ಶಿವಮೊಗ್ಗ: ಹದಿಹರೆಯದವರಲ್ಲಿ ಕಾಡುವ ವಿವಿಧ ಸಮಸ್ಯೆಗಳು ಹಾಗೂ ಅವರಲ್ಲಿನ ಜಾಗೃತಿಗಾಗಿ ಮಾನಸ ಟ್ರಸ್ಟ್’ನ ಕಟೀಲ್ ಅಶೋಕ ಪೈ ಕಾಲೇಜಿನಲ್ಲಿ ಮೇ 17ರಂದು ವಿಶೇಷ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.
ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಕಾಲೇಜಿನ ಪ್ರಾಂಶುಪಾಲೆ ಡಾ.ಸಂಧ್ಯಾ ಕಾವೇರಿ, ಇಂದು ಮಕ್ಕಳ ವರ್ತನೆಗಳು ಬದಲಾಗುತ್ತಿದ್ದು, ಅವರ ಶೈಕ್ಷಣಿಕ ಸಮಸ್ಯೆ, ವಿದ್ಯಾಭ್ಯಾಸದ ಆಯ್ಕೆ, ಮಾನಸಿಕ ದೈಹಿಕ ಆರೋಗ್ಯ, ಒಳ್ಳೆಯ ಜೀವನ ಶೈಲಿ ಕುರಿತಂತೆ ಹದಿಹರೆಯದವರಿಗಾಗಿ ಜಾಗೃತಿ ಮೂಡಿಸಲು ಮತ್ತು ಮಾರ್ಗದರ್ಶನದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಈ ಕಾರ್ಯಾಗಾರ ಆಯೋಜಿಸಲಾಗಿದೆ ಎಂದರು.
ಅಂದು ಬೆಳಿಗ್ಗೆ 11 ರಿಂದ ಸಂಜೆ 6 ರವರೆಗೆ ನಡೆಯಲಿರುವ ಈ ಕಾರ್ಯಾಗಾರದಲ್ಲಿ ವೈಯಕ್ತಿಕವಾಗಿ ಆಪ್ತ ಸಮಾಲೋಚನೆ ಕೂಡ ಮಾಡಲಾಗುವುದು.
ಹಿರಿಯ ಆಪ್ತ ಸಮಾಲೋಚಕರು ಇದರಲ್ಲಿ ಭಾಗವಹಿಸಿ ವಿಶೇಷ ಮಾಹಿತಿ ನೀಡಲಿದ್ದು, ವಿವಿಧ ಮಾನಸಿಕ ಪರೀಕ್ಷೆಗಳನ್ನು ಕೂಡ ನಡೆಸಿ, ಪರಿಹಾರ ಸೂಚಿಸಲಾಗುವುದು ಎಂದರು.
ಸಾಹಿತಿ ಹಾಗೂ ವಿಮರ್ಶಕ ಡಾ.ರಾಜೇಂದ್ರ ಚೆನ್ನಿ ಆಂಗ್ಲ ಸಾಹಿತ್ಯ ಅಧ್ಯಯನದ ಪ್ರಸ್ತುತತೆ ಬಗ್ಗೆ ಉಪನ್ಯಾಸ ನೀಡಲಿದ್ದು, ಪಿಯು ವಿದ್ಯಾರ್ಥಿಗಳಿಗಾಗಿ ಮಂಗಳೂರಿನ ಶ್ರೀನಿವಾಸ ಪೇಜಿತ್ತಾಯ ಅವರು ಪತ್ರಿಕೋದ್ಯಮ ಕುರಿತಂತೆ ಮಾತನಾಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಕಾರ್ಯಾಗಾರಕ್ಕೆ 50 ರೂ. ಪ್ರವೇಶ ಶುಲ್ಕ ನಿಗದಿ ಮಾಡಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಮೊ.9480034495 ಗೆ ಸಂಪರ್ಕಿಸಬಹುದಾಗಿದೆ.
















