ನಿತ್ಯ ಮಾಧ್ಯಮಗಳ ಮೂಲಕ, ಸಾಮಾಜಿಕ ಜಾಲತಾಣಗಳ ಮೂಲಕ ನಾವು ಆಗಾಗಿನ ವಿದ್ಯಮಾನಗಳನ್ನು ನೋಡುತ್ತಿರುತ್ತೇವೆ. ಆಡಳಿತಾರೂಢ ಪಕ್ಷಕ್ಕೆ ಬೆಂಬಲವಾಗಿ ಅನ್ಯ ಪಕ್ಷದವರು ಪಕ್ಷಾಂತರ ಮಾಡುತ್ತಿರುವ ಹಲವಾರು ಘಟನೆಗಳಿವೆ. ಇದನ್ನು ಖಂಡಿಸುವವರು, ವಿರೋಧಿಸುವವರನ್ನೂ ನೋಡುತ್ತೇವೆ. ಮಾತ್ರವಲ್ಲ, ಇದನ್ನು ಪಕ್ಷದಲ್ಲಿದ್ದ ಮೊದಲಿನವರು ಸಹಿಸದೆ ನಿಷ್ಕ್ರಿಯರಾಗುವುದು ಅಥವಾ ಪಕ್ಷ ಬಿಟ್ಟು ಹೋಗುವಂತದ್ದೂ ಇದೆ. ಅಂತೂ ಯಾವುದು ಸರಿ, ಯಾವುದು ತಪ್ಪು ಎಂಬ ನಿರ್ಣಯಕ್ಕೆ ಬರಲಾರದೆ ಒದ್ದಾಟ, ಗೊಂದಲ ನಡೆಯುತ್ತಿರುತ್ತದೆ. ಅದೇನೇ ಇರಲಿ ನಮಗೆ ತತ್ವಾಧಾರಿತವೇ ಮುಖ್ಯವಾಗುತ್ತದೆ.
ಯಾವ ತತ್ವ?
ಈಗ ಕೇಂದ್ರದಲ್ಲಿ ಬಿಜೆಪಿ ಸರಕಾರ ಇದೆ. ನಾವು ನೋಡುತ್ತಿದ್ದಂತೆ ಕಮ್ಯುನಿಸ್ಟ್, ಕಾಂಗ್ರೆಸ್ ಇತ್ಯಾದಿ ಮುಖಂಡರುಗಳು ಪಕ್ಷಾಂತರ ಮಾಡಿ ಬಿಜೆಪಿ ಸೇರುತ್ತಿದ್ದಾರೆ. ಬಿಜೆಪಿ ಪಕ್ಷ ಪ್ರೇಮಿಗಳು ಇದನ್ನು ಖಂಡಿಸಿದ್ದೂ ಇದೆ, ಸ್ವಾಗತಿಸಿದ್ದೂ ಇದೆ. ಖಂಡಿಸುವುದು ಯಾಕೆಂದರೆ ಈ ಪಕ್ಷಾಂತರಿಗಳು ಹಿಂದೆ ಬಿಜೆಪಿಯನ್ನು, ಮೋದಿಯವರನ್ನು ಹಿಗ್ಗಾಮುಗ್ಗಾ ಠೀಕಿಸಿದ್ದೂ ಇದೆ. ಪಕ್ಷದ ಬೆಂಬಲಿಗರು ಕೂಡಾ ಇಂತವರಿಗೆ ಉಗಿದದ್ದೂ ಇದೆ. ಹಾಗಾಗಿ ಇಂತಹ ವಿದ್ಯಾಮಾನಗಳನ್ನು ಖಂಡಿಸುತ್ತಾರೆ. ಆದರೆ ಇಲ್ಲೊಂದು ವಾಸ್ತವ ಸತ್ಯ ಇದೆ.
ಏನದು ವಾಸ್ತವ ಸತ್ಯ?
