ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಯಾರ್ ಹೇಳಿದ್ದು ಪ್ರಾಮಾಣಿಕವಾದ, ಸ್ವಾರ್ಥರಹಿತವಾದ ಪ್ರೀತಿ ಸ್ನೇಹ ಇಂದಿನ ದಿನದಲ್ಲಿ ಸಿಗ್ತಾನೆ ಇಲ್ಲ, ಎಲ್ಲಾ ಸಂಭಂದಗಳಲ್ಲೂ ಸ್ವಾರ್ಥ ಅಡಗಿದೆ ಅಂತ, ಕೆಲವೊಂದು ಜಗತ್ತು ಅದೇ ಹಳೆಯ ಮುಗ್ಧತೆಯ ತನ್ನೊಳಗೆ ಹಾಗೆಯೇ ಬಚ್ಚಿಟ್ಟುಕೊಂಡು ಹಾಯಾಗಿದೆ. ಅಂತಹ ಮುಗ್ಧತೆ , ಪ್ರಾಮಾಣಿಕತೆ, ನಂಬಿಕೆ, ಪ್ರೀತಿ, ವಿಶ್ವಾಸಗಳಿಂದ ಕಟ್ಟಲ್ಪಟ್ಟ ಸುಂದರ ಸೌಧಗಳಲ್ಲಿ ಒಂದು ನನ್ನ ಎಫ್’ಎಂ ರೇಡಿಯೋ ಜಗತ್ತು, ಇಂದಿನ ಇಂಟರ್ನೆಟ್ ಯುಗದಲ್ಲಿ ಸೋಶಿಯಲ್ ಮೀಡಿಯಾಗಳ ಬಣ್ಣ ಬಣ್ಣದ ಬಣ್ಣನೆಗಳ ನಡುವೆ, ಗರಿಗೆದರಿ ಹಾರುತ್ತಿರುವ ಭಾವನೆಗಳ ನಡುವೆ, ಬೆಚ್ಚನೆ ಮುದುರಿ ಕುಳಿತು, ತನ್ನ ಪುಟ್ಟ ಪ್ರಪಂಚದಲ್ಲಿ ತಾನೇ ರಾಜ, ರಾಣಿಯಾಗಿ, ಕಲ್ಪನೆಯ ಲೋಕದೊಳಗೊಂದು ವಾಸ್ತವ ಜಗತ್ತನ್ನು ಕಟ್ಟಿಕೊಂಡು, ಅಲ್ಲಿ ಬೆರಳೆಣಿಕೆಯಷ್ಟು ಜನರಿಗಷ್ಟೇ ಪ್ರವೇಶಿಸುವ ಅವಕಾಶ ಕೊಟ್ಟು, ಒಂಥರಾ ಮುಟ್ಟಿದರೆ ಮುನಿಯ ಅನ್ನೋ ಹಾಗೆ, ತಾನೇ ಕಟ್ಟಿದ ಭದ್ರ ಕೋಟೆಯೊಳಗೆ, ಹಾಡುಗಳ ಲೋಕದಲ್ಲಿ ಬರುವ ಪ್ರತಿ ಪಾತ್ರಗಳಲ್ಲಿ ತನ್ನನ್ನೇ ಕಲ್ಪಿಸಿಕೊಳ್ಳುತ್ತ , ಪ್ರತೀ ಸಾಲಿಗೂ ತನ್ನ ಜೀವನವನ್ನೇ ಹೋಲಿಸಿಕೊಳ್ಳುತ್ತಾ, ಖುಷಿಯಿದ್ದಾಗ ಆಲಾಪನೆಗಳ ಜೊತೆಯಲ್ಲಿ ತೇಲುತ್ತಾ, ಬೇಜಾರಲ್ಲಿದ್ದಾಗ ಹಾಡಿನ ಸಾಹಿತ್ಯದ ಜೊತೆ ಕಳೆದು ಹೋಗಿ ಕಣ್ಣಂಚು ಒದ್ದೆ ಮಾಡಿಕೊಳ್ಳುತ್ತಾ, ಸ್ಫೂರ್ತಿ ತುಂಬುವ ಸಾಲುಗಳಿಂದ ಪಡೆದ ಹುರುಪಿನೊಡನೆ ಮುಂದೆ ಸಾಗುತ, ಹಾಡುಗಳ ಕೇಳಲಾಗದ ದಿನ ಅರಿಯದ ಚಡಪಡಿಕೆ,ಹೇಳಲಾಗದ ತಳಮಳಗಳ ನಡುವೆ ಕಳೆದು ಮತ್ತೆ ಆಲಿಸುವ ತನಕ, ಕಾಣದ ಕಡಲಿಗೆ ಹಂಬಲಿಸುವ ಮನಗಳ ಮಿಡಿತಕ್ಕೆ, ಹೆಸರಿಡಲು ಪದಗಳು ಸಿಗಲಾರವು.
