ಶರಾವತಿ ಉಳಿಸಿ ಹೋರಾಟಕ್ಕೆ ಕೈ ಜೋಡಿಸಿ
ಇವತ್ತು ಜಗತ್ತು ಅಭಿವೃದ್ಧಿಯ ಹಿಂದೇ ಓಡುತ್ತಿದೆ. ಇದಕ್ಕೆ ಜಗತ್ತಿನ ಯಾವ ದೇಶ ಸಹ ಹಿಂದೆ ಬಿದ್ದಿಲ್ಲ. ಮುಂದುವರೆದ ದೇಶಗಳಿಂದ ಹಿಡಿದು ಕಡುಬಡವ ದೇಶಗಳು ಸಹ ಅಭಿವೃದ್ಧಿ ಬಯಸುತ್ತೆ. ಆದರೆ ಈ ಅಭಿವೃದ್ಧಿಯ ದಾಹ ನೋಡಿದರೆ ಅರೆಕ್ಷಣ ಭಯವಾಗುತ್ತದೆ. ಕಾರಣ ಅಭಿವೃದ್ಧಿ ಹೆಸರಲ್ಲಿ ಮನುಷ್ಯ ತನ್ನ ಉಳಿವಿಗೆ ಕಾರಣವಾದ ಪರಿಸರದ ಸರ್ವನಾಶ ಮಾಡುತ್ತಿದ್ದಾನೆ.
ಅಷ್ಟಕ್ಕೂ ಯಾಕೆ ಈ ಮಾತು ಅಂದುಕೊಂಡರಾ? ಅದುವೇ ಶರಾವತಿ ಉಳಿಸಿ ಹೋರಾಟ. ಏನಿದು ಶರಾವತಿ ಉಳಿಸಿ ಹೋರಾಟ ಅಂತಾ ಏನು ಬಿಡಿಸಿ ಹೇಳಬೇಕಿಲ್ಲ ಅಂತ ಅಂದುಕೊಳ್ಳುತ್ತೇನೆ. ಸುಲಭವಾಗಿ ಹೇಳೋದಾದರೆ ಮಲೆನಾಡ ಜೀವಜಲ ಶರಾವತಿ ನದಿ ಉಳಿಸಿಕೊಳ್ಳುವ ಹೋರಾಟ ಇದು.
ಹೌದು ಪೂರ್ಣ ಶಿವಮೊಗ್ಗ ಜಿಲ್ಲೆ ಮತ್ತು ಉತ್ತರ ಕನ್ನಡ ಜಿಲ್ಲೆಯ ಇಡೀ ಹೊನ್ನಾವರ ತಾಲೂಕಿನ ಭಾಗದ ಜೀವನದಿ ಈ ಶರಾವತಿ ನದಿಯನ್ನು ಈ ಭಾಗದ ಜನ ಅತಿಯಾಗಿ ಅವಲಂಭಿಸಿದ್ದಾರೆ.
ಆದರೆ ಬೆಂಗಳೂರು ನಗರಕ್ಕೆ ನೀರಿನ ಸಮಸ್ಯೆ ಎದುರಾಗಿದ್ದು ಅದನ್ನ ನಿವಾರಣೆ ಮಾಡಲು ರಾಜ್ಯ ಸರ್ಕಾರ ಒಂದು ಅದ್ಭುತ ಯೋಜನೆ ರೂಪಿಸಿದ್ದು ಅದು ಈಗ ಜನರ ಕೆಂಗಣ್ಣಿಗೆ ಗುರಿಯಾಗಿದೆ. ಆ ಯೋಜನೆ ಇನ್ಯಾವದೂ ಅಲ್ಲ. ಶರಾವತಿ ನದಿ ನೀರನ್ನು ಬೆಂಗಳೂರು ನಗರಕ್ಕೆ ಹರಿಸುವ ಯೋಜನೆ.
ಹೌದು ರಾಜ್ಯ ಸರ್ಕಾರ ಶರಾವತಿ ನೀರನ್ನು ಲಿಂಗನಮಕ್ಕಿ ಜಲಾಶಯದ ಮೂಲಕ ಬೆಂಗಳೂರು ನಗರಕ್ಕೆ ಹರಿಸುವ ಯೋಜನೆ ಹಾಕಿಕೊಂಡಿದೆ.
