ಭರಮಸಾಗರ: ಗಂಗಾವತಿ ಬಳಿಯ ಆನೆಗುಂದಿ ಗ್ರಾಮದ ಬಳಿಯಿರುವ ನವ ವೃಂದಾವನ ಕ್ಷೇತ್ರದಲ್ಲಿ ಶ್ರೀ ವ್ಯಾಸರಾಜರ ವೃಂದಾವನವನ್ನು ದುಷ್ಕರ್ಮಿಗಳು ಬುಧವಾರ ರಾತ್ರಿ ಸಂಪೂರ್ಣವಾಗಿ ಧ್ವಂಸಗೊಳಿಸಿ ದುಷ್ಕೃತ್ಯವೆಸಗಿರುವುದು ಭಕ್ತರನ್ನು ಕಂಗೆಡಿಸಿದ್ದು, ಈ ಕೃತ್ಯವನ್ನು ಇಲ್ಲಿನ ವಿಪ್ರ ಸಮಾಜ ಹಾಗೂ ಗುರುದರ್ಶಣ ಧಾರ್ಮಿಕ ಸಮಿತಿ ತಿಳಿಸಿದೆ.
ಭರಮಸಾಗರದ ಶ್ರೀರಾಘವೇಂದ್ರ ಕೃಪಾಶ್ರಮದಲ್ಲಿ ಗುರುವಾರ ಸಭೆ ಸೇರಿ ಖಂಡನಾ ನಿರ್ಣಯ ಕೈಗೊಳ್ಳಲಾಯಿತು.
ನವವೃಂದಾವನ ಗಡ್ಡೆಯಲ್ಲಿ ನವರತ್ನದಂತೆ ಮಧ್ಯದಲ್ಲಿ ಕಂಗೊಳಿಸುತ್ತಿದ್ದ ವ್ಯಾಸರಾಯರ ವೃಂದಾವನವನ್ನು ದುಷ್ಕರ್ಮಿಗಳು ಸುಮಾರು 3 ಅಡಿಯಷ್ಟು ನೆಲವನ್ನೂ ಸಹ ಅಗೆದಿದ್ದು, ನಿಧಿ ಆಸೆಗಾಗಿ ಈ ಕೃತ್ಯ ಎಸಗಲಾಗಿದೆ ಎಂದು ಆರೋಪಿಸಲಾಗಿದೆ.
ಈ ವಿಚಾರ ತಿಳಿದ ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥ ಸ್ವಾಮಿಗಳು ನವ ವೃಂದಾವನದ ವ್ಯಾಸರಾಜರ ವೃಂದಾವನದ ಕೆಡವಿದ ವಿಚಾರ ತಿಳಿದು ಬೇಸರ ವ್ಯಕ್ತಪಡಿಸಿದ್ದು, ಸ್ಥಳಕ್ಕೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ.
ಈ ವಿಚಾರ ತಿಳಿದು ಮೈಸೂರು ವಿಪ್ರ ಸಮಾಜ, ಮಾಧ್ವ ಸಮಾಜ, ಹೊಸಪೇಟೆ, ಬಳ್ಳಾರಿ ಮತ್ತು ಗಂಗಾವತಿ ಕ್ಷೇತ್ರದ ಬ್ರಾಹ್ಮಣ ಸಮಾಜದ ಮುಖಂಡರು ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ತಕ್ಷಣ ಈ ಹೀನ ಕೃತ್ಯ ಮಾಡಿದವರನ್ನು ಹಿಡಿದು ಶಿಕ್ಷೆಗೆ ಒಳಪಡಿಸುವಂತೆ ಮನವಿ ಮಾಡಿದ್ದಾರೆ ಎಂಬ ವಿಚಾರವನ್ನು ಗಮನ ಸೆಳೆಯಲಾಯಿತು.
