ಗೌರಿಬಿದನೂರು: ರೈತರು ಕೃಷಿ ಚಟುವಟಿಕೆಗಳಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳುವ ಮೂಲಕ ಹೆಚ್ಚಿನ ಇಳುವರಿ ಪಡೆಯಬಹುದಾಗಿದೆ ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷ ಆರ್. ಲೋಕೇಶ್ ತಿಳಿಸಿದರು.
ತಾಲೂಕಿನ ಮಂಚೇನಹಳ್ಳಿಯ ಗ್ರಾಮ ಪಂಚಾಯಿತಿ ಆವರಣದಲ್ಲಿ ಕೃಷಿ ಇಲಾಖೆಯ ವತಿಯಿಂದ ಆಯೋಜಿಸಿದ್ದ ಸಮಗ್ರ ಕೃಷಿ ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಬಾರಿ ತಾಲೂಕಿನ ವಿವಿದೆಡೆಗಳಲ್ಲಿ ಸಾಧಾರಣ ಮಳೆಯಾದ ಕಾರಣ ರೈತರ ಮೊಗದಲ್ಲಿ ಸಂತಸ ಮೂಡಿದೆ. ಇಲಾಖೆಯ ಅಧಿಕಾರಿಗಳು ರೈತರ ಕೃಷಿ ಪದ್ಧತಿಗಳಿಗೆ ಅನುಗುಣವಾಗಿ ಸೂಕ್ತ ತರಬೇತಿ ಮತ್ತು ಮಾರ್ಗದರ್ಶನವನ್ನು ಸಕಾಲದಲ್ಲಿ ನೀಡುತ್ತಾರೆ. ಪ್ರತಿಯೊಬ್ಬ ರೈತರ ಇದರ ಸಂಪೂರ್ಣ ಸದ್ಭಳಕೆ ಮಾಡಿಕೊಂಡು ಉತ್ತಮ ತಳಿಯ ಬೇಸಾಯವನ್ನು ಮಾಡಬೇಕಾಗಿದೆ. ರೈತರ ಕೃಷಿ ಚಟುವಟಿಕೆಗಳಿಗೆ ಪೂರಕವಾದ ಬಹುತೇಕ ಸಾಮಗ್ರಿಗಳು ರೈತ ಸಂಪರ್ಕ ಕೇಂದ್ರದಲ್ಲಿ ಲಭ್ಯವಿರುತ್ತವೆ ಎಂದು ಹೇಳಿದರು.
ಜಿಲ್ಲಾ ಪಂಚಾಯ್ತಿ ಸದಸ್ಯ ಪಿ.ಎನ್. ಪ್ರಕಾಶ್ ಮಾತನಾಡಿ, ತಾಲೂಕಿನ ಪ್ರತೀ ರೈತ ಸಂಪರ್ಕ ಕೇಂದ್ರದಲ್ಲಿ ಒಂದು ಪ್ರತ್ಯೇಕ ಕೃಷಿ ಕ್ಲಿನಿಕ್ ತೆರೆದು ಅಧಿಕಾರಿಯನ್ನು ನೇಮಕ ಮಾಡಿ ಸರ್ಕಾರದಿಂದ ಸಿಗುವ ಸೌಲಭ್ಯಗಳು ಮತ್ತು ಅವುಗಳ ಬಳಕೆಯ ಬಗ್ಗೆ ರೈತರಿಗೆ ನಿಖರವಾದ ಮಾಹಿತಿ ನೀಡಬೇಕಾಗಿದೆ. ಇದರಿಂದ ರೈತರು ಕಾಲಕಾಲಕ್ಕೆ ಬೇಕಾದ ಕೃಷಿ ಆಧಾರಿತ ಮಾಹಿತಿ ಪಡೆಯಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ರೈತರೊಂದಿಗೆ ಸಂವಾದ
ರೈತರು ಕೃಷಿ ಚಟುವಟಿಕೆಗಳಲ್ಲಿ ಬಳಕೆ ಮಾಡಿಕೊಳ್ಳಬಹುದಾದ ಆಧುನಿಕ ವಿಧಾನಗಳಾದ ಲಘು ನೀರಾವರಿ, ಕೃಷಿ ಯಾಂತ್ರೀಕರಣ, ರಾಷ್ಟ್ರೀಯ ಆಹಾರ ಭದ್ರತಾ ಮಿಷನ್, ಬಿತ್ತನೆ ಬೀಜ ವಿತರಣೆ, ಬೆಳೆ ವಿಮೆ, ಕೃಷಿ ಭಾಗ್ಯ, ಮಣ್ಣು ಆರೋಗ್ಯ ಅಭಿಯಾನ, ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಬಗ್ಗೆ ನುರಿತ ಕೃಷಿ ವಿಜ್ಞಾನಿಗಳು ರೈತರಿಗೆ ಸಂವಾದದ ಮೂಲಕ ಮಾಹಿತಿ ನೀಡಿದರು. ಜೊತೆಗೆ ರೈತರಿಂದ ಸಲಹೆ ಸೂಚನೆಗಳು ಮತ್ತು ಅಭಿಪ್ರಾಯಗಳನ್ನು ಸಂಗ್ರಹಿಸಲಾಯಿತು. ರೈತರ ಅನುಕೂಲಕ್ಕಾಗಿ ವಿವಿಧ ಇಲಾಖೆಗಳ ಕೃಷಿ ಉತ್ಪನ್ನಗಳು ಮತ್ತು ಯಂತ್ರೋಪಕರಣಗಳ ಪ್ರದರ್ಶನ ಮಳಿಗೆಗಳನ್ನು ತೆರೆಯಲಾಗಿತ್ತು.
ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಉಪ ನಿರ್ದೇಶಕಿ ಎಂ. ಅನುರೂಪ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಎಸ್.ಎನ್. ಮಂಜುನಾಥ್, ತಾಪಂ ಸದಸ್ಯ ಜೆ. ಮೋಹನ್ ಕುಮಾರ್, ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಗಂಗಮ್ಮ, ಎನ್. ಗಂಗಾದೇವಿ, ಸುದರ್ಶನರೆಡ್ಡಿ, ಉಪಾಧ್ಯಕ್ಷೆ ರಾಜಮ್ಮ, ಜಿಪಂ ಮಾಜಿ ಸದಸ್ಯ ಪಿ.ಎನ್. ಜಗನ್ನಾಥ್, ತಾಪಂ ಮಾಜಿ ಸದಸ್ಯೆ ಕೆ. ಪ್ರಭಾ ನಾರಾಯಣಗೌಡ, ಎಪಿಎಂಸಿ ನಿರ್ದೇಶಕ ಜೆ. ಸುಬ್ಬರಾವ್, ತೋಟಗಾರಿಕೆ ಸಹಾಯಕ ನಿರ್ದೇಶಕ ಎಸ್. ರವಿಕುಮಾರ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.
(ವರದಿ: ಬಿ.ಎಂ. ಅಜಯ್, ಗೌರಿಬಿದನೂರು)
Get In Touch With Us info@kalpa.news Whatsapp: 9481252093
Discussion about this post