ಯಾರಿಗಾದರೂ ಅನಿಸುತ್ತದೆ ಪ್ರಸ್ತುತ ರಾಜಕೀಯ ಪರಿಸ್ಥಿತಿ ಡೋಲಾಯಮಾನವಾಗಿದೆ. ಯಾವುದೇ ಪುಢಾರಿಕೆಯ ಲಕ್ಷಣಗಳಿಲ್ಲದ, ಸಾತ್ವಿಕ ಮನೋಭಾವದ ಕುಮಾರಸ್ವಾಮಿ ಅವರಿಗೆ ಮೈತ್ರಿ ಬಳಗದ ಶಾಸಕರ ಹಠಾತ್ ರಾಜಿನಾಮೆ ಪ್ರಸಂಗ ಎದುರಾಗಿದೆ.
ಮೂಲತಃ ಮೈತ್ರಿಯಾದದ್ದೇ ಅಧಿಕಾರ ಉಳಿಸಿಕೊಳ್ಳುವ ಕಾಂಗ್ರೆಸ್ಸಿನ ಹೆಣಗಾಟದಲ್ಲಿ. ಸರಿಯಾದ ಆಡಳಿತ ನೀಡಿದ್ದರೆ ಕಾಂಗ್ರೆಸ್’ಗೆ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲುಂಟಾಗುತ್ತಿರಲಿಲ್ಲ. ಯಾಕೆಂದರೆ ಸಾಂಪ್ರದಾಯಿಕ ಕ್ಷೇತ್ರವನ್ನು ಮಗನಿಗೆ ಬಿಟ್ಟು ಸಿದ್ಧರಾಮಯ್ಯನವರು ಜೆಡಿಎಸ್ ಎದುರು ಸೋಲೊಪ್ಪಕೊಳ್ಳಬೇಕಾಯಿತು. ಆದರೆ ಆತ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲರಿಗಿಂತ ಅದೃಷ್ಟವಂತ ರಾಜಕಾರಣಿ. ಏಕೆಂದರೆ ಹಿರಿಯ ನಾಯಕರುಗಳಾರೂ ಅವರ ಸಿಎಂ ಅವಧಿಯಲ್ಲಿ ಅದೇ ಗಾದಿಗೆ ತಲೆ ತೂರಿಸಲಿಲ್ಲ. ಇದೇ ಅವರಿಗೆ ಭಾಗ್ಯ ಖುಲಾಯಿಸುವಂತೆ ಮಾಡಿತು. ಯೋಜನೆಗಳು ಮೇಲ್ನೋಟಕ್ಕೆ ಜನಪ್ರಿಯ. ಆದರೆ ಜಾರಿಗೆ ಬರುವಲ್ಲಿ ನಡುವೆಯೇ ದುರುಪಯೋಗವಾಗಿ ಸಫಲವಾಗಲಿಲ್ಲ. ಭಾಗ್ಯಗಳ ಧಾರೆಯನ್ನೇ ಹರಿಸಿದರೂ ಮತಗಳಾಗಿ ಪರಿವರ್ತಿಸಲಾಗಲಿಲ್ಲ.
ಅದೃಷ್ಟ ಅವರಿಗೆ ಕೈ ಕೊಡಲಿಲ್ಲ ಬದಾಮಿಯ ಜನತೆ ಕೈ ಹಿಡಿದರು. ಈ ಅದೃಷ್ಟವೇ ಅವರನ್ನು ದೆಹಲಿಯ ಕಾಂಗ್ರೆಸ್ ಮಂದಿ ಮೆಚ್ಚುವಂತೆ ಮಾಡಿತು.
ನಿಜವಾಗಿ ಹಿರಿಯ ನಾಯಕ ಖರ್ಗೆ ಅವರು ಇವರ ಅವಧಿಯಲ್ಲೇ ಸಿಎಂ ಆಗಬಹುದಿತ್ತು. ಪಕ್ಷ ಈ ಪ್ರಯೋಗ ಮಾಡಿದ್ದಲ್ಲಿ ಹಿಂದುಳಿದ ವರ್ಗದವರ ಬೆಂಬಲ ಹೆಚ್ಚಾಗುತ್ತಿತ್ತು. ಈ ಐದೂ ವರ್ಷಗಳಲ್ಲಿ ಮೋದಿ ಅಲೆಯ ಹಿನ್ನೆಲೆಯನ್ನ ಸೂಕ್ಷ್ಮವಾಗಿ ಅಭ್ಯಸಿಸಿದ್ದರೆ ಜಾಗೃತರಾಗಿ ಚುನಾವಣೆಯನ್ನು ಎದುರಿಸಬಹುದಿತ್ತು. ಏಕೆಂದರೆ ಬಹಳಷ್ಟು ಬಿಜೆಪಿ ಅಭ್ಯರ್ಥಿಗಳು ಹೊಸಮುಖಗಳೇ ಆಗಿದ್ದು ಮೋದಿ ಬಲದಿಂದ ಆಯ್ಕೆಯಾಗುವ ಸನ್ನಿವೇಶ ಬಂತು.
ಕಾಂಗ್ರೆಸ್ ನ ಬಹಳಷ್ಟು ಮಂದಿ ಅಧಿಕಾರದ ಅಮಲಲ್ಲೇ ತೇಲುವ ಸ್ವಭಾವ ತೋರಿಸಿಕೊಂಡಿದ್ದಾರೆ. ಇದು ಬಿಜೆಪಿಗೆ ವರವಾಯಿತು. ಬಿಜೆಪಿ ರಾಜ್ಯದಲ್ಲಿ ಅಧಿಕಾರ ಸೂತ್ರ ಹಿಡಿದಾಗ ಒಳಜಗಳದ ಪರಿಣಾಮವಾಗಿ ಮತದಾರ ಅವರಿಗೆ ಸಂಪೂರ್ಣ ಬಹುಮತ ನೀಡಲಿಲ್ಲ. ಅದರ ಫಲವಾಗಿ ಕಾಂಗ್ರೆಸ್ ನವರು ಹಿರಿಯ ದೇವೇಗೌಡರ ಮನೆಬಾಗಿಲು ತಟ್ಟಿದರು. ಇಲ್ಲಿ ಕಾಂಗ್ರೆಸ್ ಸಮಯ ಸಾಧಕತನ ತೋರಿಸಿತೆನ್ನಬಹುದು.
ಅಲ್ಪ ಸ್ಥಾನಗಳಿಗೆ ಧುಮುಧುಮು ಬುಸುಗುಟ್ಟುತ್ತಿದ್ದ ಜೆಡಿಎಸ್’ಗೆ ಅದೃಷ್ಟದ ಬಾಗಿಲು ತೆರೆದಂತಾಯಿತು. ಸಿಎಂ ಆಗುವ ಸುವರ್ಣಾವಕಾಶ ಕುಮಾರಣ್ಣನವರಿಗೆ ಸಿಕ್ಕಿತು. ಯಾವತ್ತೂ ಜೆಡಿಎಸ್ ಬಿಜೆಪಿ ಅಥವಾ ಕಾಂಗ್ರೆಸ್’ನಂತೆ ರಾಜ್ಯವ್ಯಾಪಿ ಬೇರುಗಳಿಲ್ಲ. ಆದರೆ ಈ ಸಿಎಂ ಗಾದಿ ಸಿಕ್ಕಾಗ ಹಿಂದುಮುಂದೂ ನೋಡುವ ಚವಕಾಶಿಗೆ ಸಮಯವಿರಲಿಲ್ಲ.
ಹಿಂದೆ ಎರಡು ಬಾರಿ ಸಮ್ಮಿಶ್ರ ಸರ್ಕಾರ ನಡೆಸಿದ ಅನುಭವ ಕುಮಾರಣ್ಣನವರಿಗಿತ್ತು. ಆದರೆ ಅದರ ಅನುಭವದ ಮೇಲೆ ಈ ಬಾರಿಯ ರಾಜಕೀಯ ಪರಿಸ್ಥಿತಿ ನೋಡಬಹುದಿತ್ತು. ರಾಷ್ಟ್ರಮಟ್ಟದಲ್ಲೂ ನೆಲಕಚ್ಚಿದ ಕಾಂಗ್ರೆಸ್ ಪಕ್ಷದ ಸದ್ಯದ ಇಮೇಜನ್ನು ನೋಡುವ ಜರೂರು ಮಾಡಬೇಕಿತ್ತು. ಹಾಗೆ ಮಾಡಲಿಲ್ಲ. ಹೋಗಲಿ ಹಿರಿಯ ಗೌಡರಿಗೂ ಪ್ರಧಾನಿಗಳಾದಾಗ ಮಿಶ್ರಪಕ್ಷಗಳು ಹೇಗೆ ಬೆನ್ನಲ್ಲಿ ಇರಿದವು ಎಂಬ ನೋವೂ ಇತ್ತು. ಇವೆಲ್ಲದರ ವಿಸ್ಮೃತಿ ಈಗ ಕಾಡುತ್ತಿದೆ. ಏಕೆಂದರೆ ಈಗಿನ ಮೈತ್ರಿಯ ಪಕ್ಷಗಳಲ್ಲಿ ಹೊಂದಾಣಿಕೆ, ಸಮನ್ವಯತೆ ಅಗಾಧ ಕೊರತೆಯಿದೆ ಎಂಬುದನ್ನು ಹಿರಿಯ ನಾಯಕ ವಿಶ್ವನಾಥ್ ಅವರೊಬ್ಬರೇ ಸಂಕೇತಿಸುತ್ತಾರೆ.
