ಬೆಂಗಳೂರು: ಲೋಕಕಲ್ಯಾಣಕ್ಕಾಗಿ ಕಳೆದ ವರ್ಷದ ಸಂಕಲ್ಪಿಸಿದ್ದ ಪ್ರಯುಕ್ತ ವಿಷ್ಣು ಸಹಸ್ರನಾಮ ಪಾರಾಯಣ ಯಜ್ಞದ ಸಮರ್ಪಣಾ ಕಾರ್ಯಕ್ರಮವನ್ನು ಎಪ್ರಿಲ್ 6ರ ಯುಗಾದಿಯಂದು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ.
2018ರ ವಿಜಯದಶಮಿಯಂದು ಬೆಂಗಳೂರಿನ ಪುತ್ತಿಗೆಮಠದ ಗೋವರ್ಧನಕ್ಷೇತ್ರದಲ್ಲಿ ಕೋಟಿ ಸಂಖ್ಯೆಯಲ್ಲಿ ವಿಷ್ಣುಸಹಸ್ರಢನಾಮ ಪಾರಾಯಣದ ಸಂಕಲ್ಪವನ್ನು ಮಾಡಲಾಗಿತ್ತು. ಅದನ್ನು ಎಪ್ರಿಲ್ 6ರ ಯುಗಾದಿಯಂದು ಭಗವಂತನಿಗೆ ನಿವೇದಿಸಲು ಸಿದ್ದತೆ ನಡೆದಿದೆ.
ತೌಳವ ಮಾಧ್ವ ಒಕ್ಕೂಟದ ಸದಸ್ಯರೊಂದಿಗೆ ನಾಡಿನಾದ್ಯಂತ ಹಲವು ಕ್ಷೇತ್ರಗಳಲ್ಲಿ ಮಠ-ಮಂದಿರಗಳಲ್ಲಿ ಮನೆ-ಮನೆಗಳಲ್ಲಿ ಸಾವಿರಾರು ಜನ ಸಹಸ್ರನಾಮದ ಪಾರಾಯಣವನ್ನು ಯಥಾಶಕ್ತಿ ನಡೆಸುತ್ತಿದ್ದಾರೆ. ಇದರ ಜೊತೆಗೆ ಲಕ್ಷಸಂಖ್ಯೆಯ ಮಂಗಳಾಷ್ಟಕ ಮತ್ತು ನರಸಿಂಹ ಅಷ್ಟೋತ್ತರ ಶತನಾಮ ಸ್ತೋತ್ರಗಳ ಪಾರಾಯಣವನ್ನೂ ಮಾಡುತ್ತಿದ್ದಾರೆ. ಅನೇಕ ಗುರುಕುಲಗಳಲ್ಲಿ ವಿದ್ಯಾರ್ಥಿಗಳು ಮತ್ತು ಬೇರೆಬೇರೆ ಭಾಗದ ಋತ್ವಿಜರು ಲಕ್ಷಸಂಖ್ಯೆಯ ರಾಷ್ಟ್ರಸೂಕ್ತದ ಜಪವನ್ನು ನಡೆಸುತ್ತಿದ್ದಾರೆ.
ಇವೆಲ್ಲವುಗಳನ್ನು ಮಹಾಪರ್ವವೆನಿಸಿದ ಯುಗಾದಿಯ ದಿನದಂದು ರಾಷ್ಟ್ರಪುರುಷನಾದ ನಮ್ಮೆಲ್ಲರ ಕುಲಪತಿಯಾದ ರಾಜರಾಜೇಶ್ವರನೆನಿಸಿದ ಶ್ರೀಮಹಾವಿಷ್ಣುವಿನ ಚರಣಕಮಲಕ್ಕೆ ಅರ್ಪಿಸುವ ಪವಿತ್ರ ಸಮಾರಂಭ. ಇಂತಹ ಅಪರೂಪದ ಮಹಾಸಮಾರಂಭಕ್ಕೆ ತಮಗೆಲ್ಲರಿಗೂ ಆದರದ ಸ್ವಾಗತವನ್ನು ಶ್ರೀಮಠ ಕೋರಿದೆ.
