ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಕಿಂಚಿನ್ಯೂನ ಖಗ್ರಾಸ ಸೂರ್ಯ ಗ್ರಹಣ
ತಾ: 26.12.2019
ಸಮಯ: ಉಡುಪಿ ಕಾಲಮಾನ ಆಧಾರಿತ
ಸ್ಪರ್ಷ- 8.4 AM
ಮಧ್ಯ- 9.25 AM
ಅಂತ್ಯ- 11.4 AM
ಗ್ರಾಸ ಮಾನ- 91\100
26.12.2019 ಗುರುವಾರ ಬೆಳಿಗ್ಗೆ 8.04 ಕ್ಕೆ ಸೂರ್ಯನಿಗೆ ಈ ಗ್ರಹಣ ಸ್ಪರ್ಷವಾಗುತ್ತದೆ. ಇದು ಕಿಂಚಿನ್ಯೂನ ಖಗ್ರಾಸ ಗ್ರಹಣ ಆಗುತ್ತದೆ. ಇದು ಸೂರ್ಯನಿಗೆ ಕೇತು ಗ್ರಹಣ. ಮೂಲಾ ನಕ್ಷತ್ರದಲ್ಲಿ ರವಿಗೆ ಈ ಕೇತು ಗ್ರಹಣವೂ, ಪೂರ್ವಾಷಾಡ ನಕ್ಷತ್ರದಲ್ಲಿದ್ದು, ಕೇತು(14°) ರವಿ(10°) ಚಂದ್ರರು(9°) ಮೂಲಾ ನಕ್ಷತ್ರದಲ್ಲಿಯೂ, ಶನಿಯು ಪೂರ್ವಾಷಾಡ ಅಂತ್ಯದಲ್ಲಿ(26°), ಗುರು ಮೂಲಾ ನಕ್ಷತ್ರ(11.5°) ಇರುವ ಕಾಲ ಇದಾಗಿದೆ. ಇದು ಪಂಚಗ್ರಹ ಯುತಿಯ ಯೋಗದ ದಿನವೂ ಆಗಿರುತ್ತದೆ.
ಧನು, ಮಕರ, ವೃಷಭ, ಕರ್ಕ ರಾಶಿಯವರಿಗೆ ಇದು ಅರಿಷ್ಟವಾಗುತ್ತದೆ. ಜನ್ಮ ರಾಶಿಯಿಂದ 2, 4, 5, 7, 8, 9, 12 ರಾಶಿಯಲ್ಲಿ ಗ್ರಹಣವಾದಾಗ ಅವರಿಗೂ ಅರಿಷ್ಟವಿದೆ ಎಂದು ಶಾಸ್ತ್ರ ವಚನವಿದೆ.
ಇನ್ನೊಂದೆಡೆ ಗ್ರಹಣಗಳು ಭೂಮಿಗೆ ಒಳ್ಳೆಯದಲ್ಲ. ಎಷ್ಟು ಹೊತ್ತು ರವಿ ಚಂದ್ರರ ಪ್ರಖರ ವಿಕಿರಣಗಳು ಭೂಮಿಗೆ ತಲುಪುವುದಿಲ್ಲವೋ ಅಷ್ಟು ಹೊತ್ತಿನ ರವಿಯ ಬಲವಾಗಲೀ, ಚಂದ್ರನ ಬಲವಾಗಲೀ(Charging) ಸಿಗುವುದಿಲ್ಲ. ಉದಾಹರಣೆಗೆ ನೀರು(H2O) ನೀರಾಗಿ ಇರಬೇಕಾದರೆ Hydrogen ಮತ್ತು Oxygenನಿರಂತರ ಸಂಘರ್ಷದಲ್ಲಿ ಇರಬೇಕಾಗುತ್ತದೆ. ಒಂದು ಕ್ಷಣ ಈ ಘರ್ಷಣೆ ನಿಂತರೆ ನೀರು