ಬಹಳ ಪುರಾತನದಲ್ಲಿಯೂ ಇಂತಹ ಪಕ್ಷಾಂತರ ಘಟನೆಗಳು ಸಿಗುತ್ತದೆ. ಚಕ್ರವರ್ತಿಯು ಈ ಪಕ್ಷಾಂತರಿಗಳನ್ನು ಒಳಗೆ ಕರೆಸಿದ್ದೂ ಇದೆ. ಯಾಕೆ? ಒಬ್ಬ ರಾಜನಿಗೆ ಮಹತ್ತರವಾದ ಜವಾಬ್ದಾರಿ ಎಂದರೆ ಪ್ರಜೆಗಳ ರಕ್ಷಣೆ, ದೇಶಾಭಿವೃದ್ಧಿ. ಶತ್ರು ಪಾಳಯವನ್ನು ಸಂಪೂರ್ಣ ನಾಶ ಮಾಡಲು ಅಸಾಧ್ಯ. ಅಳಿದುಳಿದ ಶತ್ರು ಪಾಳಯಗಳ ಮುಖಂಡರು, ಆಡಳಿತಗಾರರ(ಚಕ್ರವರ್ತಿ) ಮೇಲೆ ದ್ವೇಷ ಸಾಧಿಸಿದರೆ? ಶತ್ರುತ್ವ ಬರುವುದು ತತ್ವ ಸಿದ್ಧಾಂತಗಳ ಭಿನ್ನ ಮತಗಳಿಂದಾಗಿ. ಅಂತಹ ಭಿನ್ನಮತೀಯ ಶತ್ರುಗಳನ್ನು ಪೂರ್ಣ ನಾಶಮಾಡಲು ಅಸಾಧ್ಯ. ಆಗ ಚಕ್ರವರ್ತಿಯು ಅವರಿಗೆ ತಮ್ಮ ಜತೆ ಸೇರಲು ಅವಕಾಶ ಮಾಡಿಕೊಡಲೇ ಬೇಕಾಗುತ್ತದೆ. ಆಗ ಆಡಳಿತವು ಉತ್ತಮಗೊಳ್ಳುತ್ತದೆ. ಅಲ್ಲದೆ ಶತ್ರುವು ಚಕ್ರವರ್ತಿಯ ಸ್ವಾಧೀನಕ್ಕೆ ಬಂದಂತಾಗುತ್ತದೆ.
ಈಗ ಮೋದಿಯವರು ಯಾವುದೋ ಹಳ್ಳಿಯಲ್ಲಿ ಶತೃಕೃತ ವಿಧ್ವಂಸಕ ಕೃತ್ಯಗಳನ್ನು ತಡೆಯಲು ಸಾಧ್ಯವೇ? ಇನ್ನೊಂದೆಡೆ ಪಕ್ಷದ ಅಪಪ್ರಚಾರವನ್ನು ನಿಲ್ಲಿಸುವುದಕ್ಕೂ ಕಷ್ಟವೇ. ಅಪಪ್ರಚಾರಗಳು ಬಲಿಷ್ಟವಾದರೆ ಪ್ರಧಾನಮಂತ್ರಿ ಮತ್ತು ಆ ಪಕ್ಷದ ವರ್ಚಸ್ಸು ಹಾಳಾಗುವುದಕ್ಕೂ ಕಾರಣವಾಗುತ್ತದೆ. ಹಾಗಾಗಿ ಪಕ್ಷಾಂತರ ಮಾಡಿ ಬರುವವರನ್ನು ಪಕ್ಷ ಸಿದ್ಧಾಂತದ ಅಡಿಯಲ್ಲಿ ಸ್ವಾಗತಿಸಲೇಬೇಕು. ಹೀಗೆ ಮಾಡಿದರೆ ದೇಶದ ಪರಂಪರೆ, ಅಖಂಡತೆಗೆ ಧಕ್ಕೆಯಾಗದು. ಒಂದೆಡೆ ಮತಾಂಧ ಉಗ್ರರನ್ನು ಧಮನಿಸಲು, ಅದೇ ಜನಾಂಗದ ಸಾತ್ವಿಕರನ್ನು ಸ್ವಾಗತಿಸುವ ಮೂಲಕ ಮತಾಂಧ ಉಗ್ರರ ಬಲವನ್ನು ತಡೆಯಬಹುದು.