ವಿಷ್ಣುಸಹಸ್ರನಾಮದ ಮಹತ್ವ:
ಕೃಷ್ಣನ ಮುಂದೆ ಭೀಷ್ಮರು ಪಾಂಡವರಿಗಾಗಿ ಹೇಳಿದ ಸ್ತೋತ್ರರಾಜ ಈ ವಿಷ್ಣುಸಹಸ್ರನಾಮ. ಕಲಿಕಾಲದಲ್ಲಿ ಇದು ಸರ್ವಾಭೀಷ್ಟ ಸಿದ್ಧಿಪ್ರದ. ದೈವಿಕ ತಾಪ, ದೈಶಿಕ ತಾಪ ಮತ್ತು ದೈಹಿಕ ತಾಪಗಳೆಂಬ ಮಹಾ ವಿಪತ್ತುಗಳನ್ನೆಲ್ಲ ಕಿತ್ತೊಗೆಯುವ ಏಕ ಮೂಲಿಕಾಪ್ರಯೋಗ ಈ ಸಹಸ್ರನಾಮಪಾರಾಯಣ. ಋಷಿಭಿಃ ಪರಿಗೀತಾನಿ ಸಾವಿರದ ಗುಣಗಳ ಸಾವಿರ ರೂಪಗಳ ಚಿಂತನೆಗಾಗಿ ಋಷಿಗಳು ಕಂಡುಕೊಂಡ ಸ್ತೋತ್ರಮಂತ್ರ.
ದುರ್ಗಾಣಿ ಅತಿತರತ್ಯಾಶು ಎಂತಹ ಕಷ್ಟಗಳಿದ್ದರೂ ಬೇಗನೆ ಪರಿಹರಿಸುತ್ತದೆ. ರೋಗಾರ್ತೋ ಮುಚ್ಯತೇ ರೋಗಾತ್ ಮಾರಣಾಂತಿಕ ರೋಗಗಳನ್ನು ಪರಿಹರಿಸುತ್ತದೆ. ಸಕಲ ಪಾಪಗಳನ್ನು ಕಳೆದು ನೆಮ್ಮದಿಯನ್ನು ನೀಡುತ್ತದೆ. ಬದ್ಧೋ ಮುಚ್ಯೇತ ಬಂಧನಾತ್ ಶತ್ರುಗಳ ಸೆರೆಯಿಂದ ಬಿಡಿಸುತ್ತದೆ. ಪಿತೃಶಾಪ, ಗ್ರಹದೋಷ, ಕೃತ್ಯಪ್ರಯೋಗವೇ ಮೊದಲಾದ ಹಲವು ಬಗೆಯ ದೋಷಗಳನ್ನು ಪರಿಹರಿಸುತ್ತದೆ. ನಮ್ಮ ಮನದ ಸಕಲ ಇಷ್ಟಾರ್ಥಗಳನ್ನು ಈಡೇರಿಸುತ್ತದೆ.
ಜಾತಿ-ಮತ-ಲಿಂಗಬೇಧಗಳನ್ನು ಮರೆತು ಭಕ್ತರಾದ ಎಲ್ಲರಿಗೂ ಫಲಪ್ರದವೆನಿಸಿಕೊಂಡ ಸ್ತೋತ್ರವಿದು. ಈ ಸ್ತೋತ್ರದ ನಾಮಗಳ ಮೂಲಕ ಅಗ್ನಿಮುಖದಲ್ಲಿ ಹವಿದ್ರವ್ಯ ಸಮರ್ಪಣೆ ಸಹಸ್ರಕಲಶಗಳಲ್ಲಿ ಅಭಿಮಂತ್ರಣ, ತರ್ಪಣ, ನಮಸ್ಕಾರ, ಅರ್ಚನೆ, ಘೃತದೀಪಾರಾಧನೆಯು ಇನ್ನೂ ವಿಶೇಷ ಫಲವನ್ನು ನೀಡುತ್ತದೆ.
