ರಾಜ್ಯ ಸಮ್ಮಿಶ್ರ ಸರ್ಕಾರ ಅವಸಾನದ ಹಂತಕ್ಕೆ ಬಂದು ನಿಂತಿರುವಂತೆಯೇ, ಈ ಹಂತದಲ್ಲಿ ರಾಜ್ಯಪಾಲರ ಮಧ್ಯಪ್ರವೇಶ ಭಾರೀ ಕುತೂಹಲವನ್ನು ಕೆರಳಿಸಿದ್ದು, ಬಹುತೇಕ ನಾಳೆ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಬಂದರೂ ಅಚ್ಚರಿಯಿಲ್ಲ ಎಂಬ ಅನುಮಾನ ಹಾಗೂ ಅಭಿಪ್ರಾಯಗಳು ವ್ಯಕ್ತವಾಗಿವೆ.
ವಿಶ್ವಾಸ ಮತಯಾಚನೆಗೆ ಸ್ಪೀಕರ್ ವಿಳಂಬ ಮಾಡುತ್ತಿದ್ದಾರೆ ಎಂಬ ವಿಚಾರದಲ್ಲಿ ಸದನದಲ್ಲಿ ಭಾರೀ ಕೋಲಾಹಲ ಏರ್ಪಟ್ಟ ಹಿನ್ನೆಲೆಯಲ್ಲಿ ರಾಜ್ಯಪಾಲರು ಗುರುವಾರವೇ ವಿಶ್ವಾಸಮತ ಪ್ರಕ್ರಿಯೆ ಮುಗಿಸುವಂತೆ ಸ್ಪೀಕರ್’ಗೆ ಸಂದೇಶ ರವಾನಿಸಿದ್ದರು. ಆದರೆ ಅದಾಗಲೇ ಸ್ಪೀಕರ್ ರಮೇಶ್ ಕುಮಾರ್ ತಾವು ಎಜೆ ಉದಯ್ ಹೊಳ್ಳ ಜತೆ ವಿಪ್ ಜಾರಿ ಸಂಬಂಧ ಚರ್ಚೆಗೆ ತೆರಳಿದ್ದ ಕಾರಣ ಸದನವನ್ನು ಉಪಸಭಾಪತಿಗಳು ಮುನ್ನಡೆಸಿದ್ದರು.
ಈ ಬೆಳವಣಿಗೆಯ ನಡುವೆಯೇ, ಶುಕ್ರವಾರ ಮಧ್ಯಾಹ್ನ 1.30ರ ಒಳಗಾಗಿ ಬಹುಮತ ಸಾಬೀತು ಮಾಡಬೇಕು ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ರಾಜ್ಯಪಾಲ ವಜುಭಾಯಿವಾಲಾ ನಿರ್ದೇಶನ ನೀಡಿದ್ದಾರೆ.
ರಾಜ್ಯ ರಾಜಕೀಯ ಬೆಳವಣಿಗೆಯ ನಾಟಕ ಸದನದಲ್ಲಿ ಆರಂಭವಾಗಿದ್ದು, ಇದು ಅಲ್ಲೋಲ ಕಲ್ಲೋಲ ಉಂಟಾಗಿರುವ ಹಿನ್ನೆಲೆಯಲ್ಲಿ ರಾಜ್ಯಪಾಲರೂ ಈ ಸ್ಪಷ್ಟ ನಿರ್ದೇಶನ ನೀಡಿರುವ ಅವಧಿಯೊಳಗೆ ಬಹುಮತ ಸಾಬೀತು ಮಾಡುವ ಅನಿವಾರ್ಯತೆ ಎದುರಾಗಿದೆ. ಒಂದು ವೇಳೆ ಈ ಅವಧಿಯೊಳಗೆ ಬಹುಮತ ಸಾಬೀತು ಮಾಡದೇ ಇದ್ದರೆ, ಅಥವಾ ಕಲಾಪವನ್ನು ಮುಂದೂಡುವ ಪ್ರಹಸನವನ್ನು ನಡೆಸಿದರೆ ರಾಜ್ಯಪಾಲರು ಸಾಂವಿಧಾನಿಕ ಅಧಿಕಾರವನ್ನು ಚಲಾಯಿಸುವ ಸಾಧ್ಯತೆಗಳಿವೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ. ಅಂದರೆ, ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರಕ್ಕೆ ಬಹುಮತ ಇದೆ ಎಂದು ಸಾಬೀತು ಮಾಡದೇ ಇದ್ದರೆ, ರಾಜ್ಯದಲ್ಲಿ ಆಡಳಿತ ವೈಫಲ್ಯ ಎಂದು ಪರಿಗಣಿಸಿ ಸಂವಿಧಾನದ ಆರ್ಟಿಕಲ್ 256ರ ಅನ್ವಯ ರಾಷ್ಟ್ರಪತಿ ಆಡಳಿತಕ್ಕೆ ರಾಜ್ಯಪಾಲರು ಶಿಫಾರಸ್ಸು ಮಾಡುವ ಸಾಧ್ಯತೆ ಹೆಚ್ಚಿದೆ.
