ಅಭಿವೃದ್ಧಿ ಎಂಬ ಭೂತ ಎಲ್ಲರ ಮಾನಸಿಕತೆಯಲ್ಲೂ ಸೇರಿಕೊಂಡಿದೆ. ನಾಗರಿಕರನ್ನಾಳುವ ನಾಯಕರು ಕೂಡ ಓಟಿಗಾಗಿಯೋ ಅಥವಾ ನಾನಿದನ್ನು ಮಾಡಿದ್ದೀನಿ ಎಂದು ಹೇಳಿಕೊಳ್ಳುವುದಕ್ಕಾಗಿಯೋ ಒಂದೆರಡು ಅಭಿವೃದ್ಧಿ ಕಾರ್ಯಗಳನ್ನು ಮಾಡಿಸಿ ಗರ್ವದಿಂದ ಸಾಯುವವರೆಗೂ ಜಂಬಕೊಚ್ಚಿಕೊಳ್ಳುವದು ರೂಢಿಯಿಂದ ಬಂದಿರುವಂತಹದ್ದು. ಆದರೆ ದುರ್ದೈವ ಅದರಿಂದ ಜನರಿಗೆ ಎಷ್ಟು ಲಾಭದಾಯಕ ಎಂಬ ಅರಿವು ಸೋಕಾಲ್ಡ್ ನಾಯಕರಿಗಿಲ್ಲ. ಇಂತಹ ತೋರ್ಪಡಿಕೆಯ ಅಥವಾ ಬೇಕಾಬಿಟ್ಟಿ ಮಾಡುವ ’ಅಭಿವೃದ್ಧಿ’ಯಿಂದಾಗಿ ಜನರಿಗೆ ಉಪಯೋಗ ಆಗುವುದಕ್ಕಿಂತ ತೊಂದರೆ ನೀಡುತ್ತಿರುವುದೇ ಹೆಚ್ಚು.
ಇದಕ್ಕೆ ಉದಾಹರಣೆಗಳೂ ಹಲವಾರಿದೆ. ರಸ್ತೆಗಳ ನಿರ್ಮಾಣಕ್ಕಾಗಿ ರಸ್ತೆಗಳನ್ನು ನಿರ್ಮಿಸುತ್ತಾರೆ. ಅದರ ನಿರ್ಮಾಣಕ್ಕಾಗಿ ಮೊದಲಿದ್ದ ರಸ್ತೆ ಬದಿಯ ಮರಗಳ ನಿರ್ನಾಮ ಮಾಡುತ್ತಾರೆ, ರಸ್ತೆಗಳಿಗೆ ಡಾಂಬರೀಕರಣ ಮಾಡುತ್ತಾರೆ, ಮಳೆಗಾಲಕ್ಕಾಗುವಾಗ, ಗುಂಡಿ ಮುಚ್ಚಿದ್ದ ಡಾಂಬರ್’ಗಳು, ಹಪ್ಪಳದಂತೆ ತೇಲುತ್ತಿರುತ್ತವೆ, ನೋಡುವುದಕ್ಕೆ ನೈಸಾದ ರಸ್ತೆಗಳನ್ನು ನಿರ್ಮಿಸುತ್ತಾರೆ, ಮತ್ತೆ ವ್ಯವಸ್ಥೆಯ ಲೋಪದಿಂದಾಗಿ ಹತ್ತಾರು ಬಾರಿ ಅದೇ ರಸ್ತೆಯಲ್ಲಿ ಗುಂಡಿ ತೆಗೆಯುತ್ತಾರೆ…. ಇದು ನಮ್ಮ ಸೋಕಾಲ್ಡ್ ಅಭಿವೃದ್ಧಿ.
ಇಂತಹ ಅಭಿವೃದ್ಧಿಗಳಿಗೆ ಸಾಕ್ಷಿ, ಬೈಂದೂರು ಸಮೀಪದ ಕಿರಿಮಂಜೇಶ್ವರ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಫ್ಲೈಓವರ್. ಈ ಫ್ಲೈ ಓವರ್ ಅಭಿವೃದ್ಧಿಯ ಸಂಕೇತಕ್ಕಿಂತ, ಅವ್ಯವಸ್ಥೆಯ ಉತ್ತಮ ಉದಾಹರಣೆಯಾಗಿ ಮೂಡಿಬಂದಿದೆ. ಈ ಫ್ಲೈ ಓವರ್ ನಿರ್ಮಾಣಗೊಂಡು ಹಲವು ತಿಂಗಳುಗಳಾದರೂ, ಇದರ ಅಂಡರ್ ಪಾಸ್ ಮಾತ್ರ ಇನ್ನೂ ಸಂಚಾರಕ್ಕೆ ಯೋಗ್ಯವಾಗಿಲ್ಲ.
