ನವದೆಹಲಿ: ಪುಲ್ವಾಮಾದಲ್ಲಿ ನಡೆದ ದಾಳಿಯ ನೆನಪು ಇನ್ನೂ ಹಸಿಯಾಗಿರುವ ಬೆನ್ನಲ್ಲೇ, ಲೋಕಸಭಾ ಚುನಾವಣೆಯ ವೇಳೆ ಜಮ್ಮು ಕಾಶ್ಮೀರದಲ್ಲಿ ಭಾರೀ ಪ್ರಮಾಣದಲ್ಲಿ ದಾಳಿ ನಡೆಸಲು ಉಗ್ರ ಸಂಘಟನೆಗಳು ಸಂಚು ರೂಪಿಸಿವೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.
ಈ ಕುರಿತಂತೆ ಗುಪ್ತಚರ ಇಲಾಖೆ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿದ್ದು, ಲಷ್ಕರ್ ಎ ತೊಯ್ಬಾ ಹಾಗೂ ಜೈಷ್ ಎ ಮೊಹಮದ್ ಉಗ್ರರ ಸಂಘಟನೆಗಳ ಮೂಲಕ ಪಾಕಿಸ್ಥಾನದ ಐಎಸ್’ಐ ಮೂರು ತಂಡಗಳನ್ನು ರಚಿಸಿದ್ದು, ಜಮ್ಮು ಕಾಶ್ಮೀರದಲ್ಲಿ ಭಾರೀ ಪ್ರಮಾಣದ ದಾಳಿಗೆ ಸಿದ್ದತೆ ನಡೆಸಿದೆ ಎಂದು ವರದಿಯಾಗಿದೆ.
ಕಣಿವೆ ರಾಜ್ಯದಲ್ಲಿನ ಮತಕೇಂದ್ರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿ, ಭಾರೀ ಪ್ರಮಾಣದಲ್ಲಿ ಪ್ರಾಣಹಾನಿ ಮಾಡಲು ಐಎಸ್‘ಐ ಸಂಚು ರೂಪಿಸಿದ್ದು, ಉಗ್ರರ ತಂಡ ಈಗಾಗಲೇ ಗಡಿ ಭಾಗದಲ್ಲಿ ಸಂಚರಿಸುತ್ತಿದೆ. ಹೀಗಾಗಿ, ಗಡಿಯಲ್ಲಿ ಭದ್ರತೆಯನ್ನು ಹೆಚ್ಚಿಸಬೇಕು ಎಂದು ಎಚ್ಚರಿಸಿದೆ.
ಜಮ್ಮು ಕಾಶ್ಮೀರದಲ್ಲಿ ಎಪ್ರಿಲ್ 11 ರಿಂದ ಮೇ 6ರವರೆಗೂ ಒಟ್ಟು ಐದು ಹಂತದಲ್ಲಿ ಮತದಾನ ನಡೆಯಲಿದ್ದು, ಮೇ 23ರಂದು ಮತಎಣಿಕೆ ನಡೆಯಲಿದೆ.
Discussion about this post