ಅಷ್ಟಕ್ಕೂ ಈ ಯೋಜನೆ ಕಾರ್ಯಸಾಧುವೇ? ಎನ್ನುವದೇ ಈ ಲೇಖನದ ಉದ್ದೇಶ. ಈ ಯೋಚನೆ ಮೂರ್ಖತನದ ಪರಮಾವದಿ ಅಲ್ಲದೇ ಇನ್ನೇನು ಅಲ್ಲ… ಯಾಕೆ ಅಂತ ಮುಂದೆ ಹೇಳ್ತೀನಿ ಓದಿ…
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಅಂಬುತೀರ್ಥದಲ್ಲಿ ಹುಟ್ಟಿ, ಸಾಗರ ತಾಲೂಕಿನ ಜೋಗದಲ್ಲಿ ವಿಶ್ವ ಪ್ರಸಿದ್ಧ ಜಲಪಾತ ಸೃಷ್ಟಿ ಮಾಡಿರುವ ಇದು ಜಲಪಾತದ ಮೂಲಕ ಮತ್ತೆ ಮುಂದೆ ಹರಿದು ಹೊನ್ನಾವರ ತಾಲೂಕಿನಲ್ಲಿ ಇದು ಅರಬ್ಬೀ ಸಮುದ್ರ ಸೇರುತ್ತದೆ. ಹೀಗೆ ಮೂರು ತಾಲೂಕಿನ ಲಕ್ಷ ಲಕ್ಷ ಜನರ ಪಾಲಿಗೆ ಇದು ಜೀವದಾಯಿನಿಯಾಗಿದೆ.
ಹೀಗಾಗಿ, ಈ ಯೋಜನೆ ಜಾರಿಗೆ ಬಂದಲ್ಲಿ ಪ್ರಮುಖವಾಗಿ ಈ ಭಾಗದ ಜನರಿಗೆ ನೀರಿನ ಸಮಸ್ಯೆ ಇನ್ನೂ ಹೆಚ್ಚಾಗಿ ಕಾಣಿಸುತ್ತೆ. ಬೇಸಿಗೆ ಸಮಯದಲ್ಲಿ ಜನರಿಗೆ ನದಿ ಇದ್ದರೂ ನೀರಿನ ಸಮಸ್ಯೆ ಎದುರಾಗುತ್ತಿದೇ. ಇನ್ನೂ ನೀರನ್ನು ಬೆಂಗಳೂರು ನಗರಕ್ಕೆ ಒಯ್ದರೆ ಏನಾಗಬಹುದು ಎಂಬುದನ್ನು ಯೋಚನೆ ಮಾಡಿ.
ಈ ಯೋಜನೆಯಿಂದ ಈ ಭಾಗದ ಅಂತರ್ಜಲ ಸಹ ಪಾತಾಳ ಸೇರುತ್ತದೆ. ಬೇಸಿಗೆಯಲ್ಲಿ ನದಿ ತಟದಿಂದ ಕೇವಲ 2 ಕಿಮೀ ದೂರದಲ್ಲಿ ಮನೆಯಿದ್ದರೂ ಬಾವಿಯಲ್ಲಿ ಎರಡು ಕೊಡ ನೀರು ಸಿಗುವುದಿಲ್ಲ ರೋಹನ್ ಎನ್ನುತ್ತಾಳೆ ನಮ್ಮ ಅಕ್ಕ. ಇದು ಒಬ್ಬರ ಸಮಸ್ಯೆಯಲ್ಲ. ಬದಲಾಗಿ ಈ ಭಾಗದ ಎಲ್ಲರ ಸಮಸ್ಯೆಯೂ ಇದೆ.
ಇನ್ನೂ ಶರಾವತಿ ನದಿಗೆ ಜಲಾಶಯ ನಿರ್ಮಾಣ ಮಾಡಿರುವ ಕಾರಣ ನದಿಯ ಹರಿಯುವ ವೇಗ ಕುಂಠಿತವಾಗಿದ್ದು ಈಗಲೇ ಹಲವು ಪ್ರಕಾರದ ಜಲಚರಗಳು ವಿನಾಶದ ಅಂಚಿನಲ್ಲಿ ಬಂದು ನಿಂತಿವೆ. ಅದೆಷ್ಟು ಈಗಲೇ ನಾಶವಾಗಿ ಹೋಗಿದ್ದಾವೋ ಗೊತ್ತಿಲ್ಲ.
ಇನ್ನೂ ಈ ಯೋಜನೆ ಜಾರಿಯಾದರೆ ವಿಶ್ವ ವಿಖ್ಯಾತ ಜೋಗ ಜಲಪಾತದ ಅಸ್ತಿತ್ವಕ್ಕೆ ದೊಡ್ಡಸವಾಲಾಗಲಿದೆ. ಇದು ಮುಂದೆ ಕರ್ನಾಟಕದ ಪ್ರವಾಸೋದ್ಯಮದ ಮೇಲೆ ಪರಿಣಾಮ ಬೀರದೇ ಇರದು.
