ಕಲ್ಪ ಮೀಡಿಯಾ ಹೌಸ್ | ಮೈಸೂರು |
ಬಹುತೇಕ ಜನರನ್ನು ಇಂದು ಕಾಡುತ್ತಿರುವ ಸಮಸ್ಯೆಗಳಿಗೆ ಅವಿಭಕ್ತ ಕುಟುಂಬ #JointFamily ಪದ್ಧತಿಯೇ ಅಂತಿಮ ಪರಿಹಾರವಾಗಿದೆ ಎಂದು ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಉತ್ತರಾದಿ ಮಠದ ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿ #SatyatmaThirthaSwamiji ಹೇಳಿದರು.
ಅಧಿಕ ಜ್ಯೇಷ್ಠ ಮಾಸದ ಅಂಗವಾಗಿ ಉತ್ತರಾದಿ ಮಠವು #UttaradiMatha ಅಗ್ರಹಾರದ ಕಾಶಿ ವಿಶ್ವೇಶ್ವರ ಸನ್ನಿಧಿ ಆವರಣದ ಬೃಹತ್ ವೇದಿಕೆಯಲ್ಲಿ ಹಮ್ಮಿಕೊಂಡಿರುವ ಧರ್ಮ ಸಭೆಯಲ್ಲಿ ಅವರು ಭಾಗವತ ಸಂದೇಶ ನೀಡಿದರು.
Also Read>> A Colorful Memorable Brahmakalshotsava at Padubidri
ತಂದೆ-ತಾಯಿ, ಸಹೋದರ ಮತ್ತು ಸಹೋದರಿಯರು ಒಟ್ಟಾಗಿ ಬದುಕಬೇಕು. ವಿವಾಹವಾದ ನಂತರ ಅತ್ತೆ- ಮಾವಂದಿರನ್ನು ವೃದ್ಧಾಶ್ರಮಕ್ಕೆ ಕಳಿಸುವ ಕೃತ್ಯಕ್ಕೆ ಯಾರೂ ಮುಂದಾಗಬಾರದು ಎಂದು ಅವರು ಹೇಳಿದರು.
ದೇವರು ಪ್ರತಿಮೆಯಲ್ಲಿ, ಗುಡಿಯಲ್ಲಿ ಇದ್ದಾನೆ ಎಂಬ ಉನ್ನತ ಭಾವ ಸತ್ಯ. ಅದರಂತೆ ಹಿರಿಯರ ಸೇವೆಯಲ್ಲೂ ಇದ್ದಾನೆ. ಯಾವ ಕುಟುಂಬದಲ್ಲಿ ಹಿರಿಯರಿಗೆ, ವೃದ್ಧರಿಗೆ ನೆಮ್ಮದಿ ಮತ್ತು ಶಾಂತಿ ಇಲ್ಲವೋ ಅವರ ಮುಂದಿನ ಪೀಳಿಗೆ ನೂರೆಂಟು ಸಮಸ್ಯೆಗಳಿಂದ ನರಳುವುದು ಖಚಿತ ಎಂದು ಶ್ರೀಗಳು ಎಚ್ಚರಿಸಿದರು.
ಅನೇಕ ಯುವ ದಂಪತಿಗಳು ತಮಗೆ ಸಂತಾನ ಆಗಿಲ್ಲ ಎಂದು ದೇವರಲ್ಲಿ ಬೇಡುತ್ತಾರೆ. ನಮ್ಮಲ್ಲಿ ಬಂದು ಅನುಗ್ರಹ ಮಂತ್ರಾಕ್ಷತೆ ಪಡೆಯುತ್ತಾರೆ. ಅದಕ್ಕೆಲ್ಲ ಕೆಲವು ಸಮಸ್ಯೆ ಮತ್ತು ವೈದ್ಯಕೀಯ ಪರಿಹಾರಗಳು ಇರಬಹುದು. ಆದರೆ ಮೂಲದಲ್ಲಿ ಕುಟುಂಬ ವ್ಯವಸ್ಥೆ ಸುಗಮವಾಗಿ, ಸೌಹಾರ್ದವಾಗಿ ಇರಬೇಕು. ನಮ್ಮ ಭಾಗವತ, ಮಹಾಭಾರತ ಮತ್ತು ರಾಮಾಯಣಗಳೂ ಇದನ್ನೇ ಪ್ರತಿಪಾದಿಸಿವೆ ಎಂದು ಸ್ವಾಮೀಜಿ ನುಡಿದರು.

