಾನದ ಆರಂಭದಲ್ಲಿ ತಿಪ್ಪೇಸ್ವಾಮಿ ಇಲ್ಲಿದ್ದಿರಬಹುದೆಂದು ಹೇಳಲಾಗಿದೆ. ಜನಪದರ ಮೂಲದ ಪ್ರಕಾರ ಹಟ್ಟಿ ತಿಪ್ಪಯ್ಯ, ಜಗಲೂರು ಪಾಪಯ್ಯ ಸಿಕ್ಕೇರಿ ಕೋಡಿ ಬಸವಯ್ಯ ಇವರು ಮೂವರು.
ಲೆತ್ತನಾಡ್ಯಾರೆ ಕೆರೆಯಾಗೆ- ಈ ಪ್ರಕಾರ ಇವರೆಲ್ಲಾ ಸಮಕಾಲೀನರೆಂಬ ಮಾಹಿತಿಯನ್ನು ಈ ತ್ರಿಪದಿ ನೀಡುತ್ತದೆ. ಮ್ಯಾಸಬೇಡರು ಈತನನ್ನು ತಮ್ಮ ಮೂಲ ಪುರುಷನೆಂದು ಮನೆದೇವರೆಂದು ಆರಾಧಿಸುತ್ತಿರುವುದರಿಂದ ಆಂಧ್ರದ ರಾಯದುರ್ಗದ ಕಡೆಯಿಂದ ಬಂದಿರುವನೆಂಬ ಬಲ್ಲಮೂಲಗಳಿಂದ ಈತ ಬುಡುಕಟ್ಟು ಮೂಲದವನೆಂದೂ, ಕೆರೆ ಕಟ್ಟೆಗಳನ್ನು ನಿರ್ಮಿಸಿರುವುದರಿಂದ ಪಶುಪಾಲನಾ ಮತ್ತು ಕೃಷಿ ವೃತ್ತಿ ಮೂಲದವನೆಂದು ಹೇಳಬಹುದಾಗಿದೆ.
ನಾಯಕನ ಹಟ್ಟಿಗೆ ಬಂದಾಗ ಹೇಗಿದ್ದ ಗೊತ್ತಾ?
ನಾಯಕನ ಹಟ್ಟಿಗೆ ಬಂದಾಗ ಶ್ರೇಷ್ಠ ಮಟ್ಟದ ಉಡುಪು ಈತನಿಗಿರಲಿಲ್ಲ. ಸಾಮಾನ್ಯ ಮ್ಯಾಸಬೇಡನಂತೆ ಬಾಗಿದ ಕೋಲು, ಹೆಗಲಲ್ಲಿ ತೆಂಗಿನ ಪರಟೆಗಳು, ಹರಕು ಕಂಬಳಿ, ಸೊಂಟದಿಂದ ಮೊಳಕಾಲಿನವರೆಗೆ ಧೋತಿ ಧರಿಸುತ್ತಿದ್ದ, ಪಶುಪಾಲಕರೊಂದಿಗೆ ಮಕ್ಕಳೊಂದಿಗೆ ಬೆರೆಯುತ್ತಿದ್ದು, ಹುಚ್ಚನಂತೆ ವರ್ತಿಸುತ್ತಿದ್ದನಂತೆ ಎನ್ನುವ ಮಾಹಿತಿ ಸಂಗ್ರಹವಿದೆ.
ತಿಪ್ಪೇಸ್ವಾಮಿ ಮ್ಯಾಸನಾಯಕ ಬುಡಕಟ್ಟಿನಿಂದಲೇ ಬಂದಿರುವ ಅವಧೂತ ಎನಿಸುತ್ತದೆ. ತಿಪ್ಪೇಸ್ವಾಮಿ ಎನ್ನುವ ಹೆಸರು ಬುಡಕಟ್ಟು ಸಂಸ್ಕೃತಿಯ ಪ್ರತೀಕ. ತಿಪ್ಪೇಸ್ವಾಮಿ ಎಂಬ ಹೆಸರು ಶಿಷ್ಟರಲ್ಲಿ ಕಂಡುಬಂದರೆ ಅದಕ್ಕೆ ಬುಡಕಟ್ಟು ಸಂಸ್ಕೃತಿಯೇ ಮೂಲವಾಗಿದೆ ಎನ್ನುವ ಸಂಶೋಧನೆಯ ತಿಳಿವುಗಳು ತಿಪ್ಪೇಸ್ವಾಮಿ ಬುಡಕಟ್ಟು ಮೂಲದವನೆಂಬುದನ್ನು ಖಚಿತಪಡಿಸುತ್ತನೆನ್ನಬಹುದು.
