‘ಮನಸಿದ್ದರೆ ಮಾರ್ಗ’ ಅಂತಾರೆ ಎಲ್ಲರೂ. ಈ ಮಾತು ಯಾಕೆ ಹೇಳುತ್ತಿದ್ದೇನೆ ಎಂದರೆ, ಸ್ವಯಂ ಉತ್ತೇಜನೆ, ಸ್ಪಷ್ಟ ಗುರಿ ಅದಕ್ಕೆ ತಕ್ಕಂತೆ ಕಾರ್ಯ ಯೋಜನೆ ಮತ್ತು ಪರಿಶ್ರಮ ಇದ್ದರೆ ಏನಾದರೂ ಸಾಧಿಸಬಹುದು ಎಂಬುದಕ್ಕೆ ಕರಾವಳಿಯ ಬೇಬಿ ಯಶಸ್ವಿ ಉತ್ತಮ ನಿದರ್ಶನ.
ಸಾಮಾನ್ಯವಾಗಿ ಒಂದು ಮಾತಿದೆ: ಹಿಂದೆ ಗುರು ಮುಂದೆ ಗುರಿ ಇದ್ದರೆ ಏನನ್ನು ಬೇಕಾದರೆ ಸಾಧನೆ ಮಾಡಿ ತೋರಿಸಬಹುದು ಎಂದು. ಆದರೆ ಇತ್ತೀಚಿಗೆ ಈ ಮಾತು ಅರ್ಥ ಕಳೆದುಕೊಳ್ತಾ ಇದೆ ಅನ್ನಿಸ್ತಿದೆ. ಇದಕ್ಕೆ ಕಾರಣ ಸಾಮಾಜಿಕ ಜಾಲತಾಣಗಳು ಹೌದು ಇತ್ತೀಚಿನ ಯುವಕ ಯುವತಿಯರು ಸಾಮಾಜಿಕ ಜಾಲತಾಣಗಳನ್ನು ತಮ್ಮ ಸಾಧನೆಯ ಪಯಣಕ್ಕೆ ಒಂದು ಹೆಜ್ಜೆಯ ರೀತಿ ಬಳಸಿಕೊಂಡು ತಮ್ಮ ಪ್ರತಿಭೆಯನ್ನು ಜನರ ಮುಂದೆ ತೆರೆದಿಡುವ ಯತ್ನ ಮಾಡಿ ಯಾರ ನೆರವು ಇಲ್ಲದೆ ಸ್ವಂತ ಬಲದಿಂದ ತಮ್ಮ ಹೆಸರು ಮಾಡುವ ಕೆಲಸ ಮಾಡುತ್ತಾರೆ. ಅಂಥವರ ಸಾಲಿಗೆ ಸೇರುವ ಬಾಲ ಪ್ರೆತಿಭೆಯೇ ಬೇಬಿ ಯಶಸ್ವಿ.
ಹತ್ತನೆ ವಯಸ್ಸಿನ ಈ ಬಾಲೆಯ ಸಾಧನೆಯ ಪಟ್ಟಿ ಬಹುದೊಡ್ಡದು. ತನ್ನ ಎರಡನೆಯ ವರ್ಷಕ್ಕೆ ನೃತ್ಯ ಪ್ರದರ್ಶನ ನೀಡಲಾರಂಭಿಸಿದ ಈ ಬಾಲೆ, ನಂತರ ಬಳಿಕ ತಾಯಿಯ ಮಾರ್ಗದರ್ಶನದಲ್ಲಿ ನಟನೆಯ ಅಭ್ಯಾಸ ಮುಂದುವರೆಸಿದಳು.
ಎಲ್’ಕೆಜಿ ಕಲಿಯುವ ಹೊತ್ತಿನಲ್ಲಿ ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರ ಬೋಸ್’ರ ಮತ್ತು ಯುಕೆಜಿ ಕಲಿಯುವಾಗ ಭಗತ್ ಸಿಂಗ್’ರ ವೇಷ ಧರಿಸಿ ಕಲಾಭಿಮಾನಿಗಳ ಮೆಚ್ಚುಗೆ ಪಡೆದಳು.
ಕೆಲವು ಜಾಹೀರಾತುಗಳಲ್ಲಿ ಸಹ ರಾಯಭಾರಿಯಾಗಿದ್ದು ಜನರಿಗೆ ಹತ್ತಿರವಾಗಿದ್ದಳು. ಬಳಿಕ ಕಲರ್ಸ್ ಸೂಪರ್ ಚಾನಲ್’ನ ಬಿಗ್’ಬಾಸ್ ಮಜಾ ಟಾಕೀಸ್ ಮತ್ತು ಝೀ ಕನ್ನಡದ ಡಿಕೆಡಿ ಶೋಗಳಲ್ಲಿ ಸಹಾಯಕ ನೃತ್ಯಗಾರ್ತಿಯಾಗಿ ಪ್ರಶಂಸೆ ಪಡೆದಿದ್ದಾಳೆ.
