ಭದ್ರಾವತಿ: ವಿಶ್ವದಲ್ಲಿ ತಾಯಿಗೆ ತನ್ನದೆ ಆದ ಒಂದು ಉನ್ನತ ಸ್ಥಾನವಿರುತ್ತದೆ. ಆ ಸ್ಥಾನವು ಆಕೆಯ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ. ತನ್ನ ತನ್ನದ ಜವಾಬ್ದಾರಿ ಅರಿತು ಕರ್ತವ್ಯ ನಿರ್ವಹಿಸಿದಾಗ ಮಾತ್ರ ಸಮಾಜದಲ್ಲಿ ಗೌರವ ತಂದುಕೊಡಲು ಸಾದ್ಯ ಎಂದು ಶಿವಮೊಗ್ಗ ಕಮಲಾ ನೆಹರು ಕಾಲೇಜು ಉಪನ್ಯಾಸಕ ಮಂಜುನಾಥ ಭಟ್ ಹೇಳಿದರು.
ನಗರದ ಜನ್ನಾಪುರದ ಏಕದಂತ ಸಭಾಭವನದಲ್ಲಿ ವೇದಾಂತ ಭಾರತೀ ಆಯೋಜಿಸಿದ್ದ “ಭಾಷ್ಯಾಮೃತ ವಾಹಿನಿ” ತೈತ್ತರೀಯ ಉಪನಿಷತ್ ಭಾಷ್ಯಾ ಪ್ರವಚನ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಲೌಕಿಕವಾದ ಜೀವನದಲ್ಲಿ ಪ್ರತಿಯೊಬ್ಬರು ತಮ್ಮ ಕರ್ತವ್ಯವನ್ನು ಸರಿಯಾದ ಮಾರ್ಗದಲ್ಲಿ ಸರಿದೂಗಿಸಿಕೊಂಡು ಹೋಗುವುದರಿಂದ ತಾನಾಗಿ ಗೌರವ ಹೆಚ್ಚುತ್ತದೆ. ಆದರೆ ತನ್ನ ಕರ್ತವ್ಯ ತಿಳಿಯದೆ ಬೇರೆ ಯಾವ ಕೆಲಸ ಮಾಡಿದರೂ ಮನ್ನಣೆ ಸಿಗಲಾರದು ಎಂದರು.
ಬೌದ್ದ, ಜೈನ ಮತಗಳಲ್ಲಿ ಈ ಹಿಂದೆ ಬಲವಂತವಾಗಿ ಸನ್ಯಾಸತ್ವದ ದೀಕ್ಷೆ ಕೊಡಿಸುವ ಯತ್ನ ನಡೆಯುತ್ತಿತ್ತು. ಆದರೀಗ ಅಂತಹ ಸನ್ನಿವೇಶ ಬದಲಾಗಿ ಎಲ್ಲರೂ ಜ್ಞಾನಾನುಸಾರ ಅಧ್ಯಯನಗಳ ಮೂಲಕ ದೀಕ್ಷೆಯನ್ನು ಪಡೆಯುತ್ತಿದ್ದು, ಅವರವರ ಸಂಸ್ಕಾರಕ್ಕೆ ತಕ್ಕಂತೆ ಬದುಕು ರೂಪಿಸಿಕೊಳ್ಳುತ್ತಿದ್ದಾರೆ.
ಪ್ರತಿಯೊಂದು ವಿಷಯದ ಸಂಶೋಧನೆಗಳಲ್ಲಿ ಮೂಲವಾಕ್ಯ ಅಥವ ಪ್ರತಿ ಜ್ಞಾನವಾಕ್ಯವಿರುತ್ತದೆ. ಹೆಚ್ಚು ಹೆಚ್ಚು ಸಂಶೋಧನೆ ಮಾಡಿದಂತೆಲ್ಲಾ ಹೆಚ್ಚು ಜ್ಞಾನವೃದ್ದಿಸುತ್ತದೆ. ಹುಡುಕುವಿಕೆಯಿಂದಾಗಿ ನಾಗರೀಕತೆ ಇಷ್ಟೆಲ್ಲಾ ಬೆಳೆಯಲು ಸಾಧ್ಯವಾಗಿದೆ. ಪುರಾಣ ಶಾಸ್ತ್ರಗಳಲ್ಲಿ ಕಾಣಿಸಿಕೊಂಡು ಪ್ರಸಿದ್ದಿ ಪಡೆದಿರುವ ನಗರದಲ್ಲಿ ಸುಸಂಸ್ಕøತರು ಹೆಚ್ಚಾಗಿ ನೆಲಸಿದ್ದಾರೆ ಎಂದರು.
ವೇದಾಂತ ಭಾರತಿ ಸಂಚಾಲಕ ಕೃಷ್ಣಮೂರ್ತಿ ಸೋಮಯಾಜಿ ಮಾತನಾಡಿ, ಆಧ್ಯಾತ್ಮ ಚಿಂತನೆ ಹಾಗೂ ಧಾರ್ಮಿಕ ವಿಚಾರಗಳನ್ನು ತಿಳಿಸಿಕೊಡುವ ವೇದಾಂತ ಭಾರತಿಯು ಹಲವಾರು ಕಾರ್ಯಕ್ರಮಗಳನ್ನು ತಾಲೂಕಿನಲ್ಲಿ ನಡೆಸಿಕೊಂಡು ಬರುತ್ತಿದೆ. ಹಲವಾರು ಧರ್ಮಗ್ರಂಥಗಳಲ್ಲಿನ ಉಲ್ಲೇಖ, ವೇಧ ಉಪನಿಷತ್ತಿನ ಪರಿಚಯ ಮಾಡಿಕೊಡಲು ಪ್ರವಚನಗಳು ಪೂರಕವಾಗುತ್ತವೆ. ಪ್ರವಚನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಅಭಿನಂದನೆಗಳು ಎಂದರು. ಕಾರ್ಯಕ್ರಮದಲ್ಲಿ ಡಾ,ಕೃಷ್ಣಭಟ್, ಟ್ರಸ್ಟ್ ನ ಕೃಷ್ಣಮೂರ್ತಿ, ನಾಗರಾಜ್ ಸೇರಿದಂತೆ ಹಲವರಿದ್ದರು.
Discussion about this post