ಬುಡಕಟ್ಟು ಸಂಸ್ಕೃತಿಯ ಉನ್ನತಿ
ಶಿಷ್ಟ ಸಂಸ್ಕೃತಿಯವರಿಗೆ ತಿಪ್ಪೆ ಕಸ ಕಡ್ಡಿ ಹಾಕುವ ಜಾಗ. ಆದರೆ ಮ್ಯಾಸನಾಯಕ ಬುಡಕಟ್ಟು ಜನರಿಗೆ ಎತ್ತಿನ ಕಿಲಾರಿಗಳು ನೋಡಿಕೊಳ್ಳುವ ದೇವರ ಎತ್ತುಗಳು ಅವರಿಗೆ ಸಾಕ್ಷಾತ್ ದೈವವೇ ಆಗಿರುತ್ತವೆ. ಅಂಥ ದೇವರ ಎತ್ತುಗಳ ಸಗಣಿ ರಾಶೀಯೇ ತಿಪ್ಪೆ ಎನಿಸಿಕೊಳ್ಳುತ್ತದೆ. ಈಗಲೂ ನಾಯ್ಕನಹಟ್ಟಿ ಚಳ್ಳಕೆರೆ ಮಾರ್ಗವಾಗಿ ಬರುವಾಗ ಎಡಭಾಗದಲ್ಲಿ ರಾಣಿಯರ ಹೆಸರಿನಲ್ಲಿ ತಿಪ್ಪೆಗಳಿರುವುದನ್ನು ಕಾಣಬಹುದು ಇಂಥ ತಿಪ್ಪೆಯ ಭಸ್ಮವೇ ಬುಡಕಟ್ಟು ಜನರಿಗೆ ವಿಭೂತಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ತಿಪ್ಪೇಸ್ವಾಮಿ ಎನ್ನುವ ಹೆಸರು ಬುಡಕಟ್ಟು ಸಂಸ್ಕೃತಿಯ ಉನ್ನತಿಯನ್ನು ಸೂಚಿಸುತ್ತದೆ ಎನ್ನುವ ತಲಸ್ಪರ್ಶಿ ಕ್ಷೇತ್ರ ಕಾರ್ಯದ ಸಂಶೋಧನೆಯ ಮಾತುಗಳು ತಿಪ್ಪೇಸ್ವಾಮಿ ಬುಡಕಟ್ಟು ಮೂಲದ ಪಶುಪಾಲನೆ ಮತ್ತು ಕೃಷಿಕ ವೃತ್ತಿಯಿಂದ ಬಂದವನೆಂಬ ಹೇಳಿಕಗಳನ್ನು ಬಲಪಡಿಸುತ್ತದೆ.
ನಾಯಕನ ಹಟ್ಟಿಯಲ್ಲಿರುವ ಹೊರಮಠದಲ್ಲೆ ತಿಪ್ಪೇಸ್ವಾಮಿ ಜೀವೈಕ್ಯನಾದ ಗದ್ದುಗೆ ಇದ್ದು ಮತ್ತು ಅಲ್ಲಿನ ನಂಬಿಕೆಗಳು, ಆಚರಣೆಗಳು ಬುಡಕಟ್ಟು ಸಂಸ್ಕೃತಿಯ ಪ್ರತೀಕವಾಗಿದ್ದು, ಅದರ ಪೂಜಾ ಕಾರ್ಯಗಳು ಮತ್ತು ಮಠದ ಉಸ್ತುವಾರಿ ಕೆಲಸ ಮ್ಯಾಸಬೇಡರ ಕೈಯಲ್ಲಿರುವುದನ್ನು ಈ ಹಿನ್ನೆಲೆಯಲ್ಲಿ ಗಮನಿಸಬಹುದಾಗಿದೆ.
ತೆಲುಗು ಮೂಲದವನೇ?