ರಾಮಾಯಣದಲ್ಲಿ ಸಜ್ಜನನಾದ ವಿಭೀಷಣನು ರಾಮನ ಪರಮಶತ್ರು ರಾವಣನ ಸಹೋದರ. ರಾವಣನ ವಧೆಯ ನಂತರ ವಿಭೀಷಣನಿಗೆ ಲಂಕೆಯಲ್ಲಿ ಪಟ್ಟಾಭಿಷೇಕ ಮಾಡಿದ ಮೇಲೆ ಲಂಕೆಯಿಂದ ಭಾರತಕ್ಕೆ ಒದಗುವ ಆತಂಕ ದೂರವಾಯ್ತು. ಒಂದು ವೇಳೆ ವಿಭೀಷಣನನ್ನು ದೂರ ಇಡುತ್ತಿದ್ದರೆ ಅವನೂ ಕೆಟ್ಟವನಾಗಿ ಆತಂಕ ಬರುವಂತಹ ಸನ್ನಿವೇಶಗಳಿತ್ತು. ಮಹಾಭಾರತದಲ್ಲಿ ಪಾಂಡವರ ಪರಮ ಶತ್ರು ದುರ್ಯೋಧನನ ಪರಮಾಪ್ತ ಕರ್ಣನ ಮಗ ವೃಷಕೇತುವನ್ನು ಧರ್ಮರಾಯ ಯುದ್ಧಾನಂತರ ರಾಜ್ಯ ನೀಡಿ ತನ್ನವನನ್ನಾಗಿಸಿಕೊಂಡ. ಚಂದ್ರಗುಪ್ತನ ಪರಮ ಶತ್ರು ನಂದರ ಸದೆಬಡಿದ ನಂತರ, ನಂದರ ಪರಮ ಭಕ್ತನೂ, ನಿಷ್ಟನೂ ಆದಂತಹ ಅಮಾತ್ಯರಾಕ್ಷಸನು ಚಂದ್ರಗುಪ್ತನನ್ನು ಮುಗಿಸಲು ತನ್ನ ದ್ವೇಷದ ಕಿಡಿ ಹಾರಿಸುತ್ತಿದ್ದ. ಇದನ್ನರಿತ ಚಾಣಕ್ಯನು ಕೊನೆಗೆ ಅಮಾತ್ಯನನ್ನೇ ಪ್ರಧಾನ ಮಂತ್ರಿ ಮಾಡಿ ನಿರಾಳನಾದ.
ಇದೇ ಪ್ರಕ್ರಿಯೆಗಳು ಈಗಲೂ ನಡೆಯುತ್ತಿದೆ, ಮುಂದೆಯೂ ನಡೆಯಬಹುದು. ಹಾಗಾಗಿ, ಅನ್ಯಪಕ್ಷಗಳಿಂದ ಬರುವವರನ್ನು ಸ್ವಾಗತಿಸಲೇಬೇಕು. ಆದರೆ ನಮ್ಮ ದೇಶ ರಕ್ಷಣೆಯ, ಪರಂಪರೆಯ ಉಳಿವಿನ ತತ್ವ ಸಿದ್ಧಾಂತಕ್ಕೆ ವಿರೋಧ ಆಗದಂತೆ ಆಡಳಿತಾರೂಢ ಪಕ್ಷವು ನಿಯಂತ್ರಿಸಬೇಕು. ಒಟ್ಟಿನಲ್ಲಿ ದೇಶದ ಪ್ರಜೆಗಳ ಹಿತಾಸಕ್ತಿಯೇ ಮಖ್ಯ ಎಂಬ ತತ್ವವೇ ನಮಗೆ ಮುಖ್ಯ.
ಲೇಖನ: ಪ್ರಕಾಶ್ ಅಮ್ಮಣ್ಣಾಯ, ಜ್ಯೋರ್ತಿವಿಜ್ಞಾನಂ
Discussion about this post