ಕೃಷ್ಣದೇವರಾಯರಿಂದ ಗುರುಗಳ ವೃಂದಾವನವನ್ನು ಕಟ್ಟುವಾಗ ಹಾಕಿರುವ ಅಪಾರ ಪ್ರಮಾಣದ ಬಂಗಾರ ವಜ್ರಕ್ಕಾಗಿ ಈ ಕೃತ್ಯ ಎಸಗಿದ್ದಾರೆ. ಗ್ರಹಣಕಾಲದಲ್ಲಿ ಈ ರೀತಿ ಮಾಡಿದ್ದಾರೆಂದು ಸ್ಪಷ್ಟವಾಗಿದೆ. ಈ ನೀಚರು ಎಲ್ಲಿದ್ದರೂ ಬಂಧಿಸಬೇಕೆಂಬುದು ನಮ್ಮ ಆಗ್ರಹವಾಗಿದೆ ಎಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಕರ್ನಾಟಕದ ಐತಿಹಾಸಿಕ ಮಹಾನ್ ಯತಿ ಪರಂಪರೆಯ ವೃಂದಾವನ, ದೇವಸ್ಥಾನ ಇತ್ಯಾದಿಗಳ ಸಂರಕ್ಷಣೆಗೆ ಸೂಕ್ತ ವ್ಯವಸ್ಥೆ ಮಾಡಬೇಕೆಂದು ಸರ್ಕಾರಕ್ಕೆ ಪತ್ರ ಬರೆಯಲು ತೀರ್ಮಾನಿಸಲಾಗಿದೆ ಎಂದು ಸಮಿತಿ ಸದಸ್ಯರು ತಿಳಿಸಿದ್ದಾರೆ.
ವಿಜಯನಗರ ಕರ್ನಾಟಕ ಸಾಮ್ರಾಜ್ಯದ ರಾಜ ಗುರುಗಳೂ, ಕರ್ನಾಟಕ ವಿದ್ಯಾರತ್ನ ಸಿಂಹಾಸನಾಧೀಶ್ವರರೂ, ಮಧ್ವ ಮತೋದ್ಧಾರಕರೂ, ಶ್ರೀ ಪ್ರಹ್ಲಾದರಾಜಾವತಾರಿಗಳೂ, ಶ್ರೀ ರಾಯರ ಪೂರ್ವಾವತಾರಿಗಳೂ, ಚಂದ್ರನಂತೆ ವಿಶಿಷ್ಟ ಧರ್ಮಗಳಿಂದ ಯುಕ್ತರಾಗಿ ಮಧ್ವಾಕಾಶದಲ್ಲಿ ಮಿನುಗುತ್ತಿರುವ ಚಂದ್ರಮರೇ ಶ್ರೀ ವ್ಯಾಸರಾಜ ಗುರುಸಾರ್ವಭೌಮರು!!
ಈ ದಿನ ಮಾಧ್ವರೆಲ್ಲರಿಗೂ ಗೌರವ ಸಿಗುತ್ತಿದೆಯೆಂದರೆ ಅದು ಶ್ರೀ ವ್ಯಾಸರಾಜ ಗುರುಸಾರ್ವಭೌಮರ ಭಿಕ್ಷೆ! ಅಲ್ಲದೆ, ತ್ರಿಮತಸ್ಥರೂ ಭಕ್ತಿ – ಶ್ರದ್ಧೆಗಳಿಂದ ಗೌರವಿಸಲ್ಪಡುವ ಮೇರು ದ್ವೈತ ವಿದ್ಯಾ ಸಿಂಹ ಶ್ರೀ ವ್ಯಾಸರಾಜ ಗುರುಸಾರ್ವಭೌಮರ ಮೂಲ ವೃಂದಾವನವನ್ನು ಧ್ವಂಸ ಮಾಡಿದ ವಿಷಯ ಕೇಳಿ ಬಹಳ ದುಃಖವಾಗಿದೆ!! ಕಾರಣ ಶ್ರೀವ್ಯಾಸರಾಜರು ಮಾಧ್ವರಿಗೆಲ್ಲರಿಗೂ ತಾಯಿ!! ಆ ತಾಯಿಯ ವೃಂದಾವನವನ್ನು ಧ್ವಂಸ ಮಾಡಿದವರನ್ನು ಶ್ರೀ ಹರಿ ವಾಯು ಗುರುಗಳು ಕ್ಷಮಿಸೋದಿಲ್ಲ!!
ಮಾಧ್ವರೆಲ್ಲರೂ ಮಾತ್ರವಲ್ಲದೇ ಸಮಸ್ತ ವಿಪ್ರ ವೃಂದ ಸೇರಿ ತಕ್ಷಣ ಕಾರ್ಯ ಪ್ರವೃತ್ತರಾಗಲು ಎಲ್ಲರಲ್ಲಿಯೂ ಸವಿನಯ ವಿನಮ್ರ ಮನವಿ!
ಲೇಖನ: ಮುರಳೀಧರ್ ನಾಡಿಗೇರ್

















