ಹಾಸನ: ಅವರು ಆ ಹುದ್ದೆಗೆ ಅನರ್ಹರು. ಯಾವುದೋ ಪುಟಗೋಸಿ ಐಟಿ ಚೀಫ್ ಇಟ್ಟುಕೊಂಡು ಹೆದರಿಸಿದರು ದೇವೇಗೌಡರ ಕುಟುಂಬ ಹೆದರುವುದಿಲ್ಲ ಎಂದು ಸಚಿವ ಎಚ್.ಡಿ. ರೇವಣ್ಣ ದಾರ್ಷ್ಟ್ಯದ ಮಾತುಗಳನ್ನಾಡಿದ್ದಾರೆ.
ಜೆಡಿಎಸ್ ಮುಖಂಡರುಗಳ ನಿವಾಸದ ಮೇಲೆ ಐಟಿ ದಾಳಿ ನಡೆದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಕರ್ನಾಟಕದ ಐಟಿ ಇಲಾಖೆ ಮುಖ್ಯಸ್ಥ ಬಾಲಕೃಷ್ಣ ಬಿಜೆಪಿಯ ಏಜೆಂಟರಂತೆ ಕೆಲಸ ಮಾಡುತ್ತಿದ್ದಾರೆ. ಅವರು ಆ ಹುದ್ದೆಗೆ ಅನರ್ಹರು. ಯಾವುದೋ ಪುಟಗೋಸಿ ಐಟಿ ಚೀಫ್ ಇಟ್ಟುಕೊಂಡು ಹೆದರಿಸಲು ಹೊರಟರೆ ದೇವೇಗೌಡರ ಕುಟುಂಬ ಅಂತದ್ದಕ್ಕೆಲ್ಲ ಹೆದರುವುದಿಲ್ಲ. ಇವೆಲ್ಲ ನಮಗೆ ಹೊಸದೇನು ಅಲ್ಲ, ಇಷ್ಟು ವರ್ಷ ಇಂತವುಗಳನ್ನೆಲ್ಲ ಎದುರಿಸಿಕೊಂಡು ಬಂದಿದ್ದೇವೆ ಎಂದಿದ್ದಾರೆ.
ದೇವೇಗೌಡರ ಕುಟುಂಬ ಇಂತಹ ಹಲವು ಐಟಿ, ಇಡಿ ಮತ್ತು ಸಿಬಿಐ ದಾಳಿಗಳನ್ನು ಎದುರಿಸಿದೆ. ಪ್ರಧಾನಿ ಮೋದಿಯವರು ಇಂತಹ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ನಾಳೆ ದಿನ ಐಟಿ ಮುಖ್ಯಸ್ಥನನ್ನು ಬಿಜೆಪಿ ಸದಸ್ಯನಾಗಿ ಮಾಡಿ ಸಂಸತ್ತು ಸದಸ್ಯನಾಗಿ ಮಾಡಿದರೆ ಅದರಲ್ಲಿ ಆಶ್ಚರ್ಯವೇನೂ ಇಲ್ಲ ಎಂದು ರೇವಣ್ಣ ವ್ಯಂಗ್ಯವಾಡಿದ್ದಾರೆ.
ಇನ್ನು, ಇದಕ್ಕೆ ಧ್ವನಿ ಗೂಡಿಸಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಐಟಿ ಅಧಿಕಾರಿ ಬಾಲಕೃಷ್ಣ ಮೂಲಕ ಮೋದಿ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಸಂವಿಧಾನಿಕ ಹುದ್ದೆಯ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಇಂತಹ ದಾಳಿಗೆ ಜೆಡಿಎಸ್ ಹೆದರಲ್ಲ ಎಂದು ಕಿಡಿಕಾರಿದ್ದಾರೆ.
Discussion about this post