ಕಿರಿಯರಲ್ಲೂ ದೇವರಿದ್ದಾನೆ
ಮನೆಯ ಹಿರಿಯರು ಸೊಸೆಯನ್ನು ಮಗಳಂತೆ ಕಾಣಬೇಕು. ಕಿರಿಯರಲ್ಲೂ ದೇವರು ಇದ್ದಾನೆ ಎಂದು ಪ್ರೀತಿಭಾವ ತೋರಬೇಕು. ಒಂದೇ ಮನೆಯಲ್ಲಿ ಒಗ್ಗಟ್ಟಿನಿಂದ ಬದುಕಿದರೆ ಯಾವ ಯತಿಗಳ ಮಂತ್ರಾಕ್ಷತೆಯೂ ಬೇಡ. ನಿಮ್ಮ ನಿಮ್ಮ ಸಮಸ್ಯೆಗೆ ನಿಮ್ಮ ಕುಟುಂಬದ ಪ್ರತಿಯೊಬ್ಬರೂ ಸ್ಪಂದಿಸುತ್ತಾರೆ. ಇದು ಭಾರತೀಯ ಜೀವನ ಶೈಲಿ ಎಂದು ಅವರು ವಿವರಿಸಿದರು.
ಹಿರಿಯರು, ಕಿರಿಯರು ಅನೇಕ ತಪ್ಪುಗಳನ್ನು ಮಾಡಬಹುದು. ಅವೆಲ್ಲವೂ ಬದುಕಿನಲ್ಲಿ ಸಹಜ. ಪರಸ್ಪರ ಕ್ಷಮಾ ಭಾವನೆ, ಹೊಂದಾಣಿಕೆ, ಅಭಿಮಾನ ಗುಣ ರೂಢಿಸಿಕೊಂಡರೆ ಅಲ್ಲೇ ಒಮ್ಮತ ಮೂಡುತ್ತದೆ. ಕ್ಷಣಿಕವಾಗಿರುವ ಜೀವನದಲ್ಲಿ ಎಲ್ಲದಕ್ಕೂ ಪ್ರತ್ಯೇಕತೆ, ಪ್ರೈವೇಸಿ ಎನ್ನಬಾರದು. ಅವಿಭಕ್ತ ಕುಟುಂಬ ಪರಿಪಾಲನೆಯೇ ಭಾಗವತ ಗ್ರಂಥ ನೀಡುವ ಮಹತ್ತರ ಸಂದೇಶವಾಗಿದೆ ಎಂದು ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿ ನುಡಿದರು.
ವಿದ್ವಾಂಸರಾದ ಕಲ್ಲಾಪುರ ಪವಮಾನಾಚಾರ್ಯ, ಅರುಣಾಚಾರ್ಯ, ಪ್ರವೀಣ ಆಚಾರ್ಯ, ಆತನೂರು ಭೀಮಸೇನಾಚಾರ್ಯ ಮತ್ತು ರವಿ ಆಚಾರ್ಯ ಮತ್ತಿಹಳ್ಳಿ ಅವರು ‘ ಸಮಗ್ರ ಕುಟುಂಬ ವ್ಯವಸ್ಥೆ’ ಕುರಿತಾದ ಸಂವಾದ ಗೋಷ್ಠಿಯಲ್ಲಿ ಭಾಗವಹಿಸಿದ್ದರು.
ಮುಂಜಾನೆ ಶ್ರೀಗಳಿಗೆ ಪಾದಪೂಜೆ, ಮುದ್ರಾಧಾರಣೆ, ವಾಸುದೇವ ಮೂರ್ತಿ ಮತ್ತು ತಂಡದವರಿಂದ ಸಚ್ಛಾಸ್ತ್ರ ಪಾರಾಯಣ, ಶ್ರೀಗಳಿಂದ ಸಂಸ್ಥಾನ ಪೂಜೆ , ವಿವಿಧ ಹೋಮಗಳು ನೆರವೇರಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 

