ಇದೂ ಅಲ್ಲದೇ ಮುಂದಿನ ದಿನಗಳಲ್ಲಿ ಲಿಂಗನಮಕ್ಕಿ ಶಲಾಶಯ ಸಹ ಪ್ರಯೋಜನಕ್ಕೆ ಬಾರದಾಗುತ್ತದೆ. ಇದಕ್ಕೆ ಒಂದು ಸಣ್ಣ ನಿದರ್ಶನದಂತೆ ತಿಪ್ಪಗೊಂಡನಹಳ್ಳಿ ಜಲಾಶಯ ನಿಂತಿದೆ. (ಇದೂ ಸಹ ಬೆಂಗಳೂರು ನಗರಕ್ಕೆ ನೀರು ಒದಗಿಸುವ ಸಲುವಾಗಿ ವಿಶ್ವೇಶ್ವರಯ್ಯರ ಯೋಜನೆ ಮೂಲಕ ನಿರ್ಮಾಣವಾದ ಜಲಾಶಯವಾಗಿದೆ)
ಸಾಲದೆಂಬಂತೆ ಈ ಯೋಜನೆ ಜಾರಿಯಾದರೆ ಈ ಭಾಗದ ಪರಿಸರದ ಸರ್ವನಾಶ ಕಡಾಖಂಡಿತ. ಈ ಪ್ರದೇಶ ಪಶ್ಚಿಮ ಘಟ್ಟದಲ್ಲಿರುದರಿಂದ ಈ ಪರಿಸರದಲ್ಲಿ ಎಲ್ಲೂ ಕಂಡುಬರದ ಅಪರೂಪದ ಜೀವಸಂಕುಲ ಇದೆ. ಅದು ಸರ್ವನಾಶವಾಗುವುದರಲ್ಲಿ ಸಂದೇಹವಿಲ್ಲ.
ಗೇರುಸೊಪ್ಪ ಮತ್ತು ಲಿಂಗನಮಕ್ಕಿ ಜಲಾಶಯ ನಿರ್ಮಾಣ ಮಾಡುವ ಸಮಯದಲ್ಲಿ ನಿರಾಶ್ರಿತರಾದ ಜನರಿಗೆ ಇಷ್ಟು ವರ್ಷಗಳೇ ಕಳೆದರೂ ಪರಿಹಾರ ಸಿಕ್ಕಿಲ್ಲ. ಈಗ ಈ ಯೋಜನೆ ಜಾರಿಗೆ ಬಂದಲ್ಲಿ ಜನರ ಬದುಕು ಬಾಣಲೆಯಿಂದ ಬೆಂಕಿಗೆ ಬೀಳುವುದರಲ್ಲಿ ಸಂದೇಹವಿಲ್ಲ.
ಅಲ್ಲದೆ ಇಡೀ ಹೊನ್ನಾವರ ಪಟ್ಟಣಕ್ಕೆ ಇದೊಂದೆ ನೀರನ್ನು ಒದಗಿಸುವ ಮೂಲವಾಗಿದೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ವಿಪರೀತ ನೀರಿನ ಬವಣೆ ಎದುರಾಗುತ್ತದೆ. ಇನ್ನೂ ಈ ಯೋಜನೆ ಏನಾದರೂ ಕಾರ್ಯರೂಪಕ್ಕೆ ಬಂದರೆ ಜನರ ಕಷ್ಟ ಇನಷ್ಟು ಹೆಚ್ಚಲಿದೆ.