ಇದರ ಅಡ್ಡಪರಿಣಾಮಗಳು ಏನೇನೆಲ್ಲ ಎಂದು ಪಟ್ಟಿ ಮಾಡಿದರೆ…
1. ನಿರ್ಮಾಣಕ್ಕೆ ಬಳಸಿದ ವಸ್ತುಗಳನ್ನೂ ಸೇರಿದಂತೆ ಇನ್ನೂ ಅನೇಕ ವಸ್ತುಗಳಿಂದ ಕೂಡಿರುವ ಈ ಅಂಡರ್ ಪಾಸ್ ಶುಚಿತ್ವವನ್ನು ಕಾಪಾಡಿಕೊಂಡಿಲ್ಲ. ಅಲ್ಲಿ ಸಂಚರಿಸಲು ಯೋಗ್ಯವೂ ಅಲ್ಲದಂತಾಗಿದೆ.
2. ಇದರ ನಿರ್ಮಾಣ ಹೇಗಿದೆ ಎಂದರೆ ಮಳೆಗಾಲದಲ್ಲಿ ಅಂಡರ್ ಪಾಸ್’ನಲ್ಲಿ ನೀರು ಪಾಸಾಗುವುದೇ ಕಷ್ಟಕರ ಸಂಗತಿ.
3. ಅಂಡರ್ ಪಾಸ್ ಪರಿಣಾಮ: ಅಲ್ಲೇ ಇರುವ ಗ್ರಾಮದ ಪ್ರಾಥಮಿಕ ಶಾಲೆಗೆ ಸುಲಭವಾಗಿ ಸಂಪರ್ಕಿಸುವ ಮಾರ್ಗ ಇದೊಂದೆ ಆದ್ದರಿಂದ ಶಾಲೆಗೆ ಹೋಗುವ ಹಲವು ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ. ಮಹಿಳೆಯರು, ವೃದ್ಧರು,ಇನ್ನುಳಿದ ಸಾರ್ವಜನಿಕರನ್ನೂ ಓಳಗೊಂಡು ಅವರ ಸಂಚಾರಕ್ಕೆ ಅನರ್ಹವಾದ ಅಂಡರ್ ಪಾಸ್ ಇದು.
4. ಇದೇ ಅಂಡರ್ ಪಾಸ್ ಮೇಲ್ಭಾಗದಲ್ಲಿ ಕಾಮಗಾರಿ ಅಪೂರ್ಣವಾಗಿರುವುದರಿಂದ ಅಪಘಾತದ ಪರಿಣಾಮವನ್ನು ಉಲ್ಭಣಗೊಳಿಸುವುದು ನಿಶ್ಚಿತ.
5. ಈ ಫ್ಲೈಓವರ್ ಕೆಳಬದಿಯಲ್ಲಿ ಸರಿಯಾದ ಫಿನಿಶಿಂಗ್ ಕೊಡದ ಕಾರಣ ಈ ಸ್ಥಳ ಕಸದ ತೊಟ್ಟಿಗಳಾಗಿ ಮಾರ್ಪಾಡಾಗಿದೆ.
ಒಟ್ಟಿನಲ್ಲಿ ಈ ಫ್ಲೈಓವರ್ ಸುಶಿಕ್ಷಿತ ಎಂದು ಕರೆಯಲ್ಪಡುವ ಇಂಜಿನಿಯರ್’ಗಳ ಯೋಜನಾಬದ್ಧ ವೈಫಲ್ಯವನ್ನು ಸೂಚಿಸುತ್ತದೆ. ಗ್ರಾಮಸ್ಥರ ಮಾತಿನಲ್ಲೇ ಹೇಳುವುದಾದರೆ ಈ ಅಂಡರ್ ಪಾಸ್ ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುವವರಿಗೆ ಮೂತ್ರಮಾಡಲು ಇನ್ನಷ್ಟು ಪ್ರೈವೆಸಿಗೆ ನಿರ್ಮಿಸಿದಂತಾಗಿದೆ.
ಇನ್ನು ಬರುವುದು ಮಳೆಗಾಲವಾದ್ದರಿಂದ ಈ ಸಮಸ್ಯೆಗಳ ಬಗ್ಗೆ ಸೂಕ್ತ ಕ್ರಮ ಕೈಗೊಂಡು, ಯಾರಿಗೂ ಯಾವ ರೀತಿಯಲ್ಲೂ ತೊಂದರೆ ಆಗದಂತೆ ಕ್ರಮವಹಿಸಬೇಕು ಎಂಬುದು ಪ್ರಜೆಗಳ ಆದೇಶ(ಪ್ರಜಾಪ್ರಭುತ್ವ ಅಲ್ಲವೇ!).
ವಿಶೇಷ ವರದಿ: ಅರುಣ್ ಕಿರಿಮಂಜೇಶ್ವರ
Discussion about this post