ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ವೇದವತಿ ನದಿಯಲ್ಲಿ ನಿರ್ಮಾಣಗೊಂಡಿರುವ ಬ್ರಿಡ್ಜ್ ಮತ್ತು ಬ್ಯಾರೇಜ್ ವೀಕ್ಷಿಸಲು ಜಿಲ್ಲೆಯ ಎಲ್ಲಾ ಮಠದ ಮಠಾಧೀಶರುಗಳು ಆಗಮಿಸಿ ಸಾನ್ನಿಧ್ಯ ವಹಿಸಿ ಬ್ಯಾರೇಜ್ ವೀಕ್ಷಿಸಿ ಆರ್ಶೀವಾದ ಮಾಡಿದ್ದಾರೆ.
ತಾಲೂಕಿನ ಬೊಂಬೆರಹಳ್ಳಿ ಸಮೀಪ ವೇದವತಿ ನದಿಯಲ್ಲಿ 5.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಬ್ಯಾರೇಜನ್ನು ವೀಕ್ಷಿಸಿದ ಮಠಾಧೀಶರಿಂದ ಪ್ರಸಾದ ಸ್ವೀಕರಿಸಿ ಇಲ್ಲಿನ ಜನತೆಗೆ ಆರ್ಶೀವದಿಸಿ ಶಾಸಕ ಟಿ. ರಘುಮೂರ್ತಿ ಅವರನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಾಣೇಹಳ್ಳಿ ಮಠಾಧೀಶರಾದ ಶ್ರೀ ಡಾ. ಪಂಡಿತಾರಾಧ್ಯ ಸ್ವಾಮಿಜಿಯವರು, ಬರದ ನಾಡಿಗೆ ಗಂಗೆಯನ್ನು ತಂದ ಕೀರ್ತಿ ಶಾಸಕ ರಘುಮೂರ್ತಿಗೆ ಸಲ್ಲುತ್ತದೆ. ಅಭಿವೃದ್ದಿಗೆ ಎರಡನೆಯ ಗೋವಿಂದಪ್ಪ ಎಂದರೆ ಅದು ರಘುಮೂರ್ತಿ. ಹೊಸದುರ್ಗದ ಮಾಜಿ ಶಾಸಕ ಗೋವಿಂದಪ್ಪ ತನ್ನ ಕ್ಷೇತ್ರವನ್ನು ಉತ್ತಮವಾಗಿ ಅಭಿವೃದ್ದಿ ಪಡಿಸಿದ್ದರು. ರಘುಮೂರ್ತಿ ಅವರಿಗೆ ಪೈಪೋಟಿಯಂತೆ ಈ ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ದಿ ಮಾಡಿದ್ದಾರೆ ಎಂದರು.
ಚುನಾವಣೆ ಸಮಯದಲ್ಲಿ ಜನ ಆಯ್ಕೆ ಮಾಡುವಾಗ ಉತ್ತಮವಾದ ನಾಯಕನ್ನು ಆಯ್ಕೆ ಮಾಡಬೇಕು. ಜನರ ಕಷ್ಟಗಳಿಗೆ ಸ್ಪಂದಿಸುವ ವ್ಯಕ್ತಿಯನ್ನು ಆಯ್ಕೆ ಮಾಡಬೇಕು. ಅದರಂತೆ ಈ ಕ್ಷೇತ್ರದಲ್ಲಿ ಉತ್ತಮವಾದ ಜನನಾಯಕನ್ನು ಆಯ್ಕೆ ಮಾಡಿದ್ದೀರಿ. ಅದರಂತೆ ಅವರು ಸಹ ಸಾಕಷ್ಟು ಅಭಿವೃದ್ದಿ ಮಾಡಿದ್ದಾರೆ. ಉತ್ತಮ ಶಾಸಕರಾಗಿ ಜನಪರ ಕೆಲಸ ಮಾಡಿದ್ದಾರೆ. ಬರದ ನಾಡಿಗೆ ನೀರು ತಂದು ಭಗೀರಥರಾಗಿದ್ದಾರೆ ಎಂದರು.
ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿ, ಪರಿಸರ, ಗಾಳಿ ನೀರು ಇವೆಲ್ಲವನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ. ಇವೆಲ್ಲವನ್ನು ನಾವು ಮಲಿನ ಮಾಡಿದರೆ ಮುಂದಿನ ದಿನಗಳಲ್ಲಿ ಉಸಿರಾಟಕ್ಕೆ ಗಾಳಿಯನ್ನು ಹಣ ಕೊಟ್ಟು ಕೊಳ್ಳಬೇಕಾಗುತ್ತದೆ. ಜೀವ ಜಲ ನೀರು ಸಹ ಪ್ರಕೃತಿಯ ಕೊಡುಗೆ. ಇದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು. ವ್ಯರ್ಥವಾಗಿ ಹರಿದು ಹೋಗುವ ನೀರನ್ನು ಬ್ಯಾರೇಜ್ ಮೂಲಕ ಸಂರಕ್ಷಿಸಿ ಅಂತರ್ಜಲ ಹೆಚ್ಚಿಸುವಂತಹ ಕೆಲಸವನ್ನು ಈ ಕ್ಷೇತ್ರದ ಶಾಸಕರು ಮಾಡಿದ್ದಾರೆ. ಈ ಮೂಲಕ ನೀರು ಸಂರಕ್ಷಿಸಿ ಈ ಭಾಗದ ಜನರಲ್ಲಿದ್ದ ಆತಂಕವನ್ನು ದೂರ ಮಾಡಿದ್ದಾರೆ. ಇಂದು ಈ ಕ್ಷೇತ್ರಕ್ಕೆ ನಾವೆಲ್ಲಾ ಮಠಾಧಿಪತಿಗಳು ಶಾಸಕರನ್ನು ಅಭಿನಂದಿಸಲು ಬಂದಿದ್ದೇವೆ ಎಂದರು.
ಶಾಸಕ ಟಿ. ರಘುಮೂರ್ತಿ ಮಾತನಾಡಿ, ಬರದ ನಾಡು ಎಂದು ಹಣೆಪಟ್ಟಿ ಕಟ್ಟಿಕೊಂಡು ಭೀಕರ ಬರಗಾದಿಂದ ತತ್ತರಿಸಿ ಹೋಗಿದ್ದ ಚಳ್ಳಕೆರೆ ಕ್ಷೇತ್ರಕ್ಕಾಗಿ ವೇದವತಿ ನದಿಯಲ್ಲಿ ನಿರ್ಮಾಣವಾಗಿರುವ ಬೊಂಬೆರಹಳ್ಳಿ ಹತ್ತಿರ 5.50 ಕೋಟಿ ರೂ. ವೆಚ್ಚದ ಬ್ಯಾರೇಜ್, ಚೌಳೂರು ಸಮೀಪ 17.30 ಕೋಟಿ ರೂ. ವೆಚ್ಚದ ಬ್ರಿಡ್ಜ್ ಮತ್ತು ಬ್ಯಾರೇಜ್ ನಿರ್ಮಾಣ, ಪರಶುರಾಂಪುರ ಸಮೀಪ 16.50 ಕೋಟಿ ರೂ. ವೆಚ್ಚದ ಬ್ಯಾರೇಜ್ ನಿರ್ಮಾಣದಿಂದ ಈ ಭಾಗದ ಜನತೆಗೆ ತುಸು ನೆಮ್ಮದಿ ತಂದಿದೆ ಎಂದರು.
ಇನ್ನು, ಶಾಶ್ವತ ಕುಡಿಯುವ ನೀರಿನ ಕೆಲಸ ತ್ವರಿತ ಪ್ರಗತಿಯಲ್ಲಿದೆ. ವಿವಿ ಈಗಾಗಲೇ ವಿವಿ ಸಾಗರಕ್ಕೆ 98 ಅಡಿ ನೀರು ಶೇಖರಣೆಯಾಗಿದೆ. ಜೊತೆಗೆ ವರುಣದ ಕೃಪೆಯಿಂದ ವೇದವತಿ ಮೈತುಂಬಿ ಹರಿದು ಬೊಂಬೆರಹಳ್ಳಿ ಬ್ಯಾರೇಜಿನಲ್ಲಿ ಸುಮಾರು 5 ಕಿಮೀಯಷ್ಟು ನೀರು ಶೇಖರಣೆಯಾಗಿದೆ. ಚೌಳೂರು ಬ್ಯಾರೇಜಿನಲ್ಲಿ 4 ಕಿಮೀಯಷ್ಟು ನೀರು ಶೇಖರಣೆಯಾಗಿದ್ದು, ಈ ಭಾಗದ ಕೊಳವೆ ಮರುಜೀವ ಪಡೆದಿವೆ. ಪರಶುರಾಂಪುರದ ಬ್ಯಾರೇಜಿನಲ್ಲಿ ನಾಲ್ಕು ಅಡಿ ನೀರು ಶೇಖರಣೆಯಾಗಿತ್ತು. ಆದರೆ ನೀರು ಇಂಗಿ ಹೋಗಿದೆ. ಒಟ್ಟಾರೆ ಬ್ಯಾರೇಜ್ ನಿರ್ಮಾಣದಿಂದ ವೇದವತಿ ನದಿ ಸಮೀಪದ ರೈತರಿಗೆ ಸಹಕಾರಿಯಾಗಲಿದೆ. ಇತ್ತೀಚೆಗೆ ಈ ಮೂರು ಬ್ಯಾರೇಜ್’ಗಳನ್ನು ವೀಕ್ಷಿಸಿದ ಚಿತ್ರದುರ್ಗ ಮುರುಘಾಮಠದ ಡಾ.ಶಿವಮೂರ್ತಿ ಸ್ವಾಮೀಜಿಯವರು ಶಾಸಕರು ಈ ಪುಣ್ಯದ ಕೆಲಸಕ್ಕೆ ಬರದ ನಾಡು ಭಗೀರಥ ಎಂದರು.