ಅದರಲ್ಲೇನಿದೆ ಅಂಥದ್ದು?? ಅಂತ ಈ ಎಫ್’ಎಂ ರೇಡಿಯೋ ಜಗದ ಸೆಳೆತ, ಸೋಜಿಗದ ಅರಿವಿರದವರು ಹೇಳುವ ಮಾತು ಹಲವಿರಬಹುದು. ಆದರೆ ಹೇಳಲಾಗದ, ವಿವರಣೆಗೆ ನಿಲುಕದ, ಅರ್ಥ ಆಗದ ಅಪರಿಮಿತ ಅನುಭೂತಿಯ ಜಗತ್ತೇ ಈ ಎಫ್’ಎಂ ರೇಡಿಯೋದ ವಿಸ್ಮಯ.
ಇಲ್ಲಿ ಆಕರ್ಷಣೆ ಕೇವಲ ಹಾಡುಗಳದ್ದಲ್ಲ. ಹಾಡುಗಳ ಮಾಯಾಲೋಕದೊಳಗೊಬ್ಬ ಗೆಳೆಯ ಅಥವಾ ಗೆಳತಿ, ಪ್ರತಿ ದಿನ ಹೊಸತನದೊಂದಿಗೆ ಬರುವ ಆರ್’ಜೆ ಅನ್ನುವ ಆ ಬಾನುಲಿಯ ಸ್ನೇಹಿತ, ಸ್ನೇಹಿತೆ ಮನೆಯ ಸದಸ್ಯರಂತೆ ಆಗಿ ಬಿಡ್ತಾರೆ. ಆ ಸ್ನೇಹಕ್ಕೆ ವಯಸ್ಸಿನ ಹಂಗಿಲ್ಲ, ಬಣ್ಣಗಳ ಬಣವಿಲ್ಲ, ಸೌಂದರ್ಯದ ಸಂಗವಿಲ್ಲ, ಮೇಲು ಕೀಳು, ಜಾತಿ ಭೇದಗಳ ಪರಿಭೇಧವೂ ಇಲ್ಲ. ಎಲ್ಲೋ ಕೂರು ಮಾತಾಡುವ ಧ್ವನಿಯೊಂದರ ಜೊತೆಗೆ ಹೇಳಲಾಗದ ಸಿಹಿಯಾದ ಭಾವವೊಂದು, ಸ್ನೇಹ ಸಂಬಂಧವೊಂದು ಬೆಸೆದುಬಿಟ್ಟಿರುತ್ತದೆ. ಕಣ್ಣಿಗೆ ಕಾಣಿಸದೆ ಮಾತಾಡೋ ವ್ಯಕ್ತಿ ನಮ್ಮ ಪಕ್ಕದಲ್ಲೇ ಓಡಾಡೋ ಹುಡುಗ, ಅಲ್ಲಲ್ಲ ನಮ್ಮ ಸ್ನೇಹಿತ, ಅವ್ನು/ಅವಳು ಎಷ್ಟು ಚೆನ್ನಾಗಿ ನಮ್ಮನ್ನ ಅರ್ಥ ಮಾಡ್ಕೊಂಡು, ನನ್ನ ಜೊತೇನೆ ಮಾತಾಡ್ತಾ ಇದ್ದಾರೆ. ಆ ಅನುಭವ ನನಗು ಆಗಿತ್ತಲ್ವಾ, ಸರಿಯಾಗೇ ಹೇಳ್ತಿದ್ದಾನೆ, ಅವನು ಯೋಚ್ನೆ ಮಾಡೋ ರೀತಿ, ಅವನು ಕೊಡೊ ಉದಾಹರಣೆಗಳು, ಅವನ ಇಂದಿನ ನಿನ್ನೆ ಅನುಭವಗಳಿಂದ ಹಿಡಿದು ನಾಳಿನ ಕನಸುಗಳು ನನ್ನದೇ ಅಂತ ಅನಿಸ್ತಾ ಇದೆ ಅಲ್ವಾ, ಅವ್ನು ಹೀಗೆ ಇದ್ದಾನೆ ಅನ್ನೋದು, ಅದೆಲ್ಲೋ ಮೈಕ್ ಮುಂದೆ ಕೂತ್ಕೊಂಡು ಮಾತಾಡೋ ವ್ಯಕ್ತಿಗಿಂತ ಹೆಚ್ಚಾಗಿ ಇಲ್ಲಿ ಅವನ ಪ್ರತೀ ಮಾತು ಕೇಳೋ ಮನಸುಗಳಿಗೆ ಅವನೇನು, ಅವನ ವ್ಯಕ್ತಿತ್ವ ಎಂತದ್ದು ಅನ್ನೋದರ ಪರಿಚಯ ಆಗ್ತಾ ಹೋಗುತ್ತೆ.
