ಉಡುಪಿ: ಉಡುಪಿ ಶ್ರೀಕೃಷ್ಣ ಮಠದಲ್ಲಿ ಪ್ರಸ್ತುತ ಪರ್ಯಾಯ ಪೀಠದಲ್ಲಿರುವ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮಿಗಳು ತಮ್ಮ ಉತ್ತರಾಧಿಕಾರಿಯಾಗಿ ಅಂದರೆ ಶ್ರೀಮಠದ 31ನೆಯ ಯತಿಯನ್ನಾಗಿ ತಮ್ಮ ಶಿಷ್ಯ ಶೈಲೇಶ್ ಉಪಾಧ್ಯಾಯ ಎಂಬ ವಟುವನ್ನು ಆಯ್ಕೆ ಮಾಡಿದ್ದಾರೆ.
ಪಲಿಮಾರು ಮೂಲಮಠದ ಗುರುಕುಲದಲ್ಲಿ ಕಳೆದ ಮೂರು ವರ್ಷಗಳಿಂದ ವ್ಯಾಸಂಗ ಮಾಡುತ್ತಿರುವ ಶೈಲೇಶ್ ಆಚಾರ್ಯ ಪಲಿಮಾರು ಮಠದ ಉತ್ತರಾಧಿಕಾರಿಯಾಗಿ ಆಯ್ಕೆಯಾಗಿದ್ದಾರೆ.

ಶೈಲೇಶ್ ಉಪಾಧ್ಯಾಯರ ಮನೆಯವರು ಅನೇಕ ವರ್ಷಗಳಿಂದ ಹಲವು ದೇವಸ್ಥಾನಗಳಲ್ಲಿ ತಂತ್ರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶೈಲೇಶ್ ಉಪಾಧ್ಯಾಯ ಅವರು ಸುರೇಂದ್ರ ಉಪಾಧ್ಯಾಯ ಮತ್ತು ಲಕ್ಷ್ಮೀ ದಂಪತಿಗಳ ಪುತ್ರ.
ಶೈಲೇಶ್ ಉಪಾಧ್ಯಾಯ ಎಸ್’ಎಸ್’ಎಲ್’ಸಿ ವರೆಗೂ ಲೌಖಿಕ ವಿದ್ಯಾಭ್ಯಾಸ ಪಡೆದಿದ್ದಾರೆ. ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ವಿದ್ಯೋದಯ ಶಾಲೆಯಲ್ಲಿ ಪೂರ್ಣಗೊಳಿಸಿ ಪ್ರೌಢ ಶಿಕ್ಷಣವನ್ನು ಸಂಸ್ಕೃತ ವಿದ್ಯಾಲಯದಲ್ಲಿ ನಡೆಸಿದ್ದಾರೆ.

ಅಧ್ಯಾತ್ಮದತ್ತ ಒಲವು ಹೊಂದಿದ ಶೈಲೇಶ್ ಕಳೆದ ಮೂರು ವರ್ಷಗಳಿಂದ ಫಲಿಮಾರು ಮೂಲಮಠದಲ್ಲಿ ವ್ಯಾಕರಣ ವೇದ ಶಾಸ್ತ್ರಗಳ ಅಧ್ಯಯನ ಮಾಡುತ್ತಿದ್ದಾರೆ. ಶೈಲೇಶ್ ಸಹೋದರ ಆಯುರ್ವೇದ ವಿಭಾಗದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾರೆ.
ಉಡುಪಿಯ ಅಷ್ಠಮಠಗಳಲ್ಲಿ ಒಂದಾದ ಪಲಿಮಾರು ಮಠದ ಹಿರಿಯ ಸ್ವಾಮಿಜಿ ಶಿಷ್ಯ ಸ್ವೀಕಾರಕ್ಕೆ ನಿರ್ಧರಿಸಿದ್ದಾರೆ. ಶಿಬರೂರಿನಲ್ಲಿ 1956ರಲ್ಲಿ ಜನಿಸಿದ ಪಲಿಮಾರು ಸ್ವಾಮೀಜಿಯವರಿಗೆ ಪ್ರಸಕ್ತ 63 ವರ್ಷವಾಗಿದ್ದು, ತಮ್ಮ ಎರಡನೇ ಪರ್ಯಾಯ ಅವಧಿಯಲ್ಲಿ ಶಿಷ್ಯ ಸ್ವೀಕಾರ ಮಾಡುತ್ತಿದ್ದಾರೆ. 1974ರಲ್ಲಿ ವಿದ್ಯಾಮಾನ್ಯ ತೀರ್ಥರ ಉತ್ತರಾಧಿಕಾರಿಯಾಗಿ ಸನ್ಯಾಸ ಸ್ವೀಕರಿಸಿದ ಶ್ರೀವಿದ್ಯಾಧೀಶ ಸ್ವಾಮೀಜಿಯವರು ಅನೇಕ ಜನಪರ ಯೋಜನೆಗಳ ಮೂಲಕ ಹೆಸರು ಮಾಡಿದ್ದಾರೆ.

ಉತ್ತರಾಧಿಕಾರಿ ಆಯ್ಕೆ ವಿಚಾರದಲ್ಲಿ ಮಾತನಾಡಿರುವ ಶ್ರೀಗಳು, ಶೈಲೇಶ್ ಆಯ್ಕೆಯಾಗುವ ಮುನ್ನ 3 ಜ್ಯೋತಿಷ್ಯರ ಅಭಿಪ್ರಾಯ ಸಂಗ್ರಹಿಸಿ ಈ ನಿರ್ಧಾರ ಕೈಗೊಂದ್ದೇವೆ. ತಮ್ಮ ಮಗನನ್ನು ಸನ್ಯಾಸಿಯಾಗಲು ಒಪ್ಪಿಗೆ ಸೂಚಿಸಿದ ಶೈಲೇಶ್ ಉಪಾಧ್ಯಾಯರ ತ್ಯಾಗ ದೇಶಕ್ಕೆ ಸೇರಿದ ಸೈನಿಕನ ತ್ಯಾಗದಂತೆ ದೊಡ್ಡದು ಎಂದರು.

