ಇನ್ನು ಲಿಂಗನಮಕ್ಕಿಯಿಂದ ಬೆಂಗಳೂರು ಬಹುತೇಕ 1300 ಕಿಮೀ ಎತ್ತರ ಮತ್ತು 400 ಕಿಮೀ ದೂರದಲ್ಲಿದೆ. ನೀರನ್ನು ಕೇವಲ ಮೇಲೆತ್ತಲು ಲಿಂಗನಮಕ್ಕಿ ಜಲಾಶಯದಲ್ಲಿ ಉತ್ಪಾದನೆ ಮಾಡುವ ವಿದ್ಯುತ್’ನ ಒಂದುವರೆ ಪಟ್ಟು ಹೆಚ್ಚಿನ ವಿದ್ಯುತ್ ಅವಶ್ಯಕತೆ ಇದೆ ಎನ್ನುವುದು ತಜ್ಞರ ಅಭಿಪ್ರಾಯ. ಇನ್ನೂ ಅದನ್ನು 400 ದೂರ ತಳ್ಳಲು ಎಷ್ಟು ವಿದ್ಯುತ್ ಬೇಕೋ ? ಆ ದೇವರಿಗೆ ಗೊತ್ತು. ಹಾಗೇನಾದರೂ ಆದರೆ ಈ ಭಾಗದ ಜನ ಎಷ್ಟು ದಿನ ಕತ್ತಲೆಯಲ್ಲಿರಬೇಕೋ ದೇವರೇ ಬಲ್ಲ.(ಗೇರುಸೊಪ್ಪ ಜಲಾಶಯ ಕಟ್ಟುವ ಸಮಯದಲ್ಲಿ ಸ್ಥಳೀಯ ಜನರಿಗೆ ಉಚಿತ ವಿದ್ಯುತ್ ಕೊಡಲಾಗುತ್ತದೆ ಎಂದು ಮೂಗಿಗೆ ತುಪ್ಪ ಸವರೋ ಕೆಲಸ ಮಾಡಿತ್ತು ಸರ್ಕಾರ.. ಆದರೆ ವಸ್ತುಸ್ಥಿತಿ ಇರುವುದೇ ತದ್ವಿರುದ್ಧ. ಉಚಿತ ವಿದ್ಯುತ್ ಬೇಡ ದಿನಕ್ಕೆ ಸರಿಯಾಗಿ 24 ತಾಸು ವಿದ್ಯುತ್ ಕೊಟ್ಟಿದ್ದರೆ ಸಾಕಿತ್ತು ಅನ್ನೋದು ಜನರ ಮಾತು..)
ಇನ್ನು ಈ ಯೋಜನೆಯ ಅಂದಾಜು ವೆಚ್ಚ ಸುಮಾರು 12500 ಕೋಟಿ. ಯೋಜನೆ ಪೂರ್ಣವಾಗುವ ಹೊತ್ತಿಗೆ ಅದರ ವೆಚ್ಚ ಎಷ್ಟಾಗುತ್ತದೆಯೋ ಬಲ್ಲವರು ಯಾರು? ಇಂತಹ ಅವೈಜ್ಞಾನಿಕ ಯೋಜನೆಗೆ ಅಷ್ಟೊಂದು ಜನರ ತೆರಿಗೆ ಹಣ ವ್ಯಯಿಸಬೇಕಾ? ಯೋಜನೆಯಲ್ಲಿ ಸಣ್ಣ ಲೋಪವಾದರೂ ಅಷ್ಟು ಹಣ. ಶರಾವತಿ ಒಡಲು ಸೇರೋದಿಲ್ವಾ ಅನ್ನೋದು ಜನರ ಪ್ರಶ್ನೆ?
ಇದಿಷ್ಟು ಮೇಲ್ನೋಟಕ್ಕೆ ಕಂಡು ಬರುವ ಸಮಸ್ಯೆಗಳು. ಇನ್ನೂ ಹೇಳಲಾಗದ ಸಮಸ್ಯೆಗಳನ್ನು ಪಟ್ಟಿ ಮಾಡುತ್ತಾ ಕೂತರೆ ದಿನಗಳೇ ಬೇಕಾದಿತು.
ಅದನ್ನು ಬಿಡಿ. ಬೆಂಗಳೂರಿನ ನೀರಿನ ಸಮಸ್ಯೆಗೆ ಪರಿಹಾರ ಇಲ್ವಾ ಅಂತ ಕೇಳಿದರೆ ನಿಜವಾಗಿಯೂ ಇದೆ. ಅದಕ್ಕೂ ಮುನ್ನ ಈ ಸಮಸ್ಯೆಗೆ ಕಾರಣವನ್ನ ನೀವು ತಿಳಿಯಲೇಬೇಕು.
ಅದನ್ನು ತಿಳಿಯಲು ಬೆಂಗಳೂರಿನ ಇತಿಹಾಸದ ಒಂದಿಷ್ಟು ಪುಟಗಳನ್ನು ತಿರುವಿ ಇಡಬೇಕು. ಅದು 1974ರ ಕಾಲಘಟ್ಟ. ಅಂದಿನ ಬೆಂಗಳೂರು ನಗರದ ಜನಸಂಖ್ಯೆ 2 ಲಕ್ಷ. ಅಷ್ಟೆನಾ ಅಂತ ಯೋಚನೆ ಮಾಡಬೇಡಿ. ಕಾರಣ ಆಗಿನ ಕಾಲಕ್ಕೆ ಅದು ತುಂಬಾ ದೊಡ್ಡ ಜನಸಂಖ್ಯೆ. ಇನ್ನೂ ಅಷ್ಟು ಜನರಿಗೆ ನೀರಿನ ಮೂಲ ಬೇರೆ ಯಾವುದು ಇರಲಿಲ್ಲ. ಯಾವ ನದಿಗಳ ನೀರು ಬೆಂಗಳೂರು ನಗರಕ್ಕೆ ಬರುತ್ತಿರಲಿಲ್ಲ. ಕೇವಲ ಕೆರೆಗಳು ಮಾತ್ರ. ಹೌದು ಆಗಿನ ಕಾಲದ ಕೆರೆಗಳ ಸಂಖ್ಯೆ 1800!
