ಜಗತ್ತಿನ ಇತಿಹಾಸವನ್ನು ಗಮನಿಸಿದರೆ ಆಯಾ ಕಾಲದಲ್ಲಿ ಒಂದಲ್ಲ ಒಂದು ಸಾಮ್ರಾಜ್ಯ (ರಾಷ್ಟ) ಮತ್ತೊಂದರ ಮೇಲೆ ಆಕ್ರಮಣ ಮಾಡುತ್ತಲೇ ಬಂದಿವೆ. ಭಾರತದ ಮೇಲಂತೂ ದಾಳಿ ಮಾಡಿದವರ ಪಟ್ಟಿ ದೊಡ್ಡದಾಗೆ ಇದೆ. ಗ್ರೀಕರು, ಶಖರು, ಕುಶಾನರು, ಹುಣರು, ಮೊಘಲರು, ಅರಬ್ಬರು, ಅಫ್ಘನ್ನರು, ತುರ್ಕಿಗಳು, ಪೋರ್ಚುಗಿಸರು, ಫ್ರೆಂಚರು, ಡಚ್ಚರು, ಬ್ರಿಟೀಷರು, ಪಾಕಿಸ್ಥಾನ, ಚೀನಾ. ಇಷ್ಟೂ ದೇಶದವರು, ಕ್ರಿಪೂ 330ರ ಗ್ರೀಕಿನ ಅಲೆಕ್ಸಾಂಡರಿಂದ ಹಿಡಿದು ಕ್ರಿ.ಶ. 1999 ರ ಪಾಕಿಸ್ಥಾನದ ಪರ್ವೇಜ್ ಮುಷರಫ್ ತನಕ ಬಿಟ್ಟು ಬಿಡದೆ ದಾಳಿ ಮಾಡಿದ್ದಾರೆ. ಇವೆಲ್ಲರನ್ನೂ ಎದುರಿಸಿ ಮೆಟ್ಟಿನಿಂತದ್ದು ಭಾರತ.
1962ರ ವರೆಗಿನ ದಾಳಿಗಳು, ಪಾಕಿಸ್ತಾನ ಮತ್ತು ಅದರ ಪ್ರೇರಿತ ಭಯೋತ್ಪಾದನಾ ದಾಳಿಗಳನ್ನು ಭಾರತ ಹೊರಾಡಿ ಮೆಟ್ಟಿನಿಂತಿತ್ತು. ಆದರೆ, 1962 ರಲ್ಲಿ ಚೀನಾ ಎದುರಿಗೆ ರಾಜಕೀಯದ ಕಾರಣದಿಂದಾಗಿ ಭಾರತ ಸೋತು ನಿಂತ್ತಿತ್ತು. 1949 ತನಕ ನೆಹರೂ, ಟಿಬೆಟ್ ಮತ್ತು ಚೀನಾಗಳನ್ನು ಎರಡು ಭಿನ್ನ ಭಿನ್ನ ರಾಷ್ಟ್ರಗಳನ್ನಾಗಿ ನೋಡುತ್ತಿದ್ದರು. ನೋಡ ನೋಡುತ್ತಿದ್ದಂತೆ ಚೀನಾ ಟಿಬೆಟನ್ನು ಆಕ್ರಮಿಸಿಕೊಂಡು, ಭಾರತದ ಶಿರದಿಂದ ಭುಜದ ಸಮೀಪ ಬಂದೇ ಬಿಟ್ಟಿತು. ಆಗಲೂ ಸಹ ನೆಹರೂ, ಹಿಂದಿ, ಚೀನಿ ಭಾಯಿ ಭಾಯಿ ಎಂದು ತಮ್ಮ ಪಾಡಿಗೆ ಕೂಗುತ್ತಲೇ ಇದ್ದರು. ಅದರ ಪರಿಣಾಮ, ಭಾರತ ಆಕ್ಸಯ್ಚಿನ್ ಮತ್ತು 1962 ರಲ್ಲಿ ಮತ್ತಷ್ಟು ಭೂ ಭಾಗವನ್ನು ಕಳೆದು ಕೊಂಡಿತು. 2014ರ ಹೊತ್ತಿಗೆ ಚೀನಾ ಅರುಣಾಚಲ ಪ್ರದೇಶವನ್ನು ತನ್ನದ್ದು ಎಂದು ಹೇಳುವ ಮಟ್ಟಕ್ಕೆ ಬೆಳೆಯಿತು. 