ಭದ್ರಾವತಿ: ಮೈಸೂರು ಕಾಗದ ಕಾರ್ಖಾನೆಯನ್ನು ಮುಚ್ಚುವ ಪ್ರಕ್ರಿಯೆ ಮುಂದೂಡುವಂತೆ ಆಗ್ರಹಿಸಿ ಎಂಪಿಎಂ ಸ್ವಯಂ ನಿವೃತ್ತ ನೌಕರರ ಸಂಘದ ಪದಾಧಿಕಾರಿಗಳು ಮಾಜಿ ಶಾಸಕ ಎಂ.ಜೆ. ಅಪ್ಪಾಜಿ ನೇತೃತ್ವದಲ್ಲಿ ಸಚಿವ ಕೆ.ಜೆ. ಜಾರ್ಜ್ ರವರಿಗೆ ಮನವಿ ಸಲ್ಲಿಸಿದರು.
ಎಂಪಿಎಂ ಕಾರ್ಖಾನೆಯನ್ನು ನಷ್ಟದ ನೆಪಹೊಡ್ಡಿ 2015 ರ ನವೆಂಬರ್‍ನಲ್ಲಿ ಯಾವುದೇ ಮುನ್ಸೂಚನೆ ನೀಡದೆ ಉತ್ಪಾದನೆ ಸ್ಥಗಿತಗೊಳಿಸಿ ಏಕಾಏಕಿ ಕಾರ್ಮಿಕರನ್ನು ಕಾರ್ಖಾನೆಯಿಂದ ಹೊರ ಹಾಕಲಾಗಿತ್ತು. ಇದರಿಂದ ಆಡಳಿತ ಮಂಡಳಿಯ ಬಲವಂತದಿಂದ ಸ್ವಯಂ ನಿವೃತ್ತಿ ಪಡೆದರೂ ಸಹ ಇವರಿಗೆ ಸೌಲಭ್ಯಗಳನ್ನು ಸಮರ್ಪಕ ರೀತಿಯಲ್ಲಿ ನೀಡದೆ ಅತಂತ್ರ ಸ್ಥಿತಿ ನಿರ್ಮಾಣವಾಯಿತು. ಆದ್ದರಿಂದ ಕೂಡಲೇ ಸ್ವಯಂ ನಿವೃತ್ತಿ ಪಡೆದವರಿಗೆ ಸೌಲಭ್ಯಗಳನ್ನು ಒದಗಿಸಬೇಕು ಹಾಗೂ ಕಾರ್ಖಾನೆಯನ್ನು ಪುನರ್ ಆರಂಭಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಸ್ವಯಂ ನಿವೃತ್ತಿ ಪಡೆದ ಉದ್ಯೋಗಿಗಳಿಗೆ ನಿಯಾಮಾನುಸಾರ ತಕ್ಷಣ ಹಣ ಪಾವತಿಸುವುದು ನ್ಯಾಯ ಸಮ್ಮತವಾಗಿರುತ್ತದೆ. ಆದರೆ ಸರಕಾರ ಹಣ ಬಿಡುಗಡೆ ಮಾಡಿ ವರ್ಷ ಕಳೆದರೂ, ಆಡಳಿತ ವರ್ಗ ಪೂರ್ಣ ಪ್ರಮಾಣದ ಹಣ ವಿತರಿಸದಿರುವುದು ವಿಷಾದನೀಯ. ಅಲ್ಲದೆ ಸರಕಾರದ ಲೆಕ್ಕ ಪರಿಶೋಧಕರಿಂದ ಲೆಕ್ಕಚಾರ ಮಾಡಿಸದೆ ಪೆನ್ಷನ್ ಹಾಗೂ ಸೂಪರ್ ಅನ್ಯೂಷನ್ ಹಣವನ್ನು ಸಂಬಂಧಪಟ್ಟ ಇಲಾಖೆಗೆ ವರ್ಗಾಯಿಸದಿರುವುದರಿಂದ ಕಾರ್ಮಿಕ ಮಕ್ಕಳ ವಿದ್ಯಾಭ್ಯಾಸ ಹಾಗೂ ಕುಟುಂಬ ನಿರ್ವಹಣೆಗೆ ಕಷ್ಟಸಾಧ್ಯವಾಗಿದೆ ಎಂದು ದೂರಲಾಗಿದೆ.
