ಶಿವಮೊಗ್ಗ: ಮಾನ್ಯ ಜಿಲ್ಲಾಧಿಕಾರಿ ಶ್ರೀ ದಯಾನಂದ್ ಅವರೇ, ಈ ಇಂದು ನಡೆಯುತ್ತಿರುವ ಮತದಾನದಲ್ಲಿ ಶಿವಮೊಗ್ಗ ರಾಜ್ಯದಲ್ಲೇ ನಂಬರ್ ಒನ್ ಆಗಬೇಕು ಎಂದು ನೀವು ಹಲವು ತಿಂಗಳಿನಿಂದ ನಡೆಸುತ್ತಿರುವ ಸತತ, ವಿಭಿನ್ನ ಪ್ರಯತ್ನಗಳು ಇಡಿಯ ದೇಶಕ್ಕೇ ಮಾದರಿಯಾದುದು. ನಿಮ್ಮ ಈ ಕಾರ್ಯಕ್ಕೆ ಜಿಲ್ಲೆಯ ಜನತೆಯ ಪರವಾಗಿ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ನಿಮ್ಮನ್ನು ಮನದುಂಬಿ ಅಭಿನಂದಿಸುತ್ತದೆ.
ಆದರೆ, ಶೇಕಡಾವಾರು ಮತದಾನ ಹೆಚ್ಚಳದಲ್ಲಿ ದಾಖಲೆ ಮಾಡಬೇಕು ಎನ್ನುವ ನಿಮ್ಮ ಅಭಿಲಾಷೆಗೆ ವ್ಯವಸ್ಥೆ ಸಣ್ಣದೊಂದು ಲೋಪ ತೊಡಕಾಗುತ್ತದೆಯೇ ಎಂಬ ವಿಚಾರ ನಮ್ಮ ಗಮನಕ್ಕೆ ಬಂದಿದ್ದು, ಇದನ್ನು ಈ ಮೂಲಕ ನಿಮಗೆ ತಿಳಿಸುತ್ತಿದ್ದೇವೆ.
ಪ್ರತಿಯೊಬ್ಬ ಮತಗಟ್ಟೆ ಸಿಬ್ಬಂದಿಗೆ ಚುನಾವಣಾ ಕರ್ತವ್ಯ ನೇಮಕಾತಿ ಜೊತೆಗೆ Election Duty Certificate ನೀಡುವ ಕ್ರಮವನ್ನು ಪ್ರತೀ ಚುನಾವಣಾ ಪ್ರಕ್ರಿಯೆಯಲ್ಲಿ ಅನುಸರಿಸಲಾಗುತ್ತದೆ ಎಂಬುದು ನಿಮಗೆ ತಿಳಿದೇ ಇದೆ. ಆದರೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕೆಲವು ಸಿಬ್ಬಂದಿಗೆ EDCಯನ್ನು ಅದರಲ್ಲೂ ಶಿವಮೊಗ್ಗ ನಗರದಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಯೋರ್ವರಿಗೆ ಈ ಪತ್ರ ನೀಡಿಲ್ಲವೆಂದು ಬಲ್ಲಮೂಲಗಳಿಂದ ತಿಳಿದುಬಂದಿದೆ.
ಮತದಾನ ಶೇಕಡಾವಾರು ಹೆಚ್ಚಿನ ಸಂಖ್ಯೆ ಸಾಧಿಸುವಲ್ಲಿ ನಿಮ್ಮ ಪ್ರಾಮಾಣಿಕ ಅವಿರತ ಪ್ರಯತ್ನಕ್ಕೆ ಇದು ತೊಡಕಾಗುತ್ತದೆ ಎಂಬುದು ನಮ್ಮ ಅನಿಸಿಕೆ. ಹೀಗಾಗಿ, ಜಿಲ್ಲಾ ಚುನಾವಣಾಧಿಕಾರಿಗಳೂ ಆದ ತಾವು ಈ ವಿಚಾರದಲ್ಲಿ ತತಕ್ಷಣವೇ ಗಮನಹರಿಸಿ, ಇದನ್ನು ಸರಿಪಡಿಸಿ ಎಂದು ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ವಿನಂತಿಸುತ್ತದೆ.
Discussion about this post