1962ರ ಯುದ್ಧದ ನಂತರ ಚೀನಾ ಭಾರತದ ಮೇಲೆ ಯುದ್ಧ ಮಾಡುವ ಗೋಜಿಗೆ ಹೋಗಲಿಲ್ಲ. ಬದಲಿಗೆ ಪಾಕಿಸ್ತಾನದ ಮೂಲಕ ಭಾರತದ ಗಮನವನ್ನು ಬೇರೆಡೆ ಹರಿಸಿತು ಮತ್ತು ತನ್ನ ಆಂತರಿಕ ಬಲವನ್ನು ವೃದ್ಧಿಗೊಳಿಸಿಕೊಳ್ಳುವತ್ತ ಗಮನ ಹರಿಸಿತು. ಹಿಮಾಲಯದ ಬುಡದಲ್ಲಿ ತನ್ನ ಹೆದ್ದಾರಿಯನ್ನು ಚೆನ್ನಾಗಿ ಅಭಿವೃದ್ಧಿಗೊಳಿಸಿಕೊಂಡಿತು. ಇದು ಚೀನಾ ಭಾರತದೊಂದಿಗೆ ನಡೆದುಕೊಂಡ ರೀತಿಯಾದರೆ, ಬೇರೆ ದೇಶದೊಟ್ಟಿಗೆ ಅದು ನಡೆದುಕೊಂಡ ರೀತಿ ಭಿನ್ನವಾದದ್ದು.
ಎರಡನೆಯ ಮಹಾಯುದ್ಧದ ನಂತರ, ಚೀನಾ, ಜಗತ್ತಿನಾದ್ಯಂತ ತನ್ನ ಆಕ್ರಮಣಕಾರಿ ಧೋರಣೆಯನ್ನು ತೋರುತ್ತಾ ಬಂದಿದೆ. 1950 ರಲ್ಲಿ ಟಿಬೆಟ್ ಮೇಲೆ, 1951ರಲ್ಲಿ ಉತ್ತರ ಕೊರಿಯಾ ಜೊತೆಗೂಡಿ ದಕ್ಷಿಣ ಕೊರಿಯಾ ಮೇಲೆ, 1962 ಮತ್ತು 1967ರಲ್ಲಿ ಭಾರತದ ಮೇಲೆ, 1974ರಲ್ಲಿ ದಕ್ಷಿಣ ವಿಯೆಟ್ನಾಂ ಮೇಲೆ, 1976, 1979, 1988 ರಲ್ಲಿ ಮೂರು ಬಾರಿ ವಿಯೆಟ್ನಾಂ ಮೇಲೆ ಪದೇ ಪದೇ ದಾಳಿ ಮಾಡಿತು. ಒಂದೊಂದು ದಾಳಿಯೂ ಬರ್ಭರವಾಗೆ ಇತ್ತು. 14ನೆಯ ದಲೈ ಲಾಮ ರವರ ಹೇಳಿಕೆ ಪ್ರಕಾರ 10 ಲಕ್ಷ ಟಿಬೆಟ್ಟಿಯರನ್ನು ಚೀನಿಯರು ಹತ್ಯೆಗಯ್ದಿದ್ದಾರೆ. ವಿಯೆಟ್ನಾಂ ಮೇಲಿನ ಆಕ್ರಮಣದಲ್ಲಿ 70 ಸಾವಿರ ಜನರನ್ನು ಹತ್ಯೆ ಮಾಡಿದೆ ಎಂದು ಚೀನಾ ಅಂದಾಜು ಮಾಡುತ್ತದೆ. ಈ ರೀತಿ ಆಕ್ರಮಣ ನಡೆಯುತ್ತಿದ್ದ ಸಂದರ್ಭದಲ್ಲಿ, 1995 ರಲ್ಲಿ ವಿಶ್ವ ವಾಣಿಜ್ಯ ಸಂಸ್ಥೆ ಜಾರಿಗೆ ಬಂತು. ಈ ಸಂಸ್ಥೆ, ಅಂತಾರಾಷ್ಟ್ರೀಯ ಮಟ್ಟದಲ್ಲಿನ ವ್ಯಾಪಾರ ವಹಿವಾಟಿನ ಮಾರ್ಗದರ್ಶಿಯಾಗಿ, ದೇಶ, ದೇಶದ ನಡುವಿನ ವ್ಯಾಜ್ಯವನ್ನು ಸರಿಪಡಿಸುವ ವೇದಿಕೆ ಆಯಿತು. ಇದರ ಅಡಿಯಲ್ಲಿ ಬರುವ ದೇಶಗಳು ಸಂಸ್ಥೆಯ ಶಾಸನಕ್ಕೆ ಬದ್ಧವಾಗಿ ನಡೆದುಕೊಳ್ಳಬೇಕಾಯಿತು. ಅಂತಹ ದೇಶಗಳ ಪೈಕಿ ಚೀನಾ ಕೂಡ ಒಂದು. ಅಲ್ಲಿಂದಾಚೆಗೆ ಚೀನಾ ತನ್ನ ವರಸೆಯನ್ನು ಬದಲಾಯಿಸಿತು.
