ಗುಜರಾತ್: ಇಲ್ಲಿನ ಜುನಾಗಢದ ಅಂಬಾಜಲ ಅಣೆಕಟ್ಟೆ ಬಳಿಯಲ್ಲಿ ಸ್ನಾನಕ್ಕಿಳಿದ 50 ವರ್ಷದ ವ್ಯಕ್ತಿಯೊಬ್ಬರು ಮೊಸಳೆಗೆ ಬಲಿಯಾಗಿರುವ ಘಟನೆ ನಡೆದಿದೆ.
ಭಾನುಭಾಯ್ ಚುಡಾಸಮಾ ಸ್ನಾನ ಮಾಡಲು ಅಣೆಕಟ್ಟು ಪ್ರವೇಶಿಸಿದಾಗ ಘಟನೆ ನಡೆದಿದೆ. ಮೊಸಳೆಯೊಂದು ಸಮೀಪದಲ್ಲಿದೆ ಎಂಬುದನ್ನು ಗಮನಿಸದ ವ್ಯಕ್ತಿ ನೀರಿಗೆ ಇಳಿದಾಕ್ಷಣವೇ ಅದು ದಾಳಿ ಮಾಡಿದ್ದು, ಆತ ಸಾವನ್ನಪ್ಪಿದ್ದಾನೆ.
ಮೊಸಳೆ ದಾಳಿ ಮಾಡಿದ ವೇಳೆ ವ್ಯಕ್ತಿಯು ಸಹಾಯಕ್ಕಾಗಿ ಕೂಗಿಕೊಂಡಿದ್ದಾನೆ. ಅಲ್ಲಿದ್ದ ಸ್ಥಳೀಯರು ಧಾವಿಸಿ, ರಕ್ಷಿಸಿದ್ದಾರೆ. ಮೊಸಳೆಯಿಂದ ರಕ್ಷಿಸಿದ ವ್ಯಕ್ತಿಯನ್ನು ತತಕ್ಷಣವೇ ಆಸ್ಪತ್ರೆಗೆ ದಾಖಲಿಸುವ ವೇಳೆ ದಾರಿಯಲ್ಲಿಯೇ ಆತ ಮೃತಪಟ್ಟಿದ್ದಾನೆ.
ಘಟನೆ ಕುರಿತಂತೆ ಸ್ಥಳೀಯ ಪೊಲೀಸ್ ಮತ್ತು ವನ್ಯಜೀವಿ ಅಧಿಕಾರಿಗಳು ತನಿಖೆ ಆರಂಭಿಸಿದ್ದು, ಈವರೆಗೂ ಈ ಪ್ರದೇಶದಲ್ಲಿ ಒಂದೂ ಮೊಸಳೆಯಿರಲಿಲ್ಲ. ಆದರೆ, ಈಗ ಮೊಸಳೆ ಅಣೆಕಟ್ಟೆಗೆ ಪ್ರವೇಶಿಸಿರುವುದು ಹೇಗೆ ಎಂಬುದು ಸ್ಪಷ್ಟವಾಗಿಲ್ಲ ಎಂದು ಸ್ಥಳೀಯ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
