ತಿಪ್ಪೇಸ್ವಾಮಿ ತೆಲುಗು ಮೂಲದವನೆಂದು ಹೇಳುವುದರಿಂದ ತೆಲುಗಿನಲ್ಲಿ ದನ, ಎತ್ತು, ಕುರಿ, ಮೇಕೆ ಕಾಯುವವರನ್ನು ಆವುಲ್ಲಯ, ಗೊರ್ಲಯ್ಯ, ಮ್ಯಾಕಲಯ್ಯ ಎಂದು ಕರೆಯುತ್ತಾರೆ. ಈ ಹಿನ್ನೆಲೆಯಲ್ಲಿ ನೋಡುವುದಾದರೆ ಪಶು-ಪ್ರಾಣಿಗಳ ಮಂದೆಯಲ್ಲಿದ್ದು, ಅವುಗಳ ಸಗಣಿಯಿಂದ ತಿಪ್ಪೆ ನಿರ್ಮಿಸಿ, ಸಗಣಿ ಕೂಡಿಹಾಕಿ ತಿಪ್ಪೆ ಮಾಡುವ ಕಾಯಕದವನೂ ಆಗಿರಬಹುದೆಂದು ಊಹಿಸಲು ಸಾಧ್ಯವಿದೆ. ಬುಡಕಟ್ಟು ಸಮುದಾಯಕ್ಕೆ ತಿಪ್ಪೇ ಪೂಜನೀಯ ಸಂಕೇತ. ಹೀಗೆ ತಿಪ್ಪೇಸ್ವಾಮಿಗೂ ಬುಡಕಟ್ಟು ಸಂಸ್ಕೃತಿಯ, ಪಶುಪಲನಾ ವೃತ್ತಿಗೂ, ಮತ್ತು ತಿಪ್ಪೆಗೂ ಸಂಬಂಧವಿರುವುದನ್ನು ಗಮನಿಸಬಹುದು.
ಮಮುಕ್ಷು ಮಾರ್ಗದಲ್ಲಿ ನಡೆದ ಅವಧೂತ
ಈತನ ಬಗ್ಗೆ ಇರುವ ಮತ್ತೊಂದು ಸ್ವಾರಸ್ಯಕರವಾದ ಸಂಶೋಧನಾ ಐತಿಹ್ಯವನ್ನು ಸಂಶೋಧನೆ ಮತ್ತು ಜಾನಪದ ಕ್ಷೇತ್ರದಲ್ಲಿ. ತಿಪ್ಪೆಗುಂಡಿಗಳಲ್ಲಿ ಇರುತ್ತಿದ್ದನಂತೆ. ತಿಪ್ಪೇರುದ್ರಸ್ವಾಮಿ ಎನ್ನುವ ಶಿಷ್ಟ ಹೆಸರು ಶೈವೀಕರಣಗೊಂಡಂತೆ ಹೇಳುವಂತಿದೆ. ಎನ್ನುವ ವಿವೇಚನೆ ಅವಧೂತ ಸ್ಥಿತಿಯ ಹಿನ್ನಲೆಯಲ್ಲಿ ಕಂಡು ಬಂದಿದೆ. ಅವಧೂತ ಸರ್ವಸಂಗ ಪರಿತ್ಯಾಗಿಯದ ಸನ್ಯಾಸಿ, ದಿಗಂಬರ ಮುಮುಕ್ಷು ಮಾರ್ಗದಲ್ಲಿ ನಡೆದು ಆತ್ಮನಲ್ಲಿಯೇ ವಿರಮಿಸುವ ಯೋಗಿ, ಸಾಮಾಜಿಕ ನಿಯಮಗಳಾಚೆ ಇರುವವನು.
ದಿಗಂಬರನಾಗಿ (ಅರೆಬರೆ ಬಟ್ಟೆ ಈ ಸ್ಥಿತಿ ಮುಟ್ಟಿದ ಯೋಗಿಯು ಲೋಕಕ್ಕೆ ಮರುಳನಂತೆ ತೋರಿ, ಇಹ ಪರವೆಂಬ ಎರಡರ ಬಯಕೆಯನ್ನು ಬಿಟ್ಟು ನಾಡು ಕಾಡೆನ್ನದೆ ಪರವಶನಾಗಿ ತಿರುಗಿದ್ದಾನೆ. ಇಂಥ ಸ್ಥಿತಿಯಲ್ಲಿ ತಿಪ್ಪೇಸ್ವಾಮಿ ನಾಯಕನಹಟ್ಟಿಗೆ ಬಂದಾಗ ತಿಪ್ಪೇಸ್ವಾಮಿ ನೆಲೆ ನಿಂತ ಪ್ರದೇಶ ಬೆಟ್ಟ ಗುಡ್ಡ ಕಾಡುಗಳಿಂದ ಆವೃತ್ತವಾಗಿತ್ತು. ಈ ಪರಿಸರದಲ್ಲಿ ಬುಡಕಟ್ಟು ಜನರು ಪಶುಪಾಲನೆಗೆ ತೊಡಗಿದ್ದು. ಹಟ್ಟಿಗಳನ್ನು