ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಜೀವನದ ಪುಟಗಳನ್ನು ಹಿಂತಿರುಗಿಸಿ ನೋಡಿದರೆ ಮೊದಲು ನೆನಪಾಗುವುದೇ ಬಾಲ್ಯ. ಆ ಬಾಲ್ಯದ ನೆನಪು ಮತ್ತೆ ಮರುಕಳಿಸಿತ್ತು, ಧರಿಸಿದ ನಿನಗೆ ಪ್ರಾಣವಿಲ್ಲ! ಪ್ರಾಣವಿರುವ ನನಗೆ ಧರಿಸಲಿಕ್ಕಿಲ್ಲ. ಈ ಪದಗಳ ಸಾಲುಗಳು ಒಂದು ಕ್ಷಣ ನನ್ನ ಬಾಲ್ಯವನ್ನು ನೆನಪು ಮಾಡಿತ್ತು. ನಾನು ಇದ್ದ ಆ ದಿನಗಳು ಒಂದು ಕ್ಷಣ ಮರುಕಳಿಸಿತ್ತು. ಈ ಚಿತ್ರದಲ್ಲಿ ಇರುವ ಬಾಲಕ ಹೇಗೆ ಬಟ್ಟೆ ಧರಿಸಿರುವ ಆ ಗೂಂಬೆಯನ್ನು ನೋಡುತ್ತಾ ಇರುವನು ಹಾಗೇ ನಾನು ಕೊಡ ಆ ಬಾಲಕನಂತೆ ಬಟ್ಟೆ ಧರಿಸಿರುವ ಗೊಂಬೆಗಳನ್ನು ನೋಡುತ್ತಾ ನಿಂತಿರುವ ನೆನಪಿದೆ.
ನಾನು ಶಾಲೆಗೆ ಹೋಗುವಾಗ ಬರುವಾಗ ಅಂಗಡಿಗಳಲ್ಲಿ ಬಟ್ಟೆ ಧರಿಸಿರುವ ಗೊಂಬೆಯನ್ನು ಪ್ರತಿದಿನವು ನೋಡಿಕೊಂಡು ಬರುತ್ತಿದೆ. ಒಂದು ದಿನ ಶಾಲೆ ಮುಗಿಸಿಕೊಂಡು ಮನೆಗೆ ಬರುವಾಗ ಇವತ್ತು ನಾನು ಆ ಗೊಂಬೆ ಹತ್ತಿರ ಆ ಬಟ್ಟೆಯನ್ನು ನನಗೆ ಕೊಡು ಎಂದು ಕೇಳುತ್ತೇನೆ ಎಂದು ನನ್ನ ಗೆಳತಿಗೆ ಹೇಳುತ್ತಾ ಬರುತ್ತಿದ್ದೆ. ಇನ್ನೂ ಸ್ವಲ್ಪ ದೂರ ಅಂಗಡಿಯ ಬಳಿ ಹೋಗಬೇಕಿತ್ತು. ಅಷ್ಟರಲ್ಲಿ ಬಬ್ಬ ತಾಯಿ ತನ್ನ ಮಗುವಿಗೆ ಆ ಬಟ್ಟೆಯನ್ನು ಧರಿಸುತ್ತಿದ್ದಳು. ಆಗ ನನ್ನ ಕಣ್ಣಂಚಲ್ಲಿ ನನಗೆ ತಿಳಿಯದೆ ಕಣ್ಣೀರು ಬಂದಿದ್ದು ಈಗ ಮತ್ತೆ ನೆನಪಾಯಿತು.
ಒಂದೇ ನಿಮಿಷದಲ್ಲಿ ನನ್ನ ಮನಸ್ಸನ್ನು ಬಹಳ ನೋಯಿಸಿದ ಕ್ಷಣ ಅದು. ಸುಮ್ಮನೇ ಮನೆಗೆ ಅಳುತ್ತಾ ಬಂದೆ. ನಾನು ಮುಂದೆ ಈ ರೀತಿಯ ಬಟ್ಟೆಯನ್ನು ಧರಿಸಬೇಕು. ನನಗೆ ಈಗಿರುವ ಪರಿಸ್ಥಿತಿಯಲ್ಲಿ ಆಗದೆ ಇರಬಹುದು, ಮುಂದೊಂದಿನ ಪರಿಸ್ಥಿತಿ ಹೀಗೆ ಇರೋಲ್ಲಾ ಎಂದು ಯೋಚಿಸಿದ್ದೆ.