1999-2000 ರಲ್ಲಿ ಚೀನಾ, ಶಸ್ತ್ರಾಸ್ತ್ರವನ್ನು ಆಮದು ಮಾಡಿಕೊಳ್ಳುವ ದೇಶಗಳ ಸಾಲಿನಲ್ಲಿ ಮುಂಚೂಣಿಯಲ್ಲಿತ್ತು. 2017ರ ಹೊತ್ತಿಗೆ ಚೀನಾ; ಶಸ್ತ್ರಾಸ್ತ್ರವನ್ನು ರಫ್ತು ಮಾಡುವ ಜಗತ್ತಿನ 5ನೆಯ ರಾಷ್ಟ್ರವಾಗಿ ಬೆಳೆಯಿತು. 2013 ರಿಂದ 2017ರವರೆಗೆ ಸುಮಾರು 48 ದೇಶಗಳಿಗೆ ಚೀನಾ ಶಸ್ತ್ರಾಸ್ತ್ರಗಳನ್ನು ರಫ್ತು ಮಾಡಿದೆ. ಅದರಲ್ಲಿ ಪಾಕಿಸ್ತಾನ (ಶೇ 35), ಬಾಂಗ್ಲಾದೇಶ (ಶೇ 19) ಮತ್ತು ಅಲ್ಜೀರಿಯಾ (ಶೇ 10) ಪ್ರಮುಖ ಮಾರುಕಟ್ಟೆಗಳಾಗಿವೆ.
2008 ಗೆ ಹೋಲಿಸಿದಲ್ಲಿ ಚೀನಾ ತನ್ನ ರಫ್ತಿನ ಸಾಮರ್ಥ್ಯವನ್ನು ಶೇ 38 ರಷ್ಟು ಹೆಚ್ಚಿಸಿಕೊಂಡಿದೆ. ಶ್ರೀಲಂಕಾಕ್ಕೆ 7 ಶತಕೋಟಿ ಡಾಲರ್ ಅಷ್ಟು ಸಾಲ ಕೊಟ್ಟಿದೆ. ಅದಲ್ಲದೆ, ಹಂಬನ್ಟೋಟ ಬಂದರನ್ನು ಅಭಿವೃದ್ದಿ ಪಡಿಸಲು ಸಹ ಸಾಲ ಕೊಟ್ಟಿದೆ. 2013 ನಂತರ ಚೀನಾ ನೇಪಾಳದಲ್ಲಿ 3.32 ಶತಕೋಟಿ ಡಾಲರ್ ಅಷ್ಟು ಹೂಡಿಕೆ ಮಾಡಿದೆ. ನೇಪಾಳದಲ್ಲಿ ತಾನು ಹೆದ್ದಾರಿಗಳನ್ನು ನಿರ್ಮಿಸುತ್ತಾ ಅಲ್ಲಿನ ವ್ಯಾಪಾರ ವಹಿವಾಟಿಗೆ ಕೈ ಹಾಕಿದೆ. 2018ರಲ್ಲಿ ಚೀನಾ ಆಫ್ರಿಕಾದಲ್ಲಿ 60 ಶತಕೋಟಿ ಡಾಲರ್ ಅಷ್ಟು ಹೂಡಿಕೆ ಮಾಡುವುದಾಗಿ ಹೇಳಿಕೆ ಕೊಟ್ಟಿದೆ. ಇದಲ್ಲದೆ ಪಾಕಿಸ್ತಾನದಲ್ಲಿ 62 ಶತಕೋಟಿ ಡಾಲರ್ ಅಷ್ಟು ಹುಡಿಕೆ ಮಾಡಿ ಹೆದ್ದಾರಿ ನಿರ್ಮಿಸುತ್ತಿದೆ. ಮೇಲುನೋಟಕ್ಕೆ ಇವೆಲ್ಲವೂ ವ್ಯಾಪಾರದ ಉದ್ದೇಶವೆನಿಸಿದರೂ ಇದರ ಹಿಂದೆ ಷಡ್ಯಂತ್ರ ಅಡಗಿದೆ.
ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಹೂಡಿಕೆ ಎಂಬ ಸೋಗಿನಲ್ಲಿ ಬೃಹತ್ ಮಟ್ಟದಲ್ಲಿ ಹೆಚ್ಚಿನ ಬಡ್ಡಿಗೆ ಸಾಲ ಕೊಡುವುದು. ಸಾಲ ಪಡೆದುಕೊಂಡ ರಾಷ್ಟ್ರಗಳು ಕಾಲಕ್ರಮೇಣ ಅದನ್ನು ತೀರಿಸಲಾಗದೆ ಚೀನಾ ಹಾಕುವ ಷರತ್ತುಗಳನ್ನು ಒಪ್ಪಿಕೊಳ್ಳುತ್ತದೆ. ಅಂತಹ ಷರತ್ತುಗಳ ಮೂಲಕ ಆ ದೇಶಗಳಲ್ಲಿ ಚೀನಾ ತನ್ನ ಪ್ರಭುತ್ವವನ್ನು ಸ್ಥಾಪಿಸುತ್ತದೆ. ಉದಾಹರಣೆಗಳು ಹೀಗಿವೆ; 1. ಶ್ರೀಲಂಕಾ ತನ್ನ ಉತ್ಪಾದನೆಯ ಶೇ.95ರಷ್ಟನ್ನು ಸಾಲ ತೀರಿಸುವುದಕ್ಕೆ ವ್ಯಯಿಸುತ್ತದೆ. ಹಂಬನ್ಟೋಟ ಬಂದರನ್ನು ಚೀನಾ ತನ್ನ ತೆಕ್ಕೆಗೆ ತೆಗೆದುಕೊಳ್ಳುವುದರಲ್ಲಿತ್ತು. ಆದರೆ, ಭಾರತ ಅದನ್ನು ತಡೆಗಟ್ಟಿತು. 2. CPEC ಪ್ರಾಜೆಕ್ಟಿನ ಮೂಲಕ ಚೀನಾ ಪಾಶ್ವಿಮಾತ್ಯ ರಾಷ್ಟ್ರಗಳಿಗೆ ಪರ್ಯಾಯ ಮಾಗ್ರವನ್ನು ಕಂಡುಕೊಂಡಿದೆ. ವಿದ್ಯುತ್ ಅಭಿವೃದ್ಧಿ ಎಂಬ ಸೋಗಿನಲ್ಲಿ ಪಾಕಿಸ್ತಾನವನ್ನು ತನ್ನ ಮುಷ್ಠಿಯಲ್ಲಿ ಹಿಡಿದಿಟ್ಟಿದೆ. 3. ಆಫ್ರಿಕಾ ದೇಶದಲ್ಲಿರುವ ನೈಸರ್ಗಿಕ ಸಂಪತ್ತನ್ನು ಉಪಯೋಗಿಸಿಕೊಂಡು ತನ್ನ ದೇಶದ ಇಂಧನ ಪೂರೈಕೆ ಮಾಡಲು ಚೀನಾ ಬಲೆ ಹೆಣೆದಿದೆ. ಶ್ರೀಲಂಕಾ, ನೇಪಾಳ, ಪಾಕಿಸ್ತಾನಗಳ ಮೂಲಕ ಭಾರತವನ್ನು ಹತೋಟಿಯಲ್ಲಿಡಲು ಪ್ರಯತ್ನ ಪಡುತ್ತಿದೆ. ಇವು ಏಷಿಯಾ ಮತ್ತು ಆಫ್ರಿಕಾ ಖಂಡದಲ್ಲಿ ಚೀನಾ ಖೆಡ್ಡಾ ತೋಡುತ್ತಿರುವ ಸಣ್ಣ ಝಲಖ್ ಅಷ್ಟೇ.