ಕಟ್ಟಿಕೊಂಡು ನೆಲೆಗೊಂಡಿದ್ದು ಗಮನಾರ್ಹ, ಹೀಗೆ ಆರ್ಥಿಕ, ಸಾಮಾಜಿಕ, ಆಭಿವೃದ್ಧಿಯಗುತ್ತಾ ಹೋದಂತೆ ರಾಜಕೀಯವಾಗಿ ಆಳುವ ಪ್ರಕ್ರಿಯೆ ಉಗಮಗೊಂಡಿದೆ. ಈತನ ಸಮಕಾಲೀನ ಸಂದರ್ಭದಲ್ಲಿ ಖದಾಪುರದ ಬೋರೇದೇವರು, ಹಿರೇಹಳ್ಳಿ, ದಡ್ಡಿ ಬೊಮ್ಮಗೊಂಡನಕೆರೆ, ಮತ್ತಿಗಾರಹಳ್ಳಿ, ಕೊಳಗಲ್ಲು ಬೊಮ್ಮ ಮೊದಲಾದ ಪ್ರದೇಶಗಲ್ಲಿ ಸ್ಥಳೀಯ ನಾಯಕವೀರರು ಪ್ರಭುತ್ವ ಹೊಂದಿದ್ದರು. ಇಂಥ ಸಂದರ್ಭದಲ್ಲಿ ತಿಪ್ಪೇಸ್ವಾಮಿ ಲೋಕ ಕಲ್ಯಾಣಕ್ಕೆ ಉದಯಿಸಿದರೆಂದು ಹೇಳಬಹುದು.
ಮೇಲಿನ ಎಲ್ಲಾ ಸಂಶೋಧನಾ ಮಾಹಿತಿಗಳಿಂದ ಬುಡಕಟ್ಟು ಮೂಲದ ತಿಪ್ಪೇಸ್ವಾಮಿ ವೈರಾಗ್ಯ ತಾಳಿ ಅಲೆಮಾರಿಯಾಗಿ ಊರಿಂದ ಊರಿಗೆ ತಿರುಗಾಡುತ್ತಾ ಅಂತಿಮವಾಗಿ ನಾಯಕನ ಹಟ್ಟಿಯಲ್ಲಿ ನೆಲೆನಿಂತಿರಬಹುದು.
ಇವರ ಪೂರ್ವ ಚರಿತ್ರೆ ಅಜ್ಞಾತವಾಗಿರುವುದರಿಂದ ಮೌಖಿಕ ಚರಿತ್ರೆಯಲ್ಲಿ ಸಾಧನೆಗಳ ಹಿಂದಿನ ಅಂಶಗಳನ್ನು ಗ್ರಹಿಸಿ ಹೀಗೆ ಚರ್ಚಿಸಲಾಗಿದೆ ಬುಡಕಟ್ಟು ಜನ ಬೇಟೆ, ಪಶುಪಾಲನೆ, ಕೃಷಿ ವೃತ್ತಿಗಳ ಜೊತೆ ಜೊತೆಗೆ ವ್ಯವಸ್ಥೆಯೊಂದಿಗೆ ಹೋರಾಡುವ ಸಂದರ್ಭಗಳಲ್ಲಿ ಸಾಹಸ ಮೆರೆದಿದ್ದಾರೆ. ಬುಡಕಟ್ಟು ನಾಯಕನ ಸಾಧನೆಗಳು ಸಾಹಸಗಳು ಕಾಡಿನೊಂದಿಗೆ ನಾಡಿನೊಂದಿಗೆ ನಡೆದಿದೆ. ಈ ರೀತಿ ಸಂಘರ್ಷ ಏರ್ಪಟ್ಟಾಗ ದುರಂತಗಳಾಗುವುದು ಸಹಜ, ಇಂಥ ದುರಂತಗಳಿಂದ ಮನಪರಿವರ್ತನೆಯಾಗಿ ವೈರಾಗ್ಯ ತಾಳಲು ಸಾಧ್ಯವಿದೆ. ಹೀಗೆ ವೈರಾಗ್ಯ ತಾಳಿ ತನ್ನವರೆನ್ನೆಲ್ಲಾ ಬಿಟ್ಟು ಒಂಟಿಯಗಿ ಊರೂರು ಅಲೆದಾಡುತ್ತಾರೆ. ಕೊನೆಗೆ ಒಂದು ಊರಲ್ಲಿ ನೆಲೆಗೊಳ್ಳುತ್ತಾರೆ. ತಿಪ್ಪೇಸ್ವಾಮಿಯೂ ಯಾವುದೋ ಒಂದು ಸಂಘರ್ಷಕ್ಕೆ (ಮಾನಸಿಕ ಅಥವಾ ದೈಹಿಕ) ಒಳಗಾಗಿ ಮನಪರಿವರ್ತನೆಯಾಗಿ ವಿರಕ್ತನಾಗಿ, ಹುಚ್ಚನಂತೆ ಅಲೆದಾಡುತ್ತಾ ಇಲ್ಲಿಗೆ ಬಂದಿರಲೂಬಹುದು.