ಖ್ಯಾತ ಜ್ಯೋತಿಷಿ ಶ್ರೀ ಪ್ರಕಾಶ್ ಅಮ್ಮಣ್ಣಾಯ ಏನನ್ನುತ್ತಾರೆ?
ನಿಖರ ಜ್ಯೋತಿಷ್ಯ ನುಡಿಯುವಲ್ಲಿ ರಾಷ್ಟ್ರಮಟ್ಟದಲ್ಲಿ ಖ್ಯಾತರಾಗಿರುವ ಶ್ರೀ ಪ್ರಕಾಶ್ ಅಮ್ಮಣ್ಣಾಯ ಅವರೊಂದಿಗೆ ಇಂದಿನ ಬೆಳವಣಿಗೆ ಹಿನ್ನೆಲೆ ಕುರಿತಂತೆ ಚರ್ಚೆ ನಡೆಸಿದಾಗ ಅವರು ಜ್ಯೋತಿಷ್ಯದ ಆಯಾಮದಲ್ಲಿ ವಿಶ್ಲೇಷಣೆ ಮಾಡಿದ್ದು ಹೀಗಿದೆ:
ಯಾರಿಗೆ ವೃಶ್ಚಿಕ ರಾಶಿಯಲ್ಲಿ ಗುರು ಇದ್ದಾನೋ ಅವರಿಗೆ ಖಿನ್ನತೆಯಲ್ಲಿ ದುಖ ಬರಬಹುದು. ಈ ದಿನದ ವಿಚಾರ ನೋಡಿದಾಗ ವೃಶ್ಚಿಕ ರಾಶಿಗೆ ಚಂದ್ರ ಬಲವೂ ಇದ್ದು, ಗುರುವಿನಿಂದ ದುಃಖವು ಲಭಿಸುತ್ತದೆ.
ಮುಖ್ಯಮಂತ್ರಿಗಳಿಗೆ ಮಿಥುನ ರಾಶಿಯೂ ಆಗಿದ್ದು ಆರರಲ್ಲಿ(ವೃಶ್ಚಿಕ) ಗುರುವು ಅನನುಕೂಲವಾಗಿದ್ದಾನೆ, ಚಂದ್ರನೂ ಅಷ್ಟಮದಲ್ಲಿದ್ದು ಅನಿಷ್ಟನಾಗಿ ಪಥನ ಲಕ್ಷಣವನ್ನು ಸೂಚಿಸುತ್ತಾನೆ. ಅದೂ ಅಲ್ಲದೆ ಗುರುವು ಈಗ ನವಾಂಶದಲ್ಲೂ ಮಕರ ನವಾಂಶದಲ್ಲಿದ್ದು ಅಲ್ಲಿಯೂ ರೋಗ ಲಕ್ಷಣ ನೀಡುತ್ತಾನೆ. ಇಂತಹ ದಿನದಲ್ಲಿ ಈ ಮಿಥುನ ರಾಶಿ ಜನಿತರಿಗೆ ಯಾವುದಾದರೂ ನಿರ್ಣಯಕ್ಕೆ ಹೊರಟರೆ ಅವರೇ ಸ್ಥಾನ ಚ್ಯುತಿಯನ್ನು ಅನುಭವಿಸಬೇಕಾಗುತ್ತದೆ.
ಯಾರಿಗೆ(ಸಿದ್ಧರಾಮಯ್ಯ) ಕನ್ಯಾ ಲಗ್ನವಾಗಿ ವೃಶ್ಚಿಕ ರಾಶಿ ಇರುತ್ತದೋ ಅವರಿಗೆ ಈ ನಿರ್ಣಯವು ಲಾಭವಾಗಬಹುದು. ಇವಿಷ್ಟು ದಿನದ ವಿಶೇಷ. ಇದರ ಪರಿಣಾಮವಾಗಿ ಆದರೆ ಅತಿಯಾದ ಮತ್ಸರದಿಂದ ನನಗೆ ಲಭಿಸದ್ದು ಇತರರಿಗೂ ಲಭಿಸಬಾರದು ಎಂದು ಮೇಲಧಿಕಾರಿಯ(ರಾಜ್ಯಪಾಲರು) ಆದೇಶವನ್ನೂ ಪಾಲಿಸದೆ ರಾಷ್ಟ್ರಪತಿ ಆಡಳಿತವೇ ಬರಲಿ ಎಂದು ಮುಂದುವರೆಯುವ ಸಾಧ್ಯತೆ ಕಾಣುತ್ತದೆ. ಇದನ್ನು ಈ ಹಿಂದೆ ಅನೇಕ ಬಾರಿ ಮೀಡ್ಯಾಗಳಲ್ಲಿ (ಚುನಾವಣಾತ್ಪೂರ್ವವೇ) ನಾನು ಹೇಳಿದ್ದೆ.