ಕಂಪನಿ ವಸತಿಗೃಹಗಳನ್ನು ಹೊಂದಿರುವ ಅಧಿಕಾರಿಗಳಿಗೆ ಮತ್ತು ಕೆಲ ಉದ್ಯೋಗಿಗಳಿಗೆ 2ನೇ ಕಂತಿನ ಹಣ ನೀಡಿರುವಂತೆಯೇ, ಸ್ವಯಂ ನಿವೃತ್ತಿ ಪಡೆದ ಉದ್ಯೋಗಿಗಳಿಗೂ ಹಣ ನೀಡಬೇಕು. ಪೆನ್ಷನ್ ಹಾಗೂ ಸೂಪರ್ ಅನ್ಯೂಷನ್ ಹಣವನ್ನು ಸಂಬಂಧಪಟ್ಟ ಇಲಾಖೆಗೆ ವರ್ಗಾಯಿಸಬೇಕು. ಹಣಕಾಸು ಇಲಾಖೆ ಮಾಡಿರುವ ಲೆಕ್ಕಚಾರದಂತೆ ಸ್ವಯಂ ನಿವೃತ್ತಿ ಪಡೆದ ಕಾರ್ಮಿಕರಿಗೆ ಮಾಹಿತಿಯ ದೃಢೀಕರಣ ನೀಡಬೇಕು. ಕಾರ್ಮಿಕರ ಎಲ್ಲ ಸಮಸ್ಯೆಗಳನ್ನು ಇತ್ಯರ್ಥಪಡಿಸುವವರೆಗೂ ಕಾರ್ಖಾನೆ ಮುಚ್ಚುವ ಪ್ರಕ್ರಿಯೆಯನ್ನು ಮುಂದೂಡಬೇಕೆಂದು ಕೋರಲಾಗಿದೆ.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಂ.ಜೆ. ಅಪ್ಪಾಜಿ, ಕಾರ್ಮಿಕ ಮುಖಂಡರಾದ ಬಿ. ಕಮಲಾಕರ್, ಆರ್. ಅನಂತಕುಮಾರ್, ಚೆನ್ನಿಗಪ್ಪ, ಡಿ.ಎಸ್. ಬಸವರಾಜ್, ಮೂಡಲಗಿರಿ, ರಾಮಣ್ಣ ಮುಂತಾದವರಿದ್ದರು.
ಸಿಎಂ ಭೇಟಿ ಮಾಡಲು ಜಾರ್ಜ್ ಸಲಹೆ
ಮನವಿ ಸ್ವೀಕರಿಸಿದ ಸಚಿವ ಕೆ.ಜೆ. ಜಾರ್ಜ್ ಎಂಪಿಎಂ ಪುನಶ್ಚೇತನ ಅಥವಾ ಖಾಸಗೀಕರಣ ಕುರಿತಂತೆ ಶೀಘ್ರದಲ್ಲಿಯೇ ಅಧಿಕಾರಿಗಳೊಂದಿಗೆ ಚರ್ಚೆನಡೆಸಲಾಗುವುದು. ಮಾಹಿತಿ ಪಡೆದ ನಂತರ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಮಾಜಿ ಶಾಸಕ ಎಂ.ಜೆ. ಅಪ್ಪಾಜಿ ರವರಿಗೆ ತಿಳಿಸಿ ಮುಖ್ಯಮಂತ್ರಿಯವರನ್ನು ಭೇಟಿ ಮಾಡುವಂತೆ ಸಲಹೆ ನೀಡಿದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post