ಕನ್ನಡ ವೆಬ್ ಸರಣಿಗಳಲ್ಲಿ ತನ್ನದೇ ಆದ ಛಾಪನ್ನ ಮೂಡಿಸಿರುವ ಸಕ್ಕತ್ ಸ್ಟುಡಿಯೋ ಇತ್ತೀಚೆಗಷ್ಟೆ ಡಾ. ಶಿವರಾಜ್ ಕುಮಾರ್ ಅವರ ಶ್ರೀಮುತ್ತು ಸಿನಿ ಸರ್ವೀಸಸ್ ಜೊತೆ ಹೇಟ್ ಯು ರೋಮಿಯೋ ಎಂಬ ದಕ್ಷಿಣ ಭಾರತದ ಅತಿ ದೊಡ್ಡ ವೆಬ್ ಸೀರೀಸ್ ನಿರ್ಮಾಣ ಹಂತ ಮುಗಿಸಿ ಬಿಡುಗಡೆಯ ಹಂತದಲ್ಲಿರುವಾಗಲೇ ಈ ಎರಡೂ ನಿರ್ಮಾಣ ಸಂಸ್ಥೆಗಳು ಸೇರಿ ಮತ್ತೊಂದು ದೊಡ್ಡ ವೆಬ್ ಸರಣಿಗೆ ಕೈ ಹಾಕಿವೆ.
ಹೊಸ ಸರಣಿಗೆ ಹನಿಮೂನ್ ಎಂಬ ಶೀರ್ಷಿಕೆಯಿದ್ದು , ಅರೇಂಜ್ಡ್ ಮದುವೆಯಾದ ನವವಿವಾಹಿತ ಜೋಡಿ ಹನಿಮೂನ್’ಗೆ ಹೋಗುವ ಕಥೆ. ಹನಿಮೂನ್ ಅಂದ್ರೆ ಕೇವಲ ನಾಲ್ಕು ಗೋಡೆಗಳ ಮಧ್ಯೆ ನಡೆಯುವಂತದ್ದಲ್ಲಾ, ಎರಡು ಬೇರೆ ಬೇರೆ ಯೋಚನಾ ಲಹರಿಯ ಮನಸ್ಸುಗಳು ಒಂದಾಗುವ ಕಥೆಯೇ ಹನಿಮೂನ್.
ಮೂಲತಃ ರಂಗಭೂಮಿಯ ಕಲಾವಿದರು ಹಾಗೂ ಸಾಕಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಮೈಸೂರಿನವರಾದ ನಾಗಭೂಷಣ ರವರು ಈ ವೆಬ್ ಸರಣಿಯ ಚಿತ್ರಕಥೆ ಹಾಗೂ ಸಂಭಾಷಣೆಯ ಬರೆಯುವುದರ ಜೊತೆಗೆ ಮುಖ್ಯ ಭೂಮಿಕೆಯಲ್ಲಿ ಅಭಿನೆಯಿಸುತ್ತಿದ್ದಾರೆ. ಇತ್ತೀಚೆಗಷ್ಟೆ ಬಿಡುಗಡೆಯಾದ ಕೆಮಿಷ್ಟ್ರಿ ಆಫ್ ಕರಿಯಪ್ಪಾ ಸಿನಿಮಾದಲ್ಲಿ ಅಭಿನೆಯಿಸಿರುವ ಸಂಜನಾ ಆನಂದ್ ಅವರು ಈ ಸೀರೀಸ್’ಗೆ ನಾಯಕಿಯಾಗಿ ಆಯ್ಕೆಯಾಗಿರುತ್ತಾರೆ.
ಇದಕ್ಕೂ ಮುಂಚೆ ಹೀಗೊಂದು ದಿನ ಸಿನಿಮಾ ಡಾ ಪಾಲ್ ವೆಬ್ ಸರಣಿಯನ್ನು ನಿರ್ದೇಶಿಸಿ ಅನುಭವವಿರುವ ವಿಕ್ರಂ ಯೋಗಾನಂದ್ ಈ ಸರಣಿಯನ್ನು ನಿರ್ದೇಶಿಸುತ್ತಿದ್ದಾರೆ.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಒಂದಲ್ಲಾ ಎರಡಲ್ಲಾ ಖ್ಯಾತಿಯ ವೈಭವ್ ವಾಸುಕಿ ಈ ಸರಣಿಗೆ 4 ಹಾಡುಗಳು ಹಾಗೂ ಹಿನ್ನೆಲೆ ಸಂಗೀತವನ್ನು ಸಂಯೋಜಿಸುತ್ತಿದ್ದಾರೆ.
ನಿವೇದಿತಾ ಶಿವರಾಜ್ ಕುಮಾರ್ ಅವರ ಶ್ರೀಮುತ್ತು ಸಿನಿ ಸರ್ವಿಸಸ್ ಮತ್ತು ಆರ್.ಜೆ. ಪ್ರದೀಪಾ, ರವಿಶಂಕರ್, ವಿವೇಕ್ ನಡೆಸುತ್ತಿರುವ ಸಕ್ಕತ್ ಸ್ಟುಡಿಯೋ ಜೊತೆಗೂಡಿ ಈ ವರ್ಷ 5 ವೆಬ್ ಸರಣಿಗಳನ್ನು ಮಾಡುವ ಯೋಜನೆಯಲ್ಲಿವೆ. ಮುಂಬರುವ ವೆಬ್ ಸರಣಿಯಲ್ಲಿ ನಮ್ಮ ಕನ್ನಡದ ಬಹು ದೊಡ್ಡ ನಾಯಕ ನಟರು ಅಭಿನಯಿಸುತ್ತಿದ್ದು, ಅತಿ ಶೀಘ್ರದಲ್ಲೇ ಅದನ್ನು ಬಹಿರಂಗಪಡಿಸಲಾಗುವುದು.
Discussion about this post