ಆದರೆ ವರ್ಷಗಳು ಉರುಳಿದಂತೆ ಬೆಂಗಳೂರಿನ ಬೆಳವಣಿಗೆ ವೇಗ ಹೆಚ್ಚಾಗುತ್ತಾ ಸಾಗಿ ಬೆಳವಣಿಗೆ ದಾಹದಿಂದ ಕೆರೆಗಳ ಮಾರಣಹೋಮ ಆರಂಭವಾಯಿತು. 1800 ರಿಂದ ಇಂದಿನ ಬೆಂಗಳೂರಿನ ಕೆರೆಗಳ ಸಂಖ್ಯೆ 937 ಬಂದು ತಲುಪಿದೆ. ಅದರಲ್ಲಿ ಒಂದಿಷ್ಟು ಕಸದ ರಾಶಿಯ ದಿಬ್ಬಗಳಾಗಿವೆ. ಇನ್ನೂ ಕೆಲವು ಕೊಳಚೆ ಮತ್ತು ಕಾರ್ಖಾನೆಗಳ ರಾಸಾಯಿನಿಕ ನೀರಿನ ಸಂಗ್ರಹಗಳಾಗಿವೆ.
ಇನ್ನು ಒಂದು ಕಾಲದಲ್ಲಿ ಸ್ವಚ್ಛ ನೀರಿನ ಮೂಲಗಳಾಗಿದ್ದ ಕೆರೆಗಳಲ್ಲಿ ಇಂದು ಕೆಲವದರಲ್ಲಿ ಬೆಂಕಿ ಕಾಣಿಸುತ್ತೆ, ಇನ್ನೂ ಕೆಲವದರಲ್ಲಿ ಹೊಗೆ ಕಾಣಿಸುತ್ತೆ. ಮತ್ತೂ ಕೆಲವದರಲ್ಲಿ ನೊರೆ ಬರುತ್ತೆ! ಹೀಗೆ ಜೀವಂತ ಕೆರೆಗಳ ಸಂಖ್ಯೆ ಕೇವಲ 210. ಇನ್ನೂ ಒಂದೋ ಎರಡು ವರ್ಷ ಕಳೆದರೆ ಅವುಗಳನ್ನು ಸಹ ನಮ್ಮ ಬೆಂಗಳೂರಿನ ಮಹಾ ಜನತೆ ಸಾಯಿಸಿ ಅವುಗಳ ಹೆಣಗಳ ಮೇಲೆ ಸೌಧ ಕಟ್ಟುತ್ತಾರೆ. ಆ ದಿನಗಳು ಏನು ದೂರವಿಲ್ಲ.
ಅದರಿಂದ ಅವರಿಗೆ ಏನು ಸಮಸ್ಯೆ ಆಗೋದಿಲ್ಲ ಬಿಡಿ. ಕಾರಣ ಇಷ್ಟು ವರ್ಷ ಕಾವೇರಿ ನೀರು ಎತ್ತಿನ ಹೊಳೆ ನೀರು ಶರಾವತಿ ನೀರು ಅಂತ ರಾಜ್ಯದ ಎಲ್ಲ ನದಿ ನೀರನ್ನು ಸರ್ಕಾರ ಬೆಂಗಳೂರು ಜನರ ಎದೆ ಮೇಲೆ ಸುರಿಯುವ ಕೆಲಸ ಮಾಡತ್ತೆ. ರಾಜ್ಯದ ಬೇರೆ ಭಾಗಗಳು ಏನಾದರೂ ಅವರಿಗೆ ಏನು ಅವರಿಗೆ ಬೆಂಗಳೂರು ಬೆಳೆಯಬೇಕು ಅಷ್ಟೇ.
ಇನ್ನು ಬೆಳವಣಿಗೆಗೆ ನೇರವಾಗಲಿ ಎಂದು ಇರುವ ಅರಣ್ಯ ಕಡಿದು ಆಕೆಶಿಯಾ ಕಾಡು ಬೆಳೆಸಿದ ಪರಿಣಾಮ ಅಂತರ್ಜಲದ ಮಟ್ಟ ಪಾತಾಳ ಸೇರಿದೆ.
