ನಮಸ್ಕಾರ ಸ್ನೇಹಿತರೆ,
ಹಲೋ…ಆಟೋ…. ಎನ್ನುವ ಈ ಶಬ್ಧವನ್ನು ಒಮ್ಮೆಯಾದರೂ ನಿಮ್ಮ ಬಾಯಿಂದ ಕರೆಯದಿದ್ದರೂ, ನಿಮ್ಮ ಕಿವಿಯಿಂದ ಕೇಳಿಸಿಕೊಂಡಿರ್ತೀರಿ. ಯಾಕೆ ಹೀಗೆ..? ಹಲೋ..ಆಟೋ.. ಎಂದು ಕರೆದಾಕ್ಷಣ ಚಾಲಕನಿಲ್ಲದ ಆಟೋ ರಿಕ್ಷಾ ತಾನಾಗಿಯೇ ನಿಮ್ಮ ಮುಂದೆ ಬಂದು ನಿಲ್ಲುತ್ತದೆಯೇ? ಅದಕ್ಕೊಬ್ಬರು ಚಾಲಕರ ಅಗತ್ಯ ಇದ್ದೇ ಇರುತ್ತದೆ ಅಲ್ಲವೆ?
ಯಾಕೆ ಈ ಮೇಲಿನ ಮಾತನ್ನು ಹೇಳಿದೆ ಅಂತರ ದುಡ್ಡಿನ ಮದದಲ್ಲೋ ಅಥವಾ ಇನ್ಯಾವುದೋ ಅಹಂನಲ್ಲಿ ನಾವು ಅವರನ್ನ ಈ ರೀತಿ ಸಂಬೋಧಿಸುತ್ತೇವೆ. ಅದರಲ್ಲೂ ಹಿರಿಯರು ಕರೆಯುವುದನ್ನು ನೋಡಿ ಚಿಕ್ಕ ಮಕ್ಕಳೂ ಸಹ ಅವರನ್ನು ಅದೇ ರೀತಿ ಕರೆಯುವುದನ್ನು ನೋಡಿದ್ದೇನೆ.
ಆಟೋ ಚಾಲಕರಿಗೆ ಅವರದೇ ಆದ ಹೆಸರು, ಅವರದೇ ಆದ ವ್ಯಕ್ತಿತ್ವ ಇರುತ್ತದೆ. ಅದರಲ್ಲೂ ನಮ್ಮ ಅಣ್ಣ, ಮಾವ, ಚಿಕ್ಕಪ್ಪ ಅಥವಾ ಅಪ್ಪನ ವಯಸ್ಸಿನವರೇ ಹೆಚ್ಚು. ನಮ್ಮ ಮನೆಯಲ್ಲಿ ಹಿರಿಯರನ್ನು ಗೌರವಿಸುವ ನಾವು ಅವರನ್ಯಾಕೆ ಏಕವಚನದಲ್ಲಿ ಕರೆಯುತ್ತೇವೆ.
ನಮ್ಮ ದೃಷ್ಟಿಯಲ್ಲಿ ಅವರು ಕೇಳಿದಷ್ಟು ಹಣ ಕೊಟ್ರೆ ಹೇಳಿದಲ್ಲಿ ಬಿಡುವ ಸಾಮಾನ್ಯ ಆಟೋ ಚಾಲಕ ಆಗಿರಬಹುದು, ಆದ್ರೆ ಅದಕ್ಕೂ ಹೆಚ್ಚಾಗಿ ಅವರದೇ ಆದ ಸುಂದರ ಸಂಸಾರದಲ್ಲಿ ಮನೆಯ ಯಜಮಾನನಾಗಿ, ಹೆಂಡತಿಗೆ ತಕ್ಕ ಗಂಡನಾಗಿ, ಮಕ್ಕಳಿಗೆ ತಕ್ಕ ಅಪ್ಪನಾಗಿ ಅವರೂ ಜವಾಬ್ದಾರಿಯನ್ನು ನಿರ್ವಹಿಸುತ್ತಿರುತ್ತಾರೆ ಎನ್ನುವುದು ನೆನಪಿರಲಿ.
ಕೆಲವರು ಕೇಳಬಹುದು ಎಲ್ಲೋ ಗೊತ್ತಿಲ್ಲದ ಊರಿನಲ್ಲಿ ಆಟೋ ಚಾಲಕರ ಹೆಸರು ಗೊತ್ತಿರತ್ತೆ, ಅಲ್ಲಿ ಹಲೋ ಆಟೋ ಅಂತ ಕರೆಯದೆ ಇನ್ನೇನು ಮಾಡಬೇಕು ಅಂತ.. ಸರಿ ಸ್ವಾಮಿ ನಿಮ್ಮ ಮಾತಿಗೆ ಬರುತ್ತೇನೆ. ಹೆಸರು ಗೊತ್ತಿಲ್ಲ ಅಂದ್ರೆ ಅಣ್ಣ ಸ್ವಲ್ಪ ಇಂತಹ ಸ್ಥಳಕ್ಕೆ ಹೋಗ್ಬೇಕು, ಬಿಡ್ತೀರಾ? ಅಂತ ಕೇಳಬಹುದು ಅಲ್ವ? ಸರ್ ಅಥವಾ ಸ್ವಾಮಿ ಎಂದು ಕರೆದು ಮಾತನಾಡಿಸಬಹುದು ಅಲ್ಲವೆ?
ಆಟೋ ಚಾಲಕರ ಬಗ್ಗೆ ಇವುಗಳನ್ನು ಗಮನದಲ್ಲಿಡಿ:
- ಖಾಕಿ ಬಟ್ಟೆಯನ್ನು ತೊಟ್ಟ ಅದೆಷ್ಟೋ ಚಾಲಕರು ಗರ್ಭಿಣಿಯರಿಗೆ ಉಚಿತವಾಗಿ ಸೇವೆ ಸಲ್ಲಿಸಿರುವುದು ಇದೆ.
