ಮೈಸೂರು: ಮೈಸೂರು ದಸರಾ ಹಿನ್ನೆಲೆಯಲ್ಲಿ ಉಂಡುವಾಡಿ ಸಮೀಪ ಕೆಆರ್’ಎಸ್ ಹೀನ್ನೀರಿನಲ್ಲಿ ಆಯೋಜಿಸಿರುವ ದಸರಾ ಸಾಹಸ ಕ್ರೀಡಾಕೂಟವನ್ನು ವೀಕ್ಷಿಸಿದ ರಾಜ್ಯ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಹಾಗೂ ಯುವ ಸಬಲೀಕರಣ-ಕ್ರೀಡಾ ಸಚಿವ ಕೆ.ಎಸ್. ಈಶ್ವರಪ್ಪ ಬೋಟಿಂಗ್ ಮಾಡಿ ಸಂಭ್ರಮಿಸಿದರು.
ಆನಂತರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವಸ್ತು ಪ್ರದರ್ಶನ ಮಳಿಗೆಯನ್ನು ಮಹಾತ್ಮ ಗಾಂಧೀಜಿ ಅವರ ಪುತ್ಥಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಈಶ್ವರಪ್ಪ ಅವರು ಉದ್ಘಾಟಿಸಿದರು.
ದಸರಾ ವೀಕ್ಷಣೆಗೆ ರಾಜ್ಯ ಹಾಗೂ ದೇಶದಿಂದ ಪ್ರವಾಸಿಗರು ಆಗಮಿಸುತ್ತಾರೆ. ಹೀಗಾಗಿ, ದಸರಾ ವಸ್ತು ಪ್ರದರ್ಶನದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯ ಜನಪರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪರಿಚಯಿಸಲಾಗುವುದು. ಈ ಪ್ರದರ್ಶನ 3 ತಿಂಗಳ ಕಾಲ ಇರಲಿದೆ. ಇದೇ ವೇಳೆ ಈ ಕುರಿತಂತೆ ಸಾರ್ವಜನಿಕರು ಸಲಹೆಗಳನ್ನು ಪಡಯಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪರಿಮಳ ಶ್ಯಾಂ, ಜಿಲ್ಲಾ ಪಂಚಾಯತ್ ಸದಸ್ಯೆ ಮಂಗಳ ಸೋಮಶೇಖರ್ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಕೆ. ಜ್ಯೋತಿ ಹಾಜರಿದ್ದರು.
ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಆಯೋಜಿಸಿರುವ ದಸರಾ ಕ್ರೀಡಾ ಕೂಟದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಕ್ರೀಡಾಕೂಟದಲ್ಲಿ ಭಾಗವಹಿಸಿದ ಎಲ್ಲ ಕ್ರೀಡಾಪಟುಗಳಿಗೂ ಶುಭ ಹಾರೈಸಿ ಮುಂದಿನ ದಿನಗಳಲ್ಲಿ ಇನ್ನೂ ಉನ್ನತ ಮಟ್ಟದ ಸಾಧನೆ ಮಾಡಿ ಎಂದು ಶುಭ ಹಾರೈಸಿದರು.
ಕೆ.ಎಸ್. ಈಶ್ವರಪ್ಪ ಅವರನ್ನು ಭೇಟಿಯಾದ ಕರ್ನಾಟಕ ಈಜು ಸಂಸ್ಥೆಯ ಅಧ್ಯಕ್ಷ ಗೋಪಾಲ್ ಹೊಸೂರ್ ಹಾಗೂ ತಂಡದವರು ಸಂಸ್ಥೆಯ ಶ್ರೇಯೋಭಿವೃದ್ಧಿಗೆ ಸಹಕಾರ ನೀಡುವ ಕುರಿತಾಗಿ ಚರ್ಚೆ ನಡೆಸಿದರು.
Discussion about this post