ಬೆಂಗಳೂರಿನ ನೀರಿನ ಸಮಸ್ಯೆಗೆ ಪರಿಹಾರ ಇಲ್ವಾ ಅಂದರೆ ನಿಜಕ್ಕೂ ಇದೆ. ಮೊದಲನೆಯದಾಗಿ ಬೆಂಗಳೂರಿನ ಮಿತಿ ಮೀರಿದ ಬೆಳವಣಿಗೆಗೆ ಕಡಿವಾಣ ಹಾಕಿ ಅಲ್ಲಿನ ಕೈಗಾರಿಕೆಗಳನ್ನು ರಾಜ್ಯದಾದ್ಯಂತ ಬೇರೆ ಬೇರೆ ಕಡೆ ಸ್ಥಳಾಂತರಿಸಬೇಕು. ಈ ಮೂಲಕ ಅಲ್ಲಿನ ಅವಲಂಬನೆ ಮತ್ತು ಜನಸಂಖ್ಯೆ ಆದಷ್ಟು ಕಡಿಮೆ ಮಾಡಬೇಕು. ಇದರಿಂದ ಅಲ್ಲಿನ ನೀರಿನ ಬೇಡಿಕೆ ತಗ್ಗುತ್ತದೆ.
ಇನ್ನು ಎರಡನೆಯದಾಗಿ ಇರುವ ಕೆರೆಗಳನ್ನು ಇನ್ನಷ್ಟು ಅಭಿವೃದ್ಧಿ ಮಾಡಿ ವಿನಾಶದಂಚಿನ ಹಂತದ ಕೆರೆಗಳ ಪುನಶ್ಚೇತನ ಮಾಡಬೇಕು.
ಜೊತೆಗೆ ಇರುವ ನೀರನ್ನು ಸದ್ಬಳಕೆ ಮಾಡಬೇಕು ಮತ್ತು ನೀರಿನ ಪುರ್ನಬಳಕೆಗೆ ಒತ್ತು ನೀಡಬೇಕು. ಮಳೆಯ ನೀರನ್ನು ಸಹ ಸಂಗ್ರಹ ಮಾಡಬೇಕು. ಮಳೆಯ ಸಮಯದಲ್ಲಿ ಛಾವಣಿಯ ಮೇಲೆ ಬೀಳುವ ನೀರನ್ನು ಸಂಗ್ರಹ ಮಾಡಿದರೂ ಆಯಾ ಮನೆಯ ದಿನಬಳಕೆಗೆ ಸಾಕಾಗುತ್ತದೆ.
ಬೆಂಗಳೂರು ನಗರದಲ್ಲಿ ಪೈಪ್ ಲೈನ್ ಒಡೆದು ಪೋಲಾಗುವ ನೀರನ್ನು ಸರಿಯಾಗಿ ನಿರ್ವಹಣೆ ಮಾಡಿದರೂ ಸರಿಸುಮಾರು ಶೇ.20 -25ರಷ್ಟು ಹೆಚ್ಚುವರಿ ನೀರು ಬೆಂಗಳೂರಿಗೆ ಸಿಗುತ್ತದೆ.
ಅರಣ್ಯ ಹೆಚ್ಚಿನ ಪ್ರಮಾಣದಲ್ಲಿ ಬೆಳೆಸಿದರೆ ಅಂತರ್ಜಲ ಮಟ್ಟದಲ್ಲಿ ಏರಿಕೆಯಾಗುತ್ತದೆ. ಇದಕ್ಕೇನೂ ಹತ್ತು ಸಾವಿರ ಕೋಟಿ ಬೇಕಾಗಿಲ್ಲ.
ಇದನ್ನು ಮಾಡದ ಹೊರತು ಸಮಸ್ಯೆಗೆ ಬೇರೆ ಪರಿಹಾರ ಇಲ್ಲ. ಏಕೆಂದರೆ, ದಿನಗಳೆದಂತೆ ಬೆಂಗಳೂರು ಬೆಳೆಯುತ್ತದೆ. ನೀರಿನ ಬೇಡಿಕೆ ಹೆಚ್ಚುತ್ತದೆ. ರಾಜ್ಯ ಸರ್ಕಾರ ಈ ದಿಶೆಯಲ್ಲಿ ಚಿಂತನೆ ಮಾಡಲೇಬೇಕಿದೆ.