ತಿಪ್ಪಯ್ಯ ಕ್ರಮೇಣ ತಿಪ್ಪೇಸ್ವಾಮಿಯಾಗಿ ಈಗ ತಿಪ್ಪೇರುದ್ರಸ್ವಾಮಿಯಾಗಿದ್ದಾನೆ. ಈತನನ್ನು ಪುರಾಣ ವ್ಯಕ್ತಿಯನ್ನಾಗಿಯೂ ನೋಡಿ, ಪಂಚಗಣಾಧೀಶರಲ್ಲಿ ಒಬ್ಬನೆಂದು ಭಾವಿಸಲಾಗಿದ್ದು. ಈ ಹಿನ್ನೆಲೆಯಲ್ಲಿ ಪುರಾಣವೂ ರಚನೆಯಾಗಿದೆ. ಸಾಧಕರು ಸಾಧಿಸಿದ ಮಹಿಮೆಗಳನ್ನು ಪವಾಡಗಳೆಂದು ಪುರಾಣಗಳಲ್ಲಿ ಚಿತ್ರಿಸಿ ಪೌರಾಣಿಕ ವ್ಯಕ್ತಿಯಂತೆಯೂ ನೋಡಲಾಗಿದೆ.
ನಾಯಕನ ಹಟ್ಟಿಯಲ್ಲಿರುವ ಒಳಮಠ ಈ ಹಿನ್ನೆಲೆಯಲ್ಲಿ ಆರಾಧನೆಗೊಳ್ಳುತ್ತಿದ್ದು, ವೀರಶೈವರೇ ಅಲ್ಲಿನ ಪೂಜಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಅಂತಿಮವಾಗಿ ತಿಪ್ಪೇಸ್ವಾಮಿ ಬಗ್ಗೆ ಯಾವುದೇ ಲಿಖಿತ ಮಾಹಿತಿಗಳಿಲ್ಲ. ಅದರೆ ಜನಪದರಲ್ಲಿ ಅವರ ಬದುಕಲ್ಲಿ ಇಂದಿಗೂ ಸಮೃದ್ಧಿ ಮಾಹಿತಿ ಶೋಧಿಸಿದಷ್ಟು ದೊರೆಯುತ್ತದೆ.
ತಿಪ್ಪೇಸ್ವಾಮಿ ನಾಯಕನಹಟ್ಟಿಗೆ ಬಂದಾಗ ಮಾರಿದೇವತೆ ಮಾರಮ್ಮನ ಗುಡಿಯಲ್ಲಿರುತ್ತಾನೆ. ಅಲ್ಲಿಯೆ ವಾಸ, ತನ್ನಲ್ಲಿದ್ದ ಬೆತ್ತದ ಕೋಲು ಮತ್ತು ಜೋಳಿಗೆಯನ್ನು ಗೋಡೆಗೆ ನೇತು ಹಾಕಲು, ಅವುಗಳು ಇಡೀ ದೇವಸ್ಥಾನದ ತುಂಬಾ ಹರಡಿ ಕೊಂಡವಂತೆ, ಇದನ್ನು ನೋಡಿದ ದೇವತೆಯೇ ಬೇರೆಡೆ ನೆಲೆಸಿದಳೆಂದೂ, ಆಕೆಯ ಒಡ್ನಾಳು ಮಾರಮ್ಮ ಎಂಬುದು ಜನಪದರ ಉಲ್ಲೇಖ. ಅದರ ಪ್ರತೀಕವಾಗಿಯೆ ಈಗಲೂ ದೇವಿಯ ಸಿಡಿ ಆಡುವ ಸಂಪ್ರದಾಯವಿದೆ ಎನ್ನುತ್ತಾರೆ.
ಸಹಸ್ರಾರು ಭಕ್ತರ ನಡುವೆ ದೊಡ್ಡ ಈ ಜಾತ್ರೆ ಇಂದು ಅದ್ದೂರಿಯಾಗಿ ನಡೆಯುತ್ತಿದೆ…
ಲೇಖನ: ಎಸ್. ಸುರೇಶ ಬೆಳಗೆರೆ
ಚಿತ್ರದುರ್ಗ
Discussion about this post