- ಅದೆಷ್ಟೋ ಜನರಿಗೆ ಹೊಸ ಜಾಗಕ್ಕೆ ಹೋಗಿ ಅಲ್ಲಿ ಎಲ್ಲಿಗೆ ಹೋಗಬೇಕು ಎಂದು ತೋಚದಿದ್ದಾಗ ಅವರನ್ನು ಸರಿಯಾದ ಜಾಗಕ್ಕೆ ತಲುಪಿಸುವುದೂ ಇದೆ ಆಟೋ ಚಾಲಕರಲ್ಲಿ.
- ಎಷ್ಟೋ ತಂದೆ ತಾಯಂದಿರ ಜವಾಬ್ದಾರಿಯನ್ನು ತನ್ನ ಹೆಗಲ ಮೇಲೆ ಹೊತ್ತು ಮಕ್ಕಳನ್ನು ಮನೆಯಿಂದ ಶಾಲೆಗೆ, ಶಾಲೆಯಿಂದ ಮನೆಗೆ ಸುರಕ್ಷಿತವಾಗಿ ಬಿಡುವುದು ಇದೇ ಚಾಲಕರು.
- ಅಷ್ಟೇ ಯಾಕೆ ಎಲ್ಲೋ ಕುಡಿದು ಬಿದ್ದ ಕುಡುಕನನ್ನು ಎಲ್ಲರೂ ಕಡೆಗಣಿಸಿ ಹೋಗುವಾಗ ಆತನನ್ನ ಕಷ್ಟಪಟ್ಟು ಆಟೋದೊಳಗೆ ಕೂರಿಸಿ ಮನೆಯವರಂತೆ ಮನೆಗೆ ತಲುಪಿಸುವುದೂ ಇವರೇ.
- ಎಲ್ಲೂ ನಡುರಸ್ತೆಯಲ್ಲಿ ಯಾರೋ ಅಪಘಾತಕ್ಕೆ ಸಿಕ್ಕಿ ನಲುಗುತ್ತಿದ್ದಾಗ ಅಥವಾ ಯಾರದೋ ಮನೆಯಲ್ಲಿ ಮಧ್ಯರಾತ್ರಿಯಲ್ಲಿ ಯಾರಿಗೋ ಆರೋಗ್ಯ ಕೈ ಕೊಟ್ಟಾಗ ನಡು ರಾತ್ರಿ ಎನ್ನವುದನ್ನೂ ಲೆಕ್ಕಿಸದೆ ಆಸ್ಪತ್ರೆಗೆ ತಲುಪಿಸುವುದೂ ಇದೇ ಆಟೋ ಚಾಲಕರು.
ಖಂಡಿತವಾಗಿ ಎಲ್ಲೋ ಮೂರ್ನಾಲ್ಕು ಜನ ಆಟೋ ಚಾಲಕರು ತಪ್ಪು ಮಾಡಿರಬಹುದು, ಅವರ ಕರ್ತವ್ಯವನ್ನು ಮರೆತಿರಬಹುದು. ಹಾಗಂತ ಆಟೋ ಚಾಲಕರೆಲ್ಲರೂ ಹಾಗೆಯೇ ಎಂದು ಬಿಂಬಿಸುವುದು ಎಷ್ಟು ಸರಿ? ಇಷ್ಟೆಲ್ಲಾ ನಮಗಾಗಿ ಮಾಡುವ ಅವರಿಗೇಕೆ ನಾವು ಸಣ್ಣ ಗೌರವವನ್ನು ನೀಡಲೂ ಹಿಂಜರಿಯುತ್ತೇವೆ?
ಇನ್ನಾದರೂ ಇವರಿಗೆ ಗೌರವ ನೀಡೋಣ. ನಮ್ಮ ದುಡ್ಡಿನ ಅಹಂಕಾರದಲ್ಲಿ, ಶ್ರೀಮಂತಿಕೆಯ ಪೊಗರಿನಲ್ಲಿ ಅವರ ವಯಸ್ಸನ್ನೂ ಲೆಕ್ಕಿಸದೆ ನಮ್ಮ ಮನೆಯ ಕೆಲಸದವರಂತೆ ನಡೆಸಿಕೊಳ್ಳುವುದು ಬೇಡ. ಯಾಕೆಂದರೆ ಎಷ್ಟೋ ಮನೆಗಳಲ್ಲಿ, ಹೆಚ್ಚೇಕೆ ನಮ್ಮ ಮನೆಯಲ್ಲೂ ಇದೇ ಆಟೋ ನಂಬಿಕೊಂಡು ಸಂಸಾರ ನಡೆಸುವರಿರುತ್ತಾರೆ.
ಕೊನೆಯದಾಗಿ ಎಲ್ಲಾ ಆಟೋ ಚಾಲಕ ಬಂಧುಗಳಿಗೆ ನಿಮ್ಮ ಸಾರ್ವಜನಿಕ ಸೇವೆಗೆ ನನ್ನ ತುಂಬು ಹೃದಯದ ಧನ್ಯವಾದಗಳು. ಇನ್ನಾದರೂ ಹಲೋ…ಆಟೋ… ಎಂದು ಕರೆಯುವ ನಮ್ಮ ಗುಣ ಬದಲಾಗಬಹುದೇನೋ ಎನ್ನುವ ನಿರೀಕ್ಷೆಯಲ್ಲಿ…..
ಲೇಖನ ಮತ್ತು ಚಿತ್ರ: ವಿ.ಜೆ. ಪ್ರದೀಪ್ ಪುತ್ರನ್ ಕೋಟ
Discussion about this post