ರಾಷ್ಟ್ರದ ರಕ್ಷಣೆಗಾಗಿ ಇರುವ ರಾಷ್ಟ್ರಸೂಕ್ತದ ಪಾರಾಯಣ ನಮ್ಮ ದೇಶದ ರಾಜಕೀಯ ಸುವ್ಯವಸ್ಥೆಗೆ ಕಾರಣವಾಗುತ್ತದೆ. ಬದುಕಿನ ಸಮಗ್ರತೆಯನ್ನು ಸಾರುವ ಮಂಗಲಾಷ್ಟಕವು ದೇವತಾಕುಟುಂಬ, ಋಷಿಗಳು ಮತ್ತು ರಾಜರು ನಮ್ಮ ರಾಷ್ಟ್ರದ ಹೆಮ್ಮೆ ಎಂದು ಸಾರುತ್ತದೆ. ನದಿ-ಪರ್ವತ- ಅರಣ್ಯ-ಪಶುಸಂಪತ್ತು ರಾಷ್ಟ್ರದ ಅವಿಭಾಜ್ಯ ಅಂಗಗಳು; ಇವುಗಳ ರಕ್ಷಣೆ ನಮ್ಮ ಕರ್ತವ್ಯ ಎಂಬುದನ್ನು ತಿಳಿಸುತ್ತದೆ. ನರಸಿಂಹಾಷ್ಟೋತ್ತರ ಶತನಾಮ ಪಾರಾಯಣವು ಋಣ, ಬಂಧನ, ನಿರುದ್ಯೋಗ, ಶತ್ರುಪೀಡೆ ಮೊದಲಾದ ಸಮಸ್ಯೆಗಳನ್ನು ದೂರೀಕರಿಸಿ ನೆಮ್ಮದಿಯ ಬದುಕನ್ನು ದಯಪಾಲಿಸುತ್ತದೆ.
ಶಸ್ತ್ರೇಣ ರಕ್ಷಿತೇ ರಾಷ್ಟ್ರೇ ಶಾಸ್ತ್ರಚರ್ಚಾ ಪ್ರವರ್ತತೇ’ ಎಲ್ಲರೂ ತಮ್ಮ ಮಿತಿಯ ಶಸ್ತ್ರವನ್ನು ಅರಿತು ಪ್ರಯೋಗಿಸಿ ರಾಷ್ಟ್ರವನ್ನು ರಕ್ಷಿಸಿಕೊಂಡರೆ ಮಾತ್ರ ಮುಂದೆ ಶಾಸ್ತ್ರ ಚರ್ಚೆಯ ಕಲಾವಂತಿಕೆ ಉಳಿಯುತ್ತದೆ. ಸಹಾಯ ನೀಡಲು ಚಾಚುವ ಕೈಗೆ ಬೇಡುವ ಹೃದಯದ ಭಾವಬಲ ಬೇಕು. ಸಮೂಹದ ಪ್ರಾರ್ಥನೆಗೆ ನೂರ್ಮಡಿ ಬಲವಿದೆ. ಋಷಿಗಳು ಕೊಟ್ಟ ಸ್ತೋತ್ರ ಮಂತ್ರಗಳನ್ನು ಸದ್ಬಳಕೆ ಆಗುವಂತೆ ಅರ್ಥ ತಿಳಿದು ಪಠಿಸುವುದು ನಮ್ಮ ಸಂಸ್ಕೃತಿಯ ಧರ್ಮದ ರಕ್ಷಣೆಗೆ ಕಾರಣವಾಗುತ್ತದೆ. ಈ ಪ್ರಾರ್ಥನೆ ನಮ್ಮೆಲ್ಲರಿಗಾಗಿ, ಮನುಕುಲದ ಒಳಿತಿಗಾಗಿ. ಭಾರತವು ವಿಶ್ವಗುರುವಿಗಾಗಿ ಹಾಕುವ ಹೆಜ್ಜೆಗಾಗಿ. ಇದು ಸಮಾಜದ ಸಮಷ್ಟಿಗಾಗಿ ಸಾಮೂಹಿಕ ಸಮಾರಂಭ. ಶ್ರೀಮಹಾವಿಷ್ಣುವಿನ ಆದೇಶದಂತೆ ಚತುರ್ಮುಖಬ್ರಹ್ಮ ಸೃಷ್ಟಿಪ್ರಕ್ರಿಯೆಯನ್ನು ಪ್ರಾರಂಭಿಸಿದ ಪುಣ್ಯದಿನ. ಜ್ಯೋತಿಷ್ಯ ಶಾಸ್ತ್ರ ಧರ್ಮಶಾಸ್ತ್ರಗಳು ವರ್ಣಿಸಿರುವಂತೆ ದಿನಪೂರ್ತಿ ಅನಂತ ಪುಣ್ಯವನ್ನು ನೀಡುವ ಮಹಾದಿನ ಈ ಯುಗಾದಿಹಬ್ಬ. ನಿರಂತರ ಪಾಠ-ಪ್ರವಚನ ನಡೆಯುವ ಪವಿತ್ರ ಗುರುಕುಲ. ನೂರಾರು ವಟುಗಳ ವಿದ್ವಾಂಸರ ವೇದ-ವೇದಾಂತ ಘೋಷ ನಡೆಯುವ ಪವಿತ್ರ ದೇಗುಲ.