ಈಗಲೂ ನನಗೆ ಒಂದು ನೀತಿ ಕಥೆ ನೆನಪಿಗೆ ಬರುತ್ತೆ. ಕಾಗೆಯೊಂದು ಜೀವನದಲ್ಲಿ ಸಂತೋಷವಾಗಿತ್ತು. ತಾನು ತನ್ನ ಹಾರಾಟ… ಎಲ್ಲೆಡೆ ಹಾರಾಡಿ ಆಹಾರ ಹುಡುಕಿಕೊಂಡು ಸುಖವಾಗಿತ್ತು. ಒಮ್ಮೆ ಆ ಕಾಗೆ ಒಂದು ಹಂಸವನ್ನು ನೋಡಿತು, ನಾನು ಕಪ್ಪಗಿದ್ದೇನೆ, ಈ ಹಂಸ ಎಷ್ಟು ಬೆಳ್ಳಗಿದೆ. ಪ್ರಪಂಚದಲ್ಲಿ ಹೆಚ್ಚು ಸಂತೋಷವಾಗಿರುವ ಪಕ್ಷಿ ಇದೆ ಇರಬೇಕು ಅಂತ ಭಾವಿಸಿ ಅದನ್ನು ಮಾತಾಡಿಸಿತು.
ಆಗ ಹಂಸ ಹೇಳಿತು; ಗಿಳಿಯನ್ನು ನೋಡುವ ಮುಂಚೆ ನಾನು ಹಾಗೇ ಅಂದುಕೊಂಡಿದ್ದೆ, ಆದ್ರೆ ಗಿಳಿಗೆ ಎರಡೆರೆಡು ಬಣ್ಣವಿದೆ. ಅದು ಜೀವನದಲ್ಲಿ ಅತ್ಯಂತ ಸಂತೋಷವಾಗಿರುವ ಪಕ್ಷಿ ಕಾಗೆ ಅಲ್ಲಿಂದ ಗಿಳಿಯ ಬಳಿ ಹೋಗಿ ಮಾತಾಡಿಸಿತು. ಆಗ ಗಿಳಿ ಹೇಳಿತು; ನಾನೇ ಸಂತೋಷವಾಗಿರೋ ಪಕ್ಷಿ ಅಂತ ಭಾವಿಸಿದ್ದೆ, ಆದ್ರೆ ನವಿಲನ್ನು ನೋಡಿದ ಮೇಲೆ ನನಗನಿಸಿದ್ದು ನವಿಲೇ ಅತ್ಯಂತ ಸಂತೋಷವಾಗಿರೋ ಪಕ್ಷಿ, ಅದಕ್ಕೆ ಮೈ ತುಂಬಾ ಬೇರೆ ಬೇರೆ ಬಣ್ಣವಿದೆ. ಅದು ತುಂಬಾ ಸುಂದರವಾಗಿದೆ ಅಂತ ಹೇಳಿತು.
ಅಲ್ಲಿಂದ ಕಾಗೆಯು ಮೃಗಾಲಯದಲ್ಲಿದ್ದ ನವಿಲಿನ ಬಳಿ ಹೋಗಿ ಮಾತಾಡಿಸಿತು. ‘‘ನೀನಿಷ್ಟು ಸುಂದರವಾಗಿದ್ದೀಯ, ಪ್ರಪಂಚದಲ್ಲಿ ಅತ್ಯಂತ ಸಂತೋಷವಾಗಿರೋ ಪಕ್ಷಿ ನೀನೇ ಅಲ್ವಾ’’ ಅಂತ ಕೇಳಿತು.
ಆಗ ನವಿಲು, ನನ್ನ ಸೌಂದರ್ಯವೇ ನನಗೆ ಶತೃ. ಅದಕ್ಕೇ ನನ್ನನ್ನು ಈ ಮೃಗಾಲಯದಲ್ಲಿ ಕೂಡಿ ಹಾಕಿದ್ದಾರೆ. ನನ್ನ ಪ್ರಕಾರ ಅತ್ಯಂತ ಸಂತೋಷವಾಗಿರೋ ಪಕ್ಷಿಯೆಂದರೆ ಕಾಗೆ, ಅಂದರೆ ನೀನು ಈ ಮೃಗಾಲಯದಲ್ಲಿ ಕಾಗೆ ಬಿಟ್ಟು ಬೇರೆಲ್ಲ ಪಕ್ಷಿಗಳನ್ನು ನನ್ನಂತೆ ಬಂಧಿಯಾಗಿದ್ದಾರೆ. ನಾನು ಸಹ ಕಾಗೆ ಆಗಿದ್ದಿದ್ರೆ ನಿನ್ನ ಹಾಗೆ ಸ್ವಚ್ಛಂದವಾಗಿ ಹಾರಾಡಿಕೊಂಡು ಸಂತೋಷವಾಗಿರಬಹುದಿತ್ತು…!