ಈ ಯೋಜನೆ ವಿರುದ್ಧ ಶಿವಮೊಗ್ಗ ಮತ್ತು ಹೊನ್ನಾವರದ ಜನ ಸಾಮಾಜಿಕ ಜಾಲತಾಣಗಳಲ್ಲಿ ಹೋರಾಟ ಆರಂಭಿಸಿದ್ದು ಇನ್ನೂ ಅದು ಚಾಲ್ತಿಯಲ್ಲಿದೆ. ಇದಕ್ಕೆ ಅಭೂತಪೂರ್ವ ಬೆಂಬಲ ಇದೆ. ಇದಷ್ಟೇ ಅಲ್ಲದೆ ಈ ಹೋರಾಟ ಇನ್ನೊಂದು ಹಂತಕ್ಕೆ ತಲುಪಿ ಹಿರಿಯ ಸಾಹಿತಿ ನಾ.ಡಿಸೋಜಾರ ನೇತೃತ್ವದಲ್ಲಿ ಶರಾವತಿ ಉಳಿಸಿ ಹೋರಾಟ ರಚನೆಯಾಗಿದ್ದು, ಇದು ಶಿವಮೊಗ್ಗ ಮತ್ತು ಹೊನ್ನಾವರ ಬಂದ್’ಗೆ ಕರೆ ನೀಡಿತ್ತು. ಈ ಹೋರಾಟಕ್ಕೆ ನಿರೀಕ್ಷೆ ಮೀರಿ ಬೆಂಬಲ ಸಿಕ್ಕಿದೆ. ಸುರಿಯುವ ಮಳೆ ಲೆಕ್ಕಿಸದೇ ಜನಸಾಗರ ಈ ಹೋರಾಟದಲ್ಲಿ ಮತ್ತು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಓದುಗರಾದ ನಿಮ್ಮಲ್ಲಿ ನನ್ನದೊಂದು ಮನವಿ. ಬನ್ನಿ ನಮ್ಮೊಂದಿಗೆ ಕೈ ಜೋಡಿಸಿ. ಏಕೆಂದರೆ ಇವತ್ತು ಶರಾವತಿ ನದಿಯ ಯೋಜನೆ ರೂಪಿಸಿದಂತೆ ನಿಮ್ಮ ನಿಮ್ಮ ಭಾಗದ ನದಿಗಳಿಗೂ ಯೋಜನೆ ರೂಪಿಸುವ ದಿನಗಳು ದೂರವಿಲ್ಲ. ಇವತ್ತು ಶರಾವತಿ, ನಾಳೆ ಅಘನಾಶಿನಿ ನಾಡಿದ್ದು ಕಾಳಿ ಆಚೆ ನಾಡಿದ್ದು ನೇತ್ರಾವತಿ ಹೀಗೆ… ಬಹುಶಃ ಕಾವೇರಿ ನೀರನ್ನು ಬೆಂಗಳೂರಿಗೆ ಒಯ್ಯುವಾಗಲೇ ನಾವು ಜಾಗೃತರಾಗಿದ್ದರೆ ನಮಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲವೇನೋ… ನಮ್ಮ ತಪ್ಪನ್ನು ನೀವು ಮರುಕಳಿಸದಿರಿ.
ಈ ಭಾಗಕ್ಕೆ ಕೇವಲ ಚುನಾವಣಾ ಸಮಯದಲ್ಲಿ ಬರುವ ನಾಯಕರು ಇಲ್ಲಿನ ಸಮಸ್ಯೆಯಾಗಲಿ ವಸ್ತುಸ್ಥಿತಿ ಅರಿಯದೇ ಬೇಕಾಬಿಟ್ಟಿ ಯೋಜನೆ ರೂಪಿಸುವ. ಕ್ರಮ ಎಷ್ಟು ಸರಿ ಎನ್ನುವುದು ಈ ಭಾಗದ ಜನತೆಯ ಪ್ರಶ್ನೆ.
ಜನರ ಮನಸ್ಸಿನಲ್ಲಿ ಇನ್ನೊಂದು ಪ್ರಶ್ನೆ ಇದ್ದೇ ಇದೆ. ಅದೇನೆಂದರೆ ಶರಾವತಿ ಯೋಜನೆಯ ಹೆಸರಿನಲ್ಲಿ ಯಾರ ಜೇಬು ತುಂಬಿಸುವ ಹುನ್ನಾರ ನಡೆಯುತ್ತಿದೆ ಎನ್ನುವುದು. ಅದು ಸಹಜ ಕೂಡಾ. ಕಾರಣ ಚಿಕ್ಕ ಪುಟ್ಟ ಯೋಜನೆಯಲ್ಲೇ ಲಕ್ಷ ಲಕ್ಷ ದೇಪುವ ನಮ್ಮ ನಾಯಕರು ರಾಜಕಾರಣಿಗಳು ಅಧಿಕಾರಿಗಳು ಗುತ್ತಿಗೆದಾರರು 12,500 ಕೋಟಿ ಹಣದಲ್ಲಿ ಒಂದು ರೂಪಾಯಿ ತೆಗೆದುಕೊಳ್ಳುದೇ ಇರುತ್ತಾರೆಯೇ?? ಯಾರ ಯಾರ ಜೇಬಿಗೆ ಎಷ್ಟು ಹೋಗುತ್ತದೆಯೋ ಬಲ್ಲವರಾರು?