ಅಲ್ಲೊಂದು ನಂಬಿಕೆ ಸೃಷ್ಟಿಯಾಗಿ, ಮನಸಿನ ಮಾತುಗಳ ವಿನಿಮಯ ಕೇವಲ ಧ್ವನಿಯಿಂದಲೇ ನಡೆಯುತ್ತೆ.ಮಾತಲ್ಲೇ ಕೇಳುಗರು ಹುಡುಕ್ತಾ ಇದ್ದ ಅದೆಷ್ಟೋ ಪ್ರಶ್ನೆಗಳಿಗೆ ಉತ್ತರವೂ ಸಿಕ್ಕಿರುತ್ತೆ. ಬದುಕುವ ಆಸೆ ಕ್ಷಣ ಕ್ಷಣಕ್ಕೂ ಪುಟಿದೇಳುತ್ತೆ, ಉತ್ಸಾಹ ಗರಿಗೆದರುತ್ತೆ, ಎಲ್ಲ ಬಾಂಧವ್ಯಗಳ ನಡುವೆ ಇದ್ದರೂ ಕೂಡ ಒಮ್ಮೆಯಾದರೂ ಮೂಡುವ ಒಂಟಿ ಅನ್ನೋ ಭಾವನೆಗಳನ್ನ ಓಡಿಸಿ ನಮ್ಮ ಜೊತೆ ಎಲ್ಲೊ ಮಾತಾಡೋ ಒಂದು ಜೀವ, ಕಾಣದ ಕೈ, ಆ ಕನಸು, ನನಸಿನ ಲೋಕದ ಹಾಡುಗಳು ನಮ್ಮ ಜೊತೆಯಿರುವಾಗ ನಾನು ಹೇಗೆ ಒಂಟಿ ಅನ್ನೋ ಫೀಲ್ ಸಿಗೋದೇ ಎಫ್’ಎಂಎಂ ಎಂಬ ವಿಸ್ಮಯದ ಜಗತ್ತಿನಿಂದ, ರಾತ್ರಿ ದುಡಿದು ದಣಿದ ಜೀವಗಳಿಗೆ, ಬೆಳಿಗ್ಗೆ ಎದ್ದು ಮತ್ತೊಂದು ಅದೇ ತರಹ ದುಡಿಯುವ ದಿನಕ್ಕೆ ಸೆಟ್ ಆಗೋ ಹೊತ್ತಿಗೆ ಮೂಡುವ ಇಷ್ಟೇನಾ ಲೈಫ್ ಅಂದ್ರೆ ಅನ್ನೋ ಪ್ರಶ್ನೆನ ಅಳಿಸಿ ಅವರನ್ನ ಹೊಸ ಎನರ್ಜಿ ಜೊತೆಗೆ, ಉತ್ಸಾಹದ ಜೊತೆಗೆ ಒಂದೊಳ್ಳೆ ಲವಲವಿಕೆಯ ದಿನಕ್ಕೆ ರೆಡಿ ಮಾಡೋ, ಹುರಿದುಂಬಿಸೋ ಮಾತುಗಳು ಹಾಡುಗಳ ಜೊತೆಗೆ, ಸಂಜೆ ಸುಸ್ತಾದ ಮನಕ್ಕೆ ತಿಳಿಹಾಸ್ಯದ ಮೂಲಕ ಮುಖ ಅರಳಿಸೋ ಕಸರತ್ತು, ರಾತ್ರಿ ಸಿಹಿ ನೆನಪು, ಕಥೆ ಹೇಳುವ ತನಕ, ಜೊತೆ ಜೊತೆಗೆ ಮಹಾನಗರಗಳ ಹಗಲು ರಾತ್ರಿಗಳಲ್ಲಿ ಮುಂದೆ ಮುಂದೆ ಕರೆದುಕೊಂಡು ಹೋಗೋ ಜಾದೂಗಾರರ ಜಗತ್ತೇ ಈ ಎಫ್’ಎಂ ಲೋಕ….