ಆಗ ನನಗೆ ಬಡತನ ಇತ್ತು, ಬಟ್ಟೆಯನ್ನು ತೆಗೆದುಕೊಳ್ಳುವುದಕ್ಕೆ ಸಾಧ್ಯವಾಗಿರಲ್ಲಿಲ್ಲ. ಆಗ ನನಗೆ ಯಾಕೆ ನಾನು ಶ್ರೀಮಂತರ ಮನೆಯಲ್ಲಿ ಹುಟ್ಟಬಾರದಿತ್ತಾ..? ಅಂತ ಆ ಕ್ಷಣ ಅನ್ನಿಸಿತ್ತು. ಆಗ ನಾನು ಕಾಗೆಯಂತೆ ಯೋಚಿಸಿದೆ. ಅಂದರೆ ಈಗ ಸಮಯ ಬದಲಾಗಿದೆ. ನಾವು ಯಾವಾಗಲೂ ಇನ್ನೊಬ್ಬರನ್ನು ನಮಗೆ ಹೋಲಿಸಿಕೊಂಡು ಅವರಷ್ಟು ನಾವು ಸಂತೋಷವಾಗಿಲ್ಲ ಅಂತ ಭಾವಿಸ್ತೇವೆ. ಆದ್ರೆ ಎಲ್ಲರಿಗೂ ಅವರದ್ದೇ ಆದ ನೋವುಗಳಿರುತ್ತೆ. ಈ ಪ್ರಪಂಚದಲ್ಲಿ ನಮಗಿಂತ ಕಮ್ಮಿ ಇರುವವರು ಇದ್ದೇ ಇರ್ತಾರೆ. ಯಾವಾಗಲೂ ನಮಗಿರುವುದರಲ್ಲೇ ನಾವು ಸಂತೋಷವಾಗಿರಬೇಕು. ಆಗ ಮಾತ್ರ ಯಾವುದೇ ನಿರೀಕ್ಷೆಯಿಲ್ಲದೆ ನೆಮ್ಮದಿಯಿಂದ ಇರಬಹುದು.
ಪ್ರತಿ ಹೆಜ್ಜೆಯಲ್ಲೂ ಒಂದು ತಿರುವು. ಆ ತಿರುವಿನಲ್ಲಿ ಅದರದೇ ಆದ ನೋವು-ನಲಿವು. ಜೀವನ ಅಂದ್ರೆ ಇಷ್ಟೇನಾ? ಬಯಸಿದೆಲ್ಲ ಸಿಗಲ್ಲ, ಸಿಕ್ಕಿದರೂ ಆ ವಸ್ತುವಿಗೆ ಬೆಲೆ ಇರೋಲ್ಲ. ನಾವು ಬದುಕಿನಿಂದ ನೂರು ಪಾಠ ಕಲಿತೀವಿ. ಅಂದರೆ ಅದೇ ಬದುಕು ನಮಗೆ ಸಾವಿರ ಪಾಠ ಹೇಳಿಕೊಡುತ್ತೆ.
ನನ್ನ ಅಪ್ಪ ಯಾವಾಗಲೂ ನನಗೆ ಒಂದು ಮಾತು ಹೇಳ್ತಿದ್ರು. ಬದುಕಿನಲ್ಲಿ ಏನೇ ಘಟಿಸಲಿ ನಿರೀಕ್ಷೆ ಮತ್ತು ವಿಶ್ವಾಸ ಎಂಬ ಎರಡು ಹಗ್ಗಗಳನ್ನು ಮಾತ್ರ ಬಿಗಿಯಾಗಿ ಹಿಡಿದುಕೊಳ್ಳಿ. ಪ್ರತಿಯೊಂದು ನೋವು ಒಂದು ಪಾಠವನ್ನು ಕಲಿಸುತ್ತದೆ ಮತ್ತು ಪ್ರತಿಯೊಂದು ಪಾಠ ಮನುಷ್ಯನನ್ನು ಬದಲಿಸುತ್ತದೆ. ನಮ್ಮೆಲ್ಲರ ಬಾಲ್ಯ ಜೀವನದಲ್ಲಿ ಈ ರೀತಿಯ ಆಸೆ, ಯೋಚನೆಗಳು ಬಂದು ಹೋಗುವುದು ಸಹಜವೇ. ಇದರಂತೆ ನನ್ನ ಬಾಲ್ಯದ ನೆನಪು ಮತ್ತು ತುಂಟಾಟದ ಕ್ಷಣಗಳು ಮರೆಯುವುದಕ್ಕೆ ಸಾಧ್ಯವೇ ಇಲ್ಲ. ಒಂದಲ್ಲ ಒಂದು ರೀತಿಯಲ್ಲಿ ನೆನಪುಗಳು ಮರುಕಳಿಸುತ್ತಾ ಇರುತ್ತವೆ.