ಇನ್ನೊಂದಡೆ ಒಂದು ಅಪಶಕುನವನ್ನೂ ಹೇಳಬೇಕಾಗುತ್ತದೆ. ವಿಜಯನಗರ ಸಾಮ್ರಾಜ್ಯದ ಪರಮಗುರುಗಳಾದ ವ್ಯಾಸರಾಜರ ಮೂಲ ವೃಂದಾವನವನ್ನು ಧ್ವಂಸಗೊಳಿಸಿದ್ದೂ ಇದೇ ಸಂದರ್ಭವಾಗಿರುವುದು ಇದು ಸರಕಾರದ ಫಥನ ಲಕ್ಷಣವೇ ಆಗಿರುತ್ತದೆ. ಅಂದರೆ ರಾಜ್ಯದವರಲ್ಲದವರ ಆಡಳಿತ. (ರಾಷ್ಟ್ರಪತಿ ಆಡಳಿತ). ಇದು ದೇಶದವರೇ ಆಗಿದ್ದರೂ ಇದನ್ನು ಹಿಂದಿನ ಕಾಲದಲ್ಲಿ ಪರಕೀಯರ ಆಡಳಿತ, ಆಕ್ರಮಣ ಎಂದಾಗುತ್ತಿತ್ತು.
ರಾಷ್ಟ್ರಪತಿ ಆಡಳಿತ ಎಂದರೇನು?
ದೇಶದ ಯಾವುದೇ ರಾಜ್ಯದಲ್ಲಿ ಸರ್ಕಾರ ಬಹುಮತ ಕಳೆದುಕೊಂಡರೆ ರಾಜ್ಯಪಾಲರು ವಿಧಾನಸಭೆಯನ್ನು ಸಂವಿಧಾನದ 256ನೆಯ ವಿಧಿಯಂತೆ ಅಮಾನತಿನಲ್ಲಿಡುತ್ತಾರೆ. ಇದರ ಅವಧಿ ಆರು ತಿಂಗಳಾಗಿದ್ದು, ಈ ಅವಧಿಯೊಳಗೆ ಯಾವ ಪಕ್ಷವೂ ಬಹುಮತ ಸಾಬೀತುಪಡಿಸದಿದ್ದರೆ ವಿಧಾನಸಭೆಗೆ ಮತ್ತೆ ಚುನಾವಣೆ ನಡೆಸಲಾಗುತ್ತದೆ.
ಈ ಅವಧಿಯಲ್ಲಿ ರಾಜ್ಯದ ಕಾರ್ಯನಿರ್ವಹಣೆ ಅಧಿಕಾರ ಚುನಾಯಿತ ಮುಖ್ಯಮಂತ್ರಿ ಬದಲಾಗಿ ರಾಷ್ಟ್ರಪತಿ ಕೈಗೆ ಹೋಗುವುದರಿಂದ ಇದನ್ನು ರಾಷ್ಟ್ರಪತಿ ಆಳ್ವಿಕೆ ಎನ್ನಲಾಗುತ್ತದೆ. ರಾಜ್ಯಗಳಲ್ಲಿ ರಾಜ್ಯಪಾಲರು ರಾಷ್ಟ್ರಪತಿಗಳ ಪ್ರತಿನಿಧಿಯಾಗಿದ್ದು, ಅವರು ಸಲಹೆಗಾರರನ್ನು ನೇಮಿಸಿಕೊಳ್ಳುವ ಮೂಲಕ ರಾಜ್ಯದ ದೈನಂದಿನ ಆಡಳಿತವನ್ನು ನೋಡಿಕೊಳ್ಳುತ್ತಾರೆ. ಸಾಮಾನ್ಯವಾಗಿ ಈ ಅವಧಿಯಲ್ಲಿ ಕೇಂದ್ರ ಸರ್ಕಾರದ ನೀತಿಗಳೇ ಇಂತಹ ರಾಜ್ಯದಲ್ಲಿ ಅನುಸರಿಸಲ್ಪಡುತ್ತವೆ.
ಈ ಸಂದರ್ಭದಲ್ಲಿ ರಾಷ್ಟ್ರಪತಿ ಆಡಳಿತ ಹೇರಬಹುದು:
- ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದರೆ
- ರಾಜ್ಯ ಸರ್ಕಾರ ಸಂವಿಧಾನದ ವಿರುದ್ಧವಾಗಿ ಕಾರ್ಯನಿರ್ವಹಿಸಿದರೆ
- ಸರ್ಕಾರದ ಮೈತ್ರಿಕೂಟಗಳು ಭಂಗವಾದರೆ
- ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಎದುರಾದರೆ
- ಯಾವುದೇ ಕಾರಣಗಳಿಂದ ಚುನಾವಣೆ ಮುಂದೂಡಿದರೆ
Discussion about this post