ಕಲ್ಪ ಮೀಡಿಯಾ ಹೌಸ್ | ಕಾರವಾರ/ಭಟ್ಕಳ |
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ #Bhatkal ತಾಲ್ಲೂಕಿನ ತಟ್ಟೆಹಕ್ಕಲು ನದಿ ಹಾಗೂ ಅಳ್ವೆಕೋಡಿ ಕಡಲತೀರದಲ್ಲಿ ಸಂಭವಿಸಿದ ಭೀಕರ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.
ಭಾನುವಾರ 10 ಜನರ ಮೃತದೇಹಗಳು ಪತ್ತೆಯಾಗಿದ್ದರೆ, ಇಂದು ಮತ್ತೊಬ್ಬರ ಶವ ಪತ್ತೆಯಾಗಿದ್ದು ಸಾವಿನ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಇಂದು ಪತ್ತೆಯಾದ ಮೃತದೇಹವನ್ನು ಮಾದೇವ್ ನಾಯ್ಕ್ ಎಂದು ಗುರುತಿಸಲಾಗಿದೆ.
Also Read>> ಬಹುತೇಕ ಜನರ ಸಮಸ್ಯೆಗೆ ಅವಿಭಕ್ತ ಕುಟುಂಬವೇ ಅಂತಿಮ ಪರಿಹಾರ | ಸತ್ಯಾತ್ಮ ತೀರ್ಥ ಸ್ವಾಮೀಜಿ
ನಾಪತ್ತೆಯಾಗಿದ್ದವರಿಗಾಗಿ ಇಂದು ಬೆಳಿಗ್ಗೆ 8 ಗಂಟೆಯಿಂದ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ #NDRF ತಂಡ ಶೋಧ ಕಾರ್ಯಾಚರಣೆ ನಡೆಸಿತು. ತಟ್ಟೆಹಕ್ಕಲು ನದಿಯ ಅಳವೆಯಲ್ಲಿ ಮಾದೇವ್ ನಾಯ್ಕ್ ಅವರ ಮೃತದೇಹ ಪತ್ತೆಯಾಯಿತು.
ನದಿಯಲ್ಲಿ ಮುಳುಗಿದವರ ಶವಗಳನ್ನು ಪತ್ತೆ ಮಾಡಲು ಎನ್‌ಡಿಆರ್‌ಎಫ್ #NDRF ತಂಡದೊಂದಿಗೆ ಮುಳುಗು ತಜ್ಞರು ಕಾರ್ಯಾಚರಣೆ ನಡೆಸಿದರು. ಅಗ್ನಿಶಾಮಕ ದಳ, ಎನ್‌ಡಿಆರ್‌ಎಫ್ ಸಿಬ್ಬಂದಿ ಹಾಗೂ ಸ್ಥಳೀಯ ಮೀನುಗಾರರು ಶೋಧ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ನದಿಯಲ್ಲಿ ನೀರಿನ ಪ್ರಮಾಣ ಕಡಿಮೆ ಇದ್ದುದರಿಂದ ಶೋಧ ಕಾರ್ಯ ಸುಗಮವಾಯಿತು.
ಈ ದುರ್ಘಟನೆ ಅಳ್ವೆಕೋಡಿ ಕಡಲತೀರದಲ್ಲಿ ಕಪ್ಪೆಚಿಪ್ಪು ಸಂಗ್ರಹಿಸಲು ತೆರಳಿದ್ದ ವೇಳೆ ಸಂಭವಿಸಿದೆ. ನೀರಿನ ಅಬ್ಬರಕ್ಕೆ 11 ಮಂದಿ ಜಲ ಸಮಾಧಿಯಾಗಿದ್ದು, ಇಬ್ಬರು ಮಹಿಳೆಯರನ್ನು ರಕ್ಷಿಸಲಾಗಿದೆ.
Also Read>> A Colorful Memorable Brahmakalshotsava at Padubidri
ಮೃತರ ಪೈಕಿ ಮಾಸ್ತಮ್ಮ ನಾಯ್ಕ್ ಅವರನ್ನು ರಕ್ಷಿಸಲು ಹೋದ ಅವರ ಪುತ್ರ ಉಮೇಶ್ ನಾಯ್ಕ್ ಕೂಡ ನೀರುಪಾಲಾಗಿರುವುದು ಮನಕಲುಕುವ ಸಂಗತಿ. ತಾಯಿ ಮುಳುಗುತ್ತಿರುವುದನ್ನು ಕಂಡ ಕೂಡಲೇ ಆಕೆಯನ್ನು ರಕ್ಷಿಸಲು ನೀರಿಗೆ ಹಾರಿದ ಉಮೇಶ್, ಆಕೆಯನ್ನು ಉಳಿಸಲು ವಿಫಲರಾದರು. ಬಳಿಕ ಹೊರಬರಲು ಯತ್ನಿಸುವಾಗ ಇನ್ನಿಬ್ಬರು ತಮ್ಮ ರಕ್ಷಣೆಗೆಂದು ಅವರ ಕಾಲು ಹಿಡಿದ ಪರಿಣಾಮ, ಅವರು ಸಹ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿ ಮಂಜುನಾಥ್ ನಾಯ್ಕ್ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