ಪ್ರತಿಯೊಬ್ಬರಿಗೂ ಸಹ ತನ್ನ ಹಣೆಬರಹವನ್ನು ಮುಂದಿನ ದಿನಗಳಲ್ಲಿ ಬದಲಾಯಿಸಿಕೊಂಡು ತನ್ನ ಅವಶ್ಯಕತೆಗೆ ತಕ್ಕಂತಹ ವಸ್ತುಗಳನ್ನು ದೊರಕಿಸಿಕೊಳ್ಳವ ಶಕ್ತಿ ಬಂದೇ ಬರುತ್ತದೆ. ಇದಕ್ಕೆ ಉತ್ತಮವಾದ ಉದಾಹರಣೆ ಎಂದರೆ ಸಮಯ. ಯಾಕೆಂದರೆ ನಾನು ಇದ್ದ ಆ ಸಮಯದಲ್ಲಿ ಆ ಬಟ್ಟೆಯನ್ನು ಧರಿಸುವುದಕ್ಕೆ ಆಗದೇ ಇದದ್ದು ನಿಜ. ಆದರೆ ಅದೇ ಸಮಯ ಈಗ ಬದಲಾಗಿದೆ. ಹೀಗೆ ಪ್ರತಿಯೊಬ್ಬರ ಜೀವನದಲ್ಲಿ ಮುಂದೆ ತಮಗೆ ಬೇಕಾದ ವಸ್ತುಗಳನ್ನು ಪಡೆದುಕೊಳ್ಳುವುದಕ್ಕೆ ಸಮಯ ಒದಗಿ ಬಂದೇ ಬರುತ್ತದೆ.
ಸಮಾಜದಲ್ಲಿ ಅದೆಷ್ಟೋ ಜನರು ಭವಿಷ್ಯದ ಬದುಕು ಸುಂದರವಾಗಿಸಲು ಮತ್ತು ಕಂಡ ಕನಸು ಈಡೇರಿಸಿಕೊಳ್ಳಲು ಹಗಲು-ರಾತ್ರಿ ಎನ್ನದೇ ಪರಿಶ್ರಮ ಪಡುತ್ತಿರುತ್ತಾರೆ. ಸಾಧನೆಯ ಗುರಿ ತಲುಪಲು ನಿರಂತರ ಪ್ರಯತ್ನದಲ್ಲಿರುತ್ತಾರೆ. ಆದರೆ ಕೆಲವೂಮ್ಮೆ ಅದೃಷ್ಟ ಕೈ ಕೊಡುತ್ತದೆ. ಈ ಅದೃಷ್ಟ ಎಂಬುದು ಹೀಗೆಯೇ ಯಾರ ಜೀವನದಲ್ಲಿ ಯಾವಾಗ ಬೇಕಾದರೂ ಬಂದು ಹೋಗಬಹುದು. ಶ್ರೀಮಂತ ಬಡವನಾಗಬಹುದು, ಬಡವ ಶ್ರೀಮಂತನಾಗಬಹುದು.
ಆದರೂ ಅದೃಷ್ಟಕ್ಕೆ ಕಾಯದೇ ನಮ್ಮ ಶ್ರಮದಿಂದ ಆ ಕಾಲವನ್ನು ನಾವೇ ಬೇಕಾದ್ದನ್ನು ಸೃಷ್ಟಿಸಿಕೊಳ್ಳಬೇಕು. ಆದ್ದರಿಂದ ಸಮಾಜದಲ್ಲಿ ಯಾರನ್ನೂ ಆಸ್ತಿ ಮತ್ತು ಅಂತಸ್ತನ್ನು ನೋಡಿ ಅಳೆಯಬಾರದು ಹಾಗೂ ಯಾರನ್ನೂ ಹೀಯಾಳಿಸಿ ಮಾತನಾಡಬಾರದು. ಹೀಗೆ ಪ್ರತಿಯೊಬ್ಬರಿಗೂ ಅವರದ್ದೇ ಆದ ಸ್ಥಾನಮಾನವಿರುತ್ತದೆ. ಏನಾದರೂ ಆಗಲಿ ನನ್ನ ಬಾಲ್ಯ ನೆನಪುಗಳು ನನ್ನಿಂದ ಮರೆಯಾಗುವುದಕ್ಕೆ ಸಾಧ್ಯವಿಲ್ಲ, ಎಲ್ಲಾರಿಗೂ ಅವರ ಅವರ ಬಾಲ್ಯದ ನೆನಪುಗಳು ಒಂದೊಂದು ಅನುಭವನ್ನು ನೀಡುತ್ತದೆ ಎಂದಿಗೂ ಬಾಲ್ಯದ ನೆನಪುಗಳು ಮಾಸುವುದಿಲ್ಲ.
Get In Touch With Us info@kalpa.news Whatsapp: 9481252093
Discussion about this post