ಈಗಿನ ಪರಿಸ್ಥಿತಿಯನ್ನು ಕರುಣಾಜನಕ ಎನ್ನದೇ ವಿಧಿಯಿಲ್ಲ. ಏಕೆಂದರೆ ಸಂಖ್ಯಾಬಲದ ದೃಷ್ಠಿಯಿಂದ ಬಹುಮತ ನಿರ್ಧರಿಸುವ ಸರಳ ಲೆಕ್ಕಾಚಾರ ಪಾರದರ್ಶವಾಗಿ ಕಾಣುತ್ತಿದೆ. ಆದರೂ ನ್ಯಾಯಾಂಗದ ಅಂಗಳದಲ್ಲಿ ಈ ಶಾಸಕರ ರಾಜೀನಾಮೆ ಪ್ರಸಂಗ ಜಾರಿ ಬಿದ್ದಿದೆ. ತೀರ್ಪಿಗೆ ಕಾಯಲೇಬೇಕು.
ಈ ನಡುವೆ ಹಿರಿಯ ರಾಜಕಾರಣಿ ಯಡ್ಯೂರಪ್ಪನವರಿಗೆ ಕೈಗೆ ಬಂದದ್ದು ಬಾಯಿಗೆ ಬರುತ್ತಿಲ್ಲ ಎನ್ನುವ ವಿಲಿವಿಲಿ ಒದ್ದಾಟ. ಆದರೂ ಸದ್ಯ ಅವರು ಮುಂಚಿನಂತೆ ಮಾತಿಗೆ ಮಿತಿ ಹಾಕಿದ್ದಾರೆ. ಆದರೂ ನಡುವೆ ಸಕಾರಣ ಕೊಟ್ಟು ಸ್ಪೀಕರ್ ಅವರು ನಡಕೊಳ್ಳುತ್ತಿರುವ ರೀತಿಯನ್ನು ಕೆಲವು ರಾಜಕೀಯ ಪಕ್ಷಗಳು, ಮಾಧ್ಯಮಗಳು ವಿಳಂಬ ನಡೆ ಎಂದು ಟೀಕಿಸುತ್ತಿವೆ.
ಇನ್ನೂ ಒಂದು ತಿವಿದಂತೆ ಬಂದ ಸಿಎಂ ಅವರು ತಾವು ವಿಶ್ವಾಸಮತ ಕೋರಲು ಸಿದ್ಧನಿರುವೆ ಎಂಬ ಹೇಳಿಕೆ ಸಡನ್ನಾಗಿ ಬಿಜೆಪಿಯನ್ನೂ ಕೊಂಚ ದಂಗು ಬಡಿಸಿದೆ. ಅಲ್ಲದೇ ತಮ್ಮ ಪಕ್ಷದ ಶಾಸಕರನ್ನೇ ಒಂದೆಡೆ ಹಿಡಿದಿಟ್ಟುಕೊಳ್ಳುವ ಜೋಪಾನದ ಕೆಲಸಮಾಡುವಂತೆ ಪ್ರೇರೇಪಿಸಿದೆ. ನೂರೈದು ಶಾಸಕರಲ್ಲಿ ಯಾರು ಎಲ್ಲಿ ಕೈಕೊಡುವರೋ ಎಂಬ ಆತಂಕಕ್ಕೀಡುಮಾಡಿದೆ.
ಒಟ್ಟಿನಲ್ಲಿ ಮುಂಬೈ ಶಾಸಕರ ಆವಾಸ, ಡಿಕೆಶಿಯವರ ಅಸಫಲ ರಾಯಭಾರ, ಮಾಜಿ ಸಿಎಂ ಅವರ ತೊಳಲಾಟ ಇವೆಲ್ಲ ರಾಜ್ಯದ ರಾಜಕೀಯವನ್ನು ದೇಶ ನೋಡುವಂತೆ ಮಾಡಿದೆ.. ನೋಡೋಣ.
ಸಂಪಾದಕೀಯ: ಡಾ.ಸುಧೀಂದ್ರ
Discussion about this post