ಇಂದು ಈ ಕ್ಷೇತ್ರದ ಮೂರು ಬ್ಯಾರೇಜ್’ಗಳನ್ನು ವೀಕ್ಷಿಸಿ ನಮಗೆ ಆರ್ಶೀವಾದ ನೀಡಿದ ಎಲ್ಲಾ ಮಠಾಧಿಪತಿಗಳಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಎಲ್ಲಾ ಸ್ವಾಮೀಜಿಯವರ ಆರ್ಶೀವಾದ ನನ್ನ ಮೇಲೆ ಇದ್ದರೆ ರಾಜ್ಯದಲ್ಲಿಯೇ ನಮ್ಮ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆ ಎಂದರು.
ಸಾಣೆಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿ, ಪ್ರಸನ್ನಾನಂದಪುರಿ ಸ್ವಾಮೀಜಿ, ಶ್ರೀಈಶ್ವರಾನಂದಾಪುರಿ ಸ್ವಾಮೀಜಿ, ಡಾ.ಪುರುಷೋತ್ತಮಪುರಿ ಸ್ವಾಮೀಜಿ, ಮಾದಾರ ಚೆನ್ನಯ್ಯ ಕೃಷ್ಣ ಯಾದವಾನಂದ ಸ್ವಾಮೀಜಿ, ಶ್ರೀಶಾಂತವೀರ ಸ್ವಾಮೀಜಿ, ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಶ್ರೀ ಮಂಜುನಾಥ ಸ್ವಾಮೀಜಿ, ಶ್ರೀಸಂತ ಸೇವಾಲಾಲ್ ಸ್ವಾಮೀಜಿ, ಶ್ರೀ ಮಂಜುನಾಥ ಸ್ವಾಮೀಜಿ, ಶ್ರೀ ಬಸವ ಮಡಿವಾಳ ಮಾಚೀದೇವ ಸ್ವಾಮೀಜಿ, ಬಸವನಾಗಿ ದೇವ ಸ್ವಾಮೀಜಿಯವರು ಬ್ಯಾರೇಜುಗಳನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ರವಿಕುಮಾರ್, ಮಾಜಿ ಸದಸ್ಯ ಬಾಬುರೆಡ್ಡಿ, ತಾಲೂಕು ಪಂಚಾಯ್ತಿ ಸದಸ್ಯೆ ರಂಜಿತ, ನಗರಸಭೆ ಸದಸ್ಯ ಬಿ.ಟಿ. ರಮೇಶ್, ಚಳ್ಳಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ. ತಿಪ್ಪೇಸ್ವಾಮಿ, ಪರಶುರಾಂಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಿರಣ್ ಶಂಕರ್, ವೃತ್ತ ನಿರೀಕ್ಷಕ ಈ. ಆನಂದ್, ಪಿಎಸ್’ಐ ಶಿವಕುಮಾರ್, ಮುಖಂಡರಾದ ಪ್ರಭುಸ್ವಾಮಿ, ಹನುಮಂತಪ್ಪ, ಸತ್ಯನಾರಾಯಣ ರೆಡ್ಡಿ, ಜನಪ್ರತಿನಿಧಿಗಳು ಬೊಂಬೆರಹಳ್ಳಿ ಕಿಚ್ಚ ಸುದೀಪ್ ಅಭಿಮಾನಿ ಬಳಗದ ಪದಾಧಿಕಾರಿಗಳು, ಬೆಂಬೆರಹಳ್ಳಿ ಗ್ರಾಮಸ್ಥರು ಇದ್ದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
Get in Touch With Us info@kalpa.news Whatsapp: 9481252093
Discussion about this post