ಭಕ್ತರ ಅಭೀಷ್ಟವನ್ನು ಪೂರೈಸುವ ಶ್ರೀಕೃಷ್ಣ-ದುರ್ಗಾಮಾತೆ-ಮುಖ್ಯಪ್ರಾಣ-ರುದ್ರ ದೇವರ ದಿವ್ಯ ಸನ್ನಿಧಾನ. ಪೂರ್ಣಪ್ರಜ್ಞ ವಿದ್ಯಾಪೀಠವೆಂಬ ಸಿದ್ಧಕ್ಷೇತ್ರದಲ್ಲಿ ಪರಮಮಂಗಳಮಯನಾದ ಕಾರಣಿಕನಾದ ಶ್ರೀಮಹಾವಿಷ್ಣುವಿಗೆ ಉದಯಾಸ್ತಮಾನ ಪೂಜೆಯ ಮಹಾ ವೈಭವ. ಎಲ್ಲಾ ಭಕ್ತಾಭಿಮಾನಿಗಳು ಇಂತಹ ಅಪೂರ್ವ ಮತ್ತು ವೈಶಿಷ್ಟ್ಯಪೂರ್ಣವಾದ ಶ್ರೀವಿಷ್ಣುಸಹಸ್ರನಾಮ ಯಜ್ಞದಲ್ಲಿ ತನು-ಮನ-ಧನ-ಧಾನ್ಯ-ದೇಣಿಗೆಗಳ ಮೂಲಕ ಸೇವೆ ಸಲ್ಲಿಸಿ ಲೋಕರಕ್ಷಕನಾದ ರಾಜರಾಜೇಶ್ವರನೆನಿಸಿದ ಶ್ರೀಮಹಾವಿಷ್ಣುವಿನ ಅನುಗ್ರಹಕ್ಕೆ ಪಾತ್ರರಾಗಲು ಶ್ರೀಮಠ ವಿನಂತಿಸಿದೆ.
ಕಾರ್ಯಕ್ರಮಗಳ ವಿವರ
- ಪ್ರಾತಃ ಸುಪ್ರಭಾತ ಸೇವೆ, ತೈಲಾಭ್ಯಂಜನ
- 07:30 ಪಂಚಾಮೃತ ಅಭಿಷೇಕ.
- 08:00 ಸಹಸ್ರ ಕಲಶಾಭಿಷೇಕ.
- 08:30 ಸಹಸ್ರನಾಮ ಪಾರಾಯಣ ಮತ್ತು ಲಕ್ಷತುಳಸೀ ಅರ್ಚನೆ, ಚಕ್ರಾಬ್ಜಮಂಡಲಾರಾಧನೆ, ಸಹಸ್ರನಾಮದಿಂದಢ ಹವಿರ್ದಾನ ಸಹಸ್ರ ತರ್ಪಣ, ಸಹಸ್ರ ನಮಸ್ಕಾರ, ರಾಷ್ಟ್ರಸೂಕ್ತ ಪಾರಾಯಣ.
- 11:00 ಗಂಟೆಗೆ ಯಜ್ಞ ಪೂರ್ಣಾಹುತಿ ಮತ್ತು ತೀರ್ಥ ಪ್ರಸಾದ.
- ಮಧ್ಯಾಹ್ನ 12 ರಿಂದ: ನಾನಾ ಭಜನಾ ಮಂಡಳಿಗಳಿಂದ ನಿರಂತರ ಭಜನೆ.
- 03:30 ರಿಂದ 04:30: ದಾಸನಮನ : ಸಂಗೀತ ವಿದ್ಯಾನಿಧಿ’ ಶ್ರೀವಿದ್ಯಾಭೂಷಣರು.
- 04:30: ವಿಚಾರಗೋಷ್ಠಿ ರಾಷ್ಟ್ರಧರ್ಮ
- ದಿಕ್ಸೂಚಿ ಭಾಷಣ: ಚಕ್ರವರ್ತಿ ಸೂಲಿಬೆಲೆ. (ಖ್ಯಾತ ವಾಗ್ಮಿಗಳು, ಯುವಾಬ್ರಿಗೇಡ್, ಸಂಚಾಲಕರು)
- ಸಹಸ್ರನಾಮದ ಮಹತ್ವ: ಡಾ॥ ಎಚ್. ಸತ್ಯನಾರಾಯಣಾಚಾರ್ಯರು (ಪ್ರಾಂಶುಪಾಲರು, ಪೂರ್ಣಪ್ರಜ್ಞ ವಿದ್ಯಾಪೀಠ, ಬೆಂಗಳೂರು.)
- ಅನುಗ್ರಹ ಸಂದೇಶ: ಪರಮಪೂಜ್ಯ ಶ್ರೀಶ್ರೀವಿಶ್ವೇಶತೀರ್ಥ ಶ್ರೀಪಾದರು, ಪರಮಪೂಜ್ಯ ಶ್ರೀಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು.
- 06:00 ಗಂಟೆಯಿಂದ ಸಹಸ್ರ ಭಕ್ತರಿಂದ ಸಹಸ್ರ ಪದ್ಮಮಂಡಲದಲ್ಲಿ ಪ್ರಸನ್ನ ಪೂಜೆ.
- 07:00 ಸಂಧ್ಯಾಕಾಲದಲ್ಲಿ ಸಹಸ್ರ ಘೃತದೀಪಾರತಿ ಮತ್ತು ಪ್ರಸಾದ ವಿನಿಯೋಗ.
ಏಕದೀಪಾರತಿ ಸೇವೆ (ವಿಶೇಷ)/ 1,000
(ಮೊದಲು ಬಂದು ಕಾಯ್ದಿರಿಸಿ ಪೂಜೆಗೆ ಕೂಡುವ ಸಾವಿರ ಜನರಿಗೆ ಮಾತ್ರ)
ತಮ್ಮ ಹೆಸರು, ನಕ್ಷತ್ರ, ಗೋತ್ರ, ದೂರವಾಣಿ ವಿಳಾಸಗಳನ್ನು ನೋಂದಾಯಿಸತಕ್ಕದ್ದು. ಸ್ವತಃ ತಾವೇ ಕೂತು ಪೂಜೆ ಮಾಡಲು ಬಯಸುವ ಭಕ್ತರು ಸಾಂಪ್ರದಾಯಿಕ ಭಾರತೀಯ ಉಡುಗೆ ತೊಟ್ಟುಕೊಂಡು ಬರಬೇಕು. (ಬಿಳಿ ಪಂಚೆ ಶಲ್ಯ, ಹಳದಿಸೀರೆ ಪ್ರಶಸ್ತ). ಅನ್ನದಾನಕ್ಕಾಗಿ ಪದಾರ್ಥ- ರೂಪದಲ್ಲಿ ಸೇವೆ ಮಾಡಬಯಸುವವರು ಅಕ್ಕಿ, ಬೇಳೆ, ತೆಂಗಿನಕಾಯಿ, ತುಪ್ಪ ಮುಂತಾದವುಗಳನ್ನು ವಿದ್ಯಾಪೀಠದ ದೇವಸ್ಥಾನದಲ್ಲಿ ನೀಡಬಹುದು. ಅರ್ಚನೆಗಾಗಿ ಮನೆಯಲ್ಲೆ ಬೆಳೆದ ತುಳಸಿದಳವನ್ನು ಅಂದು ಬೆಳಗ್ಗೆ ಬೇಗ ತರಬಹುದು. ಕಾರ್ಯಕರ್ತರಾಗಿಯೂ ಯಥಾಶಕ್ತಿ ಸೇವೆಯನ್ನು ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9986550610, 9880069468
Discussion about this post