ನೀರಾಗಿ ಇರಲು ಅಸಾಧ್ಯ. ಅದೇ ರೀತಿ ರವಿಚಂದ್ರರ ಕಿರಣಗಳು ಭೂಮಿಯ ಯಾವುದಾದರೂ ಒಂದು ಭಾಗಕ್ಕೆ ಪ್ರತೀ ಕ್ಷಣದಲ್ಲೂ ಸಂಪರ್ಕಿಸುತ್ತಿರಲೇ ಬೇಕು. ಸೂರ್ಯ ಗ್ರಹಣದಲ್ಲಿ ಚಂದ್ರನು ಮಧ್ಯೆ ಬಂದು ಅಷ್ಟು ಹೊತ್ತು ಭೂಮಿಗೆ ಸಂಪರ್ಕ ಇಲ್ಲದಂತಾಗುತ್ತದೆ. ಆದ್ದರಿಂದ ಇದು ಭೂಮಿಗೆ ಮಾರಕವೇ ಆಗುತ್ತದೆ. ಇದೊಂದು ಖಗೋಲ ಪ್ರಕ್ರಿಯೆ ಇರುವುದು ಸಹಜವೇ ಆದರೂ, ಪರಿಣಾಮವೂ ಹಾಗೆಯೇ ಇರುತ್ತದೆ. ಭೂಮಿ ಮತ್ತು ಭೂಮಿಯ ಮೇಲಿನ ಸಕಲ ಜೀವರಾಶಿಗೂ ಅನ್ವಯವೆ. ಚಂದ್ರ ಗ್ರಹಣದಲ್ಲಿ ಮನಸ್ಸಿನ ಮೇಲೆ ಪರಿಣಾಮ ಬೀರಿ ಸ್ಥಿತಿ ಹಾಳಾಗುತ್ತದೆ.
ಸೂರ್ಯ ಗ್ರಹಣದಲ್ಲಿ ಸೂರ್ಯನು ತನು ಕಾರಕ ಆಗಿರುವುದರಿಂದ ಕಾಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಚರ್ಮವ್ಯಾಧಿಗಳು, ಶಿರೋಬೇನೆ(ತಲೆ ನೋವು) ಪಿತ್ಥ ಪ್ರಕೋಪ(ಲಿವರ್ ಸಮಸ್ಯೆ), ಬೆನ್ನು ನೋವು, ವಿಟಮಿನ್ B ಕೊರತೆ ಇತ್ಯಾದಿ ಸಮಸ್ಯೆಗಳು ಉಲ್ಬಣವಾಗಲು ಕಾರಣವಾಗುತ್ತದೆ.
ರವಿಯು ಆಡಳಿತದ ಗ್ರಹ ಆದುದರಿಂದ ಡೋಲಾಯಮಾನದಲ್ಲಿರುವ ಸರಕಾರಗಳು ಅತಂತ್ರವಾದೀತು. ಅಂದರೆ ಎಲ್ಲೆಲ್ಲಿ ಸಮ್ಮಿಶ್ರದ ಬಲದಲ್ಲಿ ಸರಕಾರ ಇರುತ್ತೋ ಅದೆಲ್ಲವೂ ಅತಂತ್ರವಾಗಬಹುದು. ಕೇಂದ್ರದ ಸ್ವಾಧೀನವಾದೀತು(ರಾಷ್ಟ್ರಪತಿ ಆಡಳಿತ).
ಭೂ ವಾತಾವರಣದ ವಿಚಾರದಲ್ಲಿ ಅಕಾಲಿಕ ಸುನಾಮಿ, ಚಂಡ ಮಾರುತ, ಭೂ ಕಂಪನಾದಿಗಳು, ಬರ ಇತ್ಯಾದಿ ಸಮಸ್ಯೆಗಳಾಗುತ್ತದೆ. ನೈರುತ್ಯ ಭಾಗದಿಂದ ಈಶಾನ್ಯ ಭಾಗದವರೆಗಿನ ಗ್ರಹಣ ಪೀಡಿತ ಮಾರ್ಗಗಳ ಪ್ರದೇಶಕ್ಕೆ ಹೆಚ್ಚು ಹಾನಿಗಳಿವೆ.
