ಭದ್ರಾವತಿ: ಸರಕಾರ ಸಾಮ್ಯದ ಎಂಪಿಎಂ ಮಂಡಳಿಯು ಕಾರ್ಖಾನೆಯನ್ನು ಸಮಾಪ್ತಿಗೊಳಿಸುವ ಕಾರ್ಯಾಚರಣೆಗೆ ಮುಂದಾಗಿದೆ ಎಂದು ಆರೋಪಿಸಿ ಕಾರ್ಖಾನೆ ಮುಂಭಾಗ ಶ್ರೀ ಮೈಸೂರು ಕಾಗದ ಕಾರ್ಖಾನೆ ನೌಕರರ ಸಂಘದ ನೇತೃತ್ವದಲ್ಲಿ ಕಾರ್ಮಿಕರು ಶುಕ್ರವಾರ ಧರಣಿ ಸತ್ಯಾಗ್ರಹ ನಡೆಸಿದರು.
ಕಾರ್ಖಾನೆಯಲ್ಲಿ ಸ್ವಯಂ ನಿವೃತ್ತಿ ಪಡೆಯದೆ ಸುಮಾರು 226 ಅಧಿಕಾರಿ ಹಾಗು ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ನಡುವೆ ರಾಜ್ಯ ಸರಕಾರದ ಕಾರ್ಮಿಕ ಇಲಾಖೆಯ ಕಾರ್ಯದರ್ಶಿಗಳು ದಿನಾಂಕ 28-6-2019 ರಂದು ಕಾರ್ಖಾನೆ ಮುಚ್ಚಲು ಆಡಳಿತ ಮಂಡಳಿಗೆ ಆದೇಶ ನೀಡಿರುವುದನ್ನು ನೆಪಮಾಡಿಕೊಂಡು ಆಡಳಿತ ಮಂಡಳಿ ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿದರು.
ಈ ಹಿಂದೆ 2017 ರಲ್ಲಿ ಕಾರ್ಮಿಕರಿಗೆ ಸ್ವಯಂ ನಿವೃತ್ತಿ ಸೌಲಭ್ಯಗಳನ್ನು ನೀಡಿರುತ್ತಾರೆ. ಆದರೆ ವಿಆರ್‍ಎಸ್ ಪಡೆದ ಕಾರ್ಮಿಕರಿಗೆ ಪೂರ್ಣ ಪ್ರಮಾಣದ ಹಣ ಪಾವತಿಯಾಗದೆ ಸಂಕಷ್ಟದಲ್ಲಿದ್ದಾರೆ. ಕಾರ್ಖಾನೆಯಲ್ಲಿ ಸ್ವಯಂ ನಿವೃತ್ತಿ ಪಡೆದ ಅಧಿಕಾರಿಗಳು ಪ್ರಸ್ತುತ ಉನ್ನತ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಾ ಸರಕಾರದ ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡುತ್ತಾ ಕಾರ್ಖಾನೆಯನ್ನು ಸಮಾಪ್ತಿಗೊಳಿಸಲು ಮುಂದಾಗಿದ್ದಾರೆ. ಸಚಿವ ಸಂಪುಟದ ಆದೇಶವಿಲ್ಲದೆ ಕೇವಲ ಕಾರ್ಮಿಕ ಕಾರ್ಯದರ್ಶಿಗಳ ಅನುಮತಿ ಮೇರೆಗೆ ಕಾರ್ಖಾನೆ ಮುಚ್ಚಲು ಆಡಳಿತ ವರ್ಗ ಹುನ್ನಾರ ನಡೆಸುತ್ತಿರುವುದು ಖಂಡನೀಯ.
ಕಾನೂನು ಬಾಹಿರ ಕ್ರಮದಿಂದ ದೀರ್ಘಾವದಿ ಸೇವೆ ಹಿಂದಿರುವ ಸುಮಾರು 226 ಕಾರ್ಮಿಕರು ತೊಂದರೆ ಅನುಭವಿಸುವಂತಾಗಿದೆ. ಅದ್ದರಿಂದ ಕೂಡಲೇ ಕ್ರಮ ಹಿಂಪಡೆದು ಯಥಾಸ್ಥಿತಿಯಲ್ಲಿ ಕಾರ್ಖಾನೆ ನಡೆಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು. ನಂತರ ಮಧ್ಯಾಹ್ನ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಬಳಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿ ನಂತರ ತಹಸೀಲ್ದಾರ್ ಕಛೇರಿಗೆ ತೆರಳಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾಜಿ ನಗರಸಭಾ ಸದಸ್ಯ ಬದರಿನಾರಾಯಣ ನೌಕರರ ಸಂಘದ ಮುಖಂಡರಾದ ಎಸ್.ಚಂದ್ರಶೇಖರ್, ತಿಮ್ಮಪ್ಪ ಮುಂತಾದವರು ಕಾರ್ಮಿಕ ಇಲಾಖೆ ಹಾಗು ಆಡಳಿತ ಮಂಡಳಿಯ ಕಠಿಣ ಕ್ರಮ ವಿರೋಧಿಸಿ ಮಾತನಾಡಿದರು. ಕೆ.ಮಂಜೇಗೌಡ, ಟಿ.ಜಿ.ಬಸವರಾಯ್ಯ, ಬಿ.ಮೋಹನ್, ಉಮೇಶ್, ಸಿ.ಚನ್ನಿಗಪ್ಪ, ಟಿ.ಆರ್.ಹಾಲೇಶ್ವರಪ್ಪ, ರಮೇಶ್, ವಿಐಎಸ್‍ಎಲ್ ಕಾರ್ಮಿಕ ಸಂಘದ ಬಸಂತ್ ಕುಮಾರ್, ಅಮೃತ್ ಕುಮಾರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post