ಯೂರೋಪ್ ಮತ್ತು ಕೊರಿಯಾ ಮಾರುಕಟ್ಟೆಯನ್ನು ಹಾಳು ಮಾಡುವ ರೀತಿ ಬಲು ವಿಶಿಷ್ಟವಾದದ್ದು. ಇದು ಪಕ್ಕಾ ವ್ಯಾವಹಾರಿಕ ಮತ್ತು ರಾಜಕೀಯ ಒಳಗೊಂಡ ಕುಟಿಲತೆ. ವೊಲ್ವೋ ಕಾರುಗಳ ಬಗ್ಗೆ ಎಲ್ಲರೂ ಕೇಳಿರಬೇಕಲ್ಲ? ಅದೊಂದು, ಕಾರನ್ನು ತಯಾರಿಸುವ ಸ್ವೀಡನ್ ಮೂಲದ ಕಂಪನಿ. ಫೋರ್ಡ್ ಕಂಪನಿ ಜೊತೆಗಿದ್ದ ವೊಲ್ವೋ, 28 ಅಕ್ಟೋಬರ್ 2009 ರಿಂದ ಚೀನಾ ಮೂಲದ ’Zhejiang Geely Holding Group’ ಸಂಸ್ಥೆಗೆ ಮಾರಾಟವಾಗುತ್ತದೆ. ಅಲ್ಲಿಂದಾಚೆಗೆ ಯೂರೋಪ್ ಮಾದರಿಯ ವಾಹನ ತಂತ್ರಜ್ಞಾನ (European Automotive Technology) ಚೀನಾಕ್ಕೆ ನೇರವಾಗಿ ಸಿಗುವಂತಾಯಿತು.
ವೋಲ್ವೊ ಕಂಪನಿಯ ವಾರ್ಷಿಕ ಲಾಭವನ್ನು ಜೀಲಿ ಪಡೆಯಲು ಶುರುಮಾಡಿತು. ಈ ಮೂಲಕ ಯೂರೋಪಿನ ಮಾರುಕಟ್ಟೆಯಲ್ಲಿ ಜರ್ಮನಿ ಎದುರಿಗೆ ತನ್ನ ಛಾಪು ಮೂಡಿಸಲು ಚೀನಾ ಪ್ರಯತ್ನಪಟ್ಟಿತು. ಆದರೆ, ’Cheap Product’ ಎಂಬ ಹಣೆಪಟ್ಟಿ ಹೊಂದಿರುವ ಚೀನಾಕ್ಕೆ ಯೂರೋಪಿನಲ್ಲಿ ಬೆಲೆ ಸಿಗಲಿಲ್ಲ. ಆಗ, ಸ್ವೀಡನ್ನಲ್ಲಿ ತನ್ನ ಆಡಿಯಲ್ಲಿ 2013ರಲ್ಲಿ ಹೊಸದೊಂದು ಕಂಪನಿ ತೆರೆಯಿತು. ಅದುವೆ, China Euro Vehicle Technology (CEVT). ಈ ಕಂಪನಿ ಮೂಲಕ ಚೀನಾ, ಸಂಶೋಧನಾತ್ಮಕ ಚಟುವಟಿಕೆಗೆ ಮುಂದಾಯಿತು. ವೋಲ್ವೋ ಕಂಪನಿಯಲ್ಲಿದ್ದ 10-16 ಜನರನ್ನು ಸೇಫ್ಟೈಗೆ ಹಾಕಿ ತನ್ನ ಸಂಶೋಧನೆಯನ್ನು ಮುಂದುವರೆಸಿತು.
ಈಗ, ವೋಲ್ವೊ ಸ್ವಯಂಚಾಲಿತ ಕಾರಿನ ಕುರಿತು ಸಂಶೋಧನೆ ನಡೆಸುತ್ತಿದೆ. ಆದರ ಕೆಲವು ತಂತ್ರಾಂಶಗಳನ್ನು ತೆಗೆದು ಜೀಲಿ ತನ್ನ ಹೊಸ ಕಾರಿಗೆ ಅಳವಡಿಸುತ್ತಿದೆ. ವೋಲ್ವೊ ತನ್ನ ಹೊಸ ಮಾದರಿಯ ಕಾರನ್ನು 2025-30ರ ಹೊತ್ತಿಗೆ ಹೊರತರಲು ತಯಾರಿ ನಡೆಸಿದೆ. ಆದರೆ ಜೀಲಿ; 2021ರ ಹೊತ್ತಿಗೆ ತನ್ನ ಹೊಸ ಮಾದರಿಯ ಕಾರುಗಳನ್ನು ಚೀನಾದಾದ್ಯಂತ ತರಲು ಮುಂದಾಗಿದೆ. ಇದಕ್ಕೆ, ಚೀನಾ ಸರ್ಕಾರದ ಬೆಂಬಲವೂ ಸಹ ಇದೆ. ಸರ್ಕಾರಿ ನೌಕರರಿಗೆ ಜೀಲಿ ಕಾರ್ಗಳನ್ನೇ ಕೊಳ್ಳಲು ಪ್ರೇರೇಪಿಸುತ್ತಿದೆ. ಈ ಮೂಲಕ ಚೀನಾ, ವಾಹನ ತಂತ್ರಜ್ಞಾನದಲ್ಲಿ ಯೂರೋಪನ್ನು ಆಳಲು ತಯಾರಿ ನಡೆಸಿದೆ. ಆದರೆ, ರಾಜಕೀಯಾಗಿ ಮತ್ತು ಸಾಂಸ್ಕೃತಿಕವಾಗಿ ಯೂರೋಪಿಗೂ ಚೀನಾಕ್ಕೂ ಸರಿ ಹೊಂದುವುದಿಲ್ಲ. ಹಾಗಾಗಿ, ಈ ವಿಚಾರದಲ್ಲಿ ಚೀನಾ ಎಷ್ಟ್ರರ ಮಟ್ಟಿಗೆ ಸಫಲವಾಗುತ್ತದೆ ಎಂಬುದು ಗೊತಿಲ್ಲ. ಇದೇ ತತ್ವವನ್ನು ಬಳಸಿ ಹ್ಯುನ್ಡಯ್ ನ ಮಾರುಕಟ್ಟೆಯ ವಿರುದ್ಧ ಬೆಳೆದು ನಿಂತು, ತನ್ಮೂಲಕ ಕೊರಿಯಾಕ್ಕೆ ಸೆಡ್ಡು ಹೊಡೆದು ನಿಲ್ಲುವುದು ಅದರ ಉದ್ದೇಶವಾಗಿದೆ.
ಯೂರೋಪು ‘ಸಮಾನತೆ’ಗೆ ಬೆಲೆಕೊಡುತ್ತದೆ, ಭಾರತ ’ಸರ್ವೇ ಜನಃ ಸುಖಿನೋ ಭವಂತು’, ’ಅತಿಥಿ ದೇವೋ ಭವ’ ಎನ್ನುತ್ತದೆ. ಆದರೆ, ಚೀನಾ ಮಾತ್ರ, ಬೇರೆಯವರು ಹಾಳಾದರೂ ಚಿಂತೆ ಇಲ್ಲ ತಾನು ಮಾತ್ರ ಉದ್ದಾರ ಆಗಬೇಕು ಮತ್ತು ಎಲ್ಲರನ್ನು ಆಳುವಂತಾಗಬೇಕು ಎಂಬ ದುರುದ್ದೇಶ ಹೊಂದಿದೆ. ಮೇಲೆ ಹೇಳಿರುವುದೆಲ್ಲವನ್ನು ರಾಜಕೀಯ ಮತ್ತು ವ್ಯಾವಹಾರಿಕ ನೆಲೆಗಟ್ಟಿನಲ್ಲಿ ಸಮರ್ಥಿಸಿಕೊಳ್ಳಬಹುದು. ಆದರೆ, ಚೀನಾದ ಸಾಮಾನ್ಯ ಜನರಲ್ಲಿರುವ ಅಸಡ್ಡೆಯ ಭಾವ, ಕುಟಿಲತೆ ತೀರ ಅಸಹ್ಯ ಹುಟ್ಟಿಸುವಂತಹುದು. ಅವರ ಆ ಕುಟಿಲತೆಯ ಸ್ವಭಾವ ಮತ್ತು ಭಾರತದ ವಿರುದ್ಧದ ಷಡ್ಯಂತ್ರದ ಕುರಿತು ಮತ್ತೊಂದು ಸಂಚಿಕೆಯಲ್ಲಿ ಚರ್ಚಿಸಲು ಪ್ರಯತ್ನಿಸುತ್ತೇನೆ. ಹೇಗೆ ನೋಡಿದರೂ, ಅಭಿವೃದ್ಧಿ ಹೆಸರಿನಲ್ಲಿ ಚೀನಾ ಜಗತ್ತನ್ನು ಆಕ್ರಮಿಸಿಕೊಳ್ಳುತ್ತಿರುವುದು ಸುಳ್ಳಲ್ಲ. ಹಿಡಿದರೆ ಸುಲಭವಾಗಿ ಬಿಟ್ಟು ಹೋಗುವಂತಹುದಲ್ಲ. ಆದ್ದರಿಂದಲೇ ಚೀನಾ; ನವಯುಗದ ಶನಿ!








Discussion about this post