ನಾವೇನು ಪರಿಹಾರ ಮಾಡಬೇಕು
ಇದಕ್ಕೆ ಹೋಮ ಪರಿಹಾರವೂ ಇದೆ, ಧ್ಯಾನ ತಪೋ ಪರಿಹಾರಗಳೂ ಇವೆ.
ಆಹಾರ ವಿಚಾರ
25 ನೇ ತಾರೀಕು ಬುಧವಾರ ಸಂಜೆ ಎಂಟರ ನಂತರ ಭೋಜನ ನಿಷಿದ್ಧ. ಮರುದಿನ ಗ್ರಹಣ ಮೋಕ್ಷದ ನಂತರ ಸ್ನಾನ, ಪೂಜೆ, ಜಪ, ತಪಾನಂತರ ಲಘು ಆಹಾರ ಸೇವಿಸಬಹುದು.
ಇಂತಹ ಗ್ರಹಣವು 1748 ರಲ್ಲಿ ಬಂದಿತ್ತು. ಮುಂದೆ 2064 ಸಂಭವಿಸಲಿದೆ.
ಕೊನೆಯದಾಗಿ: ಗ್ರಹಣ ನಿಯಮಗಳಿಗೆ ವಿರುದ್ಧ ಮಾತನಾಡುವವರು ಅನೇಕ ಬುದ್ಧಿ ಹೀನ ಜನ ಇರಬಹುದು. ಇದು, ನಾವು Modernized ಜನ ಎಂದು ಹೆಮ್ಮೆಯೂ ಇರಬಹುದು. ಆದರೆ ಶಾಸ್ತ್ರಾನುಸಾರ ನಡೆಯುವುದು ನಮ್ಮ ಪರಂಪರಾ ನಿಯಮ.
ನಮ್ಮ ಪೂರ್ವಜರು ವೈಜ್ಞಾನಿಕವಾಗಿಯೇ ತಿಳಿದು ನಮಗೆ ಹೇಳಿದ್ದಾರೆ. ಈಗಿನ ಕೆಲ ಅಡ್ಡಮಂದಿಗೆ ಅಪಥ್ಯವಾದರೆ ನಾವೇನೂ ಅಡ್ಡ ಬರುವುದೂ ಇಲ್ಲ. ಆದರೆ ಯಾರು ಏನೇ ಅಡ್ಡ ಸಲಹೆ ಕೊಟ್ಟರೂ ನಮಗೆ ಶಾಸ್ತ್ರೋಲ್ಲಂಘನೆ ಮಾಡಿ ಸಮಸ್ಯೆ ಬಂದರೆ ಅವರಲ್ಲಿ ಯಾವ ಪರಿಹಾರವೂ ಇರದು. ಅವರೆಲ್ಲ ಎಣ್ಣೆ ಹಾಕಿಯೇ ಮಾತನಾಡುವವರು. ಎಣ್ಣೆ ಹಾಕಿದಾಗ ಕೆಳಮುಖವಾಗಿ ಹರಿಯುವ ನದಿಯೂ ಮೇಲ್ಮುಖವಾಗಿಯೇ ಕಾಣುತ್ತದೆ. ಅದನ್ನು ಅವರು ನೋಡಿ ಖುಷಿ ಪಡಲಿ. ನಮಗೆ ನಮ್ಮ ಪರಂಪರಾಗತ ಸಂಪ್ರದಾಯವೇ ಶ್ರೇಷ್ಠವೂ, ಸ್ವಾಸ್ಥ್ಯವೂ ಆಗಿರುತ್ತದೆ.
Get in Touch With Us info@kalpa.news Whatsapp: 9481252093
Discussion about this post