ಶರಾವತಿ ನೀರನ್ನು ಬಯಸುವ ಬೆಂಗಳೂರಿಗರಿಗೆ ನನ್ನದೊಂದಿಷ್ಟು ಪ್ರಶ್ನೆಗಳಿವೆ:
- ಅಭಿವೃದ್ಧಿ ಎಂದರೇನು? ಕೆರೆಗಳನ್ನು ಮುಚ್ಚಿ ಅವುಗಳ ಹೆಣಗಳ ಮೇಲೆ ಕಟ್ಟಡ ಕಟ್ಟೋದಾ?
2 ಇಲ್ಲ ಇರುವ ಅರಣ್ಯ ನಾಶ ಮಾಡಿ ಪರಿಸರ ನಾಶ ಮಾಡಿ ಕಾಂಕ್ರೀಟ್ ಕಾಡು ಕಟ್ಟೋದಾ? - ಕರ್ನಾಟಕ ಎಂದರೆ ಕೇವಲ ಬೆಂಗಳೂರು. ಒಂದೇನಾ? ಇಲ್ಲ ಬೇರೆ ಭಾಗಗಳೂ ಇದ್ದಾವಾ?
- ನೀವೇನು ಸಾಧನೆ ಮಾಡಿದ್ದೀರಿ ಅಂತ ನೀರನ್ನು ಕೊಡಬೇಕು?
- 1800 ಇದ್ದ ಕೆರೆಗಳನ್ನು 200 ತಂದು ನಿಲ್ಲಿಸಿದಕ್ಕಾ?
- ಇರೋ ಕೆರೆಗಳನ್ನು ಗಬ್ಬೆದ್ದು ನಾರುವಂತೆ ಮಾಡಿದಕ್ಕಾ ?
ಉತ್ತರ ನೀಡುವ ಆತ್ಮಸಾಕ್ಷಿ ನಿಮಗಿದೆಯಾ?
ಮಾತುಗಳು ಸ್ವಲ್ಪ ಕಷ್ಟ ಎನಿಸಬಹುದು. ಆದರೆ ನಮ್ಮ ಮನಸ್ಸಿನಲ್ಲಿ ಹೊತ್ತಿರುವ ಬೆಂಕಿಗಿಂತ ದೊಡ್ಡದಲ್ಲ ಬಿಡಿ. ಸ್ವಲ್ಪ ದೊಡ್ಡದೇ ಆಯ್ತಲ್ವಾ ಲೇಖನ? ಏನು ಮಾಡಲಿ ಮನಸ್ಸಿನ ನೋವನ್ನು ಹೊರ ಹಾಕಲು ಬೇರೆ ದಾರಿ ಕಾಣುತ್ತಿಲ್ಲ ನನಗೆ.
ನೀವು ಕೇಳಬಹುದು ಈ ಲೇಖನ ಬರೆಯುತ್ತಿರುವ ನಿನಗೂ ನದಿಗೂ ಏನು ಸಂಬಂಧ ಅಂತ. ಗೇರುಸೊಪ್ಪ ಇರುವುದು ಶರಾವತಿ ದಂಡೆಯ ಮೇಲೆಯೇ. ಅದೇ ನೀರಿನಲ್ಲಿ ಆಡಿ ಬೆಳೆದ ವ್ಯಕ್ತಿ ನಾನು. ಹೀಗಾಗಿ ಈ ನದಿಯ ಬಗ್ಗೆ ಅಪೂರ್ವ ಪ್ರೀತಿಯಿದೆ ನನಗೆ..
ಕೊನೆಯದಾಗಿ ಒಂದು ಪ್ರಶ್ನೆ ಪಾಪ ಮಾಡಿದವರೇ ಪ್ರಾಯಶ್ಚಿತ ಮಾಡಬೇಕಲ್ವಾ? ಸಮಸ್ಯೆ ನಾವು ಹುಟ್ಟು ಹಾಕ್ತೀವಿ ಪಾಪ ನಾವು ಮಾಡ್ತಿವಿ ಪರಿಹಾರ ನೀವು ಕೊಡಿ ಎಂದರೆ ಇದು ನ್ಯಾಯನಾ? ಇದು ಧರ್ಮನಾ ಸ್ವಾಮಿ? ಉತ್ತರ ನಿಮಗೇ ಬಿಡ್ತಿನಿ ಯೋಚಿಸಿ ನೋಡಿ…
ನಮಸ್ಕಾರ..
ಇಂತಿ ನಿಮ್ಮವ,
ರೋಹನ ಪಿಂಟೋ ಗೇರುಸೊಪ್ಪ
Discussion about this post