ಇಲ್ಲಿ ಮಾತಾಡೋ ಪ್ರತಿ ಆರ್ ಜೆ ಯೊಳಗೊಬ್ಬ ಮುಗ್ಧ ಮಗು ಇರಬಹುದು, ಸ್ಪೂರ್ತಿ ತುಂಬುವ ಸ್ನೇಹಿತ ಇರಬಹುದು, ಕಾಳಜಿ ತೋರೋ ಅಮ್ಮ, ಗದರೋ ತಂದೆ, ಕೀಟಲೆ ಮಾಡೋ ತಮ್ಮ ತಂಗಿ, ದಾರಿ ತೋರಿಸೋ ಗುರು, ಅದೆಲ್ಲವನ್ನು ಮೀರಿಸಿದ ಮಾಯಾಲೋಕದ ಜಾದೂಗಾರ ಇರಬಹುದು. ಈ ಎಲ್ಲ ಪಾತ್ರಗಳ ಮೂಲಕ ಕೇಳುಗರ ಮನಸಿಗೆ ಲಗ್ಗೆ ಹಾಕುವ ಆ ಆರ್’ಜೆ, ನಿಮ್ಮ ಪ್ರೀತಿ ತುಂಬಿದ ಮಾತುಗಳು, ನಿಮ್ಮ ಸ್ನೇಹ, ನಿಮ್ಮ ನಂಬಿಕೆ, ನಿಮ್ಮ ಹಾಸ್ಯ, ಒಮ್ಮೊಮ್ಮೆ ಅವರ ಮಾತಿನಿಂದ ನೀವು ಮನಸ್ಸು ಹಗುರ ಮಾಡಿಕೊಂಡ ಆ ಕ್ಷಣಗಳು, ಒಂದಿಷ್ಟು ಮನಸುಗಳಲಿ ಬೀಸಿದ ಬದಲಾವಣೆಯ ಗಾಳಿ, ಸ್ವಾರ್ಥವಿಲ್ಲದ ಪ್ರೀತಿ, ನಿಷ್ಕಲ್ಮಶ ಕಾಳಜಿ, ನೀವು ಅವನ ಮಾತನ್ನ ಕೇಳ್ತಾ ಇದ್ದೀರಿ ಅನ್ನೋ ಖುಷಿಯಿಂದಾನೆ ಸ್ಫೂರ್ತಿ ಪಡೀತಾನೆ ಶಕ್ತಿ ಪಡ್ಕೋತಾನೇ.. ಪ್ರತೀ ಮಾತಿಗೂ ಕಿವಿಯಾಗೋ ಕೇಳುಗರೇ ಅವನ ಸ್ಪೂರ್ತಿ ಶಕ್ತಿ….
ಅವನ/ಅವಳ ಮಾತು ನಿಮ್ಮನ್ನ ತಲುಪಬೇಕಾದರೆ, ಅವರು ನಿಭಾಯಿಸಬೇಕಾದ ಪಾತ್ರಗಳು ಹತ್ತು ಹಲವು, ವಯಸ್ಸು ಎಷ್ಟಿರಲಿ ಅನುಭವ ಇರಲಿ, ಇಲ್ಲದಿರಲಿ, ಎಲ್ಲವನು ಬಲ್ಲವರ ಹಾಗೆ ಅವರು ಮಾತಾಡಬೇಕೆಂದರೆ ಮನದೊಳಗೊಬ್ಬ ಕೇಳುಗ, ವಿಚಾರವಾದಿ, ಚಿಂತಕ, ಶಿಕ್ಷಕ, ಹಾಸ್ಯಗಾರ, ಡಾಕ್ಟರ್, ವಿಜ್ಞಾನಿ, ಎಲ್ಲರೂ ಇರಲೇಬೇಕು. ಪಂಚೇಂದ್ರಿಯಗಳಿಂದ ಸಿಗುವ ಅನುಭವಕ್ಕಾಗಿ ಮೈಯೆಲ್ಲಾ ಕಣ್ಣಾಗಿ ಇಟ್ಟುಕೊಂಡಿರಬೇಕಾಗುತ್ತದೆ, ಪ್ರತಿ ದಿನ ತಾನು ಕಂಡ, ಕೇಳಿದ, ಅನುಭವಿಸಿದ, ಕಲಿತ, ಓದಿದ ಸಂಗತಿಗಳಿಗೊಂದಿಷ್ಟು ಬಣ್ಣ ಹಚ್ಚಿ, ರಸವತ್ತಾಗಿ ವರ್ಣಿಸಿ, ಜೋಪಾನವಾಗಿ ಪೋಣಿಸಿ ಅಣಿಮುತ್ತುಗಳಂತೆ ಉದುರಿಸುವುದರ ಜೊತೆಗೆ ತನ್ನ, ಹಾಡುಗಳ ಬುಟ್ಟಿಯ ಆ ದಿನದ ಹಾಡುಗಳ ನಿಮಗೆ ತಲುಪಿಸಬೇಕು. ಅವನ ನೋವು ನಲಿವುಗಳು, ಆ ದಿನದ ಅವನ ಮನಸ್ಥಿತಿ, ವ್ಯೆಯಕ್ತಿಕ ಜೀವನ ನೋವು ನಲಿವು, ಇಲ್ಲಿ ನಗಣ್ಯ, ಅವನೊಳಗಿನ ಎಂಟರ್ಟೈನರ್’ಗೆ ಮಾತ್ರ ಅಲ್ಲಿ ಜಾಗ. ಕಣ್ಣಿಗೆ ಕಾಣದ ಕೊಡುಕೊಳ್ಳುವಿಕೆ ಎಂದು ಉದಾಸೀನ ಮಾಡುವಂತಿಲ್ಲ. ಇಲ್ಲಿರೋದು ಅದನ್ನೂ ಮೀರಿದ ಅಪರೂಪದ ವ್ಯವಹಾರ. ಮನಸಿನ ಒಳಬೀದಿಗಳಲಿ ಖುಷಿಯ ಹಂಚುವ ವೃತ್ತಿ ಅವನದಾದರೂ, ಖುಷಿಯ ಹಂಚುವುದರ ಜೊತೆಗೆ, ಕಿವಿ ಹಿಂಡುವ, ತುಸು ಗಂಭೀರ, ನೋವಾಗದಂತೆ ಒಂದಿಷ್ಟು ವಿಚಾರಗಳ ಸೂಕ್ಷ್ಮವಾಗಿ ಮುಟ್ಟಿಸುವ, ಮೈಮರೆತವರ ಎಚ್ಚರಿಸುವ, ಹೊಸ ವಿಚಾರಗಳ ತಿಳಿಸುವ ಅವನು ಎಂದಿಗೂ ಪ್ರವಚನಕಾರನಲ್ಲ, ಉಪದೇಶ ಮಾಡಿ ಅಧಿಕಾರವನ್ನೂ ಚಲಾಯಿಸಲ್ಲ. ಹೀಗೆ ಮಾಡಿ ಎಂದು ಆದೇಶಿಸುವುದೂ ಇಲ್ಲ. ಯಾಕೆಂದರೆ ಇಲ್ಲಿ ಯಾವುದೇ ನೀತಿ ನಿಯಮಗಳಿಲ್ಲ. ಕಟ್ಟು ಕಟ್ಟಳೆಗಳಿಲ್ಲ…
ಇದು ಕೇವಲ ಮನಸಿನ ಒಳಗಿನ ಚಿತ್ರಮಂದಿರಲಿ, ಅಲ್ಲೇ ಗಿರಕಿ ಹೊಡೆಯುವ, ಕುಣಿದು ಕುಪ್ಪಳಿಸುವ, ನಾಚಿ ನೀರಾಗುವ, ಮಧುರ ಕಲ್ಪನೆಗಳಲ್ಲಿ ಮುಳುಗೇಳುವ, ಕಣ್ಣಂಚು ಒದ್ದೆ ಮಾಡಿಕೊಳ್ಳುವ, ಕನಸಿನೂರಿಗೆ ಸಾಗುವ ದಾರಿಯಲಿ ಪ್ರತೀ ಸಲ ಬಿದ್ದಾಗಲೂ ಮೇಲೆದ್ದು, ಹೊಸ ಶಕ್ತಿ ತುಂಬಿಕೊಳ್ಳುವ, ವಾಸ್ತವದೊಳಗಿನ ಕಲ್ಪನಾ ಲೋಕ, ಮಾಯಾನಗರಿ… ಈ ಎಫ್’ಎಂ ಜಗತ್ತು….
ಇಲ್ಲಿ ಹಾಡುಗಳು ಮನದ ಶರಧಿಯಲಿ ತೇಲುವ ದೋಣಿಯಾದರೆ, ಹುಟ್ಟು ಹಾಕುವ ನಾವಿಕರೇ ಅದರ ಪ್ರೀತಿಯ ಕೇಳುಗರು… ನಡು ನಡುವೆ ಮನದ ಆಗಸದಲ್ಲಿ ಬೀಸೋ ತಂಗಾಳಿಯಲ್ಲಿ ತೇಲಿ ಬರೋ ಧ್ವನಿಗಳೇ ಹೆಸರಿಡಲಾಗದ ಬಾನುಲಿಯ ಬಂಧುಗಳು…
Get In Touch With Us info@kalpa.news Whatsapp: 9481252093
Discussion about this post