ಅದರ ಜೊತೆಗೆ 250ಕ್ಕೂ ಹೆಚ್ಚು ವೇದಿಕೆ ಪ್ರದರ್ಶನ ನೀಡಿದ್ದು ಮಾತ್ರವಲ್ಲದೆ ಇದರೊಂದಿಗೆ 2 ಕಿರುಚಿತ್ರಗಳಲ್ಲಿ ಸಹ ನಟನೆ ಮಾಡಿದ್ದಾಳೆ. ಮತ್ತು ಕಲರ್ಸ್ ಸೂಪರ್ ಚಾನೆಲ್’ನ ಶಾಂತಂಪಾಪಂ ಮತ್ತು ಇವಳೇ ವೀಣಾಪಾಣಿ ಎಂಬ ಎರಡು ಧಾರಾವಾಹಿಗಳಲ್ಲಿ ಸಹ ನಟಿಸಿದ್ದಳು.
ತನ್ನ ನಟನೆಯ ಸಾಧನೆಗೆ ಡಬ್ ಮ್ಯಾಶ್ ಆಪ್ ಅನ್ನು ಸಮರ್ಪಕವಾಗಿ ಬಳಸಿದ ಈಕೆಯ ಪರಿಶ್ರಮಕ್ಕೆ ಪ್ರತಿಫಲ ಎಂಬಂತೆ ದಿಗ್ವಿಜಯ ಚಾನೆಲ್ ನಡೆಸಿದ ಡಬ್ ಮ್ಯಾಶ್ ಚಾಲೆಂಜ್ ಎಂಬ ರಿಯಾಲಿಟಿ ಶೋನಲ್ಲಿ ಅವಕಾಶ ಕೊಟ್ಟರು. ಅದರಲ್ಲಿ ಅಂತಿಮ ಸುತ್ತಿಗೆ ತಲುಪಿ ವಿ. ಮನೋಹರ್ ಅವರಿಂದ ಮೆಚ್ಚುಗೆ ಪಡೆದಳು. ಅಲ್ಲದೆ ಕರವೇಯವರು ನಡೆಸಿದ ರಾಜ್ಯ ಮಟ್ಟದ ಡಬ್ ಮ್ಯಾಶ್ ಸ್ಪರ್ಧೆಯಲ್ಲಿ ನಾಗೇಂದ್ರ ಪ್ರಸಾದ್ ಅವರಿಂದ ಮೊದಲ ಸ್ಥಾನ ಪಡೆದಳು.
ಬೇಬಿ ಯಶ್ವಸಿ ಪ್ರತಿಭೆಯನ್ನು ಗಮನಿಸಿದ ಹಲವು ಸಂಸ್ಥೆಗಳು ಈಕೆಯನ್ನು ಪ್ರೀತಿ ಆದರದಿಂದ ಗೌರವಿಸಿವೆ. ಹಾಗೆ ನಮ್ಮ ಚಂದನ ವಾಹಿನಿಯ ಹಾಸ್ಯ ಭರಿತ ಧಾರವಾಹಿ ಸೂಪರ್ ಅತ್ತೆ ಪಾಪರ್ ಅಳಿಯ ಇದರಲ್ಲಿ ನಟಿಸುವ ಮೂಲಕ ಕರುನಾಡ ಜನತೆಯ ಮನಗೆದ್ದಳು.
ತಾಯಿಯೆ ಪ್ರತಿಯೊಬ್ಬರ ಬಾಳಿನ ಗುರು ಎಂಬ ಮಾತು ಈಕೆಯ ಬದುಕಿನಲ್ಲಿ ನಿಜವಾಯಿತು. ಯಾವುದೇ ಗುರುವಿಲ್ಲದಿದ್ದರೂ ಸ್ವಂತ ಬಲದಿಂದ ಪ್ರತಿಭೆಯಿಂದ ತಾಯಿಯ ಶ್ರಮದಿಂದ ಮುಂದೆ ಬಂದ ಈಕೆಯ ಪ್ರತಿಭೆಗೆ ನಮ್ಮದೊಂದು ನಮನ.
ಜನ ಹೆಸರನ್ನು ಮರೆಯಬಹುದು. ಆದರೆ ಬೇಬಿ ಯಶಸ್ವಿ ಬೆಳಗಿಸಿದ ಕಲಾ ಜ್ಯೋತಿ ಮಾತ್ರ ನೋಡಿದವರ ಮನದಂಗಳದಲ್ಲಿ ಅಚ್ಚಳಿಯದೆ ಇರುತ್ತದೆ. ಮನಸ್ಸಿದ್ದರೆ ಮಾರ್ಗ ಅಲ್ಲವೇ?
ಬಡವ ಶ್ರೀಮಂತ ಎನ್ನದೆ ನಿಜವಾದ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ವಿಶಾಲವಾದ ಹೃದಯ ಶ್ರೀಮಂತಿಕೆ ಇರುವ ನಮ್ಮ ಕನ್ನಡಿಗರ ಆಶೀರ್ವಾದ ಪಡೆದ ಬೇಬಿ ಯಶ್ವಸಿ ನಿಜಕ್ಕೂ ಧನ್ಯ.
ಲೇಖನ/ಚಿತ್ರಕೃಪೆ/ವೀಡಿಯೋ: ಸತೀಶ ಶೆಟ್ಟಿ ಚೇರ್ಕಾಡಿ ದೊಡ್ಡಮನೆ
ಸಹಕಾರ: ರೋಹನ್ ಪಿಂಟೋ ಗೇರುಸೊಪ್ಪ,
ಕಿಶೋರ್ ರಾವ್ ಕೆ ಮೂಡುಬಿದಿರೆ ಕಾಶಿಪಟ್ಟಣ
ಶಶಿಧರ್ ಗುಜ